ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆ (ರಿ) ಇದರ ಉಪ ಸಮಿತಿಗಳಾದ ಪೂಜಾ ಸಮಿತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ವತಿಯಿಂದ ಆಯೋಜಿಸಲಾದ ನವರಾತ್ರಿ ಸಂಭ್ರಮ, ಭಜನಾ ಮಂಗಳೋತ್ಸವ, ಸಾಮೂಹಿಕ ಕುಂಕುಮಾರ್ಚನೆ, ದುರ್ಗಾಷ್ಟಮಿ ಪೂಜೆ ಹಾಗೂ ವಿಷ್ಣು ಸಹಸ್ರನಾಮ ಸಂಕೀರ್ತನೆ ಕಾರ್ಯಕ್ರಮವು ಅಕ್ಟೋಬರ್ 18ರಂದು ವಿರಾರ್ ಪಶ್ಚಿಮದ ವೈ.ಕೆ ನಗರದಲ್ಲಿರುವ ಗ್ರೀನ್ ಕಾರ್ಡ್ ಬ್ಯಾಂಕ್ವಿಟ್ ಹಾಲ್ನಲ್ಲಿ ಅತ್ಯಂತ ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು. ಮಧ್ಯಾಹ್ನ ಹರಿನಾಮ ಸಂಕೀರ್ತನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಸ್ಥಳೀಯ ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆ ಭಜನೆ ಮಂಡಳಿ, ಗುರುರಾಜ ಮಾನವ ಜಾಗೃತಿ ಭಜನೆ ಮಂಡಳಿ ವಸಯಿ, ಅಯ್ಯಪ್ಪ ಭಕ್ತ ವೃಂದ ಭಜನೆ ಮಂಡಳಿ ನಾಲಾಸೋಪಾರ, ಜೀವಧಾನಿ ಭಜನಾ ಮಂಡಳಿ, ಬಂಟರ ಸಂಘ ಮುಂಬೈ ವಸಾಯಿ ದಾಹಣು ಪ್ರಾದೇಶಿಕ ಸಮಿತಿ ಮಹಿಳಾ ಭಜನೆ ಮಂಡಳಿ, ವಸಾಯಿ ಕರ್ನಾಟಕ ಸಂಘ ಭಜನೆ ಮಂಡಳಿ ಇವೆಲ್ಲಾ ಭಜನೆ ಮಂಡಳಿಗಳ ಸಹಕಾರದಿಂದ ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿತು. ಜೀವಧಾನಿ ಭಜನಾ ಮಂಡಳಿ ವಿರಾರ್ ವತಿಯಿಂದ ವಿಷ್ಣು ಸಹಸ್ರನಾಮ ಸಂಕೀರ್ತನೆ, ದುರ್ಗಾಷ್ಟಮಿ ಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮಗಳು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಅರ್ಥಪೂರ್ಣವಾಗಿ ಜರುಗಿದವು. ಸಂಸ್ಥೆಯ ಗೌರವಾಧ್ಯಕ್ಷರಾದ ವಿರಾರ್ ಶಂಕರ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿ, ನವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡ ಮಹಿಳೆಯರು ದೇವಿಯ ಸ್ವರೂಪವಾಗಿ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದಾರೆ. ಅವರ ಭಕ್ತಿಭಾವ, ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರ ಸಂಸ್ಥೆಯ ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ನೀಡಿದೆ. ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಿರಿಯರು ಬೆಳೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆಗೆ ಸ್ವಂತವಾದ ವಿಶಾಲ ಸ್ಥಳ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಎಲ್ಲರ ಬಹುದಿನಗಳ ಆಶಯವಾಗಿದೆ. ಈ ಕನಸನ್ನು ನನಸಾಗಿಸಲು ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್ ಅವರು ನಡೆಸುತ್ತಿರುವ ಪ್ರಯತ್ನಗಳಿಗೆ ದೇವರ ಅನುಗ್ರಹ ದೊರೆಯಲಿ. ಸಂಸ್ಥೆಯ ಪ್ರತಿಯೊಬ್ಬ ಸದಸ್ಯರೂ ಒಗ್ಗಟ್ಟಿನಿಂದ ಕೈಜೋಡಿಸಿದರೆ ಈ ಗುರಿಯನ್ನು ಸಾಧಿಸಲು ಸಾಧ್ಯ. ಸಂಘಟನೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಆಶಯ ವ್ಯಕ್ತಪಡಿಸಿದರು. ಸಂಸ್ಥೆಯ ಸಂಘಟನಾತ್ಮಕ ಬೆಳವಣಿಗೆಯ ಕುರಿತು ಮಾತನಾಡಿದ ಅವರು, ಯಾವುದೇ ಸಂಸ್ಥೆಯ ಯಶಸ್ಸು ಒಬ್ಬ ವ್ಯಕ್ತಿಯ ಪರಿಶ್ರಮದಿಂದ ಮಾತ್ರ ಸಾಧ್ಯವಿಲ್ಲ. ಅಧ್ಯಕ್ಷರು, ಪದಾಧಿಕಾರಿಗಳು, ಉಪ ಸಮಿತಿಗಳ ಸದಸ್ಯರು, ಕಾರ್ಯಕರ್ತರು, ಮಹಿಳಾ ವಿಭಾಗ, ಸದಸ್ಯರು ಹಾಗೂ ದಾನಿಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಸಂಘಟನೆ ಬಲಿಷ್ಠವಾಗಲು ಸಾಧ್ಯ ಎಂದು ಹೇಳಿದರು.




ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರು ಮಾತನಾಡಿ, ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆ (ರಿ) ಕೇವಲ ಒಂದು ಸಂಘಟನೆಯಲ್ಲ; ಇದು ನಮ್ಮ ಕನ್ನಡಿಗರ ಒಗ್ಗಟ್ಟು, ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಸಾಮಾಜಿಕ ಸೇವೆಯ ಪ್ರತೀಕವಾಗಿದೆ. ಸಂಸ್ಥೆಯ ಮೂಲಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಸಮಾಜದ ಎಲ್ಲ ವರ್ಗದವರನ್ನು ಒಗ್ಗೂಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಸಂಸ್ಥೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವುದು ನನ್ನೊಬ್ಬನ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಪದಾಧಿಕಾರಿಯೂ ಸಂಸ್ಥೆಯನ್ನು ತನ್ನದೇ ಕುಟುಂಬವೆಂದು ಭಾವಿಸಿ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಪರಸ್ಪರ ಗೌರವ, ನಂಬಿಕೆ, ಸಹಕಾರ ಮತ್ತು ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ಸಂಸ್ಥೆಯ ಗುರಿಗಳನ್ನು ಸಾಧಿಸಲು ಸಾಧ್ಯ. ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿನ ಹಿಂದೆ ಪದಾಧಿಕಾರಿಗಳ ಶ್ರಮ, ಉಪ ಸಮಿತಿಗಳ ಕಾರ್ಯನಿರ್ವಹಣೆ, ಸದಸ್ಯರ ಸಹಭಾಗಿತ್ವ, ಮಹಿಳೆಯರ ಸೇವೆ, ಭಜನಾ ಮಂಡಳಿಗಳ ಕೊಡುಗೆ ಹಾಗೂ ದಾನಿಗಳ ಪ್ರೋತ್ಸಾಹವಿದೆ. ಪ್ರತಿಯೊಬ್ಬರ ಸೇವೆಯೂ ಸಂಸ್ಥೆಗೆ ಅಮೂಲ್ಯವಾದದ್ದು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಸ್ಥೆಯ ಹಿತಾಸಕ್ತಿಗೆ ಆದ್ಯತೆ ನೀಡಿದಾಗ ನಮ್ಮ ಸಂಘಟನೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ಹೊಂದಿ, ಕನ್ನಡಿಗರ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ ಪ್ರಬಲ ವೇದಿಕೆಯಾಗಿ ರೂಪುಗೊಳ್ಳಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು. ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ತಾಯಿ ದುರ್ಗಾದೇವಿಯು ಎಲ್ಲರಿಗೂ ಆರೋಗ್ಯ, ಶಾಂತಿ, ಸುಖಸಮೃದ್ಧಿ ಹಾಗೂ ಯಶಸ್ಸನ್ನು ಕರುಣಿಸಲಿ. ಸಂಸ್ಥೆಯು ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ, ಕನ್ನಡಿಗರ ಏಕತೆ ಹಾಗೂ ಸೌಹಾರ್ದತೆ ಬೆಳೆಸುವ ಕಾರ್ಯದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.



ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳು, ಮಹಿಳಾ ವಿಭಾಗ, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಸದಸ್ಯರು, ಭಜನಾ ಮಂಡಳಿಗಳು, ಪೂಜೆಯಲ್ಲಿ ಪಾಲ್ಗೊಂಡ ಮಹಿಳೆಯರು, ದಾನಿಗಳು ಹಾಗೂ ಭಕ್ತಾದಿಗಳಿಗೆ ವಂದನೆಗಳನ್ನು ಸಲ್ಲಿಸಿದರು. ಭಕ್ತಿ ಮತ್ತು ಸಾಮರಸ್ಯದ ಸಂಗಮ ನವರಾತ್ರಿ ಉತ್ಸವದ ಪ್ರಮುಖ ಆಕರ್ಷಣೆಯಾಗಿ ನಡೆದ ಸಾಮೂಹಿಕ ಕುಂಕುಮಾರ್ಚನೆಯು ಮಹಿಳೆಯರ ಭಕ್ತಿಭಾವ ಹಾಗೂ ಧಾರ್ಮಿಕ ಶ್ರದ್ಧೆಗೆ ಸಾಕ್ಷಿಯಾಯಿತು. ದುರ್ಗಾಷ್ಟಮಿ ಪೂಜೆ ಹಾಗೂ ವಿಷ್ಣು ಸಹಸ್ರನಾಮ ಸಂಕೀರ್ತನೆಯು ಕಾರ್ಯಕ್ರಮಕ್ಕೆ ವಿಶೇಷ ಧಾರ್ಮಿಕ ಮೆರುಗು ನೀಡಿದವು. ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಜನಾ ಸೇವೆ ಸಲ್ಲಿಸಿ ಭಕ್ತಿಮಯ ವಾತಾವರಣವನ್ನು ನಿರ್ಮಿಸಿದರು. ಕಾರ್ಯಕ್ರಮವು ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ, ಕನ್ನಡಿಗರ ಒಗ್ಗಟ್ಟು, ಪರಸ್ಪರ ಸಹಕಾರ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಂಘಟನೆಯ ಬಲವರ್ಧನೆಗೆ ಪ್ರೇರಣೆ ನೀಡಿತು. ಅತ್ತ್ಯುತ್ತಮ ಸಂಸ್ಥೆಯ ಕಾರ್ಯಕರ್ತರದ ನಾಗೇಶ್ ಕೋಟ್ಯಾನ್ ರವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷ ವಿರಾರ್ ಶಂಕರ ಶೆಟ್ಟಿ, ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಮುಖ್ಯ ಅತಿಥಿ ಶರ್ಮಿಳಾ ಸಂದೀಪ್ ಶೆಟ್ಟಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಾಧ್ಯಕ್ಷೆ ಸಹಾನಿ ವಿ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಲಯನ್ ಕೃಷ್ಣಯ್ಯ ಹೆಗ್ಡೆ, ಗೌರವ ಕಾರ್ಯದರ್ಶಿ ಸತೀಶ್ ಶೆಟ್ಟಿ ಅಡ್ವೆ, ಗೌರವ ಕೋಶಾಧಿಕಾರಿ ದಯಾನಂದ ಬೊಂಟ್ರ, ಉಪ ಕಾರ್ಯದರ್ಶಿ ವಸಂತ್ ಬುನ್ನನ್, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಜಗನಾಥ್ ಡಿ ಶೆಟ್ಟಿ ಪಳ್ಳಿ, ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಶಂಕರ್ ಆಳ್ವ ಮೊದಲದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿಗೆ ಪದಾಧಿಕಾರಿಗಳು, ಟ್ರಸ್ಟಿ, ಮಹಿಳಾ ವಿಭಾಗ ಉಪ ಸಮಿತಿ, ಕಾರ್ಯಕಾರಿಣಿ ಸಮಿತಿ ಸರ್ವ ಸದಸ್ಯರು ಸಹಕರಿಸಿದರು. ಸುಮನಾ ಎಲ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪ್ರಾರ್ಥನೆ ಲಕ್ಶ್ಮೀ ಕೋಟ್ಯಾನ್ ಮಾಡಿ, ಕಾರ್ಯಕ್ರಮ ನಿರೂಪಣೆಯನ್ನು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಮಲ್ಲಿಕಾ ಆರ್ ಪೂಜಾರಿ ಮಾಡಿದರೆ, ಧನ್ಯವಾದವನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಸತೀಶ್ ಶೆಟ್ಟಿ ಅಡ್ವೆ ವಂದಿಸಿದರು. ಕೊನೆಗೆ ಪ್ರಸಾದದ ರೂಪವಾಗಿ ಅನ್ನದಾನ ಸೇವೆ ನಡೆಯಿತು.


















































































































