ನಾಲ್ಕು ವರ್ಷದ ಪುಟ್ಟ ಬಾಲೆ ಇವಳು. ಆದರೆ, ಸಾಧನೆಯ ಪಟ್ಟಿ ನೋಡುತ್ತ ಹೋದರೆ, ಎಂತಹ ವಯಸ್ಕರೂ ನಾಚುವಂತಿದೆ. ಸರಿಯಾಗಿ ಹೆಜ್ಜೆ ಇಟ್ಟು ನಡೆಯುವುದೇ ಕಷ್ಟ ಎನ್ನುವ ಈ ವಯಸ್ಸಿನಲ್ಲಿ ಇಲ್ಲಿನ ಶಾರ್ವಿ, ಸಾಧನೆಗಳ ಮೆಟ್ಟಿಲುಗಳನ್ನು ಹತ್ತುತ್ತಲೇ ಇದ್ದಾಳೆ.


ಇಂಡಿಯನ್ ಬುಕ್ ಆಫ್ ರಿಕಾರ್ಡ್, ಇಂಡಿಯಾ ಸ್ಟಾರ್ ಐಕಾನ್ ಕಿಡ್ಸ್ ಅಚೀವ್ಮೆಂಟ್ ಅವಾರ್ಡ್, ಮಾಜಿಕ್ ಬುಕ್ ಆಫ್ ರಿಕಾರ್ಡ್ ಬೆಸ್ಟ್ ಅಚೀವರ್ಸ್ ಅವಾರ್ಡ್, ಜಾಕಿ ಟ್ಯಾಲೆಂಟ್ ಐಕಾನ್ ಅವಾರ್ಡ್, ಗ್ರ್ಯಾಂಡ್ ಏಷ್ಯನ್ ಬುಕ್ ಆಪ್ ವರ್ಲ್ಡ್ ರಿಕಾರ್ಡ್, ವಂಡರ್ ಬಡ್ಡೀಸ್ ಗೋಲ್ಡನ್ ಐಕಾನ್ ಅವಾರ್ಡ್, ಕಾರ್ನಿವಲ್ ಫೆಸ್ಟ್ ಇಂಜ್ ಜಿನಿಯಸ್ ಟ್ಯಾಲೆಂಟ್ ಅವಾರ್ಡ್, ಯೂಥಿಸ್ತಾನ್ ಮ್ಯಾಥಮ್ಯಾಟಿಕಲ್ ಚಾಲೆಂಜ್ ಗೋಲ್ಡನ್ ಮೆಡಲ್ ಹೀಗೆ ಹತ್ತು ಹಲವು ದಾಖಲೆಗಳು ಶಾರ್ವಿ ಹೆಸರಿನಲ್ಲಿ ದಾಖಲಾಗಿವೆ.
ಪಂಜುರ್ಲಿ ಗ್ರೂಪ್ನ ರವಿಕಾಂತ್ ಶೆಟ್ಟಿ ಹಾಗೂ ದಿವ್ಯಶ್ರೀ ಶೆಟ್ಟಿ ದಂಪತಿಯ ಪುತ್ರಿ ಶಾರ್ವಿಗೆ ಸದ್ಯ ನಾಲ್ಕು ವರ್ಷ ವಯಸ್ಸು. ಈಕೆ 10 ಬಣ್ಣಗಳು, 13 ಆಕೃತಿಗಳು, 15 ಕ್ರೀಡೆಗಳು, 26 ಕಾರು ಕಂಪನಿಯರ ಲೋಗೊಗಳು, 26 ತರಕಾರಿಗಳು, 26 ಹಣ್ಣುಗಳು, 24 ಪಕ್ಷಿಗಳು, 15 ಸ್ವಾತಂತ್ರ್ಯ ಹೋರಾಟಗಾರರು, 16 ಸಂಗೀತ ವಾದ್ಯಗಳು, 26 ಸಾರಿಗೆ ವಾಹನಗಳು, 10 ಮಾನವ ಅಂಗಾಂಗಗಳನ್ನು ಗುರುತಿಸಬಲ್ಲಳು.
ಇಷ್ಟಕ್ಕೆ ಈಕೆಯ ಸಾಧನೆ ನಿಲ್ಲುವುದಿಲ್ಲ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಗಳ ಹೆಸರು ಈಕೆಗೆ ಸದಾ ಸ್ಮರಣೆ ಇರುತ್ತದೆ. 100 ರಿಂದ 1 ರವರೆಗೆ ಹಿಂಬದಿಯಿಂದ ಅಂಕಿಗಳನ್ನು ಹೇಳಬಲ್ಲಳು. ಇಂಗ್ಲಿಷ್ ವರ್ಣಮಾಲೆಯನ್ನು ಝಡ್ದಿಂದ ಎ ವರೆಗೆ ಹಿಮ್ಮುಖವಾಗಿ ಹೇಳಬಲ್ಲಳು. 7 ರವರೆಗೆ ಮಗ್ಗಿ ಈಕೆಗೆ ಕಂಠಪಾಠ.
10 ಶ್ಲೋಕಗಳು, 7 ಭೂಖಂಡಗಳು, 5 ಮಹಾಸಾಗರಗಳು, ರಾಷ್ಟ್ರಗೀತೆ, ರಾಷ್ಟ್ರೀಯ ಹಾಡು, ದೇಶಭಕ್ತಿ ಗೀತೆಗಳು, 31 ಪದ್ಯಗಳು, 10 ರಾಜ್ಯಗಳು ಹಾಗೂ ಅಲ್ಲಿನ ಜಾನಪದ ನೃತ್ಯಗಳು, 8 ಗ್ರಹಗಳು, ದೇಹದ ಎಲ್ಲ ಅಂಗಾಂಗಳನ್ನು ಈಕೆ ಹೇಳುತ್ತಾಳೆ.ಇದಲ್ಲದೇ ಶಾರ್ವಿ ಯೋಗದಲ್ಲಿಯೂ ಎತ್ತಿದ ಕೈ. 11 ಯೋಗಾಸನಗಳನ್ನು ಪ್ರದರ್ಶಿಸಬಲ್ಲಳು. 3 ವರ್ಲ್ಡ್ ಪಜಲ್ಗಳನ್ನು ಪರಿಹರಿಸುವುದಲ್ಲದೇ, ಅವುಗಳ ಸ್ಪೇಲಿಂಗ್ ಕೂಡ ಸುಲಲಿತವಾಗಿ ಹೇಳುತ್ತಾಳೆ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಇಷ್ಟೊಂದು ಸಾಧನೆ ಮಾಡಿರುವ ಶಾರ್ವಿ, ಬರುವ ದಿನಗಳಲ್ಲಿ ಇನ್ನೆಷ್ಟು ಸಾಧನೆ ಮಾಡಬಹುದು ಎನ್ನುವುದು ಊಹೆಗೂ ನಿಲುಕದ ಸಂಗತಿ.








































































































