ದೇವರ ಕೆಲಸದಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಂಡರೆ ತನ್ನ ಅಭಿವೃದ್ಧಿಯೊಂದಿಗೆ ದೇಗುಲ, ಊರು ಅಭಿವೃದ್ಧಿಯಾಗಲಿದೆ ಎಂಬುದಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲೇ ಕಡಿಯಾಳಿ ದೇಗುಲ ಮಾದರಿಯಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಧ್ವಜಸ್ತಂಭ ಪ್ರತಿಷ್ಠಾಪನೆ, ಧೂಳಿಮಂಡಲ ಸೇವೆ, ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ಉದ್ಘಾಟಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ. ನಿತ್ಯಾನಂದ ಕಾಮತ್, ಉಡುಪಿ ಪವನ್ ಮೋಟಾರ್ಸ್ ನ ಸುಭಾಶ್ ಚಂದ್ರ ಹೆಗ್ಡೆ, ನಗರಸಭೆ ಸದಸ್ಯ ಗಿರೀಶ್ ಎಂ. ಅಂಚನ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ರಾಮಚಂದ್ರ ಸನಿಲ್, ಭಾರತಿ ಚಂದ್ರಶೇಖರ್, ಅರ್ಚಕ ಕೆ. ರತ್ನಾಕರ ಉಪಾಧ್ಯಾಯ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿ, ನಿರೂಪಿಸಿದರು. ಹೆಜ್ಜೆಗೆಜ್ಜೆ ತಂಡದವರಿಂದ ಭರತನಾಟ್ಯ ನಡೆಯಿತು. ಮಾ. 24ರಂದು ಬೆಳಗ್ಗೆ ಧ್ವಜಸ್ತಂಭ ಪ್ರತಿಷ್ಠೆ ನಡೆದು, ಬ್ರಹ್ಮಕಲಶೋತ್ಸವ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಧೂಳಿಮಂಡಲ ಸೇವೆ ಮತ್ತು ರಂಗಪೂಜೆ ನಡೆಯಿತು.