ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಿರಿಧಾನ್ಯಗಳು ಬಳಕೆಯಲ್ಲಿದ್ದವು. ವೇದಗಳಲ್ಲಿ ಕೆಲವು ಸಿರಿಧಾನ್ಯಗಳ ಬಗ್ಗೆ ಉಲ್ಲೇಖಗಳು ಕಾಣಸಿಗುತ್ತವೆ. ವಿವಿಧ ನಾಗರಿಕತೆಗಳಲ್ಲಿ, ಭಾರತಕ್ಕೆ ಪ್ರವಾಸ ಬಂದ ಹೊರ ದೇಶಗಳ ಯಾತ್ರಿಗಳ ಕಥನಗಳಲ್ಲಿ ನಮ್ಮಲ್ಲಿ ಸಿರಿಧಾನ್ಯಗಳನ್ನು ಬಳಸುತ್ತಿದ್ದ ಬಗ್ಗೆ ಉಲ್ಲೇಖಗಳು ಇವೆ. ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕರವಾಗಿದ್ದು ವಿವಿಧ ರೋಗಗಳಿಂದ ನಮಗೆ ರಕ್ಷಣೆ ದೊರಕಿಸಿಕೊಡುವುದರ ಜತೆಯಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.
ಇತರ ಬೆಳೆಗಳಿಗೆ ಹೋಲಿಸಿದಲ್ಲಿ ಸಿರಿಧಾನ್ಯಗಳ ಬೆಳೆಗಳಿಗೆ ಕಡಿಮೆ ಪ್ರಮಾಣದ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮರ್ಥ್ಯವನ್ನು ಸಿರಿಧಾನ್ಯಗಳ ಸಸಿಗಳು ಹೊಂದಿವೆ. ಸಿರಿಧಾನ್ಯಗಳನ್ನು ಬೆಳೆಯುವುದು ಇತರೆಲ್ಲ ಧಾನ್ಯಗಳ ಬೆಳೆಗಳಿಗಿಂತ ಹೆಚ್ಚು ಪರಿಸರಸ್ನೇಹಿಯಾಗಿದೆ. ಸರಕಾರದ ಪ್ರೇರಣೆಯಿಂದ ಸಿರಿಧಾನ್ಯಗಳಿಗೆ ಈಗ ಕೇವಲ ದೇಶ ಮಾತ್ರವಲ್ಲ ವಿಶ್ವಾದ್ಯಂತ ಬೇಡಿಕೆ ಲಭಿಸತೊಡಗಿದ್ದು ಕೃಷಿಕರು ಮತ್ತೆ ಇವುಗಳನ್ನು ಬೆಳೆಯಲು ಮನಸ್ಸು ಮಾಡಬೇಕಿದೆ. ದೇಶದ ಜನತೆ ಈ ಸಿರಿಧಾನ್ಯಗಳನ್ನು ಸೇವಿಸುವ ಪರಿಪಾಠವನ್ನು ಆರಂಭಿಸುವ ಮೂಲಕ ಸಿರಿಧಾನ್ಯಗಳನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕಾರ್ಯ ಮಾಡಬೇಕಿದೆ.
ಪ್ರಸ್ತುತ ವರುಷವನ್ನು ಜಾಗತಿಕವಾಗಿ ಸಿರಿ ಧಾನ್ಯಗಳ ವರುಷವನ್ನಾಗಿ ಆಚರಿ ಸಲಾಗುತ್ತಿರುವ ಸಂದರ್ಭದಲ್ಲಿ ಆ ಧಾನ್ಯಗಳ ಮಹತ್ವದ ಬಗ್ಗೆ ಓದುಗರಿಗೆ ಸಂಕ್ಷೇಪದಲ್ಲಿ ಅರಿವು ನೀಡುವುದು ಈ ಕಿರು ಬರಹದ ಉದ್ದೇಶ.
ಪೋವಸೆಯ (poaceae) ಎಂಬ ಸಸ್ಯ ಶಾಸ್ತ್ರೀಯ ಗುಂಪಿಗೆ ಸೇರಿದ ಸಿರಿ ಧಾನ್ಯಗಳು ಚಿಕ್ಕ ಗಾತ್ರ ಹೊಂದಿದ ಹುಲ್ಲಿನ ಉತ್ಪನ್ನಗಳು. ಹೆಚ್ಚು ಮಳೆ ಬೀಳದ ವನ್ಯ ಪ್ರದೇಶಗಳಲ್ಲಿ ಕಾಣಸಿ ಗುತ್ತಿದ್ದ ಈ ಬೆಳೆಗಳನ್ನು ಸುಮಾರು ಹತ್ತು ಸಾವಿರಕ್ಕೂ ವರುಷಗಳಿಗೆ ಮೊ ದಲು ಚೀನದಲ್ಲಿ ಕ್ರಮ ಬದ್ಧ ಕೃಷಿಯ ವ್ಯಾಪ್ತಿಗೆ ತರಲಾಯಿತು ಮತ್ತು ಮುಂದೆ ಅದು ಭಾರತದ ನೆಲಕ್ಕೂ ಕಾಲಿಟ್ಟಿತು ಎಂದು ಚರಿತ್ರೆ ಹೇಳುತ್ತದೆ. ಭಾರತದಲ್ಲಿ ಬಹಳ ಹಿಂದಿನಿಂದಲೇ ಸಿರಿಧಾನ್ಯಗಳ ಬಳಕೆ ಇದ್ದಿತ್ತು. ವೇದಗಳಲ್ಲಿ ಕೆಲವು ಸಿರಿಧಾನ್ಯಗಳ ಬಗ್ಗೆ ಉಲ್ಲೇಖಗಳು ಕಾಣಿಸುತ್ತವೆ. ಹರಪ್ಪ ಮತ್ತು ಮೊಹಂಜೊದಾರೊ ನಾಗರಿಕತೆಯಲ್ಲಿ ಸಿರಿಧಾನ್ಯಗಳ ಬಳಕೆ ಇದ್ದ ಬಗ್ಗೆ ಕುರುಹುಗಳು ಕಾಣಸಿಕ್ಕಿವೆ. ಭಾರತಕ್ಕೆ ಪ್ರವಾಸ ಬಂದ ಹೊರ ದೇಶಗಳ ಯಾತ್ರಿಗಳ ಕಥನಗಳಲ್ಲೂ ನಮ್ಮಲ್ಲಿ ಸಿರಿ ಧಾನ್ಯಗಳನ್ನು ಬಳಸುತ್ತಿದ್ದ ಬಗ್ಗೆ ಉಲ್ಲೇಖಗಳು ಇವೆ.
ಸಿರಿ ಧಾನ್ಯಗಳನ್ನು “ಸೂಪರ್ ಫುಡ್” ಎಂಬುದಾಗಿ ಕರೆಯಲಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳನ್ನು ಬೆಳೆಯುವ ರೈತ ವರ್ಗದಿಂದ ಹಿಡಿದು ಸೇವನೆ ಮಾಡುವ ಗ್ರಾಹಕರ ವರೆಗೆ ಮಾತ್ರವಲ್ಲದೆ ಒಟ್ಟು ಸಮುದಾಯಕ್ಕೆ ಹಾಗೂ ಅದು ಬಾಳಿ ಬದುಕುವ ಪರಿ ಸರಕ್ಕೆ ಬಹು ವಿಧಗಳಲ್ಲಿ ಸಿರಿ ಧಾನ್ಯಗಳು ಪ್ರಯೋಜನಕಾರಿ ಎಂಬುದಾಗಿ ಇಂದು ಗ್ರಹಿಸಲಾಗುತ್ತಿದೆ. ಕಡಿಮೆ ನೀರು ಬೇಡುವ ಈ ಧಾನ್ಯಗಳು ಕೀಟಗಳಿಗೆ ಮತ್ತು ಹವಾಮಾನದ ವೈಪರೀತ್ಯಗಳಿಗೆ ಎದುರಾಗಿ ಉತ್ತಮ ಸಂರಕ್ಷಣೆಯ ಸಾಮರ್ಥ್ಯ ಹೊಂದಿವೆ.
ಪೋಷಕಾಂಶಗಳಿಂದ ಸಮೃದ್ಧವಾದ ಈ ಧಾನ್ಯಗಳು ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಿಂದ ನಮಗೆ ರಕ್ಷಣೆ ಒದಗಿಸುವ ಕೆಲಸ ಮಾಡುತ್ತವೆ ಎಂಬುದು ಸಾಬೀತಾಗಿದೆ.
ಸಿರಿ ಧಾನ್ಯಗಳನ್ನು ಹಿರಿಯ ಸಿರಿ ಧಾನ್ಯಗಳು ಮತ್ತು ಕಿರಿಯ ಸಿರಿಧಾನ್ಯ ಗಳು ಎಂಬ ಎರಡು ಮುಖ್ಯ ವರ್ಗ ಗಳಾಗಿ ಆಹಾರ ಸುರಕ್ಷೆಗೆ ಸಂಬಂಧಪಟ್ಟ ಸರಕಾರಿ ಇಲಾಖೆ ವರ್ಗೀಕರಿಸಿದೆ. ಹಿರಿಯ ಸಿರಿಧಾನ್ಯಗಳಲ್ಲಿ ಜೋಳ, ಬಾಜರ, ರಾಗಿ ಒಳಗೊಂಡಿವೆಯಾದರೆ ಕಿರಿಯ ಸಿರಿಧಾನ್ಯಗಳ ವರ್ಗದಲ್ಲಿ ಸನವ, ಕೊಡೋನ್, ಕಂಗನಿ, ಕುಟಕಿ ಮತ್ತು ಚೆನ ಸೇರಿವೆ. ಇವುಗಳಲ್ಲದೆ ಸಸ್ಯ ಶಾಸ್ತ್ರೀಯ ದೃಷ್ಟಿಯಿಂದ ಸಿರಿಧಾನ್ಯಗಳ ವರ್ಗಕ್ಕೆ ಸೇರದ ಆದರೆ ಅವುಗಳನ್ನು ಬಹುಮಟ್ಟಿಗೆ ಹೋಲುವ ಕುಟ್ಟು ಮತ್ತು ರಾಜಗೀರ ಎಂಬ ಸ್ಥಳೀಯ ಹೆಸ ರಿನ ಧಾನ್ಯಗಳನ್ನು ಕೂಡ ವ್ಯಾವಹಾರಿಕ ಉದ್ದೇಶಗಳಿಗಾಗಿ ಸಿರಿಧಾನ್ಯಗಳ ಜತೆಯಲ್ಲೇ ಗುರುತಿಸಲಾಗುತ್ತದೆ.
ಪ್ರತಿಯೊಂದು ಸಿರಿಧಾನ್ಯವು ತನ್ನದೇ ಆದ ವಿಶೇಷತೆಗೆ ಮತ್ತು ಬಳಕೆಯ ಕ್ರಮಕ್ಕೆ ಹೆಸರಾಗಿದೆ. ನಮ್ಮಲ್ಲಿ ಹಿರಿಯ ಸಿರಿಧಾನ್ಯಗಳ ಗುಂಪಿಗೆ ಸೇರಿದ ರಾಗಿ ಹೆಚ್ಚು ಉಪಯೋಗದಲ್ಲಿರುವುದು ಗೊತ್ತಿರುವ ವಿಷಯ. ರಾಗಿಯನ್ನು ಅಕ್ಕಿ ಮತ್ತು ಗೋಧಿಗೆ ಉತ್ತಮ ಪರ್ಯಾ ಯವಾಗಿ ಬೆಳೆಸಿ ಬಳಸಬಹುದು. ಇನ್ನೊಂದು ಸಿರಿಧಾನ್ಯವಾದ ಜೋಳವು ರೋಟಿಯ ರೂಪದಲ್ಲಿ ಸೇವಿಸಲ್ಪಡುತ್ತದೆ ಹಾಗೂ ಬಾಜರ ಎಂಬ ಸಿರಿ ಧಾನ್ಯವನ್ನು ಅಧಿಕವಾಗಿ ರೊಟ್ಟಿ ಮತ್ತು ಗಂಜಿ ಎರಡೂ ರೂಪಗಳಲ್ಲಿ ಸೇವಿಸಲಾಗುತ್ತದೆ. ಚೆನ ಎಂಬ ಸಿರಿಧಾನ್ಯವನ್ನು ಹಕ್ಕಿಗಳ ಆಹಾರವನ್ನಾಗಿ ಬಳಸಲಾಗುತ್ತದೆ. ಶಿಶುಗಳಿಗೆ ಮತ್ತು ವೃದ್ಧರಿಗೆ ಸುಲಭವಾಗಿ ಜೀರ್ಣವಾಗುವ ಧಾನ್ಯ ಕೊಡೋನ್.
ಕಂಗನಿ ಕೂಡ ಜೀರ್ಣ ಸ್ನೇಹಿ ಧಾನ್ಯ ಆಗಿದೆ. ಸನವ ಎಂಬುದು ಹೆಚ್ಚು ಕಬ್ಬಿಣ ಮತ್ತು ಇತರ ಸತ್ವಗಳಿಂದ ಸಮೃದ್ಧವಾದ ಧಾನ್ಯವಾಗಿದೆ. ಮೂರನೇ ವರ್ಗಕ್ಕೆ ಸೇರಿದ ರಾಜ ಗಿರಾವು ಬೆಳಗ್ಗಿನ ಉಪಾಹಾರವಾಗಿ ಜನಪ್ರಿಯತೆ ತಾಳುತ್ತಿದೆಯಾದರೆ ನವ ರಾತ್ರಿಯ ಉಪವಾಸದ ಸಮಯದಲ್ಲಿ ಸಾಂಪ್ರದಾಯಿಕ ಆಹಾರವಾಗಿ ಉತ್ತರದ ರಾಜ್ಯಗಳಲ್ಲಿ ಅದೇ ವರ್ಗದ ಕುಟ್ಟು ಬಳಸಲ್ಪಡುತ್ತದೆ.
ಜಗತ್ತು ಇಂದು ಪರಿಸರಕ್ಕೆ ಸಂಬಂಧಪಟ್ಟಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಜಾಗತಿಕ ತಾಪ ಮಾನದ ಏರಿಕೆಯು ಎಲ್ಲ ರಾಷ್ಟ್ರಗಳನ್ನೂ ಕಾಡುತ್ತಿರುವ ಸಮಸ್ಯೆ ಆಗಿದೆ. ಇವೆಲ್ಲದರ ನೇರ ದುಷ್ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಆಗುವ ಬಗ್ಗೆ ಸಂಶಯವಿಲ್ಲ. ಇದರಿಂದಾಗಿ ಮಾನವ ಕುಲದ ಆಹಾರ ಭದ್ರತೆಗೆ ದೊಡ್ಡ ರೀತಿ ಯಲ್ಲಿ ತೊಡಕು ಉಂಟಾಗುವ ಸಾಧ್ಯತೆ ಇದೆ. ಸಿರಿಧಾನ್ಯಗಳು ಆರೋಗ್ಯಕರವಾಗಿದೆ ಎಂಬುದು ಮಾತ್ರವಲ್ಲ ಸಿರಿ ಧಾನ್ಯಗಳನ್ನು ಬೆಳೆಯುವುದು ಇತರ ಧಾನ್ಯಗಳನ್ನು ಬೆಳೆಯುವುದಕ್ಕಿಂತ ಎಲ್ಲ ರೀತಿಯಲ್ಲೂ ಪರಿಸರ ಸ್ನೇಹಿಯಾದ ಆಯ್ಕೆಯಾಗಿದೆ ಎಂಬುದು ಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ನಮ್ಮ ಸರಕಾರ ಸಿರಿಧಾನ್ಯಗಳ ಕೃಷಿಗೆ ಮತ್ತು ಬಳಕೆಗೆ ಒತ್ತು ನೀಡುವ ಹೆಜ್ಜೆಗಳನ್ನು ಇಟ್ಟಿದೆ. ಮುಂದಿನ ದಿನಗಳಲ್ಲಿ ಸಿರಿ ಧಾನ್ಯಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಬರುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ (ಕೃಷಿಕರು ಮತ್ತು ಕೃಷಿಕರಲ್ಲದ ಗ್ರಾಹಕರು) ಸರಕಾರದ ಜತೆಗೆ ಕೈಜೋಡಿಸಿ ನಮ್ಮ ಮತ್ತು ಮುಂದಿನ ಪೀಳಿಗೆಗಳ ಒಟ್ಟು ಹಿತಕ್ಕಾಗಿ ಸಿರಿಧಾನ್ಯಗಳನ್ನು ಬೆಳೆಯುವ ಮತ್ತು ಬಳಕೆ ಮಾಡುವ ಮೂಲಕ ನಮ್ಮ ಸಾಮಾಜಿಕ ಕರ್ತವ್ಯವನ್ನು ನಿಭಾ ಯಿಸಬೇಕಾದ ಸಮಯ ಬಂದಿದೆ.