

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳು ಕನ್ನಡಿಗರು ಹುಟ್ಟಿನಿಂದಲೇ ಆಸ್ತಿಕರು, ದೈವಭಕ್ತರು, ಶಕ್ತಿಯ ಆರಾಧಕರು. ಈ ಮಾತಿಗೆ ನಮ್ಮ ಅಣ್ಣಿ ಶೆಟ್ಟಿಯವರು ಹೊರತಾಗಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಗುಂಡ್ಯಡ್ಕ ದೇವಕಿ ಶೆಟ್ಟಿ ಮತ್ತು ಸಾಂತೂರು ಬೈಲುಮನೆ ಚಿನ್ಮಯ್ಯ ಶೆಟ್ಟಿ ಅವರ ಸುಪುತ್ರರಾಗಿ ಜನಿಸಿರುವ ಅಣ್ಣಿ ಶೆಟ್ಟರು ಜೀವನ ನಿರ್ವಹಣೆಗೆ ಜ್ಞಾನ ನೀಡುವಷ್ಟು ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಮುಂಬಯಿ ಸೇರಿದವರು ಅನೇಕ ಕಡೆ ಕಷ್ಟಪಟ್ಟು ದುಡಿದು ನಂತರ ತನ್ನದೇ ಆದ ಕ್ಯಾಂಟೀನ್ ಉದ್ಯಮ ಆರಂಭಿಸಿ ಅದರಲ್ಲಿ ಯಶಸ್ಸು ಕಂಡವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಕಲ್ಯಾಣ್ ಮತ್ತು ನವಿ ಮುಂಬಯಿ ಪರಿಸರದಲ್ಲಿ ಹೊಟೇಲ್ ಮತ್ತು ಕ್ಯಾಂಟೀನ್ ಉದ್ಯಮದಲ್ಲಿ ಯಶಸ್ಸು ಕಾಣುವುದಕ್ಕೆ ಕಾರಣ ಮಾತೆ ದುರ್ಗಾಂಬೆ ಎಂದು ಬಲವಾಗಿ ನಂಬುವ ಅಣ್ಣಿ ಶೆಟ್ಟಿಯವರು ಶ್ರೀ ದೇವಿಯನ್ನು ಅನವರತವೂ ಆರಾಧಿಸಿಕೊಂಡು ಬಂದಿರುವ ದೇವಿ ಉಪಾಸಕರು. ಘನ್ಸೋಲಿ ಮೂಕಾಂಬಿಕಾ ಸನ್ನಿಧಿ ಎಂದರೆ ಹಬ್ಬ ಹರಿದಿನಗಳಲ್ಲಿ ಸಂಭ್ರಮ ಸಡಗರ ಸಾಂಸ್ಕೃತಿಕ ಸುಗ್ಗಿ. ಇದರ ಹಿಂದಿನ ರೂವಾರಿ ಧರ್ಮದರ್ಶಿ ಡಾ| ಅಣ್ಣಿ ಶೆಟ್ಟಿಯವರು.





ನವಿ ಮುಂಬಯಿ ಕಲ್ಯಾಣ್ ಪರಿಸರದಲ್ಲಿ ಹೋಟೆಲು ಉದ್ಯಮಿಯಾಗಿ, ಪರೋಪಕಾರಿಯಾಗಿ, ಕೊಡುಗೈ ದಾನಿಯಾಗಿ ಪರಿಚಯಿಸಿಕೊಂಡ ಅಣ್ಣಿ ಶೆಟ್ಟಿ ಅವರ ಅನನ್ಯ ಧಾರ್ಮಿಕ ಮನೋವೃತ್ತಿ ಘನ್ಸೋಲಿ ಮೂಕಾಂಬಿಕಾ ಮಂದಿರದ ಸ್ಥಾಪನೆ ನಂತರ ಅದರ ಬೆಳವಣಿಗೆಗೆ ಕಾರಣವಾಯಿತು. ಕಳೆದ 43 ವರ್ಷಗಳಿಂದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷರಾಗಿ ಅಹರ್ನಿಶಿ ದುಡಿಯುತ್ತಾ ಮಂದಿರದ ಅಭಿವೃದ್ಧಿ ಕಾರ್ಯಗಳ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹತ್ತಾರು ಸಂಸ್ಥೆಗಳ ಸಲಹೆಗಾರರಾಗಿ, ಪೋಷಕರಾಗಿ, ಮಾರ್ಗದರ್ಶಕರಾಗಿ ಎಲ್ಲರಿಗೂ ಪ್ರೇರಣಾಕಾರರಾಗಿದ್ದಾರೆ. ನವಿಮುಂಬಯಿ ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಾಲಯ ಆಸ್ತಿಕ ಬಾಂಧವರನ್ನು ನಿರಂತರ ತನ್ನತ್ತ ಸೆಳೆಯುತ್ತಿದೆ. ಘನ್ಸೋಲಿ ಕ್ಷೇತ್ರ ಎಂದರೆ ಮುಂಬಯಿ ತುಳು ಕನ್ನಡಿಗರ ಪಾಲಿಗೆ ಕಟೀಲು ಕ್ಷೇತ್ರದಷ್ಟೇ ಪರಮ ಪಾವನ ಭೂಮಿ ಎನಿಸಿದೆ. ಇಲ್ಲಿನ ವಾರ್ಷಿಕ ರಥೋತ್ಸವದ ಸೊಬಗನ್ನು ವೀಕ್ಷಿಸಲು ಎರಡು ಕಂಗಳು ಸಾಲದು. ರಥವನೇರಿ ಬರುವ ಜಗದಂಬಿಕೆಯ ವೈಭವ ಕಂಡು ಭಕ್ತ ಜನರು ಭಾವುಕರಾಗಿ ನಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಳ್ಳುತ್ತಾರೆ. ಅಂದು ಆಸ್ತಿಕ ಜನರ ಮಹಾಪೂರವೇ ಘನ್ಸೋಲಿ ಕಡೆಗೆ ಹರಿದು ಬರುತ್ತದೆ.



ಅಣ್ಣಿ ಶೆಟ್ಟಿ ಅವರು ಥಾಣೆ ಬೇಲಾಪುರ ಮಾರ್ಗದ ತಮ್ಮ ಹೋಟೆಲ್ ಸಮೀಪ ಇದ್ದ ಮೂಕಾಂಬಿಕ ಮಂದಿರಕ್ಕೆ ಭೇಟಿ ನೀಡುತ್ತಾ, ಅದರ ಸುವ್ಯವಸ್ಥೆಗೆ ಬೇಕಾಗುವ ದೇಣಿಗೆಯ ಜೊತೆಗೆ ಸಲಹೆ ಸೂಚನೆಗಳನ್ನು ನೀಡಿ ಮಂದಿರದ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ನಂತರ ಮುಂಬಯಿ ಘನ್ಸೋಲಿಯಲ್ಲಿ ಸಿಡ್ಕೋದವರಿಂದ ಜಾಗ ಖರೀದಿಸಿ ಮಾತೆ ಮೂಕಾಂಬಿಕೆಗೆ ದಿವ್ಯ ದೇಗುಲ ನಿರ್ಮಾಣ ಮಾಡಿ ಮುಂದೆ ಅದು ನವಿಮುಂಬಯಿಯ ಸಾಂಸ್ಕೃತಿಕ ಕಾಶಿ ಎಂದು ಕರೆಸಿಕೊಂಡ ರೋಚಕ ವೃತ್ತಾಂತ ಬೆರಗು ಹುಟ್ಟಿಸುತ್ತದೆ. ಧರ್ಮಪತ್ನಿ ಶ್ರೀಮತಿ ಇಂದಿರಾ ಶೆಟ್ಟಿ, ಪುತ್ರ ಮನೋಜ್ ಶೆಟ್ಟಿ, ಸೊಸೆ ಆರತಿ ಶೆಟ್ಟಿ, ಮಗಳು ಸುರೇಖಾ ಶೆಟ್ಟಿ, ಅಳಿಯ ಸತೀಶ್ ಶೆಟ್ಟಿ, ಮೊಮ್ಮಕ್ಕಳಾದ ತನಿಷ್, ಲೋಹಿತಾಕ್ಷ್ ಅವರೊಂದಿಗಿನ ತಮ್ಮ ಸಾಂಸಾರಿಕ ಜೀವನ ಇತರರಿಗೆ ಮಾದರಿ ಎಂಬಂತಿದೆ. ಅಣ್ಣಿ ಶೆಟ್ಟಿಯವರ ಸೇವಾಗಾಥೆಯನ್ನು ಅರಸಿ ಧರ್ಮದರ್ಶಿ ಬಿರುದು, ಜನಸೇವಾ ಸದ್ಭಾವನಾ ಪ್ರಶಸ್ತಿ, ಸಮಾಜರತ್ನ ಪ್ರಶಸ್ತಿ, ಶಿವಾಜಿ ಪ್ರೇರಣಾ ಪ್ರಶಸ್ತಿ, ಗಡಿನಾಡ ಕೇಸರಿ ಪ್ರಶಸ್ತಿ, ಕೊರೋನಾ ವಾರಿಯರ್ ಅವಾರ್ಡ್, ಶಿವಾಯ ಪ್ರೇರಣಾ ಪ್ರಶಸ್ತಿ- 2026, ಸಾಧಕ ರತ್ನ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅಣ್ಣಿ ಶೆಟ್ಟಿಯವರ ಧಾರ್ಮಿಕ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇಂಥಹ ಅನನ್ಯ ಸಾಧಕನ ಭವಿಷ್ಯ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಕೂಡಿರಲಿ. ಇಷ್ಟ ದೇವತೆ ಘನ್ಸೋಲಿ ಕ್ಷೇತ್ರ ವಿರಾಜಿತೆ ಮೂಕಾಂಬಿಕೆ ಹರಸಲಿ ಎಂಬ ಹಾರೈಕೆಗಳು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ವತಿಯಿಂದ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು

























































































































