ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟನ ಆಯ್ಕೆ ನಡೆಯುವುದು ಬಂಟ ಸಮುದಾಯದ ಮಧ್ಯೆಯೇ. ಅದು ಇತ್ತೀಚಿನ ಟ್ರೆಂಡ್. ಅದಕ್ಕೇ ಈ ಕ್ಷೇತ್ರ ಖ್ಯಾತಿ. ಯಾಕೆಂದರೆ, 1985 ರಿಂದ ನಿರಂತರವಾಗಿ 8 ಅವಧಿಗೆ ಬಂಟ ಸಮುದಾಯದವರೇ ಶಾಸಕರಾಗಿ ಪ್ರತಿನಿಧಿಸಿದ್ದಾರೆ. ಸುಳ್ಯ ಪ.ಜಾತಿ ಮೀಸಲು ಕ್ಷೇತ್ರವಾಗಿರುವ ಕಾರಣ ಒಂದೇ ಸಮುದಾಯದವರು ಆಯ್ಕೆ ಯಾಗುವುದು ಸಾಮಾನ್ಯ. ಆದರೆ ಬಂಟವಾಳ ಕ್ಷೇತ್ರದಲ್ಲೂ ನಿರಂತರವಾಗಿ ಒಂದೇ ಸಮುದಾಯವರು ಶಾಸಕರಾಗುತ್ತಿರುವುದು ಜಿಲ್ಲೆಯಲ್ಲಿ ವಿಶೇಷ. 1985ರಲ್ಲಿ ಬಿ.ರಮಾನಾಥ ರೈ ಅವರು ಶಾಸಕರಾಗಿದ್ದು, 89, 94, 99, 2008 ಹಾಗೂ 2013ರಲ್ಲಿ ಗೆದ್ದರು. 2004ರಲ್ಲಿ ಬಿ.ನಾಗರಾಜ ಶೆಟ್ಟಿ, 2018ರಲ್ಲಿ ರಾಜೇಶ್ ಉಳಿಪ್ಪಾಡಿಗುತ್ತು ವಿಜಯಿಯಾದರು. ಇವರು ಮೂವರೂ ಒಂದೇ ಸಮುದಾಯದವರು.
ಇದರೊಂದಿಗೆ ವಿಶೇಷವೆಂದರೆ 1989ರಿಂದ ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್ ಎಂದಾದರೂ ಎರಡೂ ಕಡೆಯಿಂದ ಪರಸ್ಪರ ಜಿದ್ದಾಜಿದ್ದಿಗೆ ಇಳಿಯುವವರು ಬಂಟ ಸಮುದಾಯದವರೇ. ಬಿ.ರಮಾನಾಥ ರೈ ಅವರ ವಿರುದ್ಧ 1989ರಲ್ಲಿ ಎಚ್.ನಾರಾಯಣ ರೈ, 1994 ಹಾಗೂ 1999ರಲ್ಲಿ ಶಕುಂತಳಾ ಟಿ.ಶೆಟ್ಟಿ, 2004 ಹಾಗೂ 2008ರಲ್ಲಿ ಬಿ.ನಾಗರಾಜ ಶೆಟ್ಟಿ, 2013 ಹಾಗೂ 18ರಲ್ಲಿ ರಾಜೇಶ್ ನಾೖಕ್ ಅವರು ಸ್ಪರ್ಧಿಸಿದ್ದರು.