ಯಕ್ಷಗಾನವೆಂದರೆ ಕೇವಲ ಒಂದು ಕಲಾ ಪ್ರಕಾರವಲ್ಲ, ಅದು ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ವೈಭವ. ಮಕ್ಕಳಲ್ಲಿ ಈ ಕಲಾಸಕ್ತಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು. ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಹಮ್ಮಿಕೊಂಡ 35ನೇ ವರ್ಷದ ಯಕ್ಷೋತ್ಸವ ಉದ್ಘಾಟಿಸಿ, ಅವರು ಆಶೀರ್ವಚನ ನೀಡಿದರು. ಮಕ್ಕಳು ದುಶ್ಚಟಗಳಿಗೆ ಬಲಿ ಬೀಳುತ್ತಿರುವ ಈ ಕಾಲ ಘಟ್ಟದಲ್ಲಿ ಯಕ್ಷಗಾನದಂತಹ ಕಲೆಗಳ ಕಡೆಗೆ ಅವರನ್ನು ಆಸಕ್ತರನ್ನಾಗಿಸಬೇಕು. ಈ ನಿಟ್ಟಿನಲ್ಲಿ ಎಸ್ಡಿಎಂ ಕಾಲೇಜು ಕಳೆದ 35 ವರ್ಷಗಳಿಂದ ಯಕ್ಷೋತ್ಸವ ಆಯೋಜಿಸುತ್ತಿರುವುದು ಸ್ತುತ್ಯರ್ಹ ಎಂದರು. ಕಾಲೇಜು ಪ್ರಾಂಶುಪಾಲ ಡಾ| ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವಕೀಲ ವೃತ್ತಿ ಸೇರಿದಂತೆ ಬದುಕಿಗೆ ಬಹಳಷ್ಟು ಜ್ಞಾನವನ್ನು ಒದಗಿಸುತ್ತದೆ ಎಂದರು. ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅತಿಥಿಯಾಗಿದ್ದರು.




ಯಕ್ಷಗಾನ ವಿದ್ವಾಂಸ, ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು 2025 – 26 ರಲ್ಲಿ ಅಗಲಿ ಹೋದ ತೆಂಕುತಿಟ್ಟು ಯಕ್ಷಗಾನ ರಂಗದ ಸುಮಾರು 22 ಮಂದಿ ಕಲಾವಿದರನ್ನು ಸ್ಮರಿಸಿ ಸಂಸ್ಮರಣಾ ಭಾಷಣ ಮಾಡಿದರು. ಅಲ್ಲದೇ 35 ವರ್ಷಗಳ ಹಿಂದೆ ಕಾಲೇಜಿನಲ್ಲಿ ಯಕ್ಷೋತ್ಸವ ಪ್ರಾರಂಭವಾಗುವಾಗ ಅದರ ನಿರ್ದೇಶಕರಾಗಿದ್ದು, ಇತ್ತೀಚೆಗೆ ನಮ್ಮನ್ನಗಲಿದ ಪೂರ್ವ ಪ್ರಾಂಶುಪಾಲ ಪ್ರೊ. ಯನ್.ಜೆ ಕಡಂಬ ಅವರ ನಿಧನಕ್ಕೂ ಶ್ರದ್ದಾಂಜಲಿ ಸಲ್ಲಿಸಿದರು. ಪುತ್ತೂರಿನ ವಕೀಲ ಮಹೇಶ್ ಕಜೆ ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಗೋಣಿಬೀಡು, ಸಾಂಸ್ಕೃತಿಕ ಕಾರ್ಯದರ್ಶಿ ವಿಜೇತ್ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷೋತ್ಸವ ಸಂಚಾಲಕ ಪುಷ್ಪರಾಜ್ ಕೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಚಾಲಕಿ ಶ್ರೇಯಾ ವಂದಿಸಿದರು. ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಯಕ್ಷೋತ್ಸವದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ 9 ತಂಡಗಳು ಪಾಲ್ಗೊಂಡಿವೆ. ಶನಿವಾರ ಸಮಾರೋಪ ಸಮಾರಂಭ ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.


















































































































