ಶ್ರೀ ಕಟೀಲು ಮೇಳದಲ್ಲಿ ಕಳೆದ 42 ವರ್ಷ ಗಳಿಂದ ನಿರಂತರ ಯಕ್ಷಗಾನ ಕಲಾ ಸೇವೆ ಮಾಡುತ್ತಿರುವ ಅನುಭವಿ ಕಲಾವಿದ, ಮೇಳದ ಪ್ರಬಂಧಕ ಶ್ರೀ ಶ್ರೀಧರ ಪಂಜಾಜೆ ಅವರಿಗೆ 13, ಮೇ ಶನಿವಾರ ಕದ್ರಿ ಕಂಬಳ ಗುತ್ತು ನಲ್ಲಿ, ಡಾ.ಬಿ. ನಿಶಾಕಾಂತ ಶೆಟ್ಟಿ ಅವರ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ, ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಲಾಗುವುದು ಎಂದು ಸಂಯೋಜಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.
ಪುಂಡು ವೇಷಧಾರಿಯಾಗಿ ಪೌರಾಣಿಕ ಪಾತ್ರಗಳ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀಧರ್ ಅವರು ಕಲ್ಲಾಡಿ ವಿಠ್ಠಲ ಶೆಟ್ಟಿ ಅವರ ಪ್ರೇರಣೆ, ಮಾರ್ಗದರ್ಶನ ದಲ್ಲಿ ಯಕ್ಷಗಾನ ಕಲಿತು, ಮೇಳ ಸೇರಿದವರು.15 ವರ್ಷಗಳಿಂದ ಕಟೀಲು ಮೇಳದ ಪ್ರಭಂದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕದ್ರಿ ಶ್ರೀ ಮಂಜುನಾಥ ಯಕ್ಷಗಾನ ಸಂಘದಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕನಾಗಿ, ಮಂಗಳೂರು ನಗರದ ಹವ್ಯಾಸಿ ವಲಯದ ಹಿರಿಯ ಅರ್ಥಧಾರಿ ಗಳಾಗಿದ್ದ ಕೀರ್ತಿಶೇಷ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಂಜೆ 6 ರಿಂದ ಶ್ರೀ ಕಟೀಲು ಮೇಳ ದವರಿಂದ “ತ್ರಿಮೂರ್ತಿ ಕಲ್ಯಾಣ ” ಯಕ್ಷಗಾನ ಸೇವೆ ಬಯಲಾಟ ಜರಗಲಿದೆ.