ಪ್ರತಿ ವರ್ಷದಂತೆ ಪುಣೆ ಕನ್ನಡ ಸಂಘದ ಪುರಂದರದಾಸರ ಕೀರ್ತನೆ ಸ್ಪರ್ಧೆಯು ಸಂಘದ ಕನ್ನಡ ಹೈಸ್ಕೂಲಿನ ದಿ. ಗುಂಡುರಾಜ್ ಎಂ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕುಶಾಲ್ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಆರಂಭವಾದ ಕಾರ್ಯಕ್ರಮದಲ್ಲಿ,ಮೂರು ವಿಭಾಗಗಳಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. ಕನ್ನಡ ಅಲ್ಲದೇ ತೆಲುಗು, ತಮಿಳು ಹಾಗೂ ಮರಾಠಿ ಭಾಷೆಯ ಮಕ್ಕಳು ಭಾಗವಹಿಸಿದ್ದರು.
5 ವರ್ಷದ ಪುಟಾಣಿ ಮಗು ವಿನಿಂದ 76 ವರ್ಷದ ಮಹಿಳೆ ಯ ವರೆಗಿನ ಕನ್ನಡಿಗರು, ತೆಲುಗು, ತಮಿಳು ಹಾಗೂ ಮರಾಠಿ ಭಾಷಿಕರು ದಾಸರ ಪದ ಹಾಡಿ, ಸಂಗೀತಕ್ಕೆ ಭಾಷೆ, ಜಾತಿಯ ಭೇದವಿಲ್ಲ ಎಂದು ತೋರಿಸಿಕೊಟ್ಟರು.ಕನ್ನಡ ಸಂಘದ ಅಧ್ಯಕ್ಷರಾದ ಕುಶಲ ಹೆಗ್ಡೆ ಅವರು ಮಕ್ಕಳ ಹಾಡುಗಳನ್ನು ಕೇಳಿ ಆನಂದಿಸಿದರು.
ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು ಇಂದಿರಾ ಸಾಲಿಯಾನ್ ಮತ್ತು ನಿರ್ಣಾಯಕರು ವಿತರಿಸಿದರು. ನಿರ್ಣಾಯಕರಾದ ಕಶ್ಮೀರಾ ಸರ್ನೋಬತ್ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.
ಇಂದಿರಾ ಸಾಲಿಯಾನ್ ಅವರು ಮಾತಾಡುತ್ತಾ ಮುಗ್ಧ ಮಕ್ಕಳು ಹಾಡುತ್ತಿರುವಾಗ ಪುರಂದರ ದಾಸರ ವಿಠ್ಠಲನೇ ಹಾಡುವಂತೆ ಭಾಸವಾಯಿತು ಮತ್ತು ಇಂದು ಪುರಂದರ ದಾಸರು ಎಲ್ಲಾ ಭಾಷಿಕರನ್ನು ಕೀರ್ತನೆಯ ಮೂಲಕ ಒಂದು ಗೂಡಿಸಿದ್ದಾರೆ ಎಂದು ಹೇಳಿದರು. ನೇತ್ರಾ ಕುಲಕರ್ಣಿ ಕಾರ್ಯಕ್ರಮ ನಿರೂಪಣೆ ಮಾಡಿದರು ಪೂಜಾ ಪಾಟೀಲ್ ವಂದನಾರ್ಪಣೆ ಮಾಡಿದರು.