ವಿಜಯಕುಮಾರ್ ಶೆಟ್ಟಿ ತೋನ್ಸೆ ಅವರ ಸಾರಥ್ಯದ ಕಲಾ ಜಗತ್ತು ಇದರ ಮಹಿಳಾ ವಿಭಾಗವಾದ ಕಲಾ ಜಗತ್ತು ವಸುಂಧರ ಇದರ ದ್ವಿತೀಯ ಸಮಾವೇಶ ಹಾಗೂ ಶರಶಯ್ಯೆ ನಾಟಕದ 150ನೇ ಪ್ರದರ್ಶನ ಕಾರ್ಯಕ್ರಮವು ಅಕ್ಟೋಬರ್ 16ರಂದು ಮುಲುoಡ್ ಪಶ್ಚಿಮದ ಕವಿರತ್ನ ಕಾಳಿದಾಸ ಸಭಾಗೃಹದಲ್ಲಿ ಜರಗಿತು. ಚಿಣ್ಣರ ಬಿಂಬದ ರೂವಾರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಅವರು ಕಲ್ಪವೃಕ್ಷಕ್ಕೆ ನೀರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಾ ಜಗತ್ತಿನ ಮೂಲಕ ವಿಜಯಕುಮಾರ್ ಶೆಟ್ಟಿ ಅವರು ರಂಗಭೂಮಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಅವರು ನಾಟಕ ರಂಗದಲ್ಲಿ ವಿಶೇಷವಾದ ಸಾಧನೆಗಳನ್ನು ಮಾಡಿರುವರು. ಅವರ ಪ್ರತಿಯೊಂದು ನಾಟಕವು ಅತ್ಯಂತ ಯಶಸ್ವಿಯಾಗಿದೆ. ಅದರಲ್ಲಿ ಶರಶಯ್ಯೆ ನಾಟಕ 150 ಪ್ರದರ್ಶನಗಳನ್ನು ಮಾಡಿದೆ ಎನ್ನಲು ನಮಗೆ ಅತೀವ ಆನಂದವಾಗುತ್ತಿದೆ. ವಿಜಯಕುಮಾರ್ ಶೆಟ್ಟಿ ಅವರಿಂದ ಇನ್ನಷ್ಟು ಕಲಾ ಸೇವೆಯು ನಡೆಯುತ್ತಿರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶರಶಯ್ಯೇ ನಾಟಕದ 150 ಪ್ರದರ್ಶನಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಕಲಾ ಜಗತ್ತು ತಂಡದ ರೂವಾರಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯ್ ಕುಮಾರ್ ಶೆಟ್ಟಿ ತೋನ್ಸೆ ಅವರನ್ನು ಕಲಾ ಜಗತ್ತು ತಂಡದ ಕಲಾವಿದರು, ವಸುಂದರ ತಂಡದವರು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಸಮ್ಮಾನಿಸಿದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಕುಮಾರ್ ಶೆಟ್ಟಿಯವರು, ಶರಶಯ್ಯೆ ಯಶಸ್ವಿಯಾಗಿ ಪ್ರದರ್ಶನಗೊಳ್ಳಲು ಸಹಕರಿಸಿದ ಎಲ್ಲಾ ಕಲಾ ಪ್ರೇಮಿಗಳನ್ನು, ಕಲಾ ಪೋಷಕರು ಹಾಗೂ ಕಲಾವಿದರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನುಡಿದು ಭವಿಷ್ಯದಲ್ಲೂ ಎಲ್ಲರ ಸಹಕಾರ ಸದಾ ಇರಲಿ ಎಂದರು.




ಕಾರ್ಯಕ್ರಮದಲ್ಲಿ ಕಲಾ ಪೋಷಕರನ್ನು ಹಾಗೂ ಉದ್ಯಮಿಗಳನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕನ್ನಡ ಸೇವಾ ಸಂಘದ ಪೊವಾಯಿಯ ಮಾಜಿ ಅಧ್ಯಕ್ಷ ಡಿ.ಕೆ ಶೆಟ್ಟಿ ಅವರು, ಇಂದಿನ ಈ ವಸುಂದರ ಕಾರ್ಯಕ್ರಮ ವಿನೂತನ ರೀತಿಯಲ್ಲಿ ಆಯೋಜಿಸಲಾಗಿದ್ದು, ಆದರ್ಶ ದಂಪತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ದಾಂಪತ್ಯ ಜೀವನದ ಹೊಂದಾಣಿಕೆ ಕೊರತೆಯು ಹೆಚ್ಚಾಗುತ್ತಿದೆ. ಯುವ ಪೀಳಿಗೆಯು ಈ ನಿಟ್ಟಿನಲ್ಲಿ ಜಾಗೃತೆ ವಹಿಸಿ ಹಿರಿಯರ ಹಾಗೂ ಸಮಾಜ ಗಣ್ಯ ವ್ಯಕ್ತಿಗಳ ಮಾರ್ಗದರ್ಶನವನ್ನು ಪಡೆಯಬೇಕು ಎಂದರು. ವರ್ತಕ್ ನಗರ ಕನ್ನಡ ಸಂಘದ ಮಾಜಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ಅವರು ಮಾತನಾಡಿ, ವಿಜಯಕುಮಾರ್ ಶೆಟ್ಟಿ ಅವರು ಕಲಾ ರಂಗದಲ್ಲಿ ಮಾಡಿದ ಸಾಧನೆ ಅಪಾರವಾಗಿದೆ. ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದವರು. ಕಲಾಕ್ಷೇತ್ರದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಇನ್ನಿತರ ಸಾಧನೆಗಳನ್ನು ಮಾಡಿದವರು. ಎಲ್ಲಕ್ಕಿಂತಲೂ ದೊಡ್ಡದು ಅನೇಕ ಉತ್ತಮ ಕಲಾವಿದರನ್ನು ಅವರು ರಂಗಭೂಮಿಗೆ ನೀಡಿದ್ದಾರೆ ಎನ್ನಲು ಸಂತೋಷವಾಗುತ್ತಿದೆ ಎಂದರು.





ಕನ್ನಡ ಸೇವಾ ಸಂಘ ಪೊವಾಯಿ ಮಾಜಿ ಅಧ್ಯಕ್ಷ ಡಿ.ಕೆ ಶೆಟ್ಟಿ ಮತ್ತು ಜಯಂತಿ ಶೆಟ್ಟಿ, ವಿಠ್ಠಲ್ ಮಡಿವಾಳ ಮತ್ತು ಶಶಿಪ್ರಭಾ, ಸತೀಶ್ ಎನ್ ಶೆಟ್ಟಿ ಮತ್ತು ಸವಿತಾ ಶೆಟ್ಟಿ, ವರ್ತಕ ನಗರ ಕನ್ನಡ ಸಂಘ ಥಾಣೆ ಇದರ ಮಾಜಿ ಅಧ್ಯಕ್ಷ ರತ್ನಾಕರ್ ಜಿ ಶೆಟ್ಟಿ ಮತ್ತು ಆಶಾಲತಾ ಶೆಟ್ಟಿ ದಂಪತಿಗಳನ್ನು ಆದರ್ಶ ದಂಪತಿ ಎಂದು ಗುರುತಿಸಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಪುರಸ್ಕೃತರಾಗಿ ಭಾಂಡೂಪ್ ಪಶ್ಚಿಮದ ಜಿ.ಎಸ್ ಶೆಟ್ಟಿ ಇಂಟರ್ ನ್ಯಾಶನಲ್ ಸ್ಕೂಲ್ ಇದರ ಕಾರ್ಯಾಧ್ಯಕ್ಷ ಶಂಕರ್ ಶೆಟ್ಟಿ, ಯೋಗೇಶ್ ಶೆಟ್ಟಿ ಹಾಗೂ ಆರತಿ ವೈ ಶೆಟ್ಟಿ, ನಾಗಕಿರಣ್ ಟಿ ಶೆಟ್ಟಿ ಮತ್ತು ಕವಿತಾ ಶೆಟ್ಟಿ, ದೇವಲ್ಕುoದ ಮಂಜುನಾಥ್ ಶೆಟ್ಟಿ ಮತ್ತು ಸುಮತಿ ಶೆಟ್ಟಿ, ಸುಬ್ಬಯ್ಯ ಪೂಂಜ ಹಾಗೂ ಅಖಿಲಾ ಪೂಂಜ, ಬಾಲಕೃಷ್ಣ ರೈ ಮತ್ತು ಪ್ರಭಾ ರೈ, ಸುರೇಂದ್ರ ಮಾಡ ಹಾಗೂ ಪ್ರಮೋದ ಮಾಡ, ಸಿಎ ಕರುಣಾಕರ್ ಶೆಟ್ಟಿ ಮತ್ತು ಶಶಿಪ್ರಭಾ ಕೆ ಶೆಟ್ಟಿ, ಸತೀಶ್ ಶೆಟ್ಟಿ ಕಣoಜಾರು ಮತ್ತು ಉಷಾ ಶೆಟ್ಟಿ ದಂಪತಿಗಳನ್ನು ಹಾಗೂ ಕಮಲಾಕ್ಷ ಸರಾಫ್ ಅವರನ್ನು ಗೌರವಿಸಲಾಯಿತು.





ಪ್ರಾರಂಭದಲ್ಲಿ ವಿಜಯ್ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ಮುಲುoಡ್ ಬಂಟ್ಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಕಾರ್ಯದರ್ಶಿ ಕರುಣಾಕರ್ ಶೆಟ್ಟಿ ನಿಟ್ಟೆ, ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ಮನೋಜ್ ಹೆಗ್ಡೆ, ಶಮಿನಾ ಆಳ್ವ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ವಿಜಯಕುಮಾರ್ ಶೆಟ್ಟಿ ಹಾಗೂ ಕಲಾ ಜಗತ್ತು ವಸುಂಧರ ಸಮಿತಿ ಸದಸ್ಯರು ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ನಂತರ ಕಲಾ ಜಗತ್ತು ತಂಡದ ಕಲಾವಿದರಿಂದ ತಂಡದ ಪ್ರಸಿದ್ಧ ನಾಟಕ ಶರಶಯ್ಯೆ ಇದರ 150ನೇ ಪ್ರಯೋಗವು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಲಾ ಪ್ರೇಮಿಗಳು ಉಪಸ್ಥಿತರಿದ್ದರು.


















































































































