
ಸಿಂಧೂರಂ ಸೌಂದರ್ಯಾ ಸಾಧನಂ ಎಂಬ ಮಾತಿದೆ. ಅದರಂತೆ ಕುಂಕುಮ ಧರಿಸುವ ನಾರಿಯನ್ನು ನೋಡಿದರೆ ಸಾಕ್ಷಾತ್ ಮಂಗಳ ಗೌರಿಯಂತೆ ಎನ್ನುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಡುವುದು ಮುತ್ತೈದೆತನದ ಸಂಕೇತವಾಗಿದೆ. ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ, ಹೆಣ್ಣು ಮಕ್ಕಳು ಕುಂಕುಮ ಇಡುವುದು ಸಂಪ್ರದಾಯವಾಗಿದೆ. ಭ್ರೂಮಧ್ಯ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ. ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳ ಗ್ರಂಥೀಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ. ಇನ್ನು ಕುಂಕುಮ ಹಚ್ಚುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. “ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅರಶಿನ ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ. ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಕುಂಕುಮವನ್ನೇ ತಂದು ಪೂಜೆಗೆ ಬಳಸುವುದು ಉತ್ತಮ.


ಕುಂಕುಮ ಹಚ್ಚುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಕುಂಕುಮ ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಸಾತ್ವಿಕ ಚೈತನ್ಯವು ವ್ಯಕ್ತಿಯ ಕಡೆಗೆ ಆಕರ್ಷಿತವಾಗಿರುತ್ತದೆ ಮತ್ತು ವ್ಯಕ್ತಿಯ ಭಾವ ಜಾಗೃತಿಯಾಗುತ್ತದೆ. ಅಲ್ಲದೇ ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದ್ದರಿಂದ ಸ್ತ್ರೀಯರು ಬಿಂದಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಉತ್ತಮ. ಕೇವಲ ವಿವಾಹಿತ ಮಹಿಳೆಯರು ಮಾತ್ರವಲ್ಲದೇ ಎಲ್ಲಾ ಹೆಣ್ಣು ಮಕ್ಕಳು ಹಣೆಯ ಮೇಲೆ ಕುಂಕುಮ ಇಡುವುದು ಶುಭ ಸೂಚಕವಾಗಿದೆ. ಕುಂಕುಮದ ತಿಲಕವು ಮನಸ್ಸಿನ ಕಣ್ಣನ್ನು ಪ್ರತಿನಿಧಿಸುತ್ತದೆ ಹಾಗೂ ದೈವಧ್ಯಾನ ಮತ್ತು ಪಾರಮಾರ್ಥಿಕ ಜ್ಞಾನೋದಯಗಳಿಗೆ ಸಂಬಂಧಪಟ್ಟಿರುತ್ತದೆ.

























































































































