
ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಪುತ್ತೂರು ತಾಲೂಕು ಇವರ ಮಾರ್ಗದರ್ಶನದೊಂದಿಗೆ ಪುತ್ತೂರು ತಾಲೂಕು ಬಂಟರ ಮಹಿಳಾ ವಿಭಾಗದ ಸಾರಥ್ಯದಲ್ಲಿ ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗ, ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ಮಹಿಳಾ ದಿನಾಚರಣೆ ‘ಐಸಿರಿ -2026’, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾರ್ಚ್ 22ರಂದು ಪುತ್ತೂರು ಕೊಂಬೆಟ್ಟು ಎಂ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಿಧಾನ ಪರಿಷತ್ ಶಾಸಕಿ ಭಾರತಿ ಶೆಟ್ಟಿಯವರು ಮಾತನಾಡಿ, ಸಮಾಜದ ಪ್ರತಿಯೋರ್ವ ಮಹಿಳೆಗೂ ಗೌರವ ಇದೆ. ಸಮಾಜದಲ್ಲಿ ಬಂಟ ಮಹಿಳೆಯರಿಗೆ ಯೋಗ್ಯವಾದ ಸ್ಥಾನ ಇದೆ ಎಂದು ಹೇಳಿದ ಅವರು, ನಮ್ಮ ಸಮಾಜದಿಂದ ದೊರೆತ ಸನ್ಮಾನ ನನಗೆ ಅತ್ಯಂತ ಖುಷಿ ತಂದಿದೆ. ಪುತ್ತೂರು ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಮತ್ತು ತಂಡ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಬಂಟರ ವಿಭಾಗದ ಆಶ್ರಯದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕೆಲ್ಲಾ ಬಂಟ ಸಮಾಜದ ಎಲ್ಲರ ಪ್ರೋತ್ಸಾಹ ದೊರೆತಿದೆ. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದವರ ಪ್ರೋತ್ಸಾಹ ದೊರೆತಿದೆ. ಮಹಿಳಾ ಬಂಟರ ವಿಭಾಗದಿಂದ ಐಸಿರಿ ನೃತ್ಯ ತಂಡ ಮತ್ತು ಭಜನಾ ತಂಡವನ್ನು ಕಟ್ಟಿದ್ದೇವೆ. ಬಂಟ ಸಮಾಜದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಕಾಯಕವನ್ನು ನಾವು ಮಾಡಿದ್ದೇವೆ ಎಂಬ ಸಂತೃಪ್ತಿ ಇದೆ. ಈ ಬಾರಿ 80 ವರ್ಷ ದಾಟಿದ ಸಮಾಜದ ಮಾತೆಯರನ್ನು ಸನ್ಮಾನಿಸುವ ಕಾರ್ಯ ಒದಗಿ ಬಂದಿದೆ. ಎಲ್ಲಾ ಬಂಟ ಸಮಾಜ ಬಾಂಧವರ ಸಹಕಾರ ಮುಂದೆಯೂ ನಮಗೆ ಬೇಕು ಎಂದು ಹೇಳಿದರು.
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಬಂಟ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಇದೆ. ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ. ರೈ ಅವರ ನೇತೃತ್ವದಲ್ಲಿ ಮಹಿಳಾ ವಿಭಾಗ ಉತ್ತಮವಾದ ಕಾರ್ಯಕ್ರಮ ಸಂಘಟಿಸಿ ಸಮಾಜ ಬಾಂಧವರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಂಟ ಸಮಾಜದ ಹಿರಿಯರಿಗೆ ಸನ್ಮಾನಿಸಿ, ಅವರ ಆಶೀರ್ವಾದ ಪಡೆಯುವುದೇ ನಮ್ಮ ಸಮಾಜಕ್ಕೆ ಬಹುದೊಡ್ಡ ಗೌರವ ಎಂದು ಹೇಳಿದರು. ನಮ್ಮ ಸಮಾಜದ ಹಿರಿಯರ ಆಶಯದಂತೆ ನಾವು ಇಂದು ಬಂಟ ಸಮಾಜವನ್ನು ಕಟ್ಟುತ್ತಿದ್ದೇವೆ. ಯುವ ನಾಯಕ ಭಾಗ್ಯೇಶ್ ರೈ ಮುಂದಾಳತ್ವದಲ್ಲಿ ಯುವ ಬಂಟರ ವಿಭಾಗ ಹೊಸ ಕಲ್ಪನೆಯಂತೆ ಕಾರ್ಯರೂಪಕ್ಕೆ ಬರಲಿದೆ ಎಂದರು. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈಯವರು ಮಾತನಾಡಿ, ನಾನು 2001ರಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷನಾಗಿದ್ದ ವೇಳೆ ಮಹಿಳಾ ಸಂಘ ಸ್ಥಾಪನೆ ಮಾಡಲಾಯಿತು. ಪ್ರಥಮ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಆಯ್ಕೆಯಾದರು. ಅವರು ಮಹಿಳೆಯರನ್ನು ಒಟ್ಟು ಸೇರಿಸಿ, ಒಳ್ಳೆಯ ಕೆಲಸಕ್ಕೆ ಚಾಲನೆ ನೀಡಿದರು. ಆ ಬಳಿಕ ಕುಮುದಾ ಎಲ್.ಎನ್ ಶೆಟ್ಟಿ, ಮೀರಾ ರೈ, ಸಬಿತಾ ಭಂಡಾರಿಯವರು ಅಧ್ಯಕ್ಷೆಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರಸ್ತುತ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮ ಶೆಟ್ಟಿ, ಕೋಶಾಧಿಕಾರಿ ಅರುಣ ರೈ ಮತ್ತು ಅವರ ತಂಡ ಅತ್ಯುತ್ತಮ ರೀತಿಯಲ್ಲಿ ಬಂಟ ಮಹಿಳೆಯರನ್ನು ಒಗ್ಗೂಡಿಸಿ, ಉತ್ತಮ ಕಾರ್ಯಕ್ರಮ ಯೋಜನೆ ಮಾಡಿರುವುದು ತುಂಬಾ ಸಂತೋಷ ತಂದಿದೆ ಎಂದರು. ಶಾಸಕ ಅಶೋಕ್ ಕುಮಾರ್ ರೈ ಅವರ ಬೆಂಬಲದಿಂದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಪುತ್ತೂರಿನ ಮರೀಲ್ ನಲ್ಲಿ ಐದೂವರೆ ಎಕರೆ ಜಾಗ ಬಂಟರ ಸಂಘಕ್ಕೆ ದೊರೆತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಯವರು ಮಾತನಾಡಿ, ನಾವು ಜಗತ್ತಿನ ಯಾವುದೇ ದೇಶದಲ್ಲಿ ಇದ್ದರೂ ನಮ್ಮ ತಾಯ್ನಾಡು ಭಾರತವನ್ನು ಪ್ರೀತಿಸಬೇಕು. ನಮ್ಮ ತಂದೆ ತಾಯಿಯ ಆಶೀರ್ವಾದ ನಮಗೆ ಸದಾ ಬೇಕು ಎಂದು ಹೇಳಿದ ಅವರು ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈಯವರ ಅಪೇಕ್ಷೆಯಂತೆ ನಾವು ಯುಎಇ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮೂಲಕ ಒಂದು ಲಕ್ಷ ರೂಪಾಯಿಯನ್ನು ಬಂಟ ಸಮಾಜದ ಬಡ ಕುಟುಂಬದ ಯುವತಿಯ ಮದುವೆಗೆ ಕರಿಮಣಿ ಸರ ಖರೀದಿಗೆ ನೀಡಿದ್ದೇವೆ ಎಂದು ಹೇಳಿದರು. ಪುತ್ತೂರು ಫಿಲೋಮಿನಾ ಸ್ವಾಯತ್ತ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ| ಭಾರತಿ ಎಸ್ ರೈಯವರು ಮಾತನಾಡಿ, ಮಹಿಳೆಯರು ಸಹನಾಶೀಲತೆಯನ್ನು ಹೊಂದಿದ್ದಾರೆ. ಅದರಲ್ಲೂ ಬಂಟ ಸಮಾಜದ ಮಹಿಳೆಯರು ನಾಯಕತ್ವ ಗುಣವನ್ನು ಹೊಂದಿದ್ದಾರೆ. ಮನೆ ಕೆಲಸ, ಕಚೇರಿ ಕೆಲಸವನ್ನು ಸರಿದೂಗಿಸಿಕೊಂಡು ಮನೆ ಮಂದಿಯ ಬಗ್ಗೆ ಕಾಳಜಿ ಹೊಂದಿರುವ ಮಹಿಳೆಯರಿಗೆ ಸಮಾಜದಲ್ಲಿ ಯಾವಾಗಲೂ ಗೌರವ ಇದೆ. ಬಂಟರ ಸಂಘದ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು. ಮಿಸೆಸ್ ವರ್ಲ್ಡ್ ಪ್ರಶಸ್ತಿ ಪುರಸ್ಕೃತರಾದ ಮುಂಡೂರಿನ ಡಾ. ರಶ್ಮಾ ಎಂ. ಶೆಟ್ಟಿ ಅವರು ಮಾತನಾಡಿ, ಮಿಸೆಸ್ ವರ್ಲ್ಡ್ ಪ್ರಶಸ್ತಿ ಬಂದಿರುವುದಕ್ಕೆ ತಾಲೂಕು ಬಂಟರ ಮಹಿಳಾ ವಿಭಾಗದವರು ನನಗೆ ಸನ್ಮಾನ ಮಾಡಿರುವುದು ಖುಷಿ ತಂದಿದೆ. ನನ್ನ ಪ್ರತಿಭೆಗೆ ಸಹಕಾರವನ್ನು ನೀಡಿದ ನನ್ನ ಅತ್ತೆ, ಪತಿ ಹಾಗೂ ನನ್ನ ತಂದೆ- ತಾಯಿಗೆ ಋಣಿಯಾಗಿದ್ದೇನೆ ಎಂದರು.
ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ನ ಡಾ. ಆಶಾಜ್ಯೋತಿ ರೈಯವರು ಶುಭ ಹಾರೈಸಿದರು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಬಂಟರ ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ, ಬಂಟರ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆಯರಾದ ಕುಮುದಾ ಎಲ್.ಎನ್ ಶೆಟ್ಟಿ, ಮೀರಾ ಭಾಸ್ಕರ ರೈ, ನಿಕಟ ಪೂರ್ವ ಅಧ್ಯಕ್ಷೆ ಸಬಿತಾ ಭಂಡಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟರ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಅರುಣಾ ಡಿ. ರೈ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಶುಭ ರೈ ಪ್ರಾರ್ಥನೆಗೈದರು. ಮಾಧವಿ ಮನೋಹರ್ ರೈ ಹಾಗೂ ಶ್ಯಾಮಲಾ ಶೆಟ್ಟಿ ಸನ್ಮಾನಿತರ ಪರಿಚಯಗೈದರು. ಬೆಳಗ್ಗೆ ಕತಾರ್ ನ ಉದ್ಯಮಿ ರವಿ ಶೆಟ್ಟಿ ನೇಸರ ಅವರು ಆಗಮಿಸಿ, ಶುಭ ಹಾರೈಸಿದರು.
ಯುವ ಬಂಟರ ಸಂಘದ ಅಧ್ಯಕ್ಷ ಭಾಗ್ಯೇಶ್ ರೈ ಮತ್ತು ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು. ತಾಲೂಕು ಬಂಟರ ಮಹಿಳಾ ವಿಭಾಗದ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಬೆಳಗ್ಗೆ ಉಪಹಾರ, ಮಧ್ಯಾಹ್ನ ಸಸ್ಯಹಾರಿ ಮತ್ತು ಮಾಂಸಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರು ಬಂಟರ ಮಹಿಳಾ ವಿಭಾಗದ ಐಸಿರಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ಅಪರಾಹ್ನ ‘ತುಳುನಾಡ ಐಸಿರಿ’ ನೃತ್ಯ ರೂಪಕ ಮಹಿಳಾ ವಿಭಾಗದಿಂದ ನಡೆಯಿತು. ವಿನೋದ್ ರಾಜ್ ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ ರೈ ಮತ್ತು ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿಯವರ ಶಿಷ್ಯ ವೃಂದದಿಂದ ನೃತ್ಯ ಸಿಂಚನ ನಮ್ಮ ಟಿ.ವಿ. ಚಾನೆಲ್ ಪ್ರಸ್ತುತ ಪಡಿಸಿದ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಸೀಸನ್ -8ರಲ್ಲಿ ಪ್ರಥಮ ಸ್ಥಾನ ಪಡೆದ ಸೌಪರ್ಣಿಕಾ ಗುರುರಾಜ್ ಇವರ ತಂಡದಿಂದ ನೃತ್ಯ ನಡೆಯಿತು. ನಾಟಿವೈದ್ಯೆ ಮತ್ತು ಪ್ರಸೂತಿ ತಜ್ಞೆ ಅಂತಕ್ಕೆ ಶೆಟ್ಟಿ ಕೇವಳ ಪಟ್ಟೆ ಕುಂತೂರು, ರಾಂಕ್ ನೊಂದಿಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ದೀಪಿಕಾ ಎಸ್. ಶೆಟ್ಟಿ ಇಳಂತಾಜೆ, ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಗುರು ಎಚ್ ಶಾಂಭವಿ ಶೆಟ್ಟಿ, ನಾಟಿ ವೈದ್ಯೆ ಉಷಾ ಎಂ. ರೈ ಅಲಿಮಾರ, ಉದ್ಯಮಿ ದಿವ್ಯಾ ಕೆ. ಶೆಟ್ಟಿ, ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ನೇಹಾ ರೈ ಅವರುಗಳಿಗೆ ಸನ್ಮಾನ ಹಾಗೂ ಬಂಟ ಅಪ್ಪೆನಕುಲೆಗ್ ಐಸಿರದ ಮಾನಾದಿಗೆ ಮತ್ತು 80 ವರ್ಷಕ್ಕಿಂತ ಮೇಲಿನ ಬಂಟ ಸಮಾಜದ ಮಹಿಳೆಯರಿಗೆ ಗೌರವಾರ್ಪಣೆ ನಡೆಯಿತು.


























































































































