ಕುಂದಾಪುರದ ಕೊರವಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ದಿನಾಂಕ 12 ಜುಲೈ, 2023 ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ ಶ್ರೀಯುತ ಗೌತಮ್ ಶೆಟ್ಟಿಯವರ ಮೂಲಕ ಸರಳ ಇಂಗ್ಲಿಷ್ ಕಲಿಕೆಗೆ ಪೂರಕವಾಗಿರುವ ಚಟುವಟಿಕೆ ಆಧಾರಿತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
”ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಿತ ಮಗು ರಾಷ್ಟ್ರವನ್ನು ನಿರ್ಮಿಸುತ್ತದೆ” ಎಂಬ ಚಿಂತನೆಯನ್ನು ದಾನಿಗಳಾದ ಗೌತಮ್ ಶೆಟ್ಟಿಯವರು ಹೊಂದಿದ್ದು ಅವರ ಬೆಂಬಲದೊಂದಿಗೆ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಶಾಲಾ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಅವರು ಪ್ರಾಯೋಜಿಸಿದ್ದಾರೆ. ಇದು ಗೌತಮ್ ಶೆಟ್ಟಿಯವರ ಒಂದು ಸೂಕ್ಷ್ಮ ಯೋಜನೆ. ಬಡ ಶಾಲಾ ಮಕ್ಕಳು ಈ ಶಾಲಾ ಶಿಕ್ಷಣ ಪುಸ್ತಕಗಳಿಂದ ಪ್ರಯೋಜನ ಪಡೆಯಲಿದ್ದಾರೆ.
ಬಡ ವಂಚಿತ ಮಕ್ಕಳಿಗೆ ಅವರ ಅಧ್ಯಯನದ ಸಮಯದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಯೋಜನೆಯ ಮೂಲಕ, ಶಿಕ್ಷಣದ ಅಭಿವೃದ್ಧಿಗೆ ಸ್ವಲ್ಪ ಪ್ರಯತ್ನ ಮಾಡಿದರೆ ವಂಚಿತ ಬಡ ಮಕ್ಕಳ ಭವಿಷ್ಯ ಬದಲಾಗಲಿದೆ ಮತ್ತು ಅನಕ್ಷರತೆ ನಿವಾರಣೆಯಾಗುತ್ತದೆ ಎನ್ನುವುದು ಗೌತಮ್ ಶೆಟ್ಟಿಯವರ ಚಿಂತನೆ.
ಈ ಕಾರ್ಯಕ್ರಮಕ್ಕೆ ಶಾಲಾ ಸಿಬ್ಬಂದಿ, ಪೋಷಕರು ಹಾಗೂ ಮಕ್ಕಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಧರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ್ ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಪ್ರಭಾವತಿ ಶೆಟ್ಟಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸರೋಜಾ, ಅಂಗನವಾಡಿ ಹಿತೈಷಿ ದಿನೇಶ್, ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ, ದಿನೇಶ್ ಮೊಗವೀರ ಉಪಸ್ಥಿತರಿದ್ದರು. ಸಹ ಶಿಕ್ಷಕಿ ನೇತ್ರಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಂತಿ ಡಿಸೋಜಾ, ಶ್ರೀಮತಿ ಶೋಭಾ ಪೂಜಾರ್ತಿ, ಅತಿಥಿ ಶಿಕ್ಷಕಿ ಸುದೀಪ, ಗೌರವ ಶಿಕ್ಷಕಿಯರಾದ ಜ್ಯೋತಿ, ಪ್ರಮೀಳಾ, ಕಾವ್ಯ, ಅಂಗನವಾಡಿ ಸಹಾಯಕಿ ಪದ್ಮಾವತಿ ಸಹಕರಿಸಿದರು. ಅಂಗನವಾಡಿ ಶಿಕ್ಷಕಿ ಶ್ರೀಮತಿ ಶೋಭಾ ವಂದನಾರ್ಪಣೆಗೈದರು.