ಬಂಟ್ವಾಳದಲ್ಲಿರುವ ಈ ಭವ್ಯ ಮಂದಿರ ನಿರ್ಮಾಣದ ಹಿಂದಿರುವ ಪ್ರೇರಕ ಶಕ್ತಿ ಶ್ರೀ ಗೋವಿಂದ ಮಹಾಸ್ವಾಮಿಗಳು. ಕೇರಳದ ಮಡಿವಂತ ಬ್ರಾಹ್ಮಣ ಕುಲಕ್ಕೆ ಸೇರಿದ್ದ ಗೋವಿಂದ ಸ್ವಾಮಿಗಳು ಗಣೇಶಪುರಿಗೆ ಹೋಗಿ ನಿತ್ಯಾನಂದ ಸ್ವಾಮಿಗಳನ್ನು ಕಂಡು, ನಾನು ಸ್ವಾಮಿ ಆಗುತ್ತೇನೆ, ದೀಕ್ಷೆ ಕೊಡಿ ಎಂದಾಗ ನಿತ್ಯಾನಂದರು ಗೋವಿಂದ ಸ್ವಾಮಿಗಳನ್ನು ಅಡಿಯಿಂದ ಮುಡಿಯವರಿಗೆ ನೋಡಿದರಂತೆ. ನಿನ್ನಲ್ಲಿ ಬ್ರಾಹ್ಮಣ್ಯದ ಮೇಲರಿಮೆಯಿದೆ. ಜೀವರಲ್ಲಿ ಭೇದವೆಣಿಸುವ ಮಡಿ ಮೈಲಿಗೆ ಇದೆ. ಅದನ್ನು ತ್ಯಜಿಸದೆ ಸಾಧನೆ ಸಾಧ್ಯವಿಲ್ಲ. ಸ್ವಲ್ಪ ಕಾಲ ಮೀನಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಬಾ ಎಂದು ಕಳುಹಿಸಿದರಂತೆ!
ಕೊಂಚವೂ ಸಂಕೋಚ ಪಡದೆ ಗುರುಗಳ ಆದೇಶವನ್ನು ಶಿರಸಾ ವಹಿಸಿ ಗೋವಿಂದ ಭಟ್ರು ಗಣೇಶ ಪುರಿಯಲ್ಲಿರುವ ಮಾಂಸದಡುಗೆಯ ಹೊಟೇಲೊಂದರಲ್ಲಿ ಕೆಲಸ ಮಾಡಿದರು. ಎಂಜಲು ಎತ್ತಿದರು. ಮುಸುರೆ ತೊಳೆದರು ಮಾಂಸದಡುಗೆ ಬೇಯಿಸಿದರು. ಅಜ್ಜನ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡರು. ದೀಕ್ಷೆ ಕೊಟ್ಟ ನಂತರ ಬಂಟ್ವಾಳಕ್ಕೆ ಹೊರಡು ಎಂದು ನಿತ್ಯಾನಂದರ ಆದೇಶವಾಯಿತು. ಗೋವಿಂದ ಸ್ವಾಮಿಗಳು ಬಂಟ್ವಾಳಕ್ಕೆ ಬಂದರು ಭಕ್ತರ ಪಾಲಿಗೆ ಭಾಗ್ಯ ದೇವತೆಯಾಗಿ.
ಎಲ್ಲಿಯ ಕೇರಳ? ಎಲ್ಲಿಯ ಗಣೇಶ ಪುರಿ? ಎಲ್ಲಿಯ ಬಂಟ್ವಾಳ? ಬಂಟ್ವಾಳ ನಿತ್ಯಾನಂದ ಅವದೂತರು ಓಡಾಡಿದ ಪುಣ್ಯ ಭೂಮಿ. ಬಂಟವಾಳದಲ್ಲಿ ಅಜ್ಜನ ಸಣ್ಣದೊಂದು ಇಷಾರೆಗೆ ಉಕ್ಕಿ ಹರಿದು ಬಂಟ್ವಾಳದ ಪೇಟೆಯನ್ನು ಕಂಠಮಟ್ಟಕ್ಕೆ ಮುಳುಗಿಸಿ ಅವಧೂತರ ಶಕ್ತಿಯ ಅನಂತತೆಯನ್ನು ಲೋಕಮುಖಕ್ಕೆ ಪರಿಚಯಿಸಿದ ನೇತ್ರಾವತಿ ಈಗ ಏನೂ ತಿಳಿಯದವಳಂತೆ ಸಣ್ಣಗೆ ಹರಿಯುತ್ತಿದ್ದಾಳೆ. ನಿತ್ಯಾನಂದರು ಮತ್ತವರ ಶಿಷ್ಯ ಗೋವಿಂದ ಸ್ವಾಮಿಗಳು ತಮ್ಮ ಅತಿಶಯ ಶಕ್ತಿಯಿಂದ ರಚಿಸಿದ ಅನೇಕ ಲೀಲಾ ವಿನೋದಗಳು ಬಂಟ್ವಾಳದ ಸ್ಮೃತಿ ಪಟಲದೊಳಗೆ ಬೆಚ್ಚಗೆ ಉಳಿದುಕೊಂಡಿವೆ.
ಅವಧೂತ ಸ್ಥಿತಿಯನ್ನು ಶಬ್ದಗಳಲ್ಲಿ ಕಟ್ಟಿಕೊಡಲು ಶ್ರುತಿಗಳು ಕೂಡ ಸೋತಿವೆ. ಜಾಗೃತ ಸ್ವಪ್ನ ಸುಷುಪ್ತಿಯ ಆಚೆಗಿರುವ ಆನಂದಿನಿ – ತುರೀಯ – ತುರಿಯಾತೀತದ ತುದಿಯನ್ನು ತಲುಪುತ್ತಿದ್ದಂತೆ ಆತ್ಮವೇ ಪರಮಾತ್ಮನಾಗುತ್ತದೆ. ಆ ಸ್ಥಿತಿ ತಲುಪಿದವನಿಗೆ ಈ ಸಮಸ್ತ ಭೌತಿಕ ಪ್ರಪಂಚವೇ ದೇಹವಾಗಿ ಬಿಡುತ್ತದೆ. ಹೀಗಿರುವಾಗ ತನ್ನ ಕ್ಷಣಿಕ ದೇಹದ ಮೇಲೆ ಆತನಿಗೆ ಪರಿವೆಯಾದರೂ ಯಾಕೆ? ದೇಹವನ್ನು ಕೆರೆಕಟ್ಟೆಗಳ ಮೇಲೆ ಬೀದಿ ಪಕ್ಕದಲ್ಲಿ ನಗ್ನಾವಸ್ಥೆಯಲ್ಲಿ ಹಸಿವು ತೃಷೆಯಲ್ಲಿಟ್ಟು ತಾನು ಮಾತ್ರ ಆತ್ಮಾನಂದದ ಚರಮಾವಸ್ಥೆಯಲ್ಲಿ ವಿಹರಿಸುತ್ತಿರುತ್ತಾನೆ. ದಿಕ್ಕುಗಳನ್ನೇ ಅಂಬರವಾಗಿಸಿದ ದಿಗಂಬರ. ಭೂಮಿಯೆ ಹಾಸಿಗೆ ಆಕಾಶವೇ ಹೊದಿಕೆ ಭಾಷೆ ದೇಶ ಕಾಲ ಜಾತಿ ಕುಲ ಗೋತ್ರಗಳ ಮೇರೆ ಅವನಿಗಿಲ್ಲ. ಯಾರಾದರೂ ಆಹಾರ ನೀಡಿದರೆ ತಿನ್ನುತ್ತಾನೆ. ಇಲ್ಲದೆ ಇದ್ದರೆ ತಿಂಗಳಾನುಗಟ್ಟಲೆ ಉಪವಾಸವಿರುತ್ತಾನೆ. ಸಾಮಾಜಿಕ ಕಟ್ಟುಪಾಡುಗಳ ಕಟ್ಟಿಗೆ ಸಿಲುಕದೆ ಧ್ಯಾನಾವಸ್ಥೆಯಲ್ಲಿ ಆತ ವಿಹರಿಸುತ್ತಿರುತ್ತಾನೆ. ಸಾಗರವನ್ನು ಸೇರಿದ ನದಿಯೊಂದು ಕಡಲಿನ ಭರತ ಇಳಿತಗಳಿಗೆ ತುಂಬಿಕೊಳ್ಳುವಂತೆ ಈ ಅವದೂತ ಸ್ಥಿತಿಯಲ್ಲಿರುವ ವ್ಯಕ್ತಿಯು ಶಕ್ತಿಯ ಮಹಾಪುಂಜವಾಗುತ್ತಾನೆ. ಆ ಸ್ಥಿತಿಯಲ್ಲಿದ್ದರು ನಿತ್ಯಾನಂದರು.
ಅವರು ಬಯಸಿದಾಗ ಮೇಘ ಮಳೆ ಸುರಿಸುತ್ತಿತ್ತು ನದಿ ಉಕ್ಕಿ ಹರಿಯುತ್ತಿತ್ತು ಬರಿಯ ಲಂಗೋಟಿಯಿಂದ ಲಕ್ಷ ಲಕ್ಷ ಹಣ ಸುರಿಯುತ್ತಿತ್ತು ಓಡುವ ರೈಲು ನಿಂತು ನಿಶ್ಚಲವಾಗುತ್ತಿತ್ತು ಅವರ ಭೌತಿಕ ಶರೀರ ಆಗಸದೆತ್ತರಕ್ಕೆ ಬೆಳೆದು ನಿಲ್ಲುತ್ತಿತ್ತು ಅವರ ಕಣ್ಣ ಒಂದು ನೋಟ ಲಕ್ಷ ಲಕ್ಷ ಭಕ್ತರ ಬದುಕಿನ ಭಾಗ್ಯದ ಬಾಗಿಲು ತೆರೆಸುತ್ತಿತ್ತು. ನಿತ್ಯಾನಂದ ಅವಧೂತರ ಆರಾಧನೆಯನ್ನು ಬಂಟ್ವಾಳದಲ್ಲಿ ಚಿರಸ್ಥಾಯಿಗೊಳಿಸಿದವರು ಅವರ ಶಿಷ್ಯರಾದ ಗೋವಿಂದ ಮಹಾಸ್ವಾಮಿಗಳು.
ಸ್ಮಶಾನವೆಂದರೆ ಕೇವಲ ಸುಡುಗಾಡಲ್ಲ ಅದು ಮಾನವನ ಲೌಕಿಕ ಪಯಣದ ಕೊನೆಯ ತಾಣ. ಮುಕ್ತಿಗೆ ಸೋಪಾನ ಎನ್ನುತ್ತಾ ಮಸಣದಲ್ಲೆ ಬದುಕಿ, ಬದುಕನ್ನು ಒಂದು ಪವಾಡದಂತೆ ನಡೆಸಿ ಹೋದ ಗೋವಿಂದ ಮಹಾಸ್ವಾಮಿಗಳ ನಿಗೂಢ ನಡೆ ಇಂದಿಗೂ ಬಿಡಿಸಲಾಗದ ಬ್ರಹ್ಮ ರಹಸ್ಯ. ಸ್ವಾಮೀಜಿಗಳು ದೇಹ ಮುಕ್ತರಾಗಿದ್ದರೂ ಈ ಮಂದಿರದೊಳಗೆ ಈವತ್ತಿಗೂ ಅವರ ಉಪಸ್ಥಿತಿ ಇದೆ. ಪ್ರತಿಯೊಬ್ಬರ ಮಾತನ್ನೂ ಗುರುತ್ರಯರು ಆಲಿಸುತ್ತಾರೆ. ಕಾರುಣ್ಯದ ಹೊಳೆ ಹರಿಸುತ್ತಾರೆ. ಇದು ನಿಸ್ಸಂಶಯ. ನನ್ನ ಆರಾಧ್ಯ ಗುರುಗಳ ಜೊತೆಗೆ ಗೋವಿಂದ ಸ್ವಾಮಿಗಳ ದರ್ಶನವನ್ನು ಪಡೆಯುವ ಭಾಗ್ಯ ನನ್ನದಾಯಿತು. ಮೊನ್ನೆಯಷ್ಟೇ ಪ್ರತಿಷ್ಠೆಯಾಗಿ ಲೋಕಾರ್ಪಣೆಗೊಂಡ ಈ ಮಂದಿರದಲ್ಲಿ ಭೌತಿಕ ಸಿರಿತನದ ಬಣ್ಣ ಬಿನ್ನಾಣವಿಲ್ಲ. ಇಲ್ಲಿ ಸಹಸ್ರಾರು ನಿಷ್ಕಲ್ಮಶ ಮನಸ್ಸುಗಳ ಅನನ್ಯ ಭಕ್ತಿಗೊಲಿದಿರುವ ಅವದೂತ ಚೈತನ್ಯದ ದಿವ್ಯಸ್ಪುರಣವಿದೆ.
ನಾಗರ ಶೈಲಿಯ ಅರ್ಧ ಮಂಟಪ, ಅಮಲಕ ವಿಮಾನ ಗೋಪುರ,ಚಕ್ರ ಪ್ರಮಾಣದ ಜಗತಿ ಭವ್ಯವಾದ ಸ್ಥಂಭ ಶಿಲ್ಪಗಳು, ಬಿತ್ತಿ ಚಿತ್ತಾರ, ಪ್ರಸ್ತರದ ಮೇಲಿರುವ ನಯನ ಮನೋಹರ ಹಾರಾಂತರಗಳು.ಗುರು ಮಂದಿರಕ್ಕೆ ಕಲ್ಲು ಮಣ್ಣು ಹೊತ್ತು ಭಕ್ತರು ಹರಿಸಿದ ಒಂದೊಂದು ಹನಿ ಬೆವರಿನ ಸುಗಂಧ. ದುಡಿದವರ ಎದೆ ಬಡಿತದಲ್ಲಿ ಮೊಳಗಿದ ಗುರುಮಂತ್ರದ ಮಾರ್ಧನಿ. ಸನ್ನಿಧಾನದಲ್ಲಿ ಜಾಗೃತವಾಗಿರುವ ಗುರುತ್ರಯರ ಭಾವಾನುಭೂತಿ. ಬಂದವರನ್ನು ಗೆಲುವಾಗಿಸುವ ಹಸುರೆಲೆಯ ಔದುಂಬರ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅದು ವರ್ಣನೆಗೆ ಅತೀತವಾದ ದಿವ್ಯ ಅನುಭವ. ಒಮ್ಮೆ ಭೇಟಿ ನೀಡಿ ಸುಮ್ಮನೆ ಕಣ್ಮುಚ್ಚಿ ಕುಳಿತುಕೊಳ್ಳಿ ಗುರುಗಳು ಕಾಣಿಸುತ್ತಾರೆ.