
ಫೆಬ್ರವರಿ 11 ರಂದು ಜನತಾದಳ (ಜಾತ್ಯಾತೀತ) ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿರುವ ಸುಧಾಕರ್ ಎಸ್ ಶೆಟ್ಟಿಯವರಿಗೆ ಮೈಸೂರು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವ್ಯಾಪಾರ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾಕರ್ ಶೆಟ್ಟಿ ಅವರು ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು. ಮೈಸೂರು ಚೇಂಬರ್ ಆಫ್ ಕಾಮರ್ಸ್ನ ಹಿರಿಮೆ ಹಾಗೂ ಗರಿಮೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸುಧಾಕರ್ ಶೆಟ್ಟಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು 2003 ಮತ್ತು 2008 ರಲ್ಲಿ ಉಪಾಧ್ಯಕ್ಷರಾಗಿ, ನಂತರ 2012 ರಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಚೇಂಬರ್ ಆಫ್ ಕಾಮರ್ಸ್ನ ಘನತೆಯನ್ನು ರಾಜ್ಯವ್ಯಾಪಿಯಾಗಿ ಹರಡಿದರು. ಅಲ್ಲದೇ 2018 ರಲ್ಲಿ ಎಫ್ಕೆಸಿಸಿಐ (FKCCI) ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಉದ್ಯಮ ವಲಯದಲ್ಲಿ ತಮ್ಮ ಶಕ್ತಿಶಾಲಿ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ಇಂತಹ ಸಮೃದ್ಧ ಅನುಭವ ಹೊಂದಿದವರು ಇಂದು ಜೆಡಿಎಸ್ ಪಕ್ಷದ ರಾಷ್ಟ್ರಮಟ್ಟದ ನಾಯಕನಾಗಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.



ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅನೇಕ ಯುವಕರು ಇಂದು ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ರಾಜ್ಯದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಉದ್ಯಮಶೀಲತೆಯನ್ನು ಉತ್ತೇಜಿಸುವ ಅವರ ದೃಷ್ಟಿಕೋನ ಅನೇಕ ಯುವಕರ ಬದುಕಿಗೆ ದಿಕ್ಕು ನೀಡಿದೆ. ಈ ಹಿನ್ನೆಲೆ ಸುಧಾಕರ್ ಶೆಟ್ಟಿ ಅವರು ಜೆಡಿಎಸ್ ಪಕ್ಷದ ವಕ್ತಾರರಾಗಿ ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವಲ್ಲಿ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಲಿದ್ದಾರೆ ಎಂಬ ವಿಶ್ವಾಸವನ್ನು ಮೈಸೂರು ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಲಿಂಗರಾಜು ಅವರು ವ್ಯಕ್ತಪಡಿಸಿದರು.





















































































































