ಒಂದರೊಳು ಒಂದಿಲ್ಲ, ಒಂದರೊಳು ಕುಂದಿಲ್ಲ, ಒಂದೊಂದು ಅಂದವೂ ತನಗೆ ತಾನೇ ಚಂದ ಎಂದು ವರಕವಿ ದ.ರಾ ಬೇಂದ್ರೆಯವರ ಹೂ ಕವನದ ಸಾಲುಗಳು ನೆನಪಾದದ್ದು ಕೆಲ ದಿನಗಳ ಹಿಂದೆ ಮುಂಬಯಿ ಪ್ರಭಾದೇವಿ ಸಿದ್ದಿವಿನಾಯಕ ದೇವಸ್ಥಾನದಿಂದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಮಾರ್ಗದ ಬದಿಯಲ್ಲಿ ಬಲಯುತವಾಗಿ ಬೆಳೆದು ನಿಂತ ಗುಲ್ ಮೊಹರ್ ಮರವೊಂದು ಮೈ ತುಂಬಾ ಕೇಸರಿ, ಹಳದಿ, ಕೆಂಪು ಮಿಶ್ರಿತ ಹೂವನ್ನು ಆವರಿಸಿಕೊಂಡು ಸೊಬಗಿನಿಂದ ಕಂಗೊಳಿಸುತ್ತಾ ಹೆಮ್ಮೆಯಿಂದ ಇಗೋ ಮೇ ತಿಂಗಳು ಬಂತು, ನಿಮಗೆಲ್ಲಾ ಹೂವಿನ ಸ್ವಾಗತ ಕೋರುತ್ತಿದ್ದೇನೆ ಎಂದು ನಕ್ಕಂತೆ ಆಯ್ತು. ಸೃಷ್ಟಿಯ ಸೌಂದರ್ಯಕ್ಕೆ ಇನ್ನೊಂದು ಮೆರಗು ಈ ಗುಲ್ ಮೊಹರ್ ಹೂವು ಬಿರು ಬಿಸಿಲು, ಬಿಸಿ ಗಾಳಿ, ಶುಷ್ಕ ನೆಲ, ನೀರಿನ ಅಭಾವವಿರುವ ಸನ್ನಿವೇಶದ ವಾತಾವರಣದಲ್ಲಿ ತಲೆ ಎತ್ತಿ ಅರಳಿ ನಿಲ್ಲುವ ಕೆಂಪು ಚೆಲುವೆ.
ಎಪ್ರಿಲ್ ತಿಂಗಳು ಕಳೆಯುತ್ತಿದ್ದಂತೆ ಮೇ ತಿಂಗಳ ಆರಂಭದ ದಿನಗಳಲ್ಲಿ ಮೇ ಫ್ಲವರ್ ನ ಮರ ಹೂ ಧರಿಸಿ ಎಲ್ಲರ ಗಮನ ಸೆಳೆಯುತ್ತದೆ. ಚೆಲುವಿಗೆ, ಕೋಮಲತೆಗೆ, ಮೃದು ತನಕ್ಕೆ ಮತ್ತು ಸಂಭ್ರಮ ಸಂತೋಷಗಳ ಪ್ರತೀಕವಾದ ಈ ಹೂವುಗಳು ಅಲ್ಪಾಯುಷಿಯಾದರೂ ಸಾರ್ಥಕದ ಖಣಜ. ಈ ಪುಷ್ಪಗಳ ದೃಶ್ಯ ವೈಭವ ನೋಡುಗರ ಹೃದಯ ತನ್ನಡೆಗೆ ಸೆಳೆಯುತ್ತದೆ. ಮೇ ಪ್ಲವರ್ ಮರವೊಂದು ಎಲೆ ಉದುರಿಸಿ ಸುಂದರ ಹೂವಿನೊಂದಿಗೆ ಬಣ್ಣದ ಉಡುಪು ತೊಟ್ಟಂತೆ ನಿಂತ ಪರಿನೋಡುವುದೆ ಸೊಗಸು. ಇಡಿ, ಇಡಿಯಾಗಿ ಬಿಡಿ ಬಿಡಿಯಾಗಿ ಬಣ್ಣಿಸಬಹುದಾದ ಈ ಹೂವು ಮತ್ತೊಂದು ಜಗತ್ತನ್ನೇ ನಮ್ಮಲ್ಲಿ ತೆರೆಸುತ್ತದೆ. ಎಂತಹ ಅರಸಿಕರಾದರು ಅದರತ್ತ ಒಂದು ಕ್ಷಣ ನಿಂತು ಕಣ್ಣು ಹಾಯಿಸಿ ಎಂಥಾ ಸೊಬಗಿನ ಹೂ ಎಂದು ಕಣ್ಣರಳಿಸಿ ನೋಡಿಯೇ ನೋಡುತ್ತಾರೆ. ಮೇ ಫ್ಲವರ್ ನ ಸೌಂದರ್ಯ ವೀಕ್ಷಿಸಲು ಎರಡು ಕಣ್ಣು ಸಾಲದು ಎಂದರೆ ತಪ್ಪಾಗಲಾರದು.
ಹೂ ಪ್ರಕೃತಿಯ ಸುಂದರ ಕಾವ್ಯ ಅದರಲ್ಲೂ ಪ್ರಕೃತಿ ನಿರ್ಮಿಸುವ ನೂರಾರು ಮನೋಹರವಾದ ಹೂವಿನ ವರ್ಣವಿನ್ಯಾಸಗಳು, ಮೇ ಪ್ಲವರ್ ಮರದ ಮೇಲೆ ಓಕುಳಿ ಎರಚಿದಂತೆಯೋ, ಅರಿಸಿನ- ಕುಂಕುಮ ಹೊದ್ದಂತೆ, ಹೂ ಮಳೆಗೆರೆದಂತೆ ಹಾಗೂ ಮರದ ಕೆಳಗೆ ಹೂವಿನ ಎಸಳು ಉದುರಿ ರಂಗೋಲಿ ಹಾಕಿದಂತೆ ರಾರಾಜಿಸುವ ಮೇ ಫ್ಲವರ್ ತನ್ನ ಅದ್ಭುತ ದೃಶ್ಯಾವಳಿ ತೋರಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾ. ಈ ಮರವು ಮೇ ತಿಂಗಳಿಡಿ ಪುಷ್ಪ ಭರಿತವಾಗಿ ಬಹುದೂರದಿಂದಲೇ ತನ್ನ ಇರುವಿಕೆಯ ಚೆಲುವನ್ನು ತೋರುತ್ತದೆ. ಹೂವಿನ ಸೌಂದರ್ಯ ದರ್ಶನದಿಂದ ಸೃಷ್ಟಿಕರ್ತನಿಗಾದ ಆನಂದದ ಹುಂಕಾರವೇ ಹೂ ಆಗಿ ಭೂಮಿಯ ಮೇಲೆ ಅರಳಿತು ಎಂದು ಅಂಬಿಕಾತನಯ ದತ್ತರ ಕವನದ ಸಾಲುಗಳು ಎಷ್ಟು ನಿಜವಲ್ಲವೇ.
ಇಂಗ್ಲಿಷ್ ನಲ್ಲಿ ಮೇ ಫ್ಲವರ್, ಹಿಂದಿಯಲ್ಲಿ ಗುಲ್ಮೊಹರ್ ಎಂದು ಕರೆಯುವ, ಹುಣಸೆಮರದ ಜಾತಿಗೆ ಸೇರಿದ ಮರದ ಪರಿಚಯ ಭಾರತೀಯರಿಗೆ ಇಂದು ನಿನ್ನೆಯದ್ದಲ್ಲ. ಈ ಗಿಡದ ತಳಿಗಳನ್ನು ಭಾರತಕ್ಕೆ ತಂದವರು ಬ್ರಿಟಿಷರು . ಭಾರತದಲ್ಲಿ ಹೆಚ್ಚಿನ ರಾಜ್ಯಗಳು ಈ ಮರವನ್ನು ಸಾಲು ಮರಗಳಾಗಿ ಹಾಗೂ ಅಲಂಕಾರಿಕಾ ಮರವಾಗಿ ಬೆಳೆಸುತ್ತಿದ್ದಾರೆ. ಎಲ್ಲಾ ಬಗೆಯ ಮಣ್ಣಿನಲ್ಲಿ ಪ್ರಾಕೃತಿಕವಾಗಿ ಬೆಳೆಯುವ ವಿವಿಧ ರಾಜ್ಯಗಳಲ್ಲಿ ಕೆಲವೆಡೆ ಸೀಮೆ ಸಂಕೇಶ್ವರ, ಕೆಂಪು ತುರಾಯಿ, ರಾಯಲ್ ಫಿಕಾಕ್ ಫ್ಲವರ್, ಕತ್ತಿಕಾಯಿ ಮರ, ಕೆನ್ನ ಕೇಸರಿ, ದೊಡ್ಡ ರತ್ನಗಂಧಿ ಎಂಬ ಹೆಸರು ಇದೆ. ಬಂಗಾಳಿಗಳು ಈ ಹೂವನ್ನು ಕೃಷ್ಣ ಚುರ ಎಂದು ಕರೆಯುತ್ತಾರೆ. ದೂರಕ್ಕೆ ಕೆಂಡ ಹಾಸಿದಂತೆ ಕಾಣುವ ಮರವನ್ನು ಬೆಂಕಿ ಮರ ಅಥವಾ ಫ್ಲವರ್ ಟ್ರೀ ಅಂತಲೂ ಕರೆಯುತ್ತಾರೆ.
ಕೆಂಬಣ್ಣದ ಹೂವನ್ನು ಮುಡಿ ತುಂಬಾ ಹೊತ್ತಾ ಮರ ನೇರವಾಗಿ ಬೆಳೆವ ಮರವಾದ ಕಾರಣ ಹೂವಿನ ಸಂಪೂರ್ಣ ಸುಂದರತೆಯನ್ನು ಮರದ ಕೆಳಗೆ ನಿಂತು ಅಥವಾ ದೂರದಿಂದಲೇ ನೋಡಸಿಗುವುದೇ ಹೊರತು ಹತ್ತಿರದಿಂದ ನೋಡಸಿಗುವುದು ಅಪರೂಪ. ನನ್ನ ಸುದೈವದಿಂದ ಮೇ ಫ್ಲವರ್ ಅತ್ಯಾಕರ್ಷಕ ಹೂಗಳು ನಾನು 2 ಅಂತಸ್ತಿನ ಬಸ್ಸಿನಲ್ಲಿ ಪ್ರಯಾಣಿಸುವಾಗ ನನ್ನ ಸಮಾನ ನೇರಕ್ಕೆ ರಸ್ತೆಯ ಹೊರ ಬದಿಯಲ್ಲಿ ನೋಟ ಕಾಣಿಸಿತು. ಹಾಗಾಗಿ ಈ ಹೂವಿನ ಸುಂದರತೆ ನನ್ನ ಗಮನಕ್ಕೆ ಬಂತು. ಗುಂಪು ಗುಂಪಾಗಿ ಅರಳುವ ಮೇ ಫ್ಲವರ್ ಸ್ವರ್ಗವನ್ನು ಕಂಡಂತೆ ಕಂಗೋಳಿಸುವ ಪ್ರಕೃತಿಯ ಕುಂಚಕಲೆಗೆ ಬೆರಗಾಗಲೆ ಬೇಕು. ಈ ಹೂಗಳನ್ನು ನೋಡಿ ಸಂತೋಷದಿಂದ ನನ್ನಷ್ಟಕ್ಕೆ ನಾನು ನಕ್ಕು ಸಂತಸಗೊಂಡೆ. ಅದನ್ನೆ ಓದುಗರರೆದುರು ಸಂಭ್ರಮದಿಂದ ಹರವಿಟ್ಟು ಹಂಚಿಕೊಂಡೆ.
ಹೆಣ್ಣಿಗೂ ಹೂವಿಗೂ ಅವಿನಾಭಾವ ನಂಟು ಅಂತಾರಲ್ಲ ಹಾಗೆ ನನ್ನ ಹೆಣ್ಣು ಮನಸ್ಸು ಗಾಢವರ್ಣದ ಸುಂದರ ಕೋಮಲ ಮೇ ಫ್ಲವರ್ ಗೆ ಮನಸೋತಿತು. ಎಂಥವರನ್ನು ಬಾವುಕರನ್ನಾಗಿ ಮಾಡುವುದೇ ಹೂವಿನ ವಿಶೇಷತೆ. ಸೌಂದರ್ಯ ಸುಂದರತೆಗೆ ಪ್ರೀತಿಗೆ ಇನ್ನೊಂದು ಹೆಸರೇ ಹೂ ಅದನ್ನು ವರ್ಣಿಸದೇ ಇರಲಾರದು.
ಮೇ ಫ್ಲವರ್ ಮರದ ಎಲೆಗಳೆ ಕಾಣದಷ್ಟು ದಟ್ಟವಾಗಿ ಕಿತ್ತಲೆ ಮಿಶ್ರಿತ ಕೆಂಪು ಬಣ್ಣದಿಂದ ಹಿಡಿದು ಕಡು ಕೆಂಪು ಬಣ್ಣದ ಹೂಗಳು ರಾರಾಜಿಸುತ್ತಿದ್ದವು. ಈ ಪುಷ್ಪ ಮಂಜರಿಯಲ್ಲಿ ಗಂಡು ಹೂ ಹಾಗೂ ಹೆಣ್ಣು ಹೂಗಳೆರಡು ತುಂಬಿರುತ್ತದೆ. ಹೆಣ್ಣು ಹೂ ಉದುರಿದ ನಂತರ ಚಪ್ಪಟೆ ಆಕಾರದ ಉದ್ದನೆಯ ಕೋಡು ಬೆಳೆಯುತ್ತದೆ. ಕೋಡಿನ ಒಳಗೆ ದೃಢ ಕವಚದ ಬೀಜಗಳಿರುತ್ತದೆ. ಬಲಿತ ಕೋಡುಗಳು ಒಡೆದು ಉದುರುವ ಬೀಜಗಳು ಮೊಳಕೆ ಒಡೆದು ಗಿಡವಾಗುತ್ತದೆ. ಇದು ವಾಣಿಜ್ಯ ಹೂಬೆಳೆ ಅಲ್ಲದಿದ್ದರೂ ವರ್ಷಕ್ಕೊಮ್ಮೆ ಅರಳಿ ತನ್ನ ಹಿರಿಮೆಯನ್ನು ತೋರುವುದನ್ನು ನಾವು ಕಣ್ಣ್ ತುಂಬಿಸಿ ಕೊಳ್ಳಬಹುದು .
ಇದು ಹನ್ನೆರಡು ತಿಂಗಳು ಹೂ ಬಿಡುವ ಸಸ್ಯ ಆದರೆ ಒಂದೊಂದು ದೇಶದಲ್ಲೂ ಬೇರೆ ಬೇರೆ ಸಮಯದಲ್ಲಿ. ಭಾರತದಲ್ಲಿ ಮಾತ್ರ ಎಪ್ರಿಲ್ ಮತ್ತು ಮೇ ತಿಂಗಳಿಡಿ ಕಾಷಿಸುತ್ತದೆ. ಪೆರುವಿನಲ್ಲಿ ಜನವರಿಯಿಂದ ಮಾರ್ಚ್ ವರೆಗೆ, ಇಸ್ರೇಲ್, ಬರ್ಮುಡಾದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೂ. ಮಾಲವಿ, ಜಾಂಬಿಯಾ, ಜಿಂಬಾಬ್ವೆ, ಮಾರೀಷಿಯಸ್ ಮತ್ತು ಮಲೇಷಿಯಾಗಳಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರಗೆ, ಬ್ರೆಜಿಲ್ ಆಸ್ಟ್ರೇಲಿಯಾಗಳಲ್ಲಿ ನವೆಂಬರ್ ನಿಂದ ಫೆಬ್ರವರಿವರೆಗೂ ಹೂ ಅರಳುತ್ತದೆ.
ಗಾಳಿ ಬೀಸುವ ಸಮಯದಲ್ಲಿ ಮರದ ಕೆಳಗೆ ನಿಂತರೆ ಹೂಗಳಸಿಂಚನ ನಮ್ಮ ಮೇಲಾಗುತ್ತದೆ. ಮೇ ತಿಂಗಳಲ್ಲಿ ಗುಲ್ ಮೊಹರ್ಹೂಗಳ ಸುಗ್ಗಿ ಚೈತ್ರ ಮಾಸದಲ್ಲಿ ಭೂತಾಯಿ ರಮಣಿಯತೆಗೆ ಸಿದ್ದಗೊಳ್ಳುವ ಕಾಲ. ರಂಗು ರಂಗಿನ ಹೂವಿನಬಣ್ಣ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ. ಗಿಡ, ಮರ ಕಾಡು ಪ್ರಕೃತಿಯ ಸಮತೋಲನಕ್ಕೆ ಮಾನವ ಬದುಕಿಗೆ ಪೂರಕ ಹಾಗೂ ಸಹಾಯಕ ಪ್ರತಿಯೊಬ್ಬರು ಸಾಧ್ಯವಾದಷ್ಟು ಗಿಡ ನೆಡೋಣ. ಇಂದಿಗೂ ಅರಣ್ಯ ಮತ್ತು ತೋಟಗಾರಿಕಾ ಇಲಾಖೆಯವರು ರಸ್ತೆಯ ಬದಿಯಲ್ಲಿ ಮೇ ಫ್ಲವರ್ ಮರವನ್ನು ನೆಡುತ್ತಾರೆ. ಒಮ್ಮೆ ಯೋಚಿಸಿ ನೋಡಿ ಈ ಹಿಂದೆ ನೀವೆಂದು ಗಿಡ ನೆಟ್ಟುಬೆಳೆಸಿದ್ದಿರಿ ಎಂದು ನೆನಪಾಗುತ್ತಿಲ್ಲವೆ. ಗಿಡ ಮರಗಳನ್ನು ಬೆಳೆಸುವುದರಿಂದ ಸುತ್ತಮುತ್ತಲಿನ ಪರಿಸರದ ಅಂದ ಹೆಚ್ಚುವುದರ ಜೊತೆಗೆ ಪರಿಶುದ್ಧ ವಾತಾವರಣ ನಿರ್ಮಾಣವಾಗುವುದು. ಬನ್ನಿ ಪ್ರಕೃತಿಯನ್ನು ಪ್ರೀತಿಸೋಣ ಗಿಡ ಮರ ಉಳಿಸಿ ಬೆಳೆಸೋಣ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.