ನ್ಯೂಯಾರ್ಕ್ ನ ಕ್ಲಾರಾಜೆಟಿಕಿನ್ ಎಂಬ ಮಹಿಳೆ ಉದ್ಯೋಗಸ್ಥ ಮಹಿಳೆಯರ ಸಮಾನ ವೇತನ ಹೆರಿಗೆ ಸೌಲಭ್ಯ ಹಾಗೂ ಮಹಿಳೆಯರ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ನಡೆಸಿ ಗೆಲುವು ಸಾದಿಸಿದ ದಿನವನ್ನು ಮಹಿಳೆಯರಿಗೆ ಅರ್ಪಿಸುತ್ತಾ ಗೆಲುವಿನ ಸ್ಮರಣೆಗಾಗಿ ಸಾಧನೆಯ ಸಂಕೇತವಾಗಿ ಮಾರ್ಚ್ 8 ನ್ನು ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲಾರಂಬಿಸಿದರು. ಹೀಗೊಂದು ನಿಗದಿತ ವಿಶ್ವ ಮಹಿಳಾ ದಿನ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದಿರಲಿ.
ಸ್ತ್ರೀ ಪ್ರಕೃತಿಯ ವರದಾನ, ಬದುಕಿನಂಚಿನವರೆಗೂ ಮಹಿಳೆ ಕುಟುಂಬಕ್ಕೆ, ಸಮಾಜಕ್ಕೆ ಅಗಾಧ ಜ್ಞಾನ ಒಲವು ನೆರವು ನೀಡುತ್ತಿರುತ್ತಾಳೆ. ಕೇವಲ ಅಲಂಕಾರಿಕ ವಸ್ತುಗಳಾಗಿ ಉಳಿಯದೆ ಶಿಕ್ಷಣ, ಸಾಹಿತ್ಯ, ಧರ್ಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಕಿರುತೆರೆ ಬೆಳ್ಳಿ ತೆರೆ,ಎಲ್ಲದರಲ್ಲೂ ಮಹಿಳೆಯರು ಮಿಂಚುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರಿಗಿಂದು ತೆರೆದ ಜಗತ್ತು ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ನೀಡುತ್ತಿದೆ. ಆದರೆ ತೆರದ ಜಗತ್ತಿನಲ್ಲೂ ಉಸಿರುಗಟ್ಟಿಸುವ ದೌರ್ಜನ್ಯಕ್ಕೆ ಕೊರತೆ ಇಲ್ಲದಿರುವುದೇ ವಿಪರ್ಯಾಸ. ಸಮಾಜದ ಯಾವುದೇ ಮೂಲೆಯನ್ನು ಅವಲೋಕಿಸಿ ನೋಡಿ, ಹೆಣ್ಣು ಮಗಳೊ ಬ್ಬಳ ರೋಧನ ಇದ್ದೆ ಇರುತ್ತದೆ. ಕಾನೂನಿನ ದುರುಪ ಯೋಗ, ಕಾನೂನಿನ ಮರೆಯಲ್ಲಿ ಮಹಿಳೆಯರ ಶೋಷಣೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ಕಡಿಮೇ ಆಗುವ ಭರವಸೆ ಇಲ್ಲ. ಕೆಲಧ್ವನಿ ಜಗತ್ತಿಗೆ ಕೇಳುತ್ತದೆ. ಕೆಲವು ಮೌನದಲ್ಲಿ ಮುಳುಗಿರುತ್ತದೆ. ಜೀವನದ ನಿರ್ಧಾರಗಳನ್ನು ಎಲ್ಲಿಯವರೆಗೆ ಮಹಿಳೆ ಸ್ವತಂತ್ರವಾಗಿ ಕೈಗೊಳ್ಳಲು ಅಸಾಧ್ಯವೋ ಅಲ್ಲಿಯವರೆಗೆ ಯಾವ ಮಹಿಳೆಯೂ ಸ್ವತಂತ್ರಳಲ್ಲ. ಸ್ತ್ರೀ ಸ್ವಾತಂತ್ರ್ಯ ಅನಿವಾರ್ಯವಷ್ಟೆ ಅಲ್ಲ ಅಗತ್ಯವೂ ಹೌದು.
ಸರ್ಕಾರ ಅನೇಕ ಮಹಿಳಾ ಪರ ಕಾನೂನು ಜಾರಿಗೆ ತಂದಿರುತ್ತದೆ. ಮಹಿಳೆಯರ ಹಿತರಕ್ಷಣೆಗೆ ಹಲವಾರು ಪ್ರಮುಖ ಕಾಯ್ದೆಗಳನ್ನು ರೂಪಿಸಿದ್ದರು, ಕೌಟುಂಬಿಕ ಹಿಂಸೆಯ ಕಾನೂನು ಕಠಿಣವಾಗಿದ್ದರೂ, ಮಹಿಳಾ ಹಕ್ಕಿಗಾಗಿ ಎಷ್ಟೇಲ್ಲ ಕಾಯ್ದೆಯಿದ್ದರೂ ಮಹಿಳಾ ಶೋಷಣೆ ಏಕೆ ಕಡಿಮೆ ಆಗುತ್ತಿಲ್ಲ. ನಿರಂತರ ಸುದ್ದಿಯಲ್ಲಿರುವ ಅತ್ಯಾಚಾರ ಪ್ರಕರಣಗಳು, ಕಾಮುಕರ ವಿಕೃತಕ್ಕೆ ಬಲಿಯಾದಹೆಣ್ಣು ಜೀವಗಳೆಷ್ಟೋ, ಮಹಿಳೆಯರನ್ನು ದುರುದ್ದೇಶದಿಂದ ಸ್ಪರ್ಶಿಸುವುದು ಚುಡಾಯಿಸುವುದು, ಹಿಂಬಾಲಿಸುವುದು ಕೂಡ ಅಪರಾದ. ಅ್ಯಸಿಡ್ ದಾಳಿಯನ್ನು ಪ್ರತ್ಯೇಕ ಅಪರಾದಡಿಯಲ್ಲಿ ಪರಿಗಣಿಸಲಾಗಿದೆಯಾದರು ಸ್ತ್ರೀ ಶೋಷಣೆಯ ಕರಾಳರೂಪ ವಿದ್ಯಾವಂತ, ಬುದ್ದಿವಂತ ಸಮಾಜದಲ್ಲಿ ಜೀವಂತವಾಗಿರುವಾಗ ಅರ್ಥ ಪೂರ್ಣವಾದ ನಿಟ್ಟಿನಲ್ಲಿ ನಾವು ಮಹಿಳಾ ದಿನವನ್ನು ಆಚರಿಸಿಕೊಳ್ಳುತ್ತೇವೆಯೆ ಎಂಬ ಪ್ರಶ್ನೆಯೊಂದು ಮೂಡುವುದು ಸಹಜತಾನೆ.
ಮಹಿಳಾ ದಿನಾಚರಣೆ ಆಡಂಬರದಿಂದ ಆಚರಿಸಿಕೊಳ್ಳಬೇಕೆಂದಿಲ್ಲ. ಆಚರಣೆಯ ಹಿಂದೊಂದು ಗುರಿ ಇರಲಿ ಅಲ್ಲವಾದರೆ ಪ್ರಾರ್ಥನೆ ಸ್ವಾಗತದೊಂದಿಗೆ ಪ್ರಾರಂಭವಾಗಿ ಧನ್ಯವಾದದೊಂದಿಗೆ ಕಾರ್ಯ ಕ್ರಮಗಳ ಸರಮಾಲೇಗಳನ್ನು ಮುಗಿಸಿದರೆ ಸಾದಿಸಿದ್ದೇನು ಬಂತು. ಮಹಿಳೆಯರ ಜೀವನಕ್ಕೆ ಆದಾರವಾಗ ಬಲ್ಲ, ಸ್ಪೂರ್ತಿ ತುಂಬವ ಕಾರ್ಯಕ್ರಮ ಜರಗಬೇಕು. ಹಸಿದವರ ಹೊಟ್ಟೆತುಂಬುವಂತಿರ ಬೇಕೆ ವಿನಃ ಉಂಡವರಿಗೆ ಉಣ ಬಡಿಸಿದಂತ ವಿಶ್ವ ಮಹಿಳಾ ದಿನಾಚರಣೆಗೆ ಅರ್ಥವಿಲ್ಲ. ಮಹಿಳೆಯರೆಲ್ಲಾ ಸೇರಿಕೊಂಡು ಹಲವು ಚಟುವಟಿಕೆ ಗಳಲ್ಲಿ ಭಾಗವಹಿಸುವಂತೆ ಮಾಡುವ ಮಹಿಳಾ ಪರ ಸಂಘಗಳು ಬೆಳೆದುನಿಂತಿದ್ದು ಮಹಿಳೆಯರ ಒಗ್ಗಟ್ಟಿಗೆ ಸಾಕ್ಷಿಯಾದ ಮಹಿಳಾ ಸಂಘಗಳಿವೆ.ಇವು ನಮ್ಮೊಳಗಿನ ಪ್ರತಿಭೆ, ಅನುಭವಗಳನ್ನು ಹಂಚಿಕೊಳ್ಳಲು ಅನುಕೂಲ ವಾದ ಸ್ಥಿತಿಯಲ್ಲಿರಬೇಕು ಹಾಗೂ ಕೆಲ ಅನಿಷ್ಟ ಪದ್ದತಿ ಗಳ ವಿರುದ್ಧ ನ್ಯಾಯಯುತವಾದ ಆಕ್ರೋಶ ವ್ಯಕ್ತ ಪಡಿಸಿ ಸ್ವಾತಂತ್ರ್ಯ ,ಸಮಾನತೆಯ ಹಕ್ಕುಗಳನ್ನು ಬೆಂಬಲಿಸಬೇಕು ಮಹಿಳಾ ದೌರ್ಜನ್ಯ, ಬಡ ಮಹಿಳೆಯರ ಸ್ಥಿತಿ ಗತಿ ಸುಧಾರಣೆ ಹೋರಾಟ ನಡೆಸಿ ಮಹಿಳೆಯ ಉನ್ನತ್ತಿಗೆ ಪ್ರಯತ್ನಿಸಿ ಸಫಲರಾದರೆ ಮಹಿಳಾ ದಿನಾಚರಣೆಗೆ ಅರ್ಥ ಬರಬಹುದು.
ಮಹಿಳಾ ದಿನಾಚರಣೆ ಅಂದ ಮಾತ್ರಕ್ಕೆ ಮಹಿಳೆಯರ ನ್ನು ಹಾಡಿ ಹೊಗಳ ಬೇಕೆಂದಿಲ್ಲ.ಸ್ತ್ರೀಯರಲ್ಲಿ ಹಲವು ಧನಾತ್ಮಕ ಅಂಶಗಳೊಂದಿಗೆ ಋಣಾತ್ಮಕ ಅಂಶಗಳು ಇದ್ದೆ ಇದೆ . ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರಿಂದಲೇ ನಮ್ಮ ಸಂಸ್ಕೃತಿಯ ಸ್ಥಾನ ಪಲ್ಲಟವಾದ ನಿದರ್ಶನ ಅಲ್ಲ ಗಳೆಯುವಂತೆ ಇಲ್ಲ. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಹತ್ಯೆ, ಕೌಟುಂಬಿಕ ಕ್ರೌರ್ಯಗಳಲ್ಲಿ ಮಹಿಳಾ ಮಣಿಗಳ ಕೈ ಇದ್ದ ಬಗ್ಗೆ ಅನೇಕ ವರದಿಗಳಿವೆ. ಹೆಣ್ಣು ತಾನಾಗಿ ಇನ್ನೊಂದು ಹೆಣ್ಣಿಗೆ ಹಿಂಸೆ ನೀಡಿರುವುದನ್ನು ನಿಲ್ಲಿಸುವುದಿಲ್ಲವೊ ಅಲ್ಲಿಯವರೆಗೆ ಸ್ತ್ರೀ ಸ್ವಾತಂತ್ರ್ಯ ಮರೀಚಿಕೆ ಆಗಿ ಉಳಿಯಲಿದೆ. ಹಾಗಿದ್ದ ಮೇಲೆ ನಮಗೆ ಮಹಿಳಾ ದಿನಾಚರಣೆಯ ಅಗತ್ಯವೆಷ್ಟು ಎಂಬುದನ್ನು ಒಮ್ಮೆಯಾದರೂ ಯೋಚಿಸೋಣ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.