ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಫೆ. 16ರಂದು ಸಮರ್ಪಣೆಗೊಳ್ಳಲಿರುವ ಬ್ರಹ್ಮರಥವನ್ನು ಕುಂಭಾಶಿಯ ಕಾರ್ಯಾಗಾರದಿಂದ ಕೊಂಡೊಯ್ಯುವ ದಾರಿಯಲ್ಲಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲಕ್ಕೆ ಆಗಮಿಸಿದಾಗ ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಮುರ್ಡೇಶ್ವರದ ಉದ್ಯಮಿ ದಿ| ಆರ್.ಎನ್. ಶೆಟ್ಟಿ ಅವರ ಪುತ್ರ ಸುನಿಲ್ ಆರ್. ಶೆಟ್ಟಿ ಅವರು ಕೊಲ್ಲೂರು ದೇಗುಲಕ್ಕೆ ಸೇವಾ ರೂಪದಲ್ಲಿ ಬ್ರಹ್ಮರಥವನ್ನು ಸಮರ್ಪಿಸುತ್ತಿದ್ದು, ಕೋಟೇಶ್ವರದ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಿಸಲಾಗಿದೆ.
400 ವರ್ಷಗಳ ಬಳಿಕ ಕೊಲ್ಲೂರು ದೇಗುಲಕ್ಕೆ ನೂತನ ರಥ ನಿರ್ಮಾಣಗೊಂಡಿದೆ. ಹಳೆಯ ರಥದ ಮಾದರಿಯಲ್ಲೇ ಇದ್ದು, 1 ಕೋಟಿ ರೂ.ಗೂ ಅಧಿಕ ವೆಚ್ಚವಾಗಿದೆ. ರಥಕ್ಕೆ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇಗುಲದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು, ವಂಡ್ಸೆ, ಚಿತ್ತೂರು, ಇಡೂರು, ಜಡ್ಕಲ್, ಹಾಲ್ಕಲ್ ಮಾರ್ಗವಾಗಿ ಕೊಲ್ಲೂರಿಗೆ ಮೆರವಣಿಗೆಯಲ್ಲಿ ಒಯ್ಯಲಾಯಿತು.
ಉಡುಪಿಯ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಕೋಟೇಶ್ವರ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ಸುರೇಶ ಬೆಟ್ಟಿನ್, ಚಂದ್ರಿಕಾಧನ್ಯ, ಮಂಜುನಾಥ ಆಚಾರ್ಯ, ಭಾರತಿ, ಶಾರದಾ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ, ಕೋಟ ಶ್ರೀ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಉಪಕಾರ್ಯನಿರ್ವಹಣಾ ಧಿಕಾರಿ ಗೋವಿಂದ ನಾಯ್ಕ, ಸಮಿತಿ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗಣೇಶ ಕಿಣಿ, ಗೋಪಾಲಕೃಷ್ಣ ನಾಡ, ಶೇಖರ ಪೂಜಾರಿ, ಸಂಧ್ಯಾರಮೇಶ, ರತ್ನಾ ಆರ್. ಕುಂದರ್, ಮಾಜಿ ಧರ್ಮದರ್ಶಿ ರಮೇಶ ಗಾಣಿಗ ಕೊಲ್ಲೂರು, ಎಂಜಿನಿಯರ್ ಪ್ರದೀಪ್, ದೇಗುಲದ ಅರ್ಚಕರು, ತಂತ್ರಿ ಡಾ| ಕೆ. ರಾಮಚಂದ್ರ ಅಡಿಗ ಉಪಸ್ಥಿತರಿದ್ದರು.