ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಮುಂಬಯಿ ವತಿಯಿಂದ ರಂಗಕರ್ಮಿ ಕಮಲಾಕ್ಷ ಸರಾಫ್ ರಚಿಸಿರುವ ಕೊಂಕಣಿಯಿಂದ ಕನ್ನಡಕ್ಕೆ ಅನುವಾದಿಸಿದ,ಲಿಮ್ಮಾ ಬುಕ್ ಆಫ್ ರೆಕಾರ್ಡ್ ಖ್ಯಾತಿಯ, ಡಾ. ಚಂದ್ರಶೇಖರ ಶೆಣೈ ನಿರ್ದೇಶನದ ‘ನಂದಾದೀಪ’ ಹಾಗೂ ಯಕ್ಷಗಾನ ಕಲಾವಿದ, ಅರ್ಥದಾರಿ ದಾಮೋದರ ಶೆಟ್ಟಿ ಇರುವೈಲು ರಚಿಸಿರುವ “ಪುರಾಣ ಪಾತ್ರ ಪ್ರದೀಪಿಕೆ’ ವೆಂಬ ಎರಡು ಕೃತಿಗಳನ್ನು ಮಾಟುಂಗಾ ಪೂರ್ವದ ಮೈಸೂರು ಎಸೋಸಿಯೇಶನ್ ಸಭಾಗೃಹದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಮುಂಬಯಿ ಅಧ್ಯಕ್ಷ ಡಾ. ಸುರೇಂದ್ರಕುಮಾರ್ ಹೆಗ್ಡೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಕೃತಿ ಬಿಡುಗಡೆಗೊಳಿಸಿದ ಡಾ. ಸುರೇಂದ್ರ ಕುಮಾರ್ ಹೆಗ್ಡೆ ಮಾತನಾಡುತ್ತಾ ಇಬ್ಬರು ಕೃತಿಕಾರರು ವೃತ್ತಿಯಲ್ಲಿ ಉನ್ನತ ಮಟ್ಟದಲ್ಲಿ ವ್ಯವಸಾಯಸ್ಥರು. ಕಮಲಾಕ್ಷ ಸರಫ್ ಅವರು ಕಲಾವಿದರಾಗಿ ಸಾಮಾಜಿಕ ತುಡಿತವನ್ನು ಕಂಡವರಾಗಿದ್ದು ಕೊಂಕಣಿ ನಾಟಕವನ್ನು ಕನ್ನಡಕ್ಕೆ ಬಹಳ ಸೊಗಸಾಗಿ ಅನುವಾದಿಸಿದ್ದಾರೆ. ನಾಟಕದ ಪ್ರತಿಯೊಂದು ದೃಶ್ಯವೂ ಬದುಕಿಗೆ ಪಾಠವಾಗಿದೆ. ದಾಮೋದರ್ ಶೆಟ್ಟಿ ಅವರು ತಮ್ಮ ಕೃತಿಯಲ್ಲಿ ಧಾರ್ಮಿಕ ಚಿಂತನೆಗಳನ್ನು ಬಹಳಷ್ಟು ಆಳವಾಗಿ ಇದರಲ್ಲಿ ರಚಿಸಿದ್ದಾರೆ. ಎರಡು ಕೃತಿಗಳು ಕಲಾವಿದರ ಪರಿಷತ್ತಿಗೆ ದೊಡ್ಡ ಕೊಡುಗೆಯಾಗಿದೆ. ಇಬ್ಬರು ರಂಗ ಕಲಾವಿದರು ಆದರೂ ತಮ್ಮ ಸಾಹಿತ್ಯದ ಮೂಲಕ ಕೃತಿಯನ್ನು ಬಹಳ ಸೊಗಸಾಗಿ ರಚಿಸಿದ್ದಾರೆ. ಈ ಕೃತಿ ಮಾರಾಟದಿಂದ ಬಂದ ಹಣ ಬಡ ಕುಟುಂಬಕ್ಕೆ ಆಶ್ರಯವಾಗಲಿದೆ ಎಂದು ನುಡಿದರು.
ಹಿರಿಯ ಸಾಹಿತಿ ಡಾ ಸುನೀತಾ ಎಂ ಶೆಟ್ಟಿಯವರು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಕಲಾವಿದರು ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಹೆಚ್ಚು ಬೆಳೆಸಬೇಕು. ಮುಂಬೈ ನಗರ ಸಾಹಿತಿಗಳನ್ನು ಸೃಷ್ಟಿಸಿದ ನಗರ ಎಂದು ನುಡಿದರು.
ಕಲಾವಿದರ ಪರಿಷತ್ತಿನ ಉಪಾಧ್ಯಕ್ಷ ಮಲಾಡ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಮಾತನಾಡುತ್ತಾ ಒತ್ತಡದ ಕೆಲಸಗಳ ನಡುವೆ ಇಬ್ಬರು ಕೃತಿಕಾರರು ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದಾರೆ, ಒಂದು ಕೃತಿ ಸಾಮಾಜಿಕ ಚಿಂತನೆಗಳ ಪರಿವರ್ತನೆಯ ನಾಟಕವಾಗಿದೆ, ಇನ್ನೊಂದು ಕೃತಿ ಆಧ್ಯಾತ್ಮಿಕ ಚಿಂತನೆಗೆ ದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ
ಹಿರಿಯ ಸಾಹಿತಿ ಡಾ ಸುನೀತಾ ಎಂ ಶೆಟ್ಟಿ, ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ಮಾಜಿ ಸಿಎಂಡಿ ಡಾ. ಎಂ. ನರೇಂದ್ರ, ಕ್ಯಾನ್ಸರ್ ತಜ್ಞ ಮತ್ತು ಕೊಂಕಣಿ ನಾಟಕ ಲೇಖಕ ಡಾ| ಚಂದ್ರಶೇಖರ ಶೆಣೈ, ವಿಶ್ವ ಹಿಂದು ಪರಿಷತ್ತು ಥಾಣೆ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ, ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಮಾಜಿ ಅಧ್ಯಕ್ಷ ಎನ್. ಎಲ್. ಪಾಲ್, ಮಲಾಡ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಕಲಾ ಸಂಘಟಕ ನಾರಾಯಣ ಎಸ್. ಕಾಮತ್, ಮುಂಬಯಿ ಕಾರ್ಪೊರೇಟ್ ಕೌನ್ಸಿಲ್ ಆ್ಯಂಡ್ ಕಂಪೆನಿ ಸೆಕ್ರೆಟರಿ ಪ್ರದೀಪ್ ಚಂದನ್ ಹಾಗೂ ಕನ್ನಡ ಕಲಾ ಕೇಂದ್ರ ಮುಂಬಯಿ ಅಧ್ಯಕ್ಷ ಮಧುಸೂದನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ
ಗೌರವ ಪ್ರದಾನ ಕಾರ್ಯದರ್ಶಿ ದಾಮೋದರ ಶೆಟ್ಟಿ ಇರುವೈಲು, ಗೌರವ ಕೋಶಾಧಿಕಾರಿ ಪಿ. ಬಿ. ಚಂದ್ರಹಾಸ್ ಉಪಸ್ಥಿತರಿದ್ದರು.
‘ನಂದಾದೀಪ’ ಕೃತಿಯನ್ನು ರಂಗಕರ್ಮಿ ಡಾ. ಈಶ್ವರ್ ಅಳೆಯೂರು ಹಾಗೂ ‘ಪುರಾಣ ಪಾತ್ರ ಪ್ರದೀಪಿಕೆ’ ಕೃತಿಯನ್ನು ಸಂಘಟಕ ಜಿ. ಟಿ. ಆಚಾರ್ಯ ಅವರು ಪರಿಚಯಿಸಿದರು, ಸುಶೀಲಾ ದೇವಾಡಿಗ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ಕಲಾವಿದ ಸಂಘಟಕ ಅದ್ಯಪಾಡಿ ಬಾಲಕೃಷ್ಟ ಶೆಟ್ಟಿ ನಿರೂಪಿಸಿದರು. ಕೃತಿ ಬಿಡುಗಡೆಯ ಮೊದಲು ಮತ್ತು ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪರಿಷತ್ತಿನ ಕಲಾವಿದರಿಂದ ‘ಪಂಚವಟಿ’ ಹಾಗೂ ‘ವಾಲಿ ಮೋಕ್ಷ’ ತಾಳ ಮದ್ದಳೆ ನಡೆಯಿತು.