ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಇವರ ಮಹಾಪೋಷಕತ್ವದಲ್ಲಿ ಪುತ್ತೂರು ಸಾಹಿತ್ಯೋತ್ಸವ -2016 ಅಕ್ಟೋಬರ್ 25ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮತ್ತು ಸಾಹಿತ್ಯ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪುತ್ತೂರು ನಗರ ಸಭಾ ವ್ಯಾಪ್ತಿಯ 33 ಶಾಲೆಗಳು,17 ಕಾಲೇಜ್ ಗಳು ಹಾಗೂ 3 ಟ್ಯುಟೋರಿಯಲ್ ಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬಾಲ ಸಾಹಿತಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಸಾಹಿತ್ಯ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.




ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಸಾಯೀಶ್ವರಿ ಸರ್ವಾಧ್ಯಕ್ಷತೆ ವಹಿಸಲಿದ್ದು, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದ.ಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವ ಮತ್ತಿತರರು ಭಾಗವಹಿಸಲಿದ್ದಾರೆ. ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಜೀವನ್ ಎನ್ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ಸುಲೋಚನಾ ಪಿ.ಕೆ, ಅವಿನಾಶ್ ಭಂಡಾರ್ಕರ್, ಅರ್ಪಣ ಕೊಡೆoಕಿರಿ, ಅಬ್ದುಲ್ ರಝಾಕ್ ಬಪ್ಪಳಿಗೆ, ಪ್ರವೀಣ ವರ್ಣಕುಟೀರ, ಆಸ್ಟರ್ ಆನಂದ್, ಡಾ. ಪ್ರದೀಪ್ ಕುಮಾರ್, ತೇಜಸ್, ಶಾಲಿನಿ ಆತ್ಮಭೂಷಣ್, ಅಬ್ದುಲ್ ರಝಾಕ್ ಸಾಲ್ಮರ, ತನುಜಾ ಝೆವಿಯರ್, ಬಿ.ಕೆ ಗಣೇಶ್ ರೈ, ಸೃಜನ್ ಉರುಬೈಲು, ನಾರಾಯಣ ರೈ ಕುಕ್ಕುವಳ್ಳಿ, ಚಿಗುರೆಲೆ ಸಾಹಿತ್ಯ ಒಳಗ ಮತ್ತು ರಮಣಿ ಬಾಲ ಸಮಿತಿಗೆ ಪುತ್ತೂರು ಸಾಹಿತ್ಯೋತ್ಸವ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಗುವುದು. ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಮತ್ತು ಪುತ್ತೂರು ಸಾಹಿತ್ಯೋತ್ಸವ ಸಂಚಾಲಕ ಡಾ| ಹರ್ಷ ಕುಮಾರ್ ರೈ ಮಾಡಾವು ಮೊದಲಾದವರು ಇದ್ದರು.


















































































































