ನಮ್ಮ ಬಾಲ್ಯದಲ್ಲಿ ಸಂಬಂಧಿಕರು ಮನೆಗೆ ಬಂದರೆ ಎರಡು ಮೂರು ದಿನವಾದರೂ ಇರುತ್ತಿದ್ದರು. ತಿನಿಸುಗಳು ಕೂಡ ಎಂದಿನಂತೆ ಇರುತ್ತಿದ್ದವು. ಅವರಿಗಾಗಿಯೇ ವಿಶೇಷವಾಗಿ ಏನನ್ನೂ ಮಾಡುತ್ತಿರಲಿಲ್ಲ. ಹೊರಾಂಗಣ ಹಾಸಿಗೆಗಳ ಮೇಲೆ ಮಲಗುವುದು. ಹರಟೆ ಹೊಡೆಯುವುದು ಮತ್ತು ಮಲಗುವುದು. ಮೂರ್ನಾಲ್ಕು ದಿನದ ನಂತರ ಅವರು ಹಿಂತಿರುಗುವ ಹೊತ್ತಿಗೆ ಅವರ ಚಪ್ಪಲಿಗಳು ಎಲ್ಲೂ ಕಾಣುತ್ತಿರಲಿಲ್ಲ. ಮನೆಯ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗುತ್ತಿರಲಿಲ್ಲ. ಅಷ್ಟರಲ್ಲಿ ಅವರು ಹತ್ತಿ ಹೊರಡಬೇಕಾದ ಬಸ್ಸು ಬಂದು ಹೋಗಿ ಬಿಡುತ್ತಿತ್ತು. ಆಗ ದಿನಕ್ಕೆ ಒಂದೋ ಎರಡೋ ಬಸ್ ಸಂಚಾರವಿರುತ್ತಿತ್ತು. ಕೆಲವು ಹಳ್ಳಿಗಳಲ್ಲಿ ಅವೂ ಇರಲಿಲ್ಲ. ಬಸ್ಸು ಹೊರಟ ತಕ್ಷಣ ಚಪ್ಪಲಿ ಕಾಣಿಸುತ್ತಿತ್ತು. ಸಂಬಂಧಿಕರು ಇನ್ನಷ್ಟು ದಿನ ಇರಲಿ ಎಂಬ ಆಸೆಯಿಂದ ಕುಟುಂಬದ ಸದಸ್ಯರು ಚಪ್ಪಲಿಯನ್ನು ಬಚ್ಚಿಡುತ್ತಿದ್ದರು. ಆದರೆ ಈಗ ತದ್ವಿರುದ್ಧ ಬಂದವರು ಯಾವಾಗ ಹೊರಡುವರು ಎಂಬ ಕಾತುರ.
ಬರು ಬರುತ್ತಾ ನಾವು ಆಧುನಿಕರಾದ ನಂತರ ಬಂಧುತ್ವ, ಸಂಬಂಧಗಳು ಇನ್ನೂ ಶಿಥಿಲಗೊಳ್ಳುತ್ತಿವೆ. ಮತ್ತು ಕಳೆದ ಎರಡ್ಮೂರು ದಶಕಗಳಲ್ಲಿ ರಕ್ತ ಸಂಬಂಧಗಳೇ ಶಾಪವಾಗಿ ಪರಿಣಮಿಸುತ್ತಿವೆ, ಅವಿಭಕ್ತ, ಕೂಡು ಕುಟುಂಬಗಳು ಸಂಪೂರ್ಣವಾಗಿ ಮರೆಯಾಗುತ್ತಲಿವೆ. ಪ್ರತ್ಯೇಕತೆಯ ನಂತರ ಸಹೋದರ ಸಹೋದರಿಯರಲ್ಲಿ ಆರ್ಥಿಕವಾಗಿ ಬಲಶಾಲಿಯಾದವರು ತಮ್ಮ ಸ್ವಂತ ಕುಟುಂಬದ ದುರ್ಬಲ ಸದಸ್ಯರನ್ನು ದೂರವಿಡುತ್ತಿದ್ದಾರೆ. ಶ್ರೀಮಂತ ಬಂಧುಗಳಿಗೆ ಒಂದು ರೀತಿಯ ಮತ್ತು ಬಡ ಬಂಧುಗಳಿಗೆ ಇನ್ನೊಂದು ರೀತಿಯ ಮರ್ಯಾದೆ ನೀಡುವ ಪದ್ಧತಿ ಪ್ರಾರಂಭವಾಯಿತು. ಒಂದೇ ಮನೆಯಲ್ಲಿ ಹುಟ್ಟಿದ್ದರೂ ಅಂತಸ್ತುಗಳ ಭೇದ ಹೆಚ್ಚಾದಾಗ ನಮ್ಮತನದ ಭಾವವೇ ಕಳೆದು ಹೋಗುತ್ತಲಿವೆ. ಹಣವಿಲ್ಲದ ಸಂಬಂಧಿಕರು ನಮ್ಮ ಮನೆಗೆ ಬರುತ್ತಿದ್ದಾರೆಂದರೆ ಸಾಲ ಕೇಳಲು ಬರುತ್ತಿದ್ದಾರೆ ಎಂದೇ ಅರ್ಥೈಸುವಷ್ಟು ಪರಿಸ್ಥಿತಿಗಳು ಬಿಗಡಾಯಿಸಿವೆ.
ಒಂದೇ ಊರಿನಲ್ಲಿ ವಾಸಿಸುತ್ತಿದ್ದರೂ ಕೆಲವು ಕಾರ್ಯಗಳು, ಸಮಾರಂಭಗಳ ಹೊರತು, ಅವರು ಇತರ ಸಹೋದರ ಅಥವಾ ಸಹೋದರಿಯರನ್ನು ಭೇಟಿಯಾಗುವುದಿಲ್ಲ.
ಸಾಂದರ್ಭಿಕ, ನಿಯಮಿತ ಭೇಟಿಗಳಂತೂ ಇಲ್ಲವೇ ಇಲ್ಲ.
ಎಷ್ಟೋ ಮನೆಗಳಲ್ಲಿ ಊಟಕ್ಕೆ ಒಂದು ಗಂಟೆ ಮುಂಚೆ ಆ ಫಂಕ್ಷನ್ ಗಳಿಗೆ ಹೋಗಿ ಊಟವಾದ ತಕ್ಷಣ “ನನಗೆ ಕೆಲಸವಿದೆ” ಎಂದು ಹೊರಟು ಹೋಗುವುದನ್ನು ನೋಡುತ್ತೇವೆ. ಮನುಷ್ಯರ ನಡುವೆ ಅನ್ಯೋನ್ಯತೆ ಕಾಣುವುದು ಅಪರೂಪ.
ಭೇಟಿಯಾಗುವ ಮತ್ತು ಪರಸ್ಪರರ ಮನೆಯಲ್ಲಿ ರಾತ್ರಿ ಊಟ ಮಾಡುವ ಮತ್ತು ಸಾಧ್ಯವಾದರೆ ಸ್ವಲ್ಪ ಹೊತ್ತು ಹರಟೆ ಹೊಡೆಯುವ ಪರಿಪಾಠವನ್ನು ಬೆಳೆಸಿಕೊಳ್ಳುವುದು ಒಳಿತು. ಅದು ಬಿಟ್ಟರೆ ಕೆಲವು ವಿಶೇಷ ಸಮಾರಂಭಗಳಲ್ಲಿ ಮಾತ್ರ ಸಂಧಿಸುವ, ಊಟ- ತಿಂಡಿ ಮಾಡಿ ಹೊರಡುವ ಕುಟುಂಬಗಳಲ್ಲಿ ಬಂಧಗಳು ಗಟ್ಟಿಯಾಗಿರುವುದಿಲ್ಲ. ನೂರಾರು ಅತಿಥಿಗಳು ಭಾಗವಹಿಸುವ ಸಮಾರಂಭದಲ್ಲಿ ಯಾವುದೇ ಹತ್ತಿರದ ಬಂಧುಗಳಿಗೆ ಅಥವಾ ಒಡಹುಟ್ಟಿದವರಿಗೆ ವಿಶೇಷ ಗೌರವ ನೀಡಿ ಅವರೊಂದಿಗೆ ಕುಳಿತು ಮಾತನಾಡುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವುದೇ ಆಚರಣೆಗಳು ಇಲ್ಲದಿದ್ದರೂ ತಿಂಗಳಿಗೊಮ್ಮೆಯಾದರೂ ಒಬ್ಬರನ್ನೊಬ್ಬರು ಭೇಟಿಯಾಗಿ ಸರಳವಾಗಿ ಮನಃಪೂರ್ವಕವಾಗಿ ಊಟ ಮಾಡಿ ಸಂತೋಷದಿಂದ ಹೊರಡುವುದರಿಂದ ಬಂಧಗಳು ಗಟ್ಟಿಯಾಗುತ್ತವೆ. ಇದಕ್ಕೆ ನಮಗೆ ಸಮಯವಿಲ್ಲವೆನ್ನುವ ನೆಪ ಮಾತ್ರ ಖಂಡಿತ ಬೇಡವೇ ಬೇಡ. ಕಾಣೆಯಾಗುತ್ತಿರುವ ಅನ್ಯೋನ್ಯತೆ, ಆತ್ಮೀಯತೆ, ಬಂಧಗಳನ್ನು ಬೆಳೆಸಿ ಸಂಬಂಧಗಳನ್ನು ಗಟ್ಟಿಯಾಗಿಸಿಕೊಳ್ಳೋಣವೇ?