ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ತಮ್ಮ ಉಸಿರಿರುವವರೆಗೂ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಶ್ರಮಿಸಿದ್ದಾರೆ. ಮಹಾಜನ ವರದಿಯಲ್ಲೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ವರದಿ ನೀಡಿದೆ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಲೇಖಕಿ ಡಾ. ಇಂದಿರಾ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಬಸವನಗುಡಿಯ ಬಿಎಂಶ್ರೀ ಪ್ರತಿಮೆಯ ಎದುರು ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಸಂಘಟನೆಗಳು ಆಯೋಜಿಸಿದ್ದ ‘ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರ ನಂತರವು ಕೆಲ ಕಾಲ ಕಾಸರಗೋಡು ಅಪ್ಪಟ ಕನ್ನಡ ನಾಡಾಗಿತ್ತು. ಕೋರ್ಟ್ ತೀರ್ಪುಗಳು ಕನ್ನಡದಲ್ಲಿ ಬರುತ್ತಿದ್ದವು. ಈಗಲೂ ಅಲ್ಲಿ ನೂರಾರು ಕನ್ನಡ ಶಾಲೆಗಳಿವೆ. ಕಾಸರಗೋಡು ಕರ್ನಾಟಕಕ್ಕೆ ಸೇರಿದಾಗ ಮಾತ್ರ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ. ನಂ. ಚಂದ್ರಶೇಖರ ಮಾತನಾಡಿ, ನಮ್ಮಲ್ಲೇ ಇರುವ ಬೆಳಗಾವಿಯನ್ನು ಉಳಿಸಿಕೊಳ್ಳುತ್ತೇವೆ ಎನ್ನುವಂತಹ ವಿರೋಧಾಭಾಸದ ಹೇಳಿಕೆಯನ್ನು ನೀಡುತ್ತಿರುವ ನಾವು ಮಹಾಜನ ವರದಿಯು ಕರ್ನಾಟಕಕ್ಕೆ ನೀಡಿರುವ ಕಾಸರಗೋಡನ್ನು ನಮಗೆ ಕೊಡಿ ಎಂದು ಕೇಂದ್ರ ಸರಕಾರವನ್ನು ಕೇಳದಿರುವುದು ನಾಚಿಕೆಗೇಡಿನ ಸಂಗಾತಿಯಾಗಿದೆ ಎಂದರು. ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ. ಚ. ಚನ್ನೇಗೌಡ ಮಾತನಾಡಿ, ಪ್ರತಿ ತಿಂಗಳು ಕನ್ನಡ ಬಾವುಟ ಹಾರಿಸಿದವರು ಮಾಲಿಕೆಯ ಮೂಲಕ ಕನ್ನಡ ನಾಡು – ನುಡಿಗೆ ದುಡಿದ ಮಹನೀಯರನ್ನು ಸ್ಮರಿಸುತ್ತಾ ಮುಂದಿನ ಹೋರಾಟಕ್ಕೆ ಸ್ಫೂರ್ತಿ ಪಡೆಯುತ್ತಿದ್ದೇವೆ ಎಂದರು.
ಲೇಖಕಿ ಡಾ. ಇಂದಿರಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಂಶೋಧಕ ಡಾ. ಆರ್. ಶೇಷ ಶಾಸ್ತ್ರೀ, ಬಾ. ಹ. ಉಪೇಂದ್ರ, ಲೇಖಕ ಆನಂದ್ ರಾಮರಾವ್, ರಫಾಯಲ್ ರಾಜ್, ಗೋವಿಂದಹಳ್ಳಿ ಕೃಷ್ಣೆಗೌಡ, ಎಂ. ಪುಟ್ಟಸ್ವಾಮಿ ಭಾಗಿಯಾಗಿದ್ದರು.