
ಜೀವನದಲ್ಲಿ ಸ್ಪಷ್ಟ ಉದ್ದೇಶ ಮತ್ತು ಅಬೇಧ್ಯ ಲಕ್ಷ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಬಲ್ಲವರು ಮಹಾದಾನಿ, ಕಲೆ ಸಂಸ್ಕೃತಿ ಪೋಷಕ, ಕಾಯಕ ರತ್ನ ಶಶಿಧರ್ ಶೆಟ್ಟಿ ಬರೋಡ ಅವರು. ಅಪಾರ ದೈವಭಕ್ತರಾದ ಶಶಿಧರ ಶೆಟ್ಟಿ ಅವರು ತಾನು ನಂಬಿಕೊಂಡು ಬಂದ ದೈವದೇವರ ಪ್ರೇರಣೆಯೋ ಎಂಬಂತೆ ತನಗೆ ಪೂರ್ತಿ ಅಪರಿಚಿತ ಗುಜರಾತ್ ಪ್ರಾಂತ್ಯದಲ್ಲಿ ಆರಂಭಿಸಿದ ‘ಶಶಿ ಕ್ಯಾಟರರ್ಸ್’ ಎಂಬ ಆರಂಭಿಕ ಉದ್ಯಮ ಕ್ರಮೇಣ ಲಾಭದಾಯಕವಾಗಿ ಪ್ರಗತಿ ಹೊಂದಿದ ಕಾರಣ ಶೆಟ್ಟರಲ್ಲಿ ಉದ್ಯಮ ಮೂಲಕ ಜೀವನದಲ್ಲಿ ತನ್ನ ಲಕ್ಷ್ಯ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿ ನಂತರದ ದಿನಗಳಲ್ಲಿ ಕ್ಯಾಂಟೀನ್, ಹೊಟೇಲ್ ಉದ್ಯಮಗಳನ್ನು ಇತರ ಪ್ರಾಂತ್ಯಗಳಿಗೂ ವಿಸ್ತರಿಸಿ ಇಂದು ಶ್ರೀಯುತರು ಓರ್ವ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಶಶಿಧರ ಶೆಟ್ಟಿ ಬರೋಡ ಎಂಬ ಹೆಸರು ಇಂದು ಬಹುಶ್ರುತ ಜನಜನಿತ. ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಆರ್ಯೋಕ್ತಿಯಂತೆ ತಾನು ಹುಟ್ಟಿ ಬೆಳೆದ ನೆಲ ಅಲ್ಲಿನ ಜನರ ಕುರಿತು ಅಪಾರವಾಗಿ ಚಿಂತಿಸುವ ಶಶಿ ಅಣ್ಣನವರು ತನ್ನ ಆದಾಯದ ಕೆಲ ಅಂಶಗಳನ್ನು ತನ್ನೂರಿನ ದೈವಸ್ಥಾನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವ್ಯಯಿಸುತ್ತಾರೆ. ಅಶಕ್ತರಿಗೆ, ರೋಗಿಗಳಿಗೆ, ಬಡವರಿಗೆ, ಕಲಾವಿದರಿಗೆ ಸಹಾಯ ಹಸ್ತ ನೀಡುತ್ತಾ ಉದಾರ ದಾನಿ ಶಶಿ ಅಣ್ಣ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ ಎಲ್ಲರೊಳಗೊಂದಾಗು ಮಂಕು ತಿಮ್ಮ’ ಎಂಬ ಕಗ್ಗದ ಸಾಲುಗಳನ್ನು ಜೀವನಾದರ್ಶವಾಗಿ ಸ್ವೀಕರಿಸಿದ ಶಶಿಧರ ಶೆಟ್ಟಿ ಬರೋಡ ಅವರಿಂದ ಉಪಕೃತರಾದ ಬಡವರು, ಬಡ ಕಲಾವಿದರು, ಸಂಘ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಅನೇಕ. ಇವರ ಸಜ್ಜನಿಕೆ ಕಲಾಪ್ರೇಮ ದಾನಗುಣಗಳನ್ನು ಗಮನಿಸಿದ ಐಕಳ ಹರೀಶ್ ಶೆಟ್ಟಿ ಹಾಗೂ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರು ತನ್ನ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಪಟ್ಲ ಫೌಂಡೇಶನ್ ನಲ್ಲಿ ತುಂಬಾ ಗುರುತರ ಜವಾಬ್ದಾರಿಯ ಸ್ಥಾನವನ್ನು ನೀಡಿ ಗೌರವಿಸಿದ್ದಾರೆ. ನಂತರದ ದಿನಗಳಲ್ಲಿ ಪಟ್ಲ ಫೌಂಡೇಶನ್ ಹೊಸ ದಿಶೆಯತ್ತ ಹೆಜ್ಜೆ ಇಟ್ಟು ಭರವಸೆಯ ಆಶಾಕಿರಣದ ಕಡೆಗೆ ಮುಖ ಮಾಡಿದೆ. ಈ ಬಗ್ಗೆ ಪಟ್ಲ ಸತೀಶ್ ಶೆಟ್ಟಿ ಅವರು ಶಶಿ ಅಣ್ಣನ ಕುರಿತು ಅಭಿಮಾನ ಪಡುತ್ತಾರೆ ಹಾಗೂ ಕೃತಜ್ಞರಾಗಿದ್ದಾರೆ. ಬಡತನವನ್ನು ಅನುಭವಿಸಿದ ತಾನು ಬಡವರ ಸಂಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅವರ ಮುಖದಲ್ಲಿ ನಗು ಕಾಣುವ ಕುರಿತು ಚಿಂತಿಸುತ್ತಾ ಒಂದಿಲ್ಲೊಂದು ವಿಧದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ತಾನು ಮಾಡಿದ ದಾನ ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದೆ ಆತ್ಮಸಂತೋಷ ಪಟ್ಟುಕೊಳ್ಳುವ ಜಾಯಮಾನ ಶ್ರೀಯುತರದ್ದು.
ಅದೆಷ್ಟೋ ಗ್ರಾಮಗಳ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉದಾರ ದೇಣಿಗೆ ನೀಡುವುದರ ಜೊತೆಗೆ ಸಕ್ರಿಯವಾಗಿ ಭಾಗವಹಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವ ಶೆಟ್ಟರು ತನ್ನ ಈ ಸ್ಥಿತಿಗೆ ಭಗವಂತನ ಹಾಗೂ ಹೆತ್ತವರ ಆಶೀರ್ವಾದ ಕಾರಣ ಎಂದು ನುಡಿಯುವಾಗ ಭಾವುಕರಾಗುವ ಶಶಿ ಅಣ್ಣ ದಾನಮಾಡಿ ಕೆಟ್ಟವರಿಲ್ಲ ಎಂಬ ಸಿದ್ಧಾಂತಕ್ಕೆ ಬದ್ಧರಾಗಿ ಜೀವನ ಸಾಗಿಸುತ್ತಾ ವರ್ಷದಿಂದ ವರ್ಷಕ್ಕೆ ಹೊಸ ಉದ್ಯಮಗಳ ಹುಟ್ಟು ಹಾಕುತ್ತಲೇ ಓರ್ವ ಕರ್ಮಠ ಗೃಹಸ್ಥ ಜೀವನ ಸಾಗಿಸುತ್ತಿದ್ದಾರೆ. ‘ಸು ಫ್ರಮ್ ಸೋ’ ಎಂಬ ಯಶಸ್ವೀ ಚಲನಚಿತ್ರ ನಿರ್ಮಿಸಿ ಚಿತ್ರ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದು, ಹೊಸ ಯುವಕರಿಗೆ ಒಳ್ಳೆಯ ಬುದ್ಧಿವಾದ ಮಾರ್ಗದರ್ಶನ ನೀಡುತ್ತಾರೆ. ಶಶಿಧರ ಶೆಟ್ಟಿ ಅವರು ಈಗಾಗಲೇ ತನ್ನ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದು ಓರ್ವ ಜನನಾಯಕನಾಗಿ ರಾಜಕೀಯಕ್ಕಿಳಿಯಬೇಕೆಂಬ ಒತ್ತಾಸೆ ಅವರ ಅಭಿಮಾನಿಗಳದ್ದು. ರಾಜಕೀಯದಲ್ಲಿ ಶಶಿ ಅಣ್ಣನವರಿಗೆ ಉಜ್ವಲ ಅವಕಾಶ ಇದೆ. ಅವರ ಅಭಿಮಾನಿಗಳ ಆಸೆ ಕೈಕೂಡಲಿ ಇಷ್ಟದೇವ ಧರ್ಮಸ್ಥಳ ಮಂಜುನಾಥ ಹಾಗೂ ಅಣ್ಣಪ್ಪ ದೈವ ಹರಸಲಿ ಎಂಬುವುದೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ವತಿಯಿಂದ ಶುಭ ಹಾರೈಕೆಗಳು.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು


























































































































