ಒಬ್ಬ ಕ್ರೀಡಾ ಸಾಧಕನಿಗೆ ಆಸಕ್ತಿ, ತಾಳ್ಮೆ, ಕಠಿಣ ಪರಿಶ್ರಮ ಎಲ್ಲದಕ್ಕೂ ಮಿಗಿಲಾಗಿ ಕೆಳಕ್ಕೆ ಬಿದ್ದಾಗ ಮತ್ತೆ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿ ಮುನ್ನುಗ್ಗುವ ಛಲ ಅತೀ ಮುಖ್ಯ. ತಮ್ಮ ರೈಲ್ವೇ ಇಲಾಖೆಯ ಹುದ್ದೆಯೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನೇ ಬರೆಯುತ್ತಿರುವ ಬಂಟ ಸಮಾಜದ ಹೆಮ್ಮೆಯ ಗರಿ ಕೆ.ವಿ ಹರೀಶ್ ಶೆಟ್ಟಿಯವರು 01-06-1978 ರಂದು ಕೆ.ವಿ ವಿಶ್ವನಾಥ ಶೆಟ್ಟಿ ಮತ್ತು ಯಶೋಧ ವಿ ಶೆಟ್ಟಿ ದಂಪತಿಗಳ ಪುತ್ರನಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಲಿಗನಹಳ್ಳಿಯಲ್ಲಿ ಜನಿಸಿದರು. ಹರೀಶ್ ಶೆಟ್ಟರು ಒಂದರಿಂದ ಐದನೇ ತರಗತಿವರೆಗಿನ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಯಾಲ್ತಡ್ಕದಲ್ಲಿ ಪೂರ್ಣಗೊಳಿಸಿ ಸುಭೋಧ ಪ್ರೌಢಶಾಲೆ ಪಾಣಾಜೆಯಲ್ಲಿ ತಮ್ಮ ಪ್ರೌಢ ಶಿಕ್ಷಣ ಪಡೆದು ಪಿಯುಸಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದರು. ಬಾಲ್ಯದಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರಿಗೆ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ದೊರೆತ ಪ್ರೋತ್ಸಾಹ ಹಾಗೂ ತರಬೇತಿಯಿಂದ ಕ್ರೀಡಾ ಸಾಧನೆಗೆ ಮತ್ತಷ್ಟು ಪ್ರೇರಣೆ ದೊರೆತಂತಾಯಿತು. ಆ ಸಂದರ್ಭದಲ್ಲಿ ತರಭೇತಿ ನೀಡಲು ಕಾಲೇಜಿಗೆ ಆಗಮಿಸುತ್ತಿದ್ದ ಪ್ರೇಮನಾಥ ಶೆಟ್ಟಿ ಕಾವು ನೀಡುತ್ತಿದ್ದ ಕ್ರೀಡಾ ತರಬೇತಿ ಹರೀಶ್ ರವರ ಕ್ರೀಡಾಸಕ್ತಿಯನ್ನು ಇಮ್ಮಡಿಗೊಳಿಸಿತೆಂದರೆ ತಪ್ಪಾಗಲಾರದು. ಪ್ರತಿದಿನ ಮೂರು ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗುತ್ತಿದ್ದ ಹರೀಶ್ ಶೆಟ್ಟರು ಅಥ್ಲೆಟಿಕ್ಸ್, ಕಬಡ್ಡಿ, ಭಾರ ಎತ್ತುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲೇ ಇದ್ದು ಪಿ.ಯು.ಸಿ ಶಿಕ್ಷಣದ ಸಂದರ್ಭದಲ್ಲಿ ಜಾವೆಲಿನ್ ಹಾಗೂ ಹ್ಯಾಮರ್ ಎಸೆತದಲ್ಲಿ ಎರಡು ಬಾರಿ ರಾಜ್ಯ ಮಟ್ಟದಲ್ಲಿ ದಾಖಲೆಯನ್ನು ಬರೆದಿದ್ದಾರೆ. ಜಾವೆಲಿನ್ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಕಂಚಿನ ಪದಕ್ಕೆ ಭಾಜನರಾಗಿದ್ದಾರೆ. ನಂತರ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲೇ ಪಡೆದ ಇವರು ಜಾವೆಲಿನ್ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಜೂನಿಯರ್ ವಿಭಾಗ ಹಾಗೂ ಸೀನಿಯರ್ ವಿಭಾಗದಲ್ಲಿ ಮೂರು ವರ್ಷ ಸ್ಪರ್ಧಿಸಿ ಮೂರೂ ವರ್ಷವೂ ಚಿನ್ನದ ಪದಕವನ್ನು ಪಡೆದುಕೊಂಡು ಚಾಂಪಿಯನ್ ಆಗಿ ದಾಖಲೆ ಬರೆದಿದ್ದರು. ಜಾವೆಲಿನ್ ಎಸೆತದಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ದಾಖಲೆ ಬರೆದಿರುವ ಹರೀಶ್ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ದಾಖಲೆ ಬರೆದಿದ್ದಾರೆ. ಕಬಡ್ಡಿಯಲ್ಲಿ ಎರಡು ವರ್ಷಗಳು ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ನಂತರ ಎಮ್ ಎಸ್ ಡಬ್ಲ್ಯೂ ಶಿಕ್ಷಣಕ್ಕಾಗಿ ಆಳ್ವಾಸ್ ಕಾಲೇಜು ಮೂಡುಬಿದಿರೆಗೆ ಸೇರ್ಪಡೆಗೊಂಡ ಹರೀಶ್ ಏಕಲವ್ಯ ಕ್ರೀಡಾ ಸಂಘದ ಸದಸ್ಯರಾಗಿದ್ದರು. ಆ ಸಮಯದಲ್ಲಿ ಜಾವೆಲಿನ್ ಎಸೆತದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ದಾಖಲೆ ಬರೆದ ಹೆಗ್ಗಳಿಕೆಗೆ ಪಾತ್ರರಾದರು. ಅದೇ ವರ್ಷ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದರು. 2001 ರಲ್ಲಿ ಬೆಂಗಳೂರಿನಲ್ಲಿ ನಡೆದ ನ್ಯಾಷನಲ್ ಮೀಟ್ ನಲ್ಲಿ ಜಾವೆಲಿನ್ ಎಸೆತದಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನದೊಂದಿಗೆ ಕಂಚಿನ ಪದಕವನ್ನು ಪಡೆದರು. ಇವರ ಈ ಸಾಧನೆಯನ್ನು ಗಮನಿಸಿ ಪೋಲಿಸ್ ಇಲಾಖೆಯು ಕಾನ್ಸ್ಟೇಬಲ್ ಹುದ್ದೆ ನೀಡಿತು. ಅದೇ ವರ್ಷ ಅಖಿಲ ಭಾರತ ಪೋಲಿಸ್ ಮೀಟ್ ನಲ್ಲಿ ದ್ವಿತೀಯ ಸ್ಥಾನಿಯಾದರು. ಅನಂತರ ರೈಲ್ವೇ ಇಲಾಖೆಗೆ ಸೇರ್ಪಡೆಗೊಂಡ ಹರೀಶ್ ರೈಲ್ವೇ ಇಲಾಖೆಯ ತರಬೇತಿಗಾಗಿ ಹೈದರಾಬಾದ್ ಗೆ ತೆರಳಿದ ಸಂದರ್ಭದಲ್ಲಿ ಸಮಯದ ಅಭಾವದಿಂದ ಸರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ರೈಲ್ವೇ ಇಲಾಖೆಯ ತರಬೇತಿ ಮುಗಿಸಿದ ನಂತರ ಹೈದರಾಬಾದ್ನಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಲೇ ಕ್ರೀಡೆಯನ್ನೂ ಅಭ್ಯಸಿಸಿ ಜಾವೆಲಿನ್ ಸ್ಪರ್ಧೆಯಲ್ಲಿ ಆಂಧ್ರಪ್ರದೇಶದ ರಾಜ್ಯ ದಾಖಲೆಯನ್ನು 70 ಮೀಟರ್ ನೊಂದಿಗೆ ನಿರ್ಮಿಸಿ ಇದುವರೆಗೂ ಇವರ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಅನಂತರ ಕೆಲವೊಂದು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದರು. ಹಲವಾರು ವರ್ಷಗಳಿಂದ ಮಾರ್ಷಲ್ ಸ್ಪೋರ್ಟ್ಸ್ ಮೀಟ್ ಗಾಗಿ ಅಭ್ಯಸಿಸಿ ಭಾಗವಹಿಸುತ್ತಿದ್ದು ಜಾವೆಲಿನ್ ಎಸೆತದಲ್ಲಿ ನಿರಂತರವಾಗಿ ನ್ಯಾಷನಲ್ ಗೋಲ್ಡ್ ಮೆಡಲ್ ಪಡೆದುಕೊಂಡು ಮೂರು ಬಾರಿ ಇಂಟರ್ ನ್ಯಾಷನಲ್ ಹಂತಕ್ಕೆ ಆಯ್ಕೆಯಾದರು. ಇವರ ಈ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿದೆ.”ನನ್ನ ಸಾಧನೆಯ ಶ್ರಮದ ಹಿಂದೆ ಅನೇಕರ ಪ್ರೋತ್ಸಾಹವಿತ್ತು. ಅವರಲ್ಲಿ ಮುಖ್ಯವಾಗಿ ನನ್ನ ಕಾಲೇಜು ದಿನಗಳ ಗೆಳೆಯನಾದ ದಿನೇಶ್ ಕುಮಾರ್. ಕ್ರೀಡಾ ತರಬೇತಿಗಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತರಗತಿಗಳತ್ತ ಹೆಚ್ಚಿನ ಗಮನ ಕೊಡಲು ಸಾಧ್ಯವಾಗದೇ ಇದ್ದಾಗ ನನಗೆ ಪಾಠದ ಸಾರಾಂಶಗಳನ್ನು ತಿಳಿಸಿ ಅಂಕ ಗಳಿಕೆಗೆ ಸಹಾಯ ಮಾಡುತ್ತಿದ್ದರು. ಇನ್ನೋರ್ವ ವ್ಯಕ್ತಿಯೆಂದರೆ ಪ್ರೇಮನಾಥ ಶೆಟ್ಟಿ ಕಾವು. ಅವರು ಪ್ರಾರಂಭದಲ್ಲಿ ನೀಡಿದಂತಹ ಕ್ರೀಡಾ ತರಬೇತಿಯಿಂದ ನಾನಿಂದು ಓರ್ವ ಸಾಧಕನಾಗಿ ಗುರುತಿಸಿಕೊಂಡಿದ್ದೇನೆ. ಇನ್ನೋರ್ವ ವ್ಯಕ್ತಿಯೆಂದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ. ಪ್ರತಿ ಸಮಯದಲ್ಲೂ ಕಿವಿಮಾತು ಹೇಳುತ್ತಾ ಏಳು – ಬೀಳುಗಳಲ್ಲಿ ಸದಾ ಕೈ ಹಿಡಿದವರು ಮೋಹನ್ ಆಳ್ವಾರವರು. ನನ್ನಂತಹ ಅನೇಕರ ಸಾಧನೆಯ ಹಾದಿಗೆ ಬೆಳಕು ಚೆಲ್ಲಿದವರು. ಇವರಿಗೆ ನಾನೆಂದಿಗೂ ಋಣಿ” ಎನ್ನುತ್ತಾರೆ ಹರೀಶ್ ಶೆಟ್ಟರು. “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧಿಸಲು ದಾರಿ ಅನೇಕ. ಪ್ರೌಢ ಹಾಗೂ ಕಾಲೇಜು ಹಂತ ನಮ್ಮ ಜೀವನದ ಬಹುಮುಖ್ಯ ಅಂಗ. ಆ ಹಂತದಲ್ಲಿ ನಮ್ಮಲ್ಲಿರುವ ಪ್ರತಿಭೆ ಹೆಮ್ಮರವಾಗಿ ಬೆಳೆಯಲು ನೀಡುವಂತಹ ಪೋಷಕಾಂಶಗಳನ್ನು ಹೀರಿಕೊಳ್ಳುವಂತಹ ಗುಣ ನಮ್ಮಲ್ಲಿ ಅತೀ ಅಗತ್ಯ. ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಮಿತವಾಗಿ ಬಳಸಿ ವ್ಯಕ್ತಿತ್ವ ವಿಕಸನಕ್ಕೆ ಗಮನ ಕೊಡಬೇಕು” ಎನ್ನುವುದು ಇವರ ಕಿವಿಮಾತು. 2002 ರಿಂದ ಸಿಖಂದ್ರಬಾದ್ ಆಂಧ್ರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿ 2010 ರಿಂದ ಬೆಂಗಳೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಕಮರ್ಷಿಯಲ್ ಸುಪರೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಶೆಟ್ಟಿ ತಮ್ಮ ಪತ್ನಿ ಶರ್ಮಿಳಾ ವೈ ಶೆಟ್ಟಿ, ಮಕ್ಕಳಾದ ಶ್ರೇಷ್ಠ್ ಶೆಟ್ಟಿ, ಜೇಷ್ಠ್ ಶೆಟ್ಟಿ ಇವರೊಂದಿಗೆ ಸುಖಮಯ ಜೀವನ ಸಾಗಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸುತ್ತಿರುವ ಇವರಿಗೆ ಇನ್ನಷ್ಟು ಅವಕಾಶಗಳು ಒದಗಿ ಬಂದು ಕ್ರೀಡಾ ಕ್ಷೇತ್ರದ ಸಾಧಕನಾಗಿ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವಂತಾಗಲಿ. ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ. ಇವರ ಈ ಸಾಧನೆಯ ಪಯಣ ಇತರರಿಗೂ ಸ್ಪೂರ್ತಿಯಾಗಲೆನ್ನುವುದೇ ನಮ್ಮೆಲ್ಲರ ಆಶಯ. ಬಂಟ ಸಮಾಜದ ತೆರೆಮರೆಯ ಸಾಧಕರಲ್ಲಿ ನೀವು ಒರ್ವರು. ನಿಮಗೆ ಬಂಟ್ಸ್ ನೌ ತಂಡದ ಪರವಾಗಿ ಧನ್ಯವಾದಗಳು.
Previous Articleದೇಶಿ ಕ್ರೀಡೆ ಮಲ್ಲಕಂಬ
Next Article ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಧಾರ್ಮಿಕ ಸಭೆ