
ಯುವಾವಸ್ಥೆಯಲ್ಲಿ ಗರಿಕೆದರುವ ಬಯಕೆ ಹಕ್ಕಿಗಳು ಸ್ವಚ್ಛಂದವಾಗಿ ಹಾರಾಡಲು ವಿಶಾಲ ಆಕಾಶ ಅರ್ಥಾತ್ ಅವಕಾಶಗಳು ಒದಗಿ ಬರಬೇಕು. ಓರ್ವ ರೂಪದರ್ಶಿಯಾಗಿ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಸಂಪಾದಿಸಿದ ಮೇಲೆ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದ ಬಲು ಪ್ರಸಿದ್ಧಿ ಪಡೆದ ಯುವ ಮಾಡೆಲ್ ಸಂದೀಪ್ ಶೆಟ್ಟಿ. ಬಾಲ್ಯದಿಂದಲೂ ನಟನೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಸಂದೀಪ್ ಅನೇಕ ಅವಕಾಶಗಳ ಸದುಪಯೋಗ ಪಡಿಸಿಕೊಂಡು ರಂಗ ಭೂಮಿಯಲ್ಲಿ ಈಗಾಗಲೇ ಮಿಂಚಿದ್ದಾರೆ. ಸುಂದರ ಅಂಗಸೌಷ್ಠವ ಹೊಂದಿದ್ದ ಸಂದೀಪ್ ತನಗೆ ಮಾಡೆಲಿಂಗ್ ಕ್ಷೇತ್ರ ಸರಿ ಹೊಂದಬಹುದೆಂಬ ಭಾವ ಬಲಿತ ಪರಿಣಾಮ ಆ ಕ್ಷೇತ್ರದಲ್ಲಿ ಅಪಾರ ಶ್ರದ್ಧೆ, ಶ್ರಮಗಳ ಮೂಲಕ ಯಶಸ್ಸನ್ನು ಸಂಪಾದಿಸಿ ಅನೇಕ ಉತ್ಪನ್ನಗಳ ರೂಪದರ್ಶಿಯಾಗಿ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಅಭಿನಯಕ್ಕೆ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿರುವ ಸಂದೀಪ್ ತಾನು ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ಕುರಿತ ವಿಶೇಷ ತರಬೇತಿ ಪಡೆಯುವ ಹೊತ್ತಿಗೆ ಕನ್ನಡ ಚಿತ್ರರಂಗದ ಘಟಾನುಘಟಿ ನಿರ್ದೇಶಕರು ಸೆಲೆಬ್ರಿಟಿ ಲೆಕ್ಚರರ್ ಆಗಿ ಬರುತ್ತಿದ್ದಾಗ ಅವರಿಂದ ಅನೇಕ ಮಹತ್ವದ ಸೂಕ್ಷಾತಿ ಸೂಕ್ಷ್ಮ ವಿಚಾರಗಳನ್ನು ಗ್ರಹಿಸಿಕೊಂಡರು.

ದಿವಂಗತ ಪುರಂದರ ಶೆಟ್ಟಿ ಮತ್ತು ಸರೋಜ ಪುರಂದರ ಶೆಟ್ಟಿ ದಂಪತಿಯರ ಸುಪುತ್ರ ಡಾ| ಸಂದೀಪ್ ಶೆಟ್ಟಿ ಅವರಿಗೆ ಸೌಮ್ಯಾ ಶೆಟ್ಟಿ ಎಂಬ ಅಕ್ಕ ಹಾಗೂ ಸಂಧ್ಯಾ ಶೆಟ್ಟಿ ಹೆಸರಿನ ತಂಗಿ ಜೊತೆಗೆ ಸಂತೋಷ್ ಶೆಟ್ಟಿ ಎಂಬ ಸಹೋದರರಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಜಯಂತಿ ಶೆಟ್ಟಿ ಎಂಬವರೊಂದಿಗೆ ಸಪ್ತಪದಿ ತುಳಿದ ಸಂದೀಪ್ ಅವರಿಗೆ ಸಮನ್ವಿ ಎಂಬ ಹೆಣ್ಣು, ಸಮರ್ಥ್ ಹೆಸರಿನ ಗಂಡು ಕ್ರಮವಾಗಿ ಐದು ವರ್ಷ ಮತ್ತು ಮೂರು ವರ್ಷದ ಮಕ್ಕಳಿದ್ದಾರೆ. ವಿಜ್ಞಾನ ಅತಿಥಿ ಸತ್ಕಾರ ವಿಭಾಗದಲ್ಲಿ ಪದವಿ ಹಾಗೂ ಇಂಟೀರಿಯರ್ ಡಿಸೈನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೇಧಾವಿ ಸಂದೀಪ್ ಶೆಟ್ಟಿ. ನಟನೆ ಶಿಪ್ಪಿಂಗ್ ಹಾಗೂ ಮಾನವ ಸಂಪನ್ಮೂಲ ವಿಷಯಗಳ ಡಿಪ್ಲೋಮಾ ಕೂಡಾ ಇವರಲ್ಲಿದೆ. ದುಬೈಯಲ್ಲಿ ಇಂಡಿಯನ್ ಕಾನ್ಸುಲೇಟ್ ಪಾಸ್ ಪೋರ್ಟ್ ಸಬ್ಮಿಷನ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವೂ ಸಂದೀಪ್ ಶೆಟ್ಟಿ ಅವರಿಗಿದೆ. SSK CONSTRUCTION ಹಾಗೂ SSK FILM PRODUCTIONS ಎಂಬ ಸ್ವಂತ ಕಂಪನಿ ತೆರೆದು ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿವಮೊಗ್ಗದ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಗೌರವಾಧ್ಯಕ್ಷರಾಗಿ ಹಲವಾರು ವರ್ಷಗಳಿಂದ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅಖಿಲ ಭಾರತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕರು ಹಾಗೂ ಅಧ್ಯಕ್ಷರಾಗಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವುಮೆನ್ಸ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಸ್ಥಾಪಕ ಹಾಗೂ ಛೇರ್ಮನ್ ಆಗಿ ಮಹತ್ವದ ಸಾಧನೆ ಮಾಡುತ್ತಾ ಇದ್ದಾರೆ. CATCA ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಕಳೆದ 8 ವರ್ಷಗಳಿಂದ ಕೋಸ್ಟಲ್ ಪ್ರೀಮಿಯರ್ ಲೀಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ತಂಡದ ಕಪ್ತಾನ ಹಾಗೂ ಸ್ಟಾರ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ. ಮಂಗಳೂರಿನ ನಮ್ಮ ಟಿವಿ ಆಯೋಜಿಸಿದ್ದ ಡಾನ್ಸ್ ಡಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿದ ಹೆಗ್ಗಳಿಕೆಯೂ ಸಂದೀಪ್ ಅವರಿಗಿದೆ. 2008 ರಲ್ಲಿ ಬದುಕು ಎಂಬ ತುಳು ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರಜಗತ್ತಿಗೆ ಪ್ರವೇಶ ಮಾಡಿದ ಸಂದೀಪ್ ಶೆಟ್ಟಿ ಇಷ್ಟೇ ಅಲ್ಲದೆ ಮೆಮೋರೆಬಲ್ ಒನ್ ಹಾಗೂ ಸುಬಗೆ ಎಂಬ ಕಿರುಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇವರು 2017 ರ ಮಿ. ಕರ್ನಾಟಕ ಹಾಗೂ 2018 ರ ಮಿ. ಇಂಡಿಯಾ ಸ್ಫರ್ಧೆಯ ವಿಜೇತರೂ ಹೌದು. ಅದಕ್ಕೂ ಮುನ್ನ ನಡೆದ ನಮಸ್ತೆ ಇಂಡಿಯಾ ಸ್ಫರ್ಧೆಯ ವಿಜೇತರಾಗಿ ಹೊರಹೊಮ್ಮಿದ್ದ ಸಂದೀಪ್ ಅವರಿಗೆ ಅನೇಕ ಅವಕಾಶಗಳು ತಾವಾಗೆ ಒಲಿದು ಬಂದವು. ಮಾಡೆಲಿಂಗ್ ಜಗತ್ತಿನಲ್ಲಿ ಸಂದೀಪ್ ಶೆಟ್ಟಿ ಅವರದು ದೊಡ್ಡ ಹೆಸರು. ಹೀಗೆ ವೈವಿಧ್ಯಮಯ ಆಸಕ್ತಿ ಜೊತೆಗೆ ಮಹತ್ವಾಕಾಂಕ್ಷೆ, ಹಿಡಿದ ಕೆಲಸ ಮುಗಿಸಿಯೇ ತೀರುವೆ ಎಂಬ ಛಲ ಇಂದು ಸಂದೀಪ್ ಅವರನ್ನು ಒಬ್ಬ ಬಹು ಬೇಡಿಕೆಯ ನಟ ಹಾಗೂ ಮಾಡೆಲ್ ಎಂಬಂತೆ ಗುರುತಿಸಿದೆ.
ವೈಯುಕ್ತಿಕ ಜೀವನದಲ್ಲಾಗಲಿ ವ್ಯವಹಾರ ಕ್ಷೇತ್ರದಲ್ಲಾಗಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜೀವನ ನಡೆಸುತ್ತಿರುವ ಸಂದೀಪ್ ಶೆಟ್ಟಿಯವರು 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಲ್ಲಿ ಗುರುತಿಸಿಕೊಂಡು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಚ್ಚರಿ ಮೂಡಿಸಿದ್ದರು. ಸಮಾಜ ಸೇವೆಗಾಗಿ ಡಾಕ್ಟರೇಟ್ ಪಡೆದಿರುವ ಸಂದೀಪ್ ಶೆಟ್ಟಿಯವರಿಗೆ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಸಹಿತ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ. ಮಾಡೆಲಿಂಗ್, ಕ್ರೀಡೆ, ನಟನೆ, ಸಂಘಟನೆ ಹೀಗೆ ಅನೇಕ ಆಯಾಮಗಳಲ್ಲಿ ಹೆಸರು ಮಾಡುವ ಹೆಬ್ಬಯಕೆ ಹೊಂದಿದ ಬಂಟರ ಯುವಕನಿಗೆ ಸರ್ವ ವಿಧದ ಯಶ, ಕೀರ್ತಿ, ವೈಭವ ಇರಲಿ. ನಮ್ಮ ಕುಲ ದೇವರು ಅನುಗ್ರಹಿಸಲಿ ಎಂಬುವುದು ಬಂಟ ಸಾಧಕರ ಪರಿಚಯ ಮೂಲಕ ವ್ಯಾಪಕ ಪರಿಚಿತ ಬಂಟ್ಸ್ ನೌ ಮಾಧ್ಯಮ ಪರಿವಾರದ ಸರ್ವರ ಹಾರೈಕೆಗಳು.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು























































































































