
ಮುಂಬೈ ವಿಶ್ವವಿದ್ಯಾಲಯವು ಕಳೆದ ಮೇ ತಿಂಗಳಲ್ಲಿ ನಡೆಸಿದ ಕನ್ನಡ ಡಿಪ್ಲೋಮಾ ಕೋರ್ಸ್ನ 2025 -26 ನೇ ಸಾಲಿನ ಪರೀಕ್ಷೆಯಲ್ಲಿ ಶ್ರೀಮತಿ ಉಷಾ ಶೆಟ್ಟಿ ಅವರು ಅತ್ಯಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಉಷಾ ರತ್ನಾಕರ್ ಶೆಟ್ಟಿಯವರು ಕಣಂಜಾರು ಮೇಲ್ ಮೂಡಿಬೆಟ್ಟು ದಿವಂಗತ ವಿಠ್ಠಲ ಶೆಟ್ಟಿ ಹಾಗೂ ಕಾರ್ಕಳ ತಾಲೂಕಿನ ನೀರೆ ಆಂಬೊಟ್ಟು ಸುಶೀಲ ಶೆಟ್ಟಿ ಇವರ ಪ್ರಥಮ ಪುತ್ರಿ. ನೃತ್ಯ, ನಾಟಕ, ಏಕಪಾತ್ರಾಭಿನಯ, ಯಕ್ಷಗಾನಗಳಲ್ಲಿ ವಿವಿಧ ಪಾತ್ರ ಪೋಷಣೆ, ತಾಳಮದ್ದಲೆಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸುವ ಇವರದ್ದು ಬಹುಮುಖ ಪ್ರತಿಭೆ. ಮುಂಬೈಯ ಪ್ರಸಿದ್ಧ ಯಕ್ಷಗಾನ ತರಬೇತುಗಾರರಾದ ದೇವಲ್ಕುಂದ ಭಾಸ್ಕರ್ ಶೆಟ್ಟಿಯವರ ನೇತೃತ್ವದಲ್ಲಿ ಶ್ರೀ ಮಹಾಲಕ್ಷ್ಮಿ ಬಂಟ ಮಹಿಳಾ ಯಕ್ಷಗಾನ ಬಳಗ ಇದರಲ್ಲಿ ನಿರಂತರ ನಡೆಯುವ ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿ ಪಾಲ್ಗೊಳ್ಳುತ್ತಾರೆ. ನವಿಮುಂಬಯಿ ಪರಿಸರದ ಸಂಘ ಸಂಸ್ಥೆಗಳಾದ ರಂಗಭೂಮಿ ಫೈನ್ ಆರ್ಟ್ಸ್, ನೆರೂಲ್ ಶನಿಮಂದಿರ, ಬಾಂಬೇ ಬಂಟ್ಸ್ ಅಸೋಸಿಯೇಶನ್ಗಳಲ್ಲಿ ಸಕ್ರಿಯರು. ಪ್ರಸ್ತುತ ಪ್ರತಿಷ್ಠಿತ ಬಾಂಬೇ ಬಂಟ್ಸ್ ಅಸೋಸಿಯೇಶನ್ನಲ್ಲಿ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.






























































































































