
ನಾಡಿನ ದೊರೆ ಸಿದ್ದರಾಮಯ್ಯನವರು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧಿಸುವ ಸೂಚನೆ ಕೊಟ್ಟಿದ್ದಾರೆ. ಇದು ಕೇವಲ ಆಡಳಿತಾತ್ಮಕ ಆದೇಶವಲ್ಲ. ಇದು ಸಮಾಜದ ಮನಸ್ಸಿನ ದುರಸ್ತಿಗೆ ಪ್ರಭುತ್ವ ಇಟ್ಟ ಗಟ್ಟಿ ಹೆಜ್ಜೆ. ರಸ್ತೆ, ಸೇತುವೆ, ನೀರು, ವಿದ್ಯುತ್, ಉದ್ಯೋಗ ಇವೆಲ್ಲಾ ಅಭಿವೃದ್ಧಿಯ ಅಳತೆಗೋಲುಗಳು. ಆದರೆ ಮಕ್ಕಳ ಮನಸ್ಸನ್ನು ಕಟ್ಟುವುದು, ಅವರ ಒಳಗಿನ ಮನುಷ್ಯನನ್ನು ಉಳಿಸುವುದು ಇದು ಇನ್ನೂ ದೊಡ್ಡ ಅಭಿವೃದ್ಧಿ. ಎರಡೂ ಸಮಾನ ತೂಕದ ಕೆಲಸಗಳು. ಒಂದನ್ನು ಬಿಟ್ಟು ಮತ್ತೊಂದು ನಡೆಯದು. ಇವತ್ತಿನ ಬಹು ಪಾಲು ಶಾಲಾ ಕಾಲೇಜುಗಳ ತರಗತಿಗಳು ಮೌನವಾಗಿವೆ. ಹಾಗಂತ ಅದು ನೆಮ್ಮದಿಯ ಶಾಂತಿ ಅಲ್ಲ. ನಿರಾಸಕ್ತಿ. ಕಣ್ಣುಗಳು ತೆರೆದಿವೆ, ಆದರೆ ಮನಸ್ಸು ಮುಚ್ಚಿಕೊಂಡಿದೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಜಗತ್ತು ಅಲ್ಲಿಯೇ ಸಿಕ್ಕಿಬಿಡುತ್ತದೆ. ಆದರೆ ಆ ಜಗತ್ತಿನಲ್ಲಿ ಮನುಷ್ಯತ್ವ ಇಲ್ಲ. ಅಲ್ಲಿರುವುದು ವೇಗ, ಸ್ಪರ್ಧೆ, ಪ್ರದರ್ಶನ, ಬಯಕೆ. ಪ್ರೀತಿ, ತಾಳ್ಮೆ, ಸಹನೆ, ಸಂವೇದನೆ ಇವೆಲ್ಲಾ ಮೌನವಾಗಿ ಮಣ್ಣಾಗುತ್ತಿವೆ. ಮೊಬೈಲ್ ಮಕ್ಕಳ ಕೈಯಲ್ಲಿ ಒಂದು ಸಾಧನವಾಗದೆ, ಅವರ ಮನಸ್ಸನ್ನು ಆಳುವ ಸ್ವಾಮಿಯಾಗಿಬಿಟ್ಟಿದೆ.


ಖಂಡಿತ ಮಗುವಿನ ಮನಸ್ಸು ನದಿಯಂತೆ. ಅದಕ್ಕೆ ದಿಕ್ಕು ಬೇಕು. ಅಣೆಕಟ್ಟು ಬೇಕು. ಹರಿವಿನ ನಿಯಂತ್ರಣ ಬೇಕು. ಇಲ್ಲವಾದರೆ ಅದು ಪ್ರವಾಹವಾಗಿ ತನ್ನದೇ ನೆಲವನ್ನು ಕೊಚ್ಚಿಕೊಂಡು ಹೋಗುತ್ತದೆ. ಮೊಬೈಲ್ ಆ ನದಿಗೆ ಬಂದ ಅಚಾನಕ್ ಪ್ರವಾಹ. ಅದನ್ನು ನಿಷೇಧಿಸುವುದು ಅಂದರೆ ಮಕ್ಕಳಿಂದ ಜಗತ್ತನ್ನು ಕಿತ್ತುಕೊಳ್ಳುವುದು ಅಲ್ಲ. ಅವರೊಳಗಿನ ಜಗತ್ತನ್ನು ಉಳಿಸುವ ಪ್ರಯತ್ನ. ಪುಸ್ತಕ, ಗೆಳೆಯ, ಆಟ, ನೆಲ, ಮರ, ಹಕ್ಕಿ, ಮಳೆ, ಮಾತು, ಅಪ್ಪ ಅಮ್ಮ ಅಕ್ಕ ಅಣ್ಣ ತಂಗಿ ಇವೆಲ್ಲಾ ಮತ್ತೆ ಮಕ್ಕಳ ಬದುಕಿಗೆ ಮರಳಲಿ ಎಂಬ ಆಶಯ. ಶಾಲೆ ಎಂದರೆ ಪಾಠ ಮಾತ್ರವಲ್ಲ. ಅದು ಬದುಕಿನ ಮೊದಲ ಪಾಠ ಶಾಲೆ. ಅಲ್ಲಿ ಮಗು ಮನುಷ್ಯನಾಗುವುದನ್ನು ಕಲಿಯಬೇಕು. ಕೇಳುವುದನ್ನು, ಕಾಯುವುದನ್ನು, ಹಂಚಿಕೊಳ್ಳುವುದನ್ನು, ಸೋಲನ್ನು ಸಹಿಸಿಕೊಳ್ಳುವುದನ್ನು ಕಲಿಯಬೇಕು. ಇವೆಲ್ಲಕ್ಕೆ ಮೊಬೈಲ್ ತಡೆಯಾಗಿದೆ. ಒಂದು ಬೆರಳಿನ ಸ್ಪರ್ಶದಲ್ಲಿ ಸಿಗುವ ಸುಲಭ ಜಗತ್ತು, ಹೃದಯದ ಶ್ರಮವನ್ನು ಬೇಡುವುದಿಲ್ಲ. ಆದರೆ ಮನುಷ್ಯನಾಗಲು ಹೃದಯದ ಶ್ರಮವೇ ಬೇಕು. ಆದ್ದರಿಂದ ಈ ನಿಷೇಧ ಒಂದು ತಾತ್ಕಾಲಿಕ ಕಟ್ಟುನಿಟ್ಟಲ್ಲ. ಇದು ಭವಿಷ್ಯದ ಮೇಲೆ ಇಟ್ಟ ಭರವಸೆ. ಮಕ್ಕಳ ಕೈಯಿಂದ ಮೊಬೈಲ್ ಕಳಚಿಕೊಂಡರೆ, ಅವರ ಕೈಯಲ್ಲಿ ಮತ್ತೆ ಪುಸ್ತಕ, ಕಾಗದ, ಪೆನ್, ಗೆಳೆಯನ ಕೈ, ಮಣ್ಣಿನ ಸ್ಪರ್ಶ ಇವಲ್ಲಾ ಬಂದು ಕೂತರೆ, ನಾವು ನಿಜವಾದ ಅಭಿವೃದ್ಧಿಯ ದಾರಿಯಲ್ಲಿ ನಡೆದಂತೆ. ಇದು ಮೊಬೈಲ್ ವಿರುದ್ಧದ ಯುದ್ಧವಲ್ಲ. ಇದು ಮನುಷ್ಯತ್ವದ ಪರದ ಹೋರಾಟ. ಮಕ್ಕಳ ಮನಸ್ಸನ್ನು ಉಳಿಸಿಕೊಳ್ಳುವ ಸಣ್ಣ ಆದರೆ ಅತ್ಯಂತ ಅಗತ್ಯವಾದ ಹೆಜ್ಜೆ.
ಬರಹ : ನರೇಂದ್ರ ರೈ ದೇರ್ಲ

























































































































