
ಒಬ್ಬನೇ ವ್ಯಕ್ತಿ ತನ್ನ ಸತತ ಸಾಧನೆಗಳ ಮೂಲಕ ಎಷ್ಟೆಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬಲ್ಲ ಎನ್ನುವುದಕ್ಕೊಂದು ಉತ್ತಮ ಉದಾಹರಣೆಯಾದ ಸತೀಶ್ ಆನಂದ ಶೆಟ್ಟಿಯವರು ಉಡುಪಿಯ ಹಿರಿಯಡ್ಕ ಪೆರ್ಣಂಕಿಲ ಪಡುಬೆಟ್ಟು ಆನಂದ ಮದನ್ ಶೆಟ್ಟಿ ಹಾಗೂ ಉಡುಪಿ ಜಿಲ್ಲೆಯ ಮಂದಾರ್ತಿ ಹೆಗ್ಗುಂಜೆ ಹೆಬ್ಬಾಡಿ ಪಾರ್ವತಿ ಆನಂದ ಶೆಟ್ಟಿ ದಂಪತಿಯರ ಸುಪುತ್ರರಾಗಿ ಜನಿಸಿದರು. ಸತೀಶ್ ವಾಣಿಜ್ಯ ಪದವಿಧರರು ಹಾಗೂ ಎಂ.ಬಿ.ಎ ಸ್ನಾತಕೋತ್ತರ ಉಚ್ಛ ಶಿಕ್ಷಣ ಪಡೆದ ಧೀಮಂತರು. ಇವರು ಬಹುಭಾಷಾ ಜ್ಞಾನಿ ಅಷ್ಟೇ ಅಲ್ಲದೆ ಹಲವಾರು ಕ್ರೀಡೆಗಳ ಅಭ್ಯಾಸ ಮಾಡಿದ ಕ್ರೀಡಾಪಟು ಕೂಡಾ.





ಸಾಮಾಜಿಕ ಚಿಂತನೆ ಉಳ್ಳವರಾದ ಸತೀಶ್ ಶೆಟ್ಟಿಯವರು ಬಡ ಮಕ್ಕಳ ಶಿಕ್ಷಣಕ್ಕೆ ಬೇಕು ಬೇಕಾದ ಪಠ್ಯ ಪುಸ್ತಕ ಹಾಗೂ ಇತರ ವಸ್ತುಗಳನ್ನು ಕೊಡಮಾಡುತ್ತಾ ಬಂದವರು. ಬಡಬಗ್ಗರ ಕುರಿತು ಕರುಣೆ ತೋರುತ್ತಾ ತನ್ನ ಕೈಲಾದ ಸಹಾಯ ಮಾಡುವವರು. ಸಮಾಜಕ್ಕೆ ತೀರಾ ಅವಶ್ಯಕ ಉತ್ಪನ್ನ ಹಾಗೂ ಸೇವೆಗಳನ್ನು ನೀಡಬಹುದಾದ ಕೆಲವು ಕಿರು ಕೈಗಾರಿಕೆಗಳನ್ನು ಹುಟ್ಟು ಹಾಕಿ ಓರ್ವ ಕೈಗಾರಿಕೋದ್ಯಮಿಯಾಗಿಯೂ ಗುರುತಿಸಿ ಕೊಂಡಿದ್ದು, ಸಮಾಜ ಸೇವಾ ಭಾವನೆಯಿಂದ ತನ್ನ ಮಾತೃಶ್ರೀ ಅವರ ಹೆಸರಿನಲ್ಲಿ ಹುಟ್ಟು ಹಾಕಿದ ಶ್ರೀಮತಿ ಪಾರ್ವತಿ ತಾಯಿ ಚಾರಿಟೇಬಲ್ ಟ್ರಸ್ಟ್ ಇದರ ಛೇರ್ಮನ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತಲೋಜ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ತನ್ನ ವೈವಿಧ್ಯಮಯ ಸೇವಾ ಕಾರ್ಯಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರಿದ್ದಾರೆ. ಸಾರ್ವಜನಿಕ ಸಂಪರ್ಕ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿಯೂ ಡಿಪ್ಲೊಮಾಗಳನ್ನು ಪಡೆದಿರುವುದರ ಜೊತೆಗೆ ತನ್ನ ಉದ್ಯಮ ಸಂಬಂಧಿ ವಿಶೇಷ ಹಾಗೂ ಆಳ ಅಧ್ಯಯನ ನಿರತರಾಗಿದ್ದಾರೆ.



ಹಲವಾರು ಸಾರ್ವಜನಿಕ ಸಂಸ್ಥೆಗಳ, ಅರೆಸರಕಾರಿ ಸಂಘಟನೆಗಳ ಹಾಗೂ ಕೈಗಾರಿಕೋದ್ಯಮ ಸಂಘಟನೆಗಳ ಛೇರ್ಮನ್ ಆಗಿ ಪ್ರಸಿದ್ಧರಿರುವ ಸತೀಶ್ ಶೆಟ್ಟಿ ಅವರು ಕರ್ಮ ಸಿದ್ಧಾಂತದಲ್ಲಿ ವಿಶ್ವಾಸ ಇಟ್ಟವರು. ಮಹಾತ್ಮ ಶಿಕ್ಷಣ ಸೊಸೈಟಿ (ಎಂಇಎಸ್) ಪಿಳ್ಳೈ ಕಾಲೇಜು ಪನ್ವೇಲ್ ಇಲ್ಲಿ ಆಡಳಿತ ಮಂಡಳಿ ಸದಸ್ಯ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ರಾಷ್ಟ್ರೀಯ ಲೋಕ್ ಸೇವಾ ಮಂಚ್ ಇದರ ಅಧ್ಯಕ್ಷರಾಗಿ, ಜಯಶ್ರೀ ಗಾಲ್ವಾ ಪ್ರೈವೇಟ್ ಲಿಮಿಟೆಡ್, ಶಾನ್ಕೋ ಹಾರ್ಡ್ವೇರ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಇದರ ಸಿಎಂಡಿ ಆಗಿ, ಸಿಂಬ್ಲಿ ಕಾಫಿ ಕೆಫೆ ಎಲ್.ಎಲ್.ಪಿ ಆಡಳಿತ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತತ ಕ್ರಿಯಾಶೀಲರಾಗಿ, ಸಾಮಾಜಿಕ ಚಿಂತಕರಾಗಿ, ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಶ್ರೀಯುತರು ಬಂಟ ಸಮುದಾಯ ಮಾತ್ರವಲ್ಲ ಮಾನವ ಜನಾಂಗಕ್ಕೆ ಮಾದರಿ ಎನಿಸಿದ್ದಾರೆ. ಸಾಂಸಾರಿಕವಾಗಿ ಸಂತೃಪ್ತಿಯ ಬದುಕನ್ನು ಬಾಳುತ್ತಿರುವ ಸತೀಶ್ ಆನಂದ್ ಶೆಟ್ಟಿ ಪ್ರೀತಿ ಶೆಟ್ಟಿ ನಾಮಧೇಯದ ಬಾಳಸಂಗಾತಿ ಹಾಗೂ ಯಶ್ ಶೆಟ್ಟಿ ಎಂಬ ಗಂಡು ಸಮೈರಾ ಎಂಬ ಹೆಣ್ಣು ಮಗಳು ಇರುವ ಪುಟ್ಟ ಕುಟುಂಬದ ಜೊತೆ ನೆಮ್ಮದಿಯಿಂದಿದ್ದಾರೆ.
ಮಹಾರಾಷ್ಟ್ರದ ಚೆಂಬೂರಿನಲ್ಲಿ ಜನ್ಮತಾಳಿದ ಇವರು ತನ್ನ ಉದ್ಯಮ ಸಂಬಂಧಿ ಕೆಲಸದಲ್ಲಿ ದೇಶ ವಿದೇಶಗಳ ಅನೇಕ ಪ್ರದೇಶಗಳ ಸುತ್ತಿ ವಿಪುಲ ಅನುಭವವನ್ನು ಸಂಪಾದಿಸಿಕೊಂಡಿದ್ದಾರೆ. ಮೇ 02 ರಂದು 50 ವರ್ಷ ಪೂರೈಸುತ್ತಿರುವ ಸತೀಶ್ ಶೆಟ್ಟಿಯವರ ಉದ್ದಿಮೆಗಳು ವೃದ್ಧಿ ಪಡೆಯಲಿ, ಸಾಮಾಜಿಕ ಚಿಂತನೆಗಳು ಸಾಕಾರಗೊಂಡು ಸಮಾಜಕ್ಕೆ ಮಹಾದುಪಕಾರವಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು

























































































































