ಒಂದೇ ದಿನದ ಎರಡು ಪ್ರದರ್ಶನದಲ್ಲಿ ಯುಎಇಯ ಐದು ಸಾವಿರ ತುಳುವರು ನೋಡಿದ ನಾಟಕ “ಶಿವದೂತೆ ಗುಳಿಗೆ” ವೀಕ್ಷಕರನ್ನು ವಿಸ್ಮಿತರನ್ನಾಗಿಸಿತು. ಉದ್ ಮೇತದ ಅಲ್ ನಸರ್ ಲ್ಯಾಂಡ್ ನ ಆಡಿಟೋರಿಯಂನ ಸಭಾಂಗಣದಲ್ಲಿ ಮಾರ್ಚ್ 19 ರಂದು ಕಲಾ ಸಂಗಮ ಕಲಾವಿದರು ಕುಡ್ಲ ಅಭಿನಯಿಸಿದ “ಶಿವದೂತೆ ಗುಳಿಗೆ” ನಾಟಕದ 423 ಮತ್ತು 424 ನೇ ಪ್ರದರ್ಶನಕ್ಕೆ ಜನ ಜಾತ್ರೆಯಾಗಿತ್ತು. ಮಧ್ಯಾಹ್ನ 2.30 ಮತ್ತು ಸಂಜೆ 6.30 ಕ್ಕೆ ಪ್ರದರ್ಶನವಾದ ನಾಟಕದ ಎರಡು ಪ್ರದರ್ಶನಕ್ಕೆ ಯುಎಇಯಲ್ಲಿ ಎಲ್ಲಾ ರಾಜ್ಯದಲ್ಲಿರುವ ತುಳುವರು ಆಗಮಿಸಿ ನಾಟಕದ ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾದರು.
ಆರಂಭದಿಂದ ಅಂತ್ಯದವರೆಗೂ ಕೂತುಹಲ ಸೃಷ್ಟಿಸಿ, ಅಬ್ಬರದ ವೇದಿಕೆ, ಕಣ್ಮನ ಸೆಳೆಯುವ ಬೆಳಕು, ಮೈ ರೋಮಾಂಚನಗೊಳ್ಳುವ ಧ್ವನಿ, ತೆಂಬೆರೆಯ ಸದ್ದು, ಪಾಡ್ದನದ ಕಂಪನ, ಇಂಪಿನ ಜೊತೆಗೆ ಹುರುಪು ತಂಬುವ ಸಂಗೀತ ದೊಂದಿಗೆ “ಶಿವದೂತೆ ಗುಳಿಗೆ” ನಾಟಕ ಮೂಡಿಬಂತು.
ತುಳುನಾಡಿನ ಕಾರಣಿಕದ ಶಕ್ತಿ ಗುಳಿಗೆ ದೈವದ ಹುಟ್ಟು ಬದುಕು ಶಕ್ತಿಯ ಕಥೆಯೊಂದಿಗೆ ನಾಟಕ ಸಾಗುತ್ತವೆ. ಅಲ್ಲದೆ ತುಳುವ ಮಣ್ಣಿನ ನಂಬಿಕೆಗಳ ಬಗ್ಗೆ ನಿರ್ಲಕ್ಷ್ಯ ತೋರುವ ಪೀಳಿಗೆಗೆ ಪಾಠದ ಸಂದೇಶಗಳನ್ನು ನೀಡುತ್ತದೆ. ಶಿವ ಪಾರ್ವತಿ ವಿರಾಜಮಾನರಾಗುವ ಕೈಲಾಸ ಪರ್ವತ, ಶೇಷ ಶಯನ ವಿಷ್ಣುವಿನ ಕ್ಷೀರ ಸಾಗರವನ್ನು ಬಿಂಬಿಸುವ ದೃಶ್ಯ, ನೆಲವುಲ್ಲ ಸಂಕೆಯ ಮನೆಯ ವಾತಾವರಣ ಇತ್ಯಾದಿ ರಂಗ ವಿನ್ಯಾಸಗಳು ನಾಟಕಕ್ಕೆ ಹೊಸ ರೂಪವನ್ನು ಕೊಡುತ್ತದೆ.
ಎ.ಕೆ.ವಿಜಯ್ ಕೋಕಿಲರವರ ಇಂಪಾದ ಸಂಗೀತ, ಪಟ್ಲ ಸತೀಶ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಮೈಮ್ ರಾಮ್ ದಾಸ್, ಡಾ.ವೈಷ್ಣವಿ ಯವರ ಇಂಪಾದ ಹಿನ್ನೆಲೆ ಗಾಯನ ಮನಸೊರೆಗೊಳ್ಳುತ್ತದೆ. ನಾಟಕದ ಉದ್ದಕ್ಕೂ ಕೇಳುವ ತೆಂಬೆರೆಯ ದ್ವನಿ, ಪಾಡ್ದನ ತುಳುವ ಮಣ್ಣಿನ ಕಂಪನ್ನು ಚೆಲ್ಲುತ್ತದೆ. ನಾಟಕದ ಅಬ್ಬರಕ್ಕೆ ತಕ್ಕಂತೆ ವಿಜಯಕುಮಾರ್ ಕೊಡಿಯಲ್ ಬೈಲ್ ರವರು ಬರೆದ ಸಂಭಾಷಣೆಯನ್ನು ಕೇಳುವಾಗ ಮೈ ರೋಮಾಂಚನಗೊಳ್ಳುತ್ತದೆ. ಅಬ್ಬರದ ಗುಳಿಗ ಅಭಿನಯದಲ್ಲಿ ಕಾಂತರ ಚಿತ್ರದ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಸಂಪೂರ್ಣವಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತಂಡದ ಹಿರಿಯ ಕಲಾವಿದರಾದ ರಮೇಶ್ ಕಲ್ಲಡ್ಕ ಹಾಗೂ ಎಲ್ಲಾ ಕಲಾವಿದರು ಅವರ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ.
“ತೌಳವ ರಂಗ ಚಾಣಕ್ಯ” ಬಿರುದು ಪ್ರದಾನ
ನಾಟಕದ ಮುಂಚಿತವಾಗಿ ನಡೆದ ಸರಳ ರೀತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಹೊಟೆಲ್ ಉದ್ಯಮಿ ವಾಸು ಭಟ್, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ನಂಜೆ ಯಾಟ್ಸ್ ನ ಸಂದೀಪ್ ರೈ ನಂಜೆ, ಪ್ರೆಮ್ ನಾಥ್ ಶೆಟ್ಟಿ, ಭೀಮ ಗೋಲ್ಡ್ ಜ್ಯುವೆಲ್ಲರಿಯ ನಾಗರಾಜ್ ರಾವ್, ಚಿತ್ರ ನಿರ್ಮಾಪಕ ಅರುಣ್ ರೈ ತೋಡರ್, ಹರಿಪ್ರಸಾದ್ ಶೆಟ್ಟಿ, ಅಲ್ ಫರ್ದಾನ್ ಎಕ್ಸಂಜ್ ನ ಸಿ.ಇ.ಒ. ತಾರನಾಥ ರೈ, ಲ್ಯಾನ್ಸಿ ಡಿ’ಸೋಜಾರವರು ದೀಪ ಬೇಳಗಿಸಿ ನಾಟಕಕ್ಕೆ ಚಾಲನೆ ನೀಡಿದರು. ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ದಂಪತಿಗಳನ್ನು ಗಣ್ಯತೀ ಗಣ್ಯರು ಸನ್ಮಾನಿಸಿ “ತೌಳವ ರಂಗ ಚಾಣಕ್ಯ” ಎಂಬ ಬಿರುದು ನೀಡಿ ಗೌರವಿಸಲಾಯಿತು. ನಾಟಕ ಸಂಘಟಕರಾದ ಹರೀಶ್ ಬಂಗೇರ, ದಿನೇಶ್ ಶೆಟ್ಟಿ ಕೊಟ್ಟಿಂಜ, ಗಿರೀಶ್ ನಾರಾಯಣ, ರಾಜೇಶ್ ಕುತ್ತಾರ್, ಪ್ರಕಾಶ್ ಪಕ್ಕಳ, ಶಾನ್ ಪೂಜಾರಿ ಉಪಸ್ಥಿತರಿದ್ದರು.ಶ್ರೀಮತಿ ಪ್ರಿಯ ಹರೀಶ್ ರವರು ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು.ರಾಜೇಶ್ ಕುತ್ತಾರ್ ಸ್ವಾಗತಿಸಿ ಧನ್ಯವಾದವಿತ್ತರು.
ನಾಟಕದ ಕೊನೆಗೆ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ರವರು ತಂಡದ ಎಲ್ಲಾ ಕಲಾವಿದರ ಪರಿಚಯಿಸಿದರು. ಇದೇ ವೇಳೆ ನಾಟಕ ತಂಡವು ವಿದೇಶದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸಂಘಟಕರಿಗೆ ಕಲಾವಿದರು ಕೃತಜ್ಞತೆಗಳನ್ನು ಸಲ್ಲಿಸಿದರು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ : ದೀಪಕ್ ರಾಜ್ ಉಪ್ಪಳ (ಅಬುಧಾಬಿ)