
ಒಬ್ಬಾಕೆ ಮಹಿಳೆ ತನ್ನ ಸಂಸಾರ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಜೊತೆ ಜೊತೆಗೆ ಉದ್ಯಮ ವ್ಯವಹಾರಗಳಲ್ಲಿ ತನ್ನ ಕಾರ್ಯಕೌಶಲತೆಯನ್ನು ಮೆರೆಯ ಬಲ್ಲಳು ಎನ್ನುವುದಕ್ಕೆ ಉತ್ತಮ ನಿದರ್ಶನ ಆಗಬಲ್ಲವರು ಶ್ರೀಮತಿ ಕಾಂತಿ ಶೆಟ್ಟಿ. ಮೂಲತಃ ಶಿರ್ವ ನಡಿಬೆಟ್ಟಿನವರಾದ ಕಾಂತಿ ಶೆಟ್ಟಿ ಅವರು ತನ್ನ ಹುಟ್ಟೂರಿನಲ್ಲಿ ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರು ಸೇರಿ ತನ್ನ ಉದ್ಯಮ ವಿಚಕ್ಷಣೆಯಿಂದ ಯಶಸ್ವಿ ಮಹಿಳಾ ಉದ್ಯಮಿ ಎನಿಸಿಕೊಂಡ ನಂತರದ ದಿನಗಳಲ್ಲಿ ತನ್ನ ಚಿಂತನಶೀಲ ಸ್ವಭಾವ, ಸಮಕಾಲೀನ ಸಮಸ್ಯೆಗಳು, ರಾಜಕೀಯ ವಿದ್ಯಮಾನಗಳು ಕುರಿತಂತೆ ಆಳವಾದ ಚಿಂತನ ಮಂಥನದ ಬಳಿಕ ಸಾಮಾಜಿಕ, ರಾಜಕೀಯ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡರು. ಇವರ ಸಂಕಲ್ಪ ಶಕ್ತಿ ಅದ್ಭುತವಾದುದು. ಜೊತೆಗೆ ಕನ್ನಡ ಭಾಷೆಯ ಮೇಲೆ ಇವರ ಹಿಡಿತ, ವಾಕ್ಪಟುತ್ವ, ತಾರ್ಕಿಕ ಚಿಂತನೆ ಮೊದಲಾದ ವಿಶೇಷ ಗುಣಗಳಿಂದ ದೇಶದ ಆಡಳಿತ ಪಕ್ಷ ಮೋದೀಜಿ ನೇತೃತ್ವದ ಭಾರತೀಯ ಜನತಾ ಪಕ್ಷದ ನಿಸ್ವಾರ್ಥ ಭಾವದ ಕಾರ್ಯಕರ್ತೆಯಾಗಿ ತನ್ನ ಜನಪ್ರಿಯತೆಯನ್ನು ಬೆಳೆಸಿಕೊಳ್ಳುವ ಮೂಲಕ ಅತ್ಯುತ್ತಮ ಸಂಘಟಕಿಯಾಗಿ ರೂಪುಗೊಂಡ ಬಳಿಕ ತನ್ನ ಸ್ವಸಮುದಾಯದ ಸಂಘಟನೆಯಾದ ಬೆಂಗಳೂರು ಬಂಟರ ಸಂಘದ ವಿವಿಧ ಹುದ್ದೆಗಳನ್ನು ಅಲಂಕರಿಸುತ್ತಾ ಇದೀಗ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ದೂರದರ್ಶನ ಚರ್ಚೆಗಳಲ್ಲಿ ತನ್ನ ತರ್ಕ ಬದ್ಧ ವಾಗ್ಮಿತೆಗೆ ಹೆಸರು ಪಡೆದ ಕಾಂತಿ ಶೆಟ್ಟಿ ಭಾರತೀಯ ಜನತಾ ಪಕ್ಷದ ಪ್ರಭಾವಿ ವಕ್ತಾರೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಇವರು ತೋರಿದ ಸಮಯಪ್ರಜ್ಞೆ, ಸಮಾಜಸೇವೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಜೊತೆಗೆ ಮಹಿಳಾ ಸಬಲೀಕರಣದತ್ತ ಕಾಂತಿ ಶೆಟ್ಟಿ ಅವರು ಇಟ್ಟ ದಿಟ್ಟ ಹೆಜ್ಜೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದ ಮಹತ್ಕಾರ್ಯಕ್ಕೆ ವಿಶೇಷ ಸಾಮರ್ಥ್ಯ ಸಂಪನ್ನ ಮಹಿಳೆಯರಿಗೆ ಕೊಡಮಾಡುವ ಮಹಿಳಾ ರತ್ನ ಪ್ರಶಸ್ತಿಗೆ ಪಾತ್ರರಾದ ಧೀಮಂತ ಮಹಿಳೆ ಈಕೆ. ಇನ್ನು ಮಹಿಳೆಯಾಗಿ ಉದ್ಯಮ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟು ಹಂತ ಹಂತವಾಗಿ ಅದ್ಭುತ ಯಶ ಸಾಧಿಸಿದ ಇವರಿಗೆ ಉದ್ಯಮ ಸಾಹಸಿ ಪ್ರಶಸ್ತಿಯೂ ಪ್ರಾಪ್ತವಾಗಿದೆ. ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ, ಸಮಾಜಸೇವಾ ರತ್ನ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಶ್ರೀಮತಿ ಕಾಂತಿ ಶೆಟ್ಟಿ ಅವರನ್ನು ಅರಸಿಕೊಂಡು ಬಂದಿವೆ. ಇವರ ಸಾಧನೆ ಕುರಿತಂತೆ ಅನೇಕ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಇವರ ವಿಶೇಷ ಸಾಧನೆಗಳ ಸರಮಾಲೆ ಕುರಿತಂತೆ ಲೇಖನ ವರದಿ ವ್ಯಕ್ತಿ ಪರಿಚಯಗಳನ್ನು ಪ್ರಕಟಿಸಿವೆ.
ಬೆಂಗಳೂರಿನಲ್ಲಿ Aircom Solutions Pvt Ltd ಎಂಬ ಟೆಲಿಕಾಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಈಕೆ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕುರಿತ ಅನೇಕ ಯೋಜನೆಗಳನ್ನು ರೂಪಿಸುವ ಸಂಸ್ಥೆಗಳ ಸ್ಥಾಪನೆಯಲ್ಲಿ ಆಸಕ್ತಿ ವಹಿಸಿದ್ದಾರೆ. Case no 18/9 ಎಂಬ ಕನ್ನಡ ಯಶಸ್ವೀ ಚಲನಚಿತ್ರದ ಸಹ ನಿರ್ಮಾಪಕಿಯಾಗಿಯೂ, ಚೆಲುವಿ ಎಂಬ ಧಾರವಾಹಿಯ ನಿರ್ಮಾಪಕಿಯಗಿಯೂ ಗಮನ ಸೆಳೆದಿದ್ದಾರೆ. ಮಹಿಳೆಯರ ಗುಂಪಿನಲ್ಲಿ ವಿಶೇಷವಾಗಿ ವಿರಾಜಮಾನವಾಗಿ ಬೆಳಗುವ ಕಾಂತಿ ಶ್ರೀಮತಿ ಕಾಂತಿ ಶೆಟ್ಟಿ ಅವರ ಭವಿಷ್ಯದ ಯೋಜನೆಗಳು ಮೂರ್ತರೂಪ ಪಡೆಯಲಿ, ಯಶ ಕಾಣಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ವತಿಯಿಂದ ಸುಮನಸದ ಹಾರೈಕೆಗಳು.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು

























































































































