ಕಾಯುತಿರುವುದು ಮಾನವ ನಿನಗಾಗಿ ಸಾಧನೆಯ ಪಕ್ಷಿ, ನಿನ್ನ ನಂಬಿಕೆಯೇ ಅದಕ್ಕೆ ಸಾಕ್ಷಿ, ಸದಾ ನಗಲು ಬಯಸ್ಸುವ ಮನಸ್ಸು, ಆ ಮನಸ್ಸಿಗೆಂದು ಪುಟ್ಟ ಕನಸ್ಸು, ನೀ ಯಾರೆಂದು ತೋರಿಸೇ ನಿನ್ನ ಪ್ರಯತ್ನಕ್ಕೆ ಜನರೆನ್ನುವರು ಆಕೆ ಸಾಧಿಸಿದಳೆಂದು. ಚಿಕ್ಕ ಜೀವನದಿಂದ, ಜಗತ್ತೆಂಬ ದೊಡ್ಡ ಸಾಗರದಲ್ಲಿ ನಾನು ಯಾರೆಂದು ತಿಳಿಯಲು ಸಾಧನೆ ಅನ್ನೋ ಮೀನಾಗಿರಬೇಕು. ಹೌದು ಕಲಾಭಿ ತಂಡದ ರತ್ನ, ಜನಮಾನಸದಲ್ಲಿ ನೆಲೆಸಿರೋ ಅರ್ಥಾತ್ ಶಾರದೇ, ನಾಟ್ಯಲೋಕದಲ್ಲಿ ಶಾಕುಂತಲೇ, ನಿರೂಪಣಾ ಕ್ಷೇತ್ರದ ಅಂಬೆಗಾಲ ಮಗು ತೃಷಾ ಶೆಟ್ಟಿ.
ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ ಮತ್ತು ಚಂಚಲ ಶೆಟ್ಟಿಯವರ ಕುಟುಂಬದ ದೀಪಕ್ಕೆ ಬೆಳಕು ನೀಡಿದ ಮಗಳು ತೃಷಾ ಶೆಟ್ಟಿ. ಪ್ರಾಥಮಿಕ ಶಿಕ್ಷಣವನ್ನು ಹೋಲಿ ಫ್ಯಾಮಿಲಿ ಮೇರಮಜಲು, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸೈಂಟ್ ಆಗ್ನೇಸ್ ಬಾಲಕಿಯರ ಕಾಲೇಜು ಬೆಂದೂರ್ ಮಂಗಳೂರಿನಲ್ಲಿ ಕಲಿತ ಇವರು, ಪ್ರಸ್ತುತ ಬಿ ಎ ಇನ್ ಜರ್ನಲಿಸಂ ಅನ್ನು ಸೈಂಟ್ ಆಗ್ನೇಸ್ ಕಾಲೇಜು ಮಂಗಳೂರಿನಲ್ಲಿ ಕಲಿಯುತ್ತಿದ್ದಾರೆ.
ಬೆಳೆಯೋ ಚಿಕ್ಕ ಸಸಿಯ ಪೋಷಣೆಯ ಮೇಲೆ ನಿಂತಿದೆ ಅದರ ಮುಂದಿನ ಭವಿಷ್ಯ. ಗಿಡವಾಗಿದ್ದಾಗಲೇ ಉತ್ತಮವಾಗಿ ಪೋಷಿಸಿದರೆ ಅದು ಹೆಮ್ಮರವಾದಾಗ ಶುದ್ಧ ಗಾಳಿಯನ್ನು, ಹಣ್ಣು ಹೂವನ್ನು ನೀಡುತ್ತದೆ.ಅದೇ ರೀತಿ ಮನುಷ್ಯನ ಜೀವನವೂ ಕೂಡ, ಚಿಕ್ಕ ವಯಸ್ಸಿನಿಂದಲೂ ಶ್ರಮ, ಶ್ರದ್ಧೆಯೆಂಬ ಗೊಬ್ಬರವನ್ನು ಉಣಬಡಿಸುತ್ತಿದ್ದರೆ ಮುಂದೊಂದು ದಿನ ನಾಡಿನ ಹೆಮ್ಮೆಯ ಪ್ರಜೆಯಾಗಿ ಹೊರಬರಲು ಸಾಧ್ಯ. ಭರತನಾಟ್ಯದ ಮೂಲಕ ತನ್ನ ಹೆಸರನ್ನು ಬಾನಂಗಳದಲ್ಲಿ ರಾರಾಜಿಸಬೇಕೆಂಬ ಮನದಾಸೆಯನ್ನು ಹೊತ್ತವರು. ಮಂಗಳಾಂಬೆಯ ಪುಣ್ಯ ತವರು ತುಳುನಾಡಿನ ಹೆಮ್ಮೆಯ ನಗರ ಮಂಗಳೂರ ಮಣ್ಣಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿ, ನಡೆದಾಡುವ ಕೃಷ್ಣ ಪೇಜಾವರದ ಗುರುಪೂಜನೀಯರ ಮುಂದೆ ತನ್ನ ನಾಟ್ಯ ಸೌಂದರ್ಯವನ್ನ ಸಾಕ್ಷಾತ್ ಶ್ರೀ ಕೃಷ್ಣನಿಗೆ ನೀಡಿದಂತೆ ಕಾರ್ಯಕ್ರಮ ನೀಡಿದವರು. ಭರತವೆಂಬ ದೇಶದೊಳ್ ಕರ್ನಾಟಕವೆಂಬ ದೇವರು, ತುಳುನಾಡೆಂಬ ಪ್ರಧಾನ ದೇವರ ಗರ್ಭಗುಡಿಯೊಳಗೆ ಪ್ರದರ್ಶನ ನೀಡಿದ ಇವರು ,ಮಂಗಳೂರಿನ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದವರು. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅನ್ನೋ ಮಾತಿನಂತೆ ತನ್ನ ಗುರುಗಳಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರ ಮಾರ್ಗದರ್ಶನದಲ್ಲಿ ನಾಟ್ಯ ರಂಗ ಪುತ್ತೂರಿನಲ್ಲಿ ಸೇವೆ ಸಲ್ಲಿಸಿದವರು.
ತನ್ನ ಕಲೆಯ ಪ್ರಸ್ತುತತೆಗೋಸ್ಕರ ಕಲಾಭಿ ಎಂಬ ಪಂಜರದೊಳಗೆ ಬೆಳೆದ ಹಕ್ಕಿ ವಿಶ್ವ ನನ್ನ ನೋಡಲಿ ಎಂಬ ಮಹದಾಸೆಯಂತೆ ಮುನ್ನಡೆಯುತ್ತಿದೆ. ಕಲೆಯ ಬಾಗಿಲಿನ ಮೂಲಕ, ನಾವು ಮಹತ್ವಾಕಾಂಕ್ಷೆಯ ಪ್ರತಿಭಾವಂತ ಕಲಾವಿದರು, ಕಲೆಯನ್ನು ಬಹಿರಂಗಪಡಿಸದ ಸಮ್ಮೋಹನಗೊಳಿಸುವ ಸೌಂದರ್ಯವನ್ನು ಹರಡಲು ನಮ್ಮ ಕೈಗಳನ್ನು ಸೇರಿಕೊಂಡಿದ್ದೇವೆ. ನಾವು ವೇಗವಾಗಿ ಚಲಿಸುವಲ್ಲಿ ಈ ಕ್ಷೇತ್ರದ ಸಾರವನ್ನು ಜೀವಂತವಾಗಿಡುವ ಗುರಿ ಹೊಂದಿದ್ದೇವೆ ಎಂದು ತನ್ನ ಹೃದಯಾಂತರಾಳದ ಮಾತಿನಲಿ ವರ್ಣಿಸುತ್ತಾರೆ ಕಲಾಭಿಯ ಬಗ್ಗೆ.
ಬೆಳೆದ ಜಗದೊಳಗೆ ಸಾಧನೆಯೆಂಬ ಅಡಿಪಾಯವನ್ನ ಮೇಲಕ್ಕೆತ್ತಿದವರು ನನ್ನ ಮನೆಯವರು ಎಂದು ಹೇಳುತ್ತಾ, ಗೆದ್ದಾಗ ಎತ್ತಾಡುವವರು, ಸೋತಾಗ ಕೈ ಬಿಡುವ ಈ ಜಗತ್ತಿನಲ್ಲಿ ಮನೆಯೆಂಬ ವೃಂದಾವನದಲ್ಲಿ ಮನಸ್ಸೆಂಬ ದೇವಾಲಯದೊಳಗೆ ಸದಾ ಪ್ರೀತಿಸೋ ನನ್ನ ಹೆತ್ತವರು ಶ್ರೇಷ್ಠ. ಹೆತ್ತವರ ನಂತರ ನನಗೆ ನನ್ನ ಕಾಲೇಜು, ಶಿಕ್ಷಕರು, ಗೆಳೆಯರು ಬೆಂಬಲವಾಗಿ ನಿಂತು ನನ್ನನ್ನು ಎಲ್ಲರೂ ಗುರುತಿಸುವಂತಾಯಿತು ಎಂದು ಹೇಳುತ್ತಾರೆ ತೃಷಾ.
ಇವರು ಮಾಡಿದಂತಹ ಸಾಧನೆಗಳೆಂದರೆ, ಕಾರ್ಕಳದಲ್ಲಿ ನಡೆದ ರಾಜ್ಯ ಮಟ್ಟದ ಕಲಾಸಂಗಮ ಭರತನಾಟ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ. 2018 ರಲ್ಲಿ ಜೆ ಸಿ ಐ ಯ ದಕ್ಷಿಣ ವಲಯದ ಹಿರಿಯರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ. ಬಂಟರ ಸಂಘ ಬಂಟ್ವಾಳದಲ್ಲಿ ಕೊಡಮಾಡುವ ಜನ ಮೆಚ್ಚಿದ ನಟನೆ ಪ್ರಶಸ್ತಿ. ಉತ್ತಮ ನಟಿ ಬಿರುದು ಬಂಟ ಕಲಾವೀಳ್ಯ ವಾಮಂಜೂರು. ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಮಟ್ಟದ ಏಕಪಾತ್ರಾಭಿನಯದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮಸ್ಥಾನ. ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ವರ್ಧೆಯಲ್ಲಿ ಡಾ. ಚಂದ್ರಶೇಖರ ಕಂಬಾರರಿಂದ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು. ಪ್ರಸ್ತುತವಾಗಿ ಇವರು ಭರತನಾಟ್ಯ ತರಬೇತಿಯನ್ನು ಕರ್ನಾಟಕ ಕಲಾಶ್ರೀ ಶಾರದಾಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಹಾಗೂ ಶ್ರೀ ಚಂದ್ರಶೇಖರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸನಾತನ ನಾಟ್ಯಾಲಯದಲ್ಲಿ ಪಡೆಯುತ್ತಿದ್ದಾರೆ. ಹಾಗೂ ಯಕ್ಷಗಾನ ನಾಟ್ಯ ತರಬೇತಿಯನ್ನು ಸವ್ಯಸಾಚಿ ಅಭಿನಯ ವಾಲ್ಮೀಕಿ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರೊಂದಿಗೆ ಪಡೆಯುತ್ತಿದ್ದರು. ಈಗ ದೀವಿತ್ ಎಸ್ ಕೆ ಪೆರಾಡಿಯವರೊಂದಿಗೆ ಅಭ್ಯಸಿಸುತ್ತಿದ್ದಾರೆ. ರಂಗಭೂಮಿ ತರಬೇತಿಯನ್ನು ನಿನಾಸಂ ಪದವೀದರರಾದ ಉಜ್ವಲ್ ಯು ವಿ.ಯವರೊಂದಿಗೆ ಪಡೆಯುತ್ತಿದ್ದಾರೆ. ಇವರು ಮಹಿಳಾ ಛಾಯಾಗ್ರಾಹಕಿಯಾಗಿದ್ದು, ಚಿತ್ರಕಲೆ, ವಸ್ತ್ರ ವಿನ್ಯಾಸ, ಹಾಡುಗಾರಿಕೆ, ನಿರೂಪಣೆ, ಮೇಕಪ್ ನಲ್ಲಿಯೂ ಪ್ರವೀಣೆ.
ಕಲಾವಿದರ ಬದುಕು ತುಂಬಾ ಅಪರೂಪವಾದದ್ದು ಇದು ಎಲ್ಲರಿಗೂ ಸಿಗುವುದಿಲ್ಲ. ಪ್ರತಿಯೊಬ್ಬ ಕಲಾವಿದನಿಗೂ ಪ್ರಪಂಚವನ್ನು ಧೈರ್ಯದಿಂದ ಮತ್ತು ಹೆಮ್ಮೆಯಿಂದ ಎದುರಿಸುವ ಶಕ್ತಿ ಇರುತ್ತದೆ. ಅಂತಹ ಕಲಾವಿದರಲ್ಲಿ ನಾನು ಒಬ್ಬಳು ಎಂದು ಹೆಮ್ಮೆ ಪಡುತ್ತೇನೆ ಎಂದು ಒಬ್ಬ ಕಲಾವಿದೆಯ ಮನದ ಮಾತನ್ನು ಹಂಚಿಕೊಳ್ಳುತ್ತಾರೆ ತೃಷಾ.
ಅದರೊಂದಿಗೆ ಸಮಾಜದ ಜನರನ್ನು ಕುರಿತು ಹೇಳುತ್ತಾ, ಛಲಬಿಡದೆ ಪ್ರಯತ್ನ ಪಟ್ಟರೆ ಯಶಸ್ಸು ಖಂಡಿತವಾಗಿಯೂ ದೊರಕುತ್ತದೆ. ಪ್ರಯತ್ನದೊಂದಿಗೆ ತಾಳ್ಮೆ ಇಲ್ಲದಿದ್ದರೆ ಯಾವ ಸಾಧನೆ ಮಾಡಲೂ ಸಾದ್ಯವಿಲ್ಲ. ಬೇರೆಯವರ ದಾರಿಯನ್ನು ಅನುಸರಿಸುವ ಬದಲು ನಿಮ್ಮದೇ ಆದ ಸ್ವಂತ ದಾರಿಯನ್ನು ಹುಡುಕಿಕೊಳ್ಳಿ ಎಂದು ಹೇಳುತ್ತಾರೆ. ಮಾಧ್ಯಮ ಕ್ಷೇತ್ರದಲ್ಲಿ ಇವರಿಗೆ ಸಹಾಯ ಮಾಡಿದ ಲೀಲಾಕ್ಷ ಕರ್ಕೆರರವರಿಗೆ ತಂಬು ಹೃದಯದ ಧನ್ಯವಾದ ಹೇಳಲು ಇಚ್ಛಿಸುತ್ತಾರೆ. ಪ್ರಸ್ತುತ ಇವರ ನಮ್ಮ ಕುಡ್ಲ ವಾಹಿನಿಯಲ್ಲಿ ನಿರೂಪಣೆಯನ್ನು ಮಾಡುತ್ತಿದ್ದಾರೆ.
ಗುಡಿಯೊಳಗಿನ ದೇವನನ್ನು ಒಲಿಸುವ ಬದಲು ನಮ್ಮ ಹೃದಯ ಮಂದಿರದೊಳಗೆ ಇರುವ ದೇವನನ್ನು ಪೂಜಿಸು. ಹೃದಯದೊಳಗಿನ ದೇವ ಪ್ರಾಮಾಣಿಕ ಮತ್ತು ಶುದ್ದವಾಗಿದ್ದರೆ ಗುಡಿಯೊಳಗಿನ ದೇವ ಅನುಗ್ರಹಿಸುತ್ತಾನೆ. ಅದರೊಂದಿಗೆ ನಿಮ್ಮ ಕೆಲಸ ಮತ್ತು ಕಲೆಯನ್ನು ಪ್ರೀತಿಸಿದರೆ ಆ ಕಲೆ ನಿಮ್ಮ ಜೀವನಕ್ಕೆ ದಾರಿಯನ್ನು ತೋರಿಸುತ್ತದೆ. ಹೌದು ತೃಷಾರವರು ಕಲಾಮಾತೆಯ ವರಪುತ್ರಿ. ಪ್ರಸ್ತುತವಾಗಿ ತನ್ನ ಶಿಕ್ಷಣದೊಂದಿಗೆ ನಮ್ಮ ಕುಡ್ಲ ಚಾನೆಲ್ ನಲ್ಲಿ ನಿರೂಪಕಿಯಾಗಿರುವ ಇವರು ವೃತ್ತಿಪರ ಭರತನಾಟ್ಯ ಕಲಾವಿದೆಯಾಗಬೇಕು. ನನ್ನ ಜೀವನವನ್ನು ಕಲೆ ಮತ್ತು ಕಲಾಮಾತೆಗೆ ಮುಡಿಪಾಗಿರಿಸಬೇಕು ಎಂದು ಹೇಳುವ ತೃಷಾರವರ ಜೀವನ ಸುಗಮವಾಗಲಿ. ದೈವ ದೇವರ, ಗುರುಹಿರಿಯರ ಆಶೀರ್ವಾದ ಸದಾ ಇರಲಿ ಎಂಬುದೇ ನನ್ನ ಆಶಯ. ಕಲ್ಲಿನಲ್ಲಿ ಸಂಗೀತ, ತಂತಿಯಲಿ ವೀಣೆ, ಚರ್ಮದಲ್ಲಿ ದೋಲು, ಎಲ್ಲವನ್ನು ಕಲೆಯಾಗಿ ಪರಿವರ್ತಿಸಬಹುದು. ಮಾತೆಯ ಒಲಿಸುವುದೇ ಪ್ರಯತ್ನ , ಆ ಮಾತೆ ಒಮ್ಮೆ ಒಲಿದರೆ, ದೇವನೊಬ್ಬ ವರವಿತ್ತಂತೆ.