
ಸಮಾಜದ ಸೇವೆ ಮಾಡುವ ಅವಕಾಶ ದೊರೆತಿದ್ದು, ಸಮಾಜದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಶ್ರಮಿಸುವುದಾಗಿ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷ ರಾಜೇಂದ್ರ ವಿ ಶೆಟ್ಟಿಯವರು ಹೇಳಿದರು. ಹುಬ್ಬಳ್ಳಿಯ ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಬಂಟರ ಬಾಂಧವ್ಯ’ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ವಿಜಯಾನಂದ ಶೆಟ್ಟಿಯವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ವ್ಯಕ್ತಿಯಾಗಿ ಸಮಾಜದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಭಾಗ್ಯ ದೊರೆತಿರುವುದು ನನ್ನ ಪುಣ್ಯ. ಸಂಘದ ಸದಸ್ಯತ್ವ ಶುಲ್ಕ ಪಾವತಿಸಲು ಹಣವಿಲ್ಲದ ಸಂದರ್ಭದಲ್ಲಿ ಸಮಾಜ ಹಾಗೂ ಸಂಘವು ನನ್ನನ್ನು ಅಪ್ಪಿಕೊಂಡಿತ್ತು. ಎರಡು ವರ್ಷದ ಅವಧಿಯಲ್ಲಿ ಸಮಾಜದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಪೂರಕವಾಗಿ ಕಾರ್ಯಗಳನ್ನು ಮಾಡುತ್ತೇವೆ. ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆದು ಸಂಘಕ್ಕೆ ಹಾಗೂ ಸಮಾಜಕ್ಕೆ ಆದಾಯ ಮೂಲವನ್ನಾಗಿ ವೃದ್ಧಿಸುವ ಕೆಲಸ ಮಾಡುತ್ತೇವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.


ನಿಕಟಪೂರ್ವ ಅಧ್ಯಕ್ಷರಾದ ವಿಜಯಾನಂದ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸತೀಶ್ಚಂದ್ರ ಶೆಟ್ಟಿ ಹಾಗೂ ಸುಗ್ಗಿ ಸುಧಾಕರ ಶೆಟ್ಟಿಯವರು ಮಾತನಾಡಿದರು. ಸಮಾಜದ ಮಕ್ಕಳು, ಮಹಿಳೆಯರಿಂದ ರಸಮಂಜರಿ, ನೂತನ ವಧು ವರರಿಗೆ ಹಿರಿಯರಿಂದ ಗೌರವ ಸನ್ಮಾನ, ಜೂನಿಯರ್ ರಾಜ್ ಕುಮಾರ್, ಜೂನಿಯರ್ ಅಂಬರೀಶ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಕುಮಾರ್ ಸಾನು ಅವರಿಂದ ರಸಮಂಜರಿ ನೆರವೇರಿತು. ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ನೂತನ ಸಮಿತಿ ಉಪಾಧ್ಯಕ್ಷರಾದ ಸುಧೀರ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಖಜಾಂಚಿ ದಿನೇಶ್ ಶೆಟ್ಟಿ, ಸಹ ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





























































































































