ಬಂಟರ ಸಂಘ ಇಂದು ಬಲಿಷ್ಠಗೊಳ್ಳಲು ಪ್ರಾದೇಶಿಕ ಸಮಿತಿಗಳು ಮುಖ್ಯ ಕಾರಣವಾಗಿದೆ. ಪ್ರತಿ ಸಮಿತಿಗಳು ಅರ್ಥ ಪೂರ್ಣ ಕಾರ್ಯಕ್ರಮಗಳನ್ನು ಮಾಡಿ ಸ್ಥಳೀಯ ಬಂಟ ಬಂಧುಗಳಿಗೆ ವಿವಿಧ ರೀತಿಯಲ್ಲಿ ಸಹಕಾರವಾಗಿದೆ. ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಅಪಾರವಾದ ಶ್ರಮವಹಿಸಿ ಸಮಿತಿಯನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಎಲ್ಲಾ ಕಾರ್ಯಕ್ರಮಗಳೆಲ್ಲವೂ ಸಮಯದ ಒಳಗಡೆ ನಡೆಯುವಂತೆ ಮಹತ್ವವಾದ ಜವಾಬ್ದಾರಿಯನ್ನು ಪದಾಧಿಕಾರಿಗಳು ವಹಿಸಬೇಕು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ನುಡಿದರು.
ಅವರು ಜು. 16 ರಂದು ಆದಿತ್ಯವಾರ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದ ಲೀಲಾವತಿ ಶ್ಯಾಮ ಶೆಟ್ಟಿ (ಬಾಬಾಸ್ ಗ್ರೂಪ್) ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಒಂಭತ್ತು ಪ್ರಾದೇಶಿಕ ಸಮಿತಿಗಳಲ್ಲಿ ಒಂದಾದ ಅಂಧೇರಿ-ಬಾಂದ್ರ ಪ್ರಾದೇಶಿಕ ಸಮಿತಿಯ 18 ನೇಯ ವಾರ್ಷಿಕ ಸ್ನೇಹ ಸಮ್ಮಿಲನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಪ್ರಾದೇಶಿಕ ಸಮಿತಿ ಸಮಿತಿಯು ಮಹೇಶ್ ಶೆಟ್ಟಿ ಅವರ ಕಾರ್ಯಧ್ಯಕ್ಷತೆಯಲ್ಲಿ ಪ್ರಾರಂಭಗೊಂಡವು. ಆ ಸಂದರ್ಭದಲ್ಲಿ ನಾನು ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೆ. ಅಂದು ಸುಮಾರು 5000ಕ್ಕೂ ಮಿಕ್ಕಿ ಸಮಾಜ ಬಾಂಧವರು ಸೇರಿಕೊಂಡಿದ್ದರು. ಅಂದಿನಿಂದ ಈತನಕ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಮುದ್ರಾಡಿ ದಿವಾಕರ್ ಶೆಟ್ಟಿ, ಅಪ್ಪಣ್ಣ ಶೆಟ್ಟಿ, ಗುಣಪಾಲ್ ಶೆಟ್ಟ ಐಕಳ, ಡಾ. ಆರ್ ಕೆ ಶೆಟ್ಟಿ ಹಾಗೂ ಪ್ರಸ್ತುತ ರವೀಂದ್ರ ಶೆಟ್ಟಿ ಇವರೆಲ್ಲರ ತಂಡ ಪರಿಸರದ ಬಡ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಹೊಸ ಹೊಸ ಯೋಜನೆಗಳನ್ನು ತಂದು, ಅವರಿಗೆ ಸ್ವಾವಲಂಭಿಯಾಗಿ ಬದುಕು ಕಟ್ಟಲು ಸಹಕಾರಿಯಾಗಿದ್ದಾರೆ. ಕಾರ್ಯಕ್ರಮ ಮಾಡುವುದಕ್ಕೆ ಬಹಳಷ್ಟು ಪರಿಶ್ರಮಪಟ್ಟು ಸಾವಿರಾರು ಬಂಧುಗಳನ್ನು ಒಗ್ಗೂಡಿಸುತ್ತೇವೆ ಆದರೆ ಕಾರ್ಯಕ್ರಮಗಳು ಮಾತ್ರ ಸಮಯದ ಒಳಗೆ ಇರುವುದಿಲ್ಲ. ಹಾಗೆ ಆಗದಂತೆ ಸಮಿತಿ ಪದಾಧಿಕಾರಿಗಳು ನೋಡಿಕೊಳ್ಳುವಂತಾಗಬೇಕು. ಬಂಟರ ಸಂಘ ಮತ್ತು ಪ್ರಾದೇಶಿಕ ಸಮಿತಿಗಳು ಸಮಾಜ ಬಾಂಧವರಿಗಾಗಿ ಹಲವಾರು ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ. ಅದರಲ್ಲಿ ಬೋರಿವಿಲಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ ಪ್ರಾರಂಭದ ಪೂರ್ವ ಸಿದ್ಧತೆಯಾಗಿದೆ. ಇದು ಲೋಕಾರ್ಪಣೆಗೊಂಡ ಬಳಿಕ ನಮ್ಮ ಸಮಾಜದ ಬಂಧುಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುವುದಕ್ಕೆ ಪ್ರೋತ್ಸಾಹವಾಗುತ್ತದೆ. ಅಂದೇರಿ ಬಾಂದ್ರ ಪರಿಸರದಲ್ಲಿ ಅತಿ ಶ್ರೀಮಂತ ಬಂಟ ಬಂಧುಗಳಿದ್ದಾರೆ. ಅವರೆಲ್ಲರೂ ನಮ್ಮ ಶಿಕ್ಷಣ ಸಂಸ್ಥೆಗೆ ವಿವಿಧ ರೀತಿಯ ದೇಣಿಗೆಯನ್ನು ನೀಡುವುದರ ಮೂಲಕ ಸಹಕಾರ ನೀಡಬೇಕು. ಬಂಟರ ಭವನದಲ್ಲಿ ಹಲವಾರು ಬದಲಾವಣೆಯ ಕೆಲಸ ಕಾರ್ಯಗಳು ನಡೆದಿದೆ. ಮುಂದಿನ ತಿಂಗಳು ಅದೆಲ್ಲಾ ಲೋಕಾರ್ಪಣೆಗೊಳಲಿದೆ.
ಬಂಟರ ಸಂಘ ಪ್ರತಿ ತಿಂಗಳು ಬಂಟರ ವಾಣಿಯನ್ನು ಹೊರ ತರುತ್ತಿತ್ತು ಕನ್ನಡದ ಭಾಷೆಯ ಮೂಲಕ, ಇದೀಗ ಎರಡು ತಿಂಗಳಿಗೊಮ್ಮೆ ಇಂಗ್ಲಿಷ್ ಮ್ಯಾಗಝಿನ್ ಆನ್ಲೈನ್ ಮೂಲಕ ಓದಬಹುದು. ಯುವ ಜನಾಂಗಕ್ಕೆ ತಿಳಿಸುವುದಕ್ಕಾಗಿ ಸಿದ್ಧತೆಗೊಂಡಿದೆ. ಸಂಘದ ಏಳಿಗೆಗಾಗಿ ಎರಡು ರೀತಿಯಲ್ಲಿ ಸೇವೆ ಮಾಡುವ ಜನರಿದ್ದಾರೆ. ಒಬ್ಬರು ಬೆಳಿಗ್ಗಿನಿಂದ ಸಂಜೆವರೆಗೆ ತಮ್ಮ ವೈಯಕ್ತಿಕ ಕೆಲಸಗಳನ್ನೆಲ್ಲಾ ಬಿಟ್ಟು ಸಂಘದಲ್ಲಿ ಕಾರ್ಯ ಪ್ರವೃತ್ತರಾಗುತ್ತಾರೆ. ಮತ್ತೊಬ್ಬರು ಹೊರಗಿದ್ದು ಸಂಘದ ಕೆಲಸ ಕಾರ್ಯಗಳಿಗೆ ದಾನ ನೀಡುವವರು. ಇವರನ್ನು ಸದಾ ನಾವು ಸ್ಮರಿಸೋದು ಅಗತ್ಯ. ಸಮಾಜಕ್ಕೆ ಯೋಗದಾನ ನೀಡಿದ ಸೇವಕರ ಅಂತ್ಯ ಕಾರ್ಯಕ್ಕೆ ಬರುವುದಕ್ಕೆ ನಮ್ಮ ಸಮಾಜದ ಜನರಿಗೆ ಸಮಯವಿಲ್ಲ ಈಗಾಗಬಾರದು, ದಾನ ಕೊಟ್ಟವರ ಇರುತ್ತದೆ ಸೇವೆ ಮಾಡಿರುವ ಅವರ ಹೆಸರು ಅಷ್ಟು ಬೇಗ ನಮ್ಮಿಂದ ದೂರವಾಗಬಾರದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡುತ್ತಾ, ನಾನು ಬಂಟರ ಸಂಘಕ್ಕೆ ಬರುವುದಕ್ಕೆ ಮುಖ್ಯ ಕಾರಣ ಭುಜಂಗ ಶೆಟ್ಟಿ. ಆದರೆ ನನಗೆ ಎಲ್ಲಾ ರೀತಿಯಲ್ಲೂ ಮಾರ್ಗದರ್ಶನ ನೀಡಿ ಎತ್ತರಕ್ಕೆ ಬೆಳೆಯಲು ಮಾರ್ಗದರ್ಶಕರಾಗಿದ್ದವರು ತುಂಗಾ ಸುಧಾಕರ್ ಹೆಗ್ಡೆ. ಅಂದು ಭೀಕರವಾದ ಮಳೆ ಬಂದಾಗ ಸಮಾಜದ ಬಂಧುಗಳಿಗೆ ಬಹಳಷ್ಟು ಕಷ್ಟಗಳಾದವು ಅದನ್ನು ಕಂಡು ಸಮಾಜದ ಬಂಧುಗಳಿಗೆ ಏನಾದರೂ ಸಹಕಾರ ನೀಡಬೇಕೆನ್ನುವ ಉದ್ದೇಶದಿಂದ ಶಿಕ್ಷಣ ಮತ್ತು ಸಮಾಜ ಸೇವಾ ಕಲ್ಯಾಣ ಸಮಿತಿಯ ಮೂಲಕ ಪ್ರಾರಂಭಗೊಂಡ ಅನೆಕ್ಸ್ ಸಂಕೀರ್ಣ ಇದೀಗ ಅದರ ಆದಾಯದಿಂದ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಕ್ಕೆ ಸಹಕಾರಿಯಾಗಿದೆ. ಪ್ರತಿಯೊಂದು ಕಾರ್ಯಗಳು ಇತಿಹಾಸದಲ್ಲಿ ಉಳಿಯುತ್ತದೆ. ಆದ್ದರಿಂದ ನಮ್ಮ ಕಾರ್ಯಗಳು ನಿಸ್ವಾರ್ಥವಾಗಿರಲಿ. 60 ವರ್ಷ ಈ ಸಮಾಜಕ್ಕೆ ಸೇವೆ ಮಾಡಿದ ಸೇವಾಕರ್ತರಾಗಿದ್ದ ಎಂ ಡಿ ಶೆಟ್ಟಿ ಅಂತಿಮ ಯಾತ್ರೆಯಲ್ಲಿ ನಮ್ಮ ಸಮಾಜದ ಬಂಧುಗಳಿಗೆ ಪಾಲ್ಗೊಳ್ಳುವುದಕ್ಕೆ ಸಮಯವೇ ಇರಲಿಲ್ಲ. ಇದು ಬಹಳ ದುಃಖದ ಸಂಗತಿಯಾಗಿದೆ. ಉತ್ತಮ ಕಾರ್ಯಗಳಿಗೆ ದಾನ ನೀಡಿದರೆ ಅದನ್ನು ಸದಾ ಸಮಾಜ ನೆನಪಿಸುತ್ತದೆ ಎಂದು ನುಡಿದರು.
ಮುಖ್ಯ ಅತಿಥಿ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಮಾತನಾಡುತ್ತಾ, ಕಳೆದ ಆರು ವರ್ಷಗಳ ಹಿಂದೆ ಈ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದೆ ಇದೀಗ ಮತ್ತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳ ಒತ್ತಾಯವಾಗಿದೆ. ಕಳೆದ ಸುಮಾರು 25 ವರ್ಷಗಳ ಹಿಂದೆ ಬಂಟರ ಸಂಘ ಎಂದರೆ ಶ್ರೀಮಂತರ ಸಂಘ ಎನ್ನುವ ಮನೋಭಾವನೆ ಸಾಮಾನ್ಯ ಜನರಲ್ಲಿ ಇತ್ತು. ಆದರೆ ಐಕಳ ಹರೀಶ್ ಶೆಟ್ಟಿ ಅವರು ಈ ಸಂಸ್ಥೆಗೆ ಜವಾಬ್ದಾರಿಯನ್ನು ಪಡೆದ ಮೇಲೆ ಬಂಟರ ಸಂಘ ಕಷ್ಟದವರ ಬಾಗಿಲಲ್ಲಿ ಎನ್ನುವ ಪರಿಕಲ್ಪನೆಯಲ್ಲಿ ಒಂಬತ್ತು ಪ್ರಾದೇಶಿಕ ಸಮಿತಿಗಳು ನಿರ್ಮಾಣಗೊಂಡು ಶ್ರೀಮಂತ ಬಂಟ ಸಂಘವಾಗಿ ಬೆಳೆದಿದೆ. ಪ್ರತಿ ವರ್ಷ ಸುಮಾರು 10 ಕೋಟಿ ಆರ್ಥಿಕ ನೆರವನ್ನು ಸಮಾಜದ ಬಂಧುಗಳಿಗೆ ನೀಡುತ್ತಿದೆ. ಈ ಪ್ರಾದೇಶಿಕ ಸಮಿತಿಯ ಕಾರ್ಯ ಅಧ್ಯಕ್ಷರು ಪದಾಧಿಕಾರಿಗಳ ಸೇವೆ ಅನನ್ಯ. ಅದರಲ್ಲೂ ಆರ್ ಕೆ ಶೆಟ್ಟಿಯವರ ಕಾರ್ಯಾಧ್ಯಕ್ಷ ಸಂದರ್ಭದಲ್ಲಿ ದಿಶಾ ಎನ್ನುವ ಕಾರ್ಯಕ್ರಮ ಎಲ್ಲಾ ಪ್ರಾದೇಶಿಕ ಸಮಿತಿಗಳಿಗೆ ಮಾದರಿಯಾಗಿದೆ, ಸಂಘದ ಅಧ್ಯಕ್ಷರುಗಳ ಸೇವೆ ಹೇಗಿರಬೇಕೆಂದರೆ ಒಳ್ಳೆಯ ಸೇವಕರನ್ನು ತರಬೇಕು ಅದರಿಂದ ಸಂಘ ತನ್ನಿಂದ ತಾನೇ ನಡೆಯುತ್ತಲೇ ಹೋಗುತ್ತದೆ, ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕೂಡ 5000ಕ್ಕೂ ಮಿಕ್ಕಿ ಸಮಾಜ ಬಾಂಧವರು ಪಾಲ್ಗೊಳ್ಳುತ್ತಾರೆ. ಅದಕ್ಕೆ ಮುಖ್ಯ ಕಾರಣ ಪ್ರಾದೇಶಿಕ ಸಮಿತಿಗಳು ಎಂದು ನುಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಅಡ್ವಕೇಟ್ ಆರ್. ಸಿ. ಶೆಟ್ಟಿ (ಬಂಟರ ಸಂಘದ ಮಾಜಿ ಅಧ್ಯಕ್ಷ) ಸುಧಾಕರ ಎಸ್. ಹೆಗ್ಡೆ ದಂಪತಿ (ಆಡಳಿತ ನಿರ್ದೇಶಕರು – ತುಂಗಾ ಗ್ರೂಪ್ ಆಫ್ ಹೋಟೇಲ್ಸ್), ಗೀತ ರತ್ನಾಕರ ಶೆಟ್ಟಿ (ಸಂಸ್ಥಾಪಕಿ – ಸೇವಾಭಾವ ಚಾರಿಟೇಬಲ್ ಟ್ರಸ್ಟ್, ಮುಂಗಳೂರು), ಆನಂದ ಶೆಟ್ಟಿ ದಂಪತಿ (ಉಪಾಧ್ಯಕ್ಷ : ಪ್ಯಾರಾ ಮೌಂಟ್ ಹೆಲ್ತ್ ಸರ್ವೀಸ್ ಅಂಡ್ ಇನ್ಸೂರೆನ್ಸ್ ) ಇವರುಗಳನ್ನು ಸನ್ಮಾನಿಸಲಾಯಿತು. ಪ್ರಾದೇಶಿಕ ಸಮಿತಿಯಲ್ಲಿ ಅತ್ಯುತ್ತಮ ಸೇವೆ ಮಾಡಿದ ಸಮಿತಿಯ ವಿವಾಹ ನೋಂದಣಿಕ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಮತ್ತು ಲತಾ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಥಳೀಯ ಸಮಾಜದ ಬಂಧುಗಳಿಗೆ ಡಾಕ್ಟರ್ ಆರ್ ಕೆ ಶೆಟ್ಟಿಯವರ ಸಹಯೋಗದಲ್ಲಿ ಹೊಲಿಗೆ ಯಂತ್ರ ವಿತರಣೆ ನಡೆಯಿತು.
ಪ್ರಾದೇಶಿಕ ಸಮಿತಿಯ ಕಾರ್ಯ ಅಧ್ಯಕ್ಷ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಸಂಚಾಲಕ ನ್ಯಾಯವಾದಿ ಆರ್ ಜಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪ್ರಸಾದ್ ವಿ ಶೆಟ್ಟಿ ವಾಚಿಸಿದರು. ಮಹಿಳಾ ವಿಭಾಗದ ವರದಿಯನ್ನು ವಿಭಾಗದ ಕಾರ್ಯಧ್ಯಕ್ಷ ವಜ್ರಾಕ್ಷಿ ಕೆ ಪೂಂಜಾ ಮಂಡಿಸಿದರು. ಪ್ರತಿಭಾ ಪುರಸ್ಕಾರದ ವರದಿಯನ್ನು ಜ್ಯೋತಿ ಶೆಟ್ಟಿ ಓದಿದರು. ರಮೇಶ ರೈ ಅವರು ಸ್ಥಳೀಯ ಮಹಿಳೆಯರಿಗೆ ಉಚಿತವಾಗಿ ನೀಡುವ ಹೊಲಿಗೆ ಯಂತ್ರ ಪಡೆಯುವವರ ಹೆಸರನ್ನು ವಾಚಿಸಿದರು. ಸನ್ಮಾನಿತರ ಪರಿಚಯವನ್ನು ಶೈಲಾ ಶೆಟ್ಟಿ, ಶೋಭಾ ಶೆಟ್ಟಿ, ಪುಷ್ಪ ಶೆಟ್ಟಿ, ಅನಿತಾ ಶೆಟ್ಟಿ, ಸೂರಜ್ ಶೆಟ್ಟಿ ಮಾಡಿದರು. ಕಾರ್ಯಕ್ರಮವನ್ನು ನಟ ನಿರ್ದೇಶಕ ಬಾಬಾ ಪ್ರಸಾದ್ ಅರಸ ನಿರೂಪಿಸಿದರು. ಪ್ರಶಾಂತಿ ಶೆಟ್ಟಿ ಪ್ರಾರ್ಥನೆ ಮಾಡಿದರು.