ಸಹಕಾರಿ ಕ್ಷೇತ್ರದಲ್ಲಿ ಎರಡು ದಶಕಗಳ ಸುದೀರ್ಘ ಕಾಲ ಸೇವೆಗೈದ ಶ್ರೀ ಲೋಕೇಶ್ ಭಂಡಾರಿ ಅವರದ್ದು ಬಹುಶ್ರುತ ವ್ಯಕ್ತಿತ್ವ. 2006 ರಲ್ಲಿ ಜೆಡಿಎಸ್ ಭಾಜಪ ಸಮ್ಮಿಶ್ರ ಸರ್ಕಾರ ಇರುವಾಗ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಾಮ ನಿರ್ದೇಶನ ನಿರ್ದೇಶಕರಾಗಿ, ಬಳಿಕ 2015 ರಿಂದ 20 ರ ತನಕ ಉಪಾಧ್ಯಕ್ಷರಾಗಿ ಸದ್ಯ ಅಧ್ಯಕ್ಷ ಪದದಲ್ಲಿ ತನ್ನ ವಿಶೇಷ ಆಡಳಿತ ಸಾಮರ್ಥ್ಯದ ಪರಿಚಯ ನೀಡುತ್ತಿದ್ದಾರೆ. ಅಮ್ಮುಂಜೆ ಗುತ್ತು ಬಾಬು ಭಂಡಾರಿ ಮತ್ತು ಗಿರಿಜಾ ದಂಪತಿಗೆ ಪುತ್ರರಾಗಿ ಜನಿಸಿದ ಲೋಕೇಶ್ ಭಂಡಾರಿ ಅವರು ಸಾಮಾಜಿಕ, ಧಾರ್ಮಿಕ ಹಾಗೂ ಸಹಕಾರಿ ಕ್ಷೇತ್ರಗಳ ಅಪೂರ್ವ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ಅಮ್ಮುಂಜೆಯಲ್ಲಿ ಆರಂಭಿಕ ಶಿಕ್ಷಣ, ಬೆಂಜನಪದವು ಸರ್ಕಾರಿ ಹೈಸ್ಕೂಲ್ ಮುಖಾಂತರ ಪ್ರೌಢ ಶಿಕ್ಷಣ ಪೂರೈಸಿದ ಇವರು ಮಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿದರು. ಬಾಲ್ಯದ ದಿನಗಳಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಬಳಿಕ ಓಟಿಸಿ ಐಟಿಸಿ ಶಿಕ್ಷಣ ಪಡೆದರು. ನಂತರದ ದಿನಗಳಲ್ಲಿ ಓರ್ವ ಉತ್ತಮ ನಾಯಕನಾಗಿ ಹೊರ ಹೊಮ್ಮಿ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿ ಯಶಸ್ಸು ಜೊತೆಗೆ ಕೀರ್ತಿಯನ್ನು ಸಂಪಾದಿಸಿಕೊಂಡರು. ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿ ತನ್ನ ಸಂಸ್ಥೆಗೆ ಅತ್ಯುತ್ತಮ ಕಾರ್ಯ ಕೌಶಲದ ಹೆಗ್ಗಳಿಕೆಯ ಪ್ರಶಸ್ತಿ ಸಂಪಾದಿಸಿಕೊಟ್ಟರು.





ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಕುಂಜತ್ತಬೈಲ್ ವಾರ್ಡಿನ ಭಾಜಪ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ನಿಯೋಜಿಸಲ್ಪಟ್ಟ ಭಂಡಾರಿ ಅವರು ಯುವಮೋರ್ಚಾ ಅಧ್ಯಕ್ಷರಾಗಿ ಬಳಿಕ ಸುರತ್ಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯದರ್ಶಿಯಾಗಿ ರಾಜಕೀಯ ರಂಗದಲ್ಲೂ ಮಿನುಗಿದ್ದಾರೆ. ಕಾವೂರಿನ ಸಾರ್ವಜನಿಕ ಮೊಸರು ಕುಡಿಕೆ ಸಮಿತಿಯಲ್ಲಿ ಸೇರಿ ಉತ್ಸವ ಸಂಭ್ರಮಾದಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಜಪ ಯುವಮೋರ್ಚಾ ಕಾರ್ಯದರ್ಶಿಯಾಗಿ ನಂತರ ವಿವಿಧ ಜವಾಬ್ದಾರಿಯುತ ಸ್ಥಾನಗಳಿಗೆ ಪದೋನ್ನತಿ ಪಡೆದು ತನ್ಮೂಲಕ ಸಾರ್ವಜನಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಕಾವೂರು ಬಂಟರ ಸಂಘದ ಜೊತೆ ಕಾರ್ಯದರ್ಶಿಯಾಗಿ, ಕಾವೂರು ಕಟ್ಟೆ ಹಿಂದು ಧಾರ್ಮಿಕ ಸೇವಾ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸತತ ಹತ್ತು ವರ್ಷಗಳ ಸೇವೆ, ನಾಗರಿಕ ಸೇವಾ ಸಮಿತಿ ಕಾವೂರು ಇದರ ಕೋಶಾಧಿಕಾರಿ, ಕಾವೂರು ಮೊಸರು ಕುಡಿಕೆ ಉತ್ಸವ ಸಮಿತಿ ಉತ್ಸವಗಳಲ್ಲಿ ಸತತ ಮೂವತ್ತು ವರ್ಷಳಿಂದ ಸಕ್ರಿಯರಾಗಿರುವ ಲೋಕೇಶ್ ಭಂಡಾರಿ ಓರ್ವ ಅಸಾಧಾರಣ ಧಾರ್ಮಿಕ ಸಂಘಟಕರಾಗಿಯೂ ಹೆಸರು ಪಡೆದಿದ್ದಾರೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅಹರ್ನಿಶಿ ದುಡಿದು ಅಮ್ಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನ ಕೀರ್ತಿ ಸ್ಥಾಪಿಸಿದ ಬಂಟ ಸಮುದಾಯದ ಈ ಅಪ್ರತಿಮ ಸಹಕಾರಿ ಧುರೀಣ ಹಾಗೂ ಹತ್ತಾರು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಆದರಣೀಯ ಭಂಡಾರಿ ಅವರನ್ನು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರ್ಧಿಕವಾಗಿ ಅಭಿನಂದಿಸುತ್ತಾ ಮುಂದಿನ ದಿನಗಳ ಯಶಸ್ಸಿಗಾಗಿ ಶುಭ ಹಾರೈಸುತ್ತದೆ.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು














































































































