
ಮೀರಾ ಭಯಂದರ್ನ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ ಡಾ. ಅರುಣೋದಯ ರೈ ಅವರು ಸ್ಥಾಪಿಸಿರುವ ‘ಅರುಣೋದಯ ಎಜುಕೇಶನ್ ಟ್ರಸ್ಟ್’ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಕೈಕಂಬದ ಸ್ಟಾರ್ ಕಿಡ್ಸ್ ಶಾಲೆಯ ವಾರ್ಷಿಕೋತ್ಸವವು ಫೆಬ್ರವರಿ 4 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಿದ ಈ ಕಾರ್ಯಕ್ರಮವು ಪೋಷಕರು ಹಾಗೂ ಅತಿಥಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ ಅವರು, ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಕಲಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಪೋಷಕರ ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಮಾತ್ರ ವಿದ್ಯಾರ್ಥಿಗಳು ಮುಂದೆ ದೇಶದ ಉತ್ತಮ ಹಾಗೂ ಸಂಸ್ಕಾರವಂತ ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ರವೀಂದ್ರನಾಥ ಆಳ್ವ ಹಾಗೂ ಮಾಜಿ ಸೈನಿಕರಾದ ಮಲಾರಬೀಡು ಬಿಳಿಯೂರು ಗುತ್ತು ರಂಗನಾಥ ರೈ ಅವರು ಉಪಸ್ಥಿತರಿದ್ದರು. ಇತರ ಅತಿಥಿಗಳಾಗಿ ನವೀನ್ ಶೆಟ್ಟಿ, ಹರೀಶ್ ಶೆಟ್ಟಿ, ಹರ್ಷಿತಾ ಹಾಗೂ ಪ್ರಸನ್ನ ಭಟ್ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತಂದರು. ಶಾಲೆಯ ಮುಖ್ಯೋಪಾಧ್ಯಾಯರಾದ ನೀತಾಕ್ಷಿ ಅವರು ಸ್ವಾಗತ ಭಾಷಣ ಮಾಡಿ, ಶಾಲೆಯ ಸಾಧನೆಗಳು ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಆಕರ್ಷಕ ನೃತ್ಯ, ಗಾಯನ ಹಾಗೂ ವೈವಿಧ್ಯಮಯ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು. ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಅತಿಥಿಗಳಿಗೆ ಗೌರವ ಸಮರ್ಪಣೆ ನಡೆಸಿ, ವಂದನಾರ್ಪಣೆಯೊಂದಿಗೆ ಸಮಾರಂಭವನ್ನು ಮಂಗಲಗೊಳಿಸಲಾಯಿತು. ಈ ವಾರ್ಷಿಕೋತ್ಸವವು ಎಲ್ಲರ ಮನದಲ್ಲಿ ಸ್ಮರಣೀಯ ಕ್ಷಣಗಳನ್ನು ಉಳಿಸುವ ಮೂಲಕ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
























































































































