ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಹೊಸಗದ್ದೆ ನಿವಾಸಿ ಸುಶೀಲಾ ರೈ ಅವರ ಮನೆಯ ಛಾವಣಿ ಬಿದಿರುಗಳು ಹಳೆಯದಾಗಿ ಮನೆ ಮಹಡಿ ಬೀಳುವ ಹಂತದಲ್ಲಿ ಇದ್ದು ಟರ್ಫಾಲ್ ಹೊದಿಕೆ ಹಾಕಿ ದಿನದೂಡುತ್ತಿದ್ದರು. ಸುಶೀಲಾ ರೈ ಅವರು ಪುತ್ತೂರು ತಾಲೂಕು ಯುವ ಬಂಟರ ಸಂಘದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಯುವ ಬಂಟರ ಸಂಘವು ಇದಕ್ಕಾಗಿ ಸಹಾಯ ಯಾಚಿಸಿ ಸರಿಪಡಿಸಿಕೊಡುವ ಪ್ರಯತ್ನಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಯುವ ಬಂಟರ ಸಂಘದ ಉಪಾಧ್ಯಕ್ಷರಾದ ನೆಲ್ಲಿಕಟ್ಟೆ ಗಣೇಶ್ ಶೆಟ್ಟಿ ಅವರು ಈ ವಿಷಯವನ್ನು ಅಭಿಮತ ಟಿವಿ ಚಾನೆಲ್ ನ ಮುಖ್ಯಸ್ಥೆ ಮಮತಾ ಪಿ ಶೆಟ್ಟಿ ಅವರಲ್ಲಿ ಹೇಳಿಕೊಂಡ ಮೇರೆಗೆ ತಕ್ಷಣವೇ ಮನವಿಗೆ ಸ್ಪಂದಿಸಿದ ಮಮತಾ ಶೆಟ್ಟಿ ಅವರು ಸುಶೀಲಾ ರೈ ಅವರ ಮನೆಗೆ ನೇರ ಭೇಟಿ ಇತ್ತು ಪರಿಶೀಲಿಸಿ ಕೂಡಲೇ ಈ ವಿಷಯವನ್ನು ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಗಮನಕ್ಕೆ ತಂದರು.
ಮಮತಾ ಶೆಟ್ಟಿ ಅವರ ಶಿಫಾರಸ್ಸಿಗೆ ಸ್ಪಂದಿಸಿದ ಐಕಳ ಹರೀಶ್ ಶೆಟ್ಟಿ ಅವರು ಕೂಡಲೇ ಐವತ್ತು ಸಾವಿರದ ಸಹಾಯ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಮೂರು ದಿನಗಳ ಅಂತರದಲ್ಲಿಯೇ ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಛೇರಿಯಲ್ಲಿ ಐಕಳ ಹರೀಶ್ ಶೆಟ್ಟಿ ಅವರು ಸುಶೀಲಾ ಶೆಟ್ಟಿ ಅವರಿಗೆ ಐವತ್ತು ಸಾವಿರದ ಚೆಕ್ ಹಸ್ತಾಂತರಿಸುವ ಮೂಲಕ ಅವರ ಮನೆಗೆ ಬೆಳಕಾಗಿ ನಿಂತರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ, ಅಭಿಮತ ಟಿವಿ ಚಾನೆಲ್ ನ ಮುಖ್ಯಸ್ಥೆ ಮಮತಾ ಪಿ ಶೆಟ್ಟಿ ಹಾಗೂ ಪುತ್ತೂರು ತಾಲೂಕು ಯುವ ಬಂಟರ ಸಂಘದ ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ,ಕೋಶಾಧಿಕಾರಿ ಕೆಸಿ ಅಶೋಕ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಯುವ ಬಂಟರ ಸಂಘವು ಈ ಸಹಾಯವು ಸುಶೀಲಾ ಅವರ ಕೈ ಸೇರುವಂತೆ ಶ್ರಮಿಸಿದ ಮಮತಾ ಶೆಟ್ಟಿ ಹಾಗೂ ಸಹಾಯ ಹಸ್ತ ಚಾಚಿ ಬಂಟ ಸಮಾಜದ ಅಭ್ಯುದಯಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಹಲವರ ಜೀವನಕ್ಕೆ ಬೆಳಕಾಗಿರುವ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ಹೃದಯಂತರಾಳದ ಧನ್ಯವಾದ ಅರ್ಪಿಸಿತು.