
ಎಲ್ಲರ ಬಾಯಲ್ಲೂ ಒಂದೇ ಸುದ್ದಿ ‘ಗ್ಯಾಸ್ ಬತ್ತ್ಂಡ ಗ್ಯಾಸ್ ಎತ್ತ್ಂಡ’. ಅಯ್ಯೋ ದೇವರೆ… ಎಲ್ಲವೂ ಇಷ್ಟೇ ನಾವು ಹೆಚ್ಚು ಹೆಚ್ಚು ಹೊಸತನ, ಹೊಸ ಟೆಕ್ನಾಲಜಿಯನ್ನು ನಮ್ಮ ನಿತ್ಯ ಜೀವನದ ಚಟುವಟಿಕೆಗಳಲ್ಲಿ ಅಳವಡಿಸಿ ಅದರ ಮೇಲೆ ಅವಲಂಭಿಸಿದಷ್ಟು ಇಂತಹ ಪಚೀತಿ ಎದುರಾಗುತ್ತಲೇ ಇರುತ್ತದೆ. ಮನೆಯೇ ಆಗಲಿ ಹೋಟೇಲೇ ಆಗಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಾಗುತ್ತಿದ್ದ ಆ ಕಾಲದಲ್ಲಿ ಪಾತ್ರೆ ಪಗಡಿ ಮಸಿಯಾಗುವ ಸಮಸ್ಯೆ ಅಲ್ಲದೇ ಬೇರೆ ಅಂತದ್ದೇನು ಸಮಸ್ಯೆ ಇರಲಿಲ್ಲ. ಹೆಚ್ಚಿನ ಎಲ್ಲರ ಮನೆಯ ಅಟ್ಟದ ಮೇಲೆ ಕನಿಷ್ಟ ಪಕ್ಷ ಎರಡು ಮೂರು ತಿಂಗಳಿಗಾಗುವಷ್ಟು ಸೌದೆ ಇರುತ್ತಿತ್ತು. ಹಾಗಾಗಿ ಈ ಅಡುಗೆ ತಯಾರಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಅರ್ಥಾತ್ ಅದೊಂದು ದೊಡ್ಡ ಸಮಸ್ಯೆ ಎಂದೇ ಎಣಿಸಿರಲಿಲ್ಲ. ಆಗ ತಿಂದದ್ದು ಹೆಚ್ಚಾದರೆ ‘ಹೊಟ್ಟೆಯ ಗ್ಯಾಸ್ ಟ್ರಬಲ್’ ಸಮಸ್ಯೆ ಬಿಟ್ಟರೆ ಈ ಅಡುಗೆ ಗ್ಯಾಸ್ ನ ತಾಪತ್ರೆ ಇರಲಿಲ್ಲ!. ಆದರೆ ಬರಬರುತ್ತಾ ಎಲ್ಲವೂ ಬದಲಾಗಿ ಈ ಗ್ಯಾಸ್ ನ ಕಾರ್ಬಾರ್ ನಿಂದ ಕೇವಲ ಒಂದೆರಡು ಗಂಟೆಯಲ್ಲಿ ಮೂರು ನಾಲ್ಕು ಬಗೆಯ ಪಕ್ವಾನ್ನವನ್ನು ಹೆಚ್ಚು ಶ್ರಮ ಪಡದೇ ತಯಾರಿಸುವ ಮಟ್ಟಕ್ಕೆ ನಮ್ಮ ಅಡುಗೆ ಮನೆಗಳು ಬಂದು ತಲುಪಿತು. ಅದಕ್ಕೆ ಸಹಕಾರಿಯಾಗಿ ಅರೆಯುವ ಕಲ್ಲಿನ ಬದಲು ಮಿಕ್ಸಿ, ಗ್ರೈಂಡರ್ ಗಳು. ಬೇಗ ಬೇಯಿಸಲು ಕುಕ್ಕರ್ ಗಳು, ಮೈಕ್ರೋವೇವ್ ಗಳು ಹೀಗೆ ಅಡುಗೆ ಮನೆಯ ಆಧುನಿಕ ಉಪಕರಣಗಳು ಎಲ್ಲವನ್ನೂ ಸುಲಭಗೊಳಿಸಿದವು. ಆದರೆ ಅದರ ಅಡ್ಡ ಪರಿಣಾಮಗಳನ್ನು ನೋಡಿದರೆ ಇನ್ನೆರಡು ಲೇಖನ ಬೇಕಾದೀತು!. ಈಗ ನಾವೆಲ್ಲಾ ಮಾತಾಡುವ ಈ ಗ್ಯಾಸ್ ಎಲ್ಲಿಂದ ಹೇಗೆ ಬರುತ್ತದೆ ಎಂಬ ಮಾಹಿತಿಯನ್ನು ಒಮ್ಮೆ ತಿಳಿಯೋಣ. ಆಗ ಈ ಗ್ಯಾಸ್ ಟ್ರಬಲ್ ನ ಬಗ್ಗೆ ನಮಗೆ ಸರಿಯಾದ ಮಾಹಿತಿ ದೊರಕುತ್ತದೆ. ಆಗದೇ. ನಮಗೆಲ್ಲಾ ತಿಳಿದಂತೆ ಇರಾನ್ ನ ಸ್ವಾಧೀನದಲ್ಲಿರುವ ‘ಹಾರ್ಮುಜ್ ಜಲಸಂಧಿ’ ಬಂದ್ನಿಂದ ಎಲ್ಪಿಜಿ ಬಿಕ್ಕಟ್ಟು ತಲೆದೋರಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷವು ನಮ್ಮೆಲ್ಲರ ಮನೆಯ ಅಡುಗೆ ಮನೆಯ ಮೇಲೆ (ಮನೆಯ ವಾತಾವರಣದ ಮೇಲೆ) ನೇರ ಪರಿಣಾಮ ಬೀರಲಾರಂಭಿಸಿದೆ. ಜಾಗತಿಕ ಇಂಧನ ಪೂರೈಕೆಯ ಹೃದಯ ಭಾಗವೆಂದೇ ಕರೆಯಲ್ಪಡುವ ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಶೇ 20ರಷ್ಟು ಭಾಗ ಈ ‘ಹಾರ್ಮುಜ್ ಜಲಸಂಧಿ’ (Strait of Hormuz) ಯಲ್ಲೇ ಬರುವುದು. ಇದು ಈಗಿನ ಈ ಸಂಘರ್ಷದ ಕೇಂದ್ರ ಬಿಂದುವಾಗಿರುವುದು ವಿಶ್ವದ ಎರಡನೇ ಅತಿದೊಡ್ಡ ಎಲ್ಪಿಜಿ ಆಮದುದಾರ ದೇಶವಾದ ಭಾರತಕ್ಕೆ ಮಾತ್ರವಲ್ಲ ವಿಶ್ವದ ಹೆಚ್ಚಿನ ದೇಶಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಎಲ್ಪಿಜಿ ಪೂರೈಕೆ ವ್ಯವಸ್ಥೆ ಸವಾಲುಗಳನ್ನು ಎದುರಿಸುತ್ತಿದೆ. ಇದು ಭಾರತದ ಇಂಧನ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈಗ ಈ ಮಾರ್ಗದಲ್ಲಿ ಹಡಗುಗಳ ಸಂಚಾರವೇ ಸ್ಥಗಿತಗೊಂಡಿದೆ.


ಭಾರತವು ತನ್ನ ಎಲ್ಪಿಜಿ ಅಗತ್ಯಕ್ಕಾಗಿ ಶೇ 55-60 ರಷ್ಟು ಆಮದು (Import) ಮೇಲೆಯೇ ಅವಲಂಬಿತವಾಗಿದೆ. ಉಳಿದ ಶೇ 40ರಷ್ಟು ಮಾತ್ರವೇ ದೇಶೀಯವಾಗಿ ಉತ್ಪಾದನೆಯಾಗುತ್ತದೆ. ಭಾರತಕ್ಕೆ ಎಲ್ಪಿಜಿ ಎಲ್ಲಿಂದ ಬರುತ್ತದೆ? ವಿತರಣೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯವುದಾದರೆ, ದೇಶದ ಇಂಧನ ಭದ್ರತೆಯಲ್ಲಿ ಅಡುಗೆ ಅನಿಲವು ಪ್ರಮುಖ ಪಾತ್ರ ವಹಿಸುತ್ತಿದ್ದು, ಅದರ ಪೂರೈಕೆ ವ್ಯವಸ್ಥೆಯು ಕುತೂಹಲಕಾರಿ ಅಂಶಗಳಿಂದ ಕೂಡಿದೆ. ಭಾರತವು ಪ್ರಮುಖವಾಗಿ ಮಧ್ಯಪ್ರಾಚ್ಯ ದೇಶಗಳಿಂದ (Middle East) ಎಲ್ಪಿಜಿಯನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಕುವೈತ್ ಭಾರತದ ಪ್ರಮುಖ ಪೂರೈಕೆದಾರರು. ಈ ಅನಿಲವು ಬೃಹತ್ ಹಡಗುಗಳ ಮೂಲಕ ಭಾರತದ ಕರಾವಳಿ ತೀರದ ಬಂದರುಗಳನ್ನು ತಲುಪುತ್ತದೆ. ಮಂಗಳೂರು, ವಿಶಾಖಪಟ್ಟಣಂ, ಕಾಂಡ್ಲಾ, ಮುಂಬೈ ಮತ್ತು ಎನ್ನೋರ್ಗಳಲ್ಲಿ ಬೃಹತ್ ಎಲ್ಪಿಜಿ ಆಮದು ಟರ್ಮಿನಲ್ಗಳಿವೆ. ಭಾರತದಲ್ಲಿ ಎಲ್ಪಿಜಿಯನ್ನು ಪ್ರಮುಖವಾಗಿ ಎರಡು ಮೂಲಗಳಿಂದ ಪಡೆಯಲಾಗುತ್ತದೆ. ಪೆಟ್ರೋಲಿಯಂ ರಿಫೈನರಿಗಳು ಕಚ್ಚಾ ತೈಲವನ್ನು ಸಂಸ್ಕರಿಸುವಾಗ ಉಪ ಉತ್ಪನ್ನವಾಗಿ ಎಲ್ಪಿಜಿ ದೊರೆಯುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ (ಜಾಮ್ನಗರ), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್), ಇಂಡಿಯನ್ ಆಯಿಲ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್ಪಿಸಿಎಲ್) ರಿಫೈನರಿಗಳು ಇದರ ಪ್ರಮುಖ ಉತ್ಪಾದಕರು. ಇದಲ್ಲದೇ ಭೂಮಿಯೊಳಗಿನ ನೈಸರ್ಗಿಕ ಅನಿಲದ ಬಾವಿಗಳಿಂದ ಗ್ಯಾಸ್ ಹೊರತೆಗೆದಾಗ ಅದನ್ನು ಸಂಸ್ಕರಿಸಿ ಎಲ್ಪಿಜಿಯನ್ನಾಗಿ ಪರಿವರ್ತಿಸಲಾಗುತ್ತದೆ. ಇದರಲ್ಲಿ ಗೇಲ್ನಂತಹ (GAIL) ಸಂಸ್ಥೆಗಳು ಇದರಲ್ಲಿ ತೊಡಗಿವೆ. ಪೂರೈಕೆ ಮತ್ತು ಸಾಗಾಣಿಕೆ ಟರ್ಮಿನಲ್ಗಳು ಮತ್ತು ರಿಫೈನರಿಗಳಲ್ಲಿ ಉತ್ಪಾದನೆಯಾದ ಅನಿಲವನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ಮೂರು ಮಾರ್ಗಗಳಿವೆ.
ಪೈಪ್ ಲೈನ್ : ಇದು ಅತ್ಯಂತ ಸುರಕ್ಷಿತ ಮತ್ತು ವೇಗವಾದ ಮಾರ್ಗ. ಉದಾಹರಣೆಗೆ, ಜಾಮ್ನಗರದಿಂದ ಲೋನಿವರೆಗೆ ಇರುವ ಪೈಪ್ಲೈನ್ ಭಾರತದ ಅತಿದೊಡ್ಡ ಅನಿಲ ಪೈಪ್ಲೈನ್ಗಳಲ್ಲಿ ಒಂದು. ರೈಲ್ವೆ ವ್ಯಾಗನ್ಗಳು : ಬೃಹತ್ ಪ್ರಮಾಣದ ಗ್ಯಾಸ್ ಟ್ಯಾಂಕರ್ಗಳನ್ನು ರೈಲ್ವೆ ಮೂಲಕ ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತದೆ. ಬೃಹತ್ ಟ್ರಕ್ ಟ್ಯಾಂಕರ್ಗಳು : ಪೈಪ್ಲೈನ್ ಇಲ್ಲದ ಪ್ರದೇಶಗಳಿಗೆ ರಸ್ತೆಯ ಮೂಲಕ ಟ್ಯಾಂಕರ್ಗಳಲ್ಲಿ ಅನಿಲವನ್ನು ಬಾಟ್ಲಿಂಗ್ ಪ್ಲಾಂಟ್ಗಳಿಗೆ ಸಾಗಿಸಲಾಗುತ್ತದೆ. ಬಾಟ್ಲಿಂಗ್ ಪ್ಲಾಂಟ್ಗಳು : ಸಗಟು ರೂಪದಲ್ಲಿ ಬಂದ ಅನಿಲವನ್ನು ನಾವು ಬಳಸುವ ಸಿಲಿಂಡರ್ಗಳಿಗೆ ತುಂಬುವ ಸ್ಥಳವೇ ‘ಬಾಟ್ಲಿಂಗ್ ಪ್ಲಾಂಟ್’. ಇಲ್ಲಿ ಅನಿಲಕ್ಕೆ ‘ಮರ್ಕಾಪ್ಟನ್’ (Mercaptan) ಎಂಬ ವಿಶಿಷ್ಟ ವಾಸನೆಯ ದ್ರವವನ್ನು ಸೇರಿಸಲಾಗುತ್ತದೆ. ಎಲ್ಪಿಜಿ ಮೂಲತಃ ವಾಸನೆರಹಿತ ಅನಿಲ, ಆದರೆ ಗ್ಯಾಸ್ ಸೋರಿಕೆಯಾದಾಗ ನಮಗೆ ತಿಳಿಯಲಿ ಎಂಬ ಕಾರಣಕ್ಕೆ ಈ ವಾಸನೆಯನ್ನು ಸೇರಿಸಲಾಗುತ್ತದೆ. ಸಿಲಿಂಡರ್ಗಳ ತೂಕ ಪರೀಕ್ಷೆ, ಸೋರಿಕೆ ತಪಾಸಣೆ ಮತ್ತು ಸುರಕ್ಷತಾ ಕವಚಗಳನ್ನು ಇಲ್ಲಿಯೇ ಅಳವಡಿಸಲಾಗುತ್ತದೆ. ಬಾಟ್ಲಿಂಗ್ ಪ್ಲಾಂಟ್ನಿಂದ ಸಿಲಿಂಡರ್ಗಳು ಟ್ರಕ್ಗಳ ಮೂಲಕ ಸ್ಥಳೀಯ ಡಿಸ್ಟ್ರಿಬ್ಯೂಟರ್ಗಳ (ಏಜೆನ್ಸಿಗಳ) ಗೋದಾಮಿಗೆ ತಲುಪುತ್ತವೆ. ಭಾರತದಲ್ಲಿ ಪ್ರಮುಖವಾಗಿ ಮೂರು ಸರ್ಕಾರಿ ತೈಲ ಕಂಪನಿಗಳಾದ (OMCs) Indane, HP Gas, Bharat Gas ವಿತರಣೆ ಮಾಡುತ್ತವೆ. ವಿತರಕರು ಸಿಲಿಂಡರ್ಗಳನ್ನು ಬುಕಿಂಗ್ ಆಧಾರದ ಮೇಲೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಪ್ರಸ್ತುತ ಡಿಜಿಟಲ್ ಬುಕಿಂಗ್ ಮತ್ತು ಸಬ್ಸಿಡಿ ವರ್ಗಾವಣೆಯು (ಡಿಬಿಟಿಎಲ್) ಈ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕಗೊಳಿಸಿದೆ. ಭಾರತಕ್ಕೆ ಇರುವ ಅತಿದೊಡ್ಡ ಸವಾಲೆಂದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ. ಜಾಗತಿಕ ರಾಜಕೀಯ ಘರ್ಷಣೆಗಳು ನಡೆದಾಗ ಅನಿಲದ ಬೆಲೆ ಏರಿಕೆಯಾಗುತ್ತದೆ. ಇದು ಭಾರತೀಯ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನು ಎದುರಿಸಲು ಭಾರತ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (PMUY) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡುವುದು. ಪರ್ಯಾಯ ಇಂಧನಗಳಾದ ಬಯೋಗ್ಯಾಸ್ ಮತ್ತು ಎಥನಾಲ್ ಬಳಕೆಗೆ ಉತ್ತೇಜನ ನೀಡಿ ಎಲ್ಪಿಜಿ ಮೇಲಿನ ಹೊರೆಯನ್ನು ಕಡಿಮೆ ಮಾಡುವಂತಹ ಕೆಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
LPG : ಮನೆಯಲ್ಲೇ ಕುಳಿತು ಎಲ್ಪಿಜಿ ಇ-ಕೆವೈಸಿ ಮಾಡುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) : ಇದು ಸಿಲಿಂಡರ್ಗಳ ಬದಲಿಗೆ ನೇರವಾಗಿ ಮನೆಗಳಿಗೆ ಪೈಪ್ ಮೂಲಕ ಅನಿಲ ಪೂರೈಸುವ ವ್ಯವಸ್ಥೆ (PNG). ಬೆಂಗಳೂರಿನಂತಹ ನಗರಗಳಲ್ಲಿ ಇದು ಈಗಾಗಲೇ ವೇಗವಾಗಿ ವಿಸ್ತರಿಸುತ್ತಿದೆ. ಭಾರತವು ತನ್ನ ಅಡುಗೆ ಅನಿಲದ ಭದ್ರತೆಗಾಗಿ ಜಾಗತಿಕ ಮಾರುಕಟ್ಟೆಯೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ. ಕಡಲಾಚೆಯ ದೇಶಗಳಿಂದ ಬರುವ ಅನಿಲವು ಸಾವಿರಾರು ಕಿಲೋ ಮೀಟರ್ ದೂರ ಸಾಗಿ, ಅತ್ಯಂತ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳೊಂದಿಗೆ ನಮ್ಮ ಅಡುಗೆಮನೆಯನ್ನು ತಲುಪುತ್ತದೆ. ಭವಿಷ್ಯದಲ್ಲಿ ಸ್ವದೇಶಿ ಉತ್ಪಾದನೆ ಹೆಚ್ಚಾದಲ್ಲಿ ಮತ್ತು ಪೈಪ್ಲೈನ್ ಅನಿಲ ವಿಸ್ತರಿಸಿದಲ್ಲಿ, ಪೂರೈಕೆ ವೆಚ್ಚ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಎಲ್ಪಿಜಿ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಮತ್ತು ಸೌದಿ ಅರಾಮ್ಕೋ (Saudi Aramco) ನಿಗದಿಪಡಿಸುವ ಸಿಪಿ (Contract Price) ಮೇಲೆ ಅವಲಂಬಿತವಾಗಿರುತ್ತದೆ. ಜಾಗತಿಕ ರಾಜಕೀಯ ಘರ್ಷಣೆಗಳು ಅಥವಾ ಯುದ್ಧದಂತಹ ಪರಿಸ್ಥಿತಿ ಉಂಟಾದಾಗ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆ ಏರಿಕೆಯಾಗುತ್ತದೆ. ಸಿಲಿಂಡರ್ಗಳ ಕೊರತೆ ಅಥವಾ ಸಮಸ್ಯೆಯನ್ನು ನೀಗಿಸಲು ಸರ್ಕಾರವು ಈಗ ನಗರಗಳಲ್ಲಿ ನೇರವಾಗಿ ಪೈಪ್ ಮೂಲಕ ಅನಿಲ ನೀಡುವ ಪಿಎನ್ಜಿ ವ್ಯವಸ್ಥೆಯನ್ನು ವಿಸ್ತರಿಸುತ್ತಿದೆ. ಇದು ಸಿಲಿಂಡರ್ಗಳಿಗಿಂತ ಸುರಕ್ಷಿತ ಮತ್ತು ಸುಲಭವಾದ ಆಯ್ಕೆಯಾಗಿದೆ.
ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರಗಳು : ಈಗ ಆಮದು ವ್ಯವಸ್ಥೆ ಹದಗೆಟ್ಟಿರುವುದರಿಂದ ಕೇಂದ್ರ ಸರ್ಕಾರವು ತುರ್ತು ಅಧಿಕಾರ ಬಳಸಿ ದೇಶೀಯ ರಿಫೈನರಿಗಳಿಗೆ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ಆದೇಶಿಸಿದೆ. ಈಗಿನ ಈ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಕೆಲವು ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ರಿಫೈನರಿಗಳು ಗರಿಷ್ಠ ಪ್ರಮಾಣದ ಎಲ್ಪಿಜಿ ಉತ್ಪಾದಿಸುವಂತೆ ಕಡ್ಡಾಯಗೊಳಿಸಲಾಗಿದೆ. ದೇಶೀಯವಾಗಿ ಉತ್ಪಾದನೆಯಾಗುವ ಅನಿಲವನ್ನು ಮೊದಲು ಮನೆಬಳಕೆಯ ಎಲ್ಪಿಜಿ, ಸಾರಿಗೆಯ ಸಿಎನ್ಜಿ (CNG) ಮತ್ತು ಮನೆಗಳಿಗೆ ಪೂರೈಸುವ ಪಿಎನ್ಜಿಗೆ (PNG) ಶೇ 100ರಷ್ಟು ನೀಡಬೇಕು. ಇವುಗಳ ಅಗತ್ಯ ಪೂರೈಕೆಯಾದ ನಂತರವೇ ಪೆಟ್ರೋಕೆಮಿಕಲ್ ಅಥವಾ ವಿದ್ಯುತ್ ಸ್ಥಾವರಗಳಿಗೆ ಅನಿಲ ನೀಡಲು ನಿರ್ಧರಿಸಲಾಗಿದೆ. ರಿಫೈನರಿಗಳಲ್ಲಿ ಪ್ರೊಪೇನ್ ಮತ್ತು ಬ್ಯುಟೇನ್ ಸ್ಟ್ರೀಮ್ಗಳನ್ನು ಬೇರೆ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಬಳಸುವ ಬದಲಾಗಿ, ಕೇವಲ ಎಲ್ಪಿಜಿ ಉತ್ಪಾದನೆಗೆ ಮಾತ್ರ ಬಳಸುವಂತೆ ಆದೇಶಿಸಲಾಗಿದೆ. ಸರ್ಕಾರವು ಲಭ್ಯವಿರುವ ಅನಿಲವನ್ನು ಮೊದಲು ದೇಶೀಯ (ಗೃಹಬಳಕೆಯ) ಬಳಕೆಗಾಗಿ ಮೀಸಲಿಡುತ್ತಿದೆ. ಇದಿಷ್ಟು ಗ್ಯಾಸ್ ಕತೆ. ಕೇವಲ ಸಿಲಿಂಡರ್ ನ ಬಟನ್ ತಿರುಗಿಸಿ ಅಡುಗೆ ಸ್ಟವ್ ಮೇಲೆ ಬೇಯಿಸಿದಷ್ಟು ಸುಲಭವಲ್ಲ ಈ ಗ್ಯಾಸ್ ಬರುವ ಮಾರ್ಗ. ನಮ್ಮ ಒಂದು ಮನೆಯ ಒಳಗೆ ಒಂದು ಹೊತ್ತಿನ ಆಹಾರ ತಯಾರಾಗದಿದ್ದರೆ ನಮಗೆಲ್ಲಾ ವಿಪರೀತ ಕೋಪ ಬರ್ತದೆ. ಯಾರ್ಯಾರಿಗೋ ಬೈಯುವ ಎಂದೆಣಿಸುತ್ತದೆ. ಹಾಗಾದರೆ ನೂರ ನಲವತ್ತು ಕೋಟಿಗಿಂತಲೂ ಹೆಚ್ಚೇ ಜನಸಂಖ್ಯೆ ಇರುವ ನಮ್ಮ ಬ್ರಹತ್ ದೇಶದ ಚುಕ್ಕಾಣಿ ಹಿಡಿದ ನಾಯಕರಿಗೆ ಎಷ್ಟು ಒತ್ತಡವಿರಬಹುದು ಒಮ್ಮೆ ಊಹಿಸಿ!. ಈ ಕುರಿತು ನಾವು ಯಾರಾದರೂ ಅಲೋಚಿಸುತ್ತೇವೆಯೇ? ಖಂಡಿತಾ ಇಲ್ಲ. ಯಾಕೆಂದರೆ ಅಧಿಕಾರ ಪಡೆದ ಅದು ಅವರ ಕರ್ತವ್ಯ ಅಷ್ಟೇ. ಆದರೆ ಪ್ರಜೆಗಳಾಗಿ ನಾವು ಕನಿಷ್ಠ ಜವಾಬ್ದಾರಿ ವಹಿಸಿ. ಇಡೀ ಜಗತ್ತೇ ಎದುರಿಸುತ್ತಿರುವ ಸಮಸ್ಯೆಯನ್ನು ಸ್ವಲ್ಪವಾದರೂ ತಾಳ್ಮೆ ವಹಿಸಿ ಸಹಕರಿಸುತ್ತಾ. ಅನಾವಶ್ಯಕವಾಗಿ ಗುಲ್ಲೆಬ್ಬಿಸದೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಗಮನಕೊಟ್ಟು ಇದು ನನ್ಬೊಬ್ಬನ ಸಮಸ್ಯೆಯಲ್ಲ ಇದು ಇಡೀ ಜಗತ್ತಿಗೆ ಬಂದ ವಿಪತ್ತು ಎಂದು ದೊಡ್ಡ ಮನಸ್ಸು ಮಾಡೋಣ. ದೇವರೇ ಮನಸ್ಸುಕೊಟ್ಟು ಈ ಯುಧ್ದವನ್ನು ನಿಲ್ಲಿಸಲಿ. ಇದರಿಂದ ಜಗತ್ತಿಗೇ ಬಂದ ವಿಪತ್ತು ಅದರಿಂದಾದ ನಮ್ಮೆಲ್ಲರ ಆಪತ್ತು ದೂರವಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ ಆಗದೇ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ

























































































































