
ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರಕ್ಕೆ ಮುಹೂರ್ತವಾಗಿದ್ದು, ಈ ಚಿತ್ರದ ಮೂಲಕ ಉದ್ಯಮಿ, ರಾಜಕೀಯ ಮುಖಂಡ, ಸಮಾಜಸೇವಕ ಅನಿಲ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಸಾಚಿ ಬಿಂದ್ರಾ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಅನಿಲ್ ಶೆಟ್ಟಿ ಹಾಗೂ ಅಭಿಜಿತ್ ಮಹೇಶ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚಿತ್ರಿಕರಣ ಆರಂಭವಾಗುವ ನೀರಿಕ್ಷೆ ಇದ್ದು ನಿರ್ದೇಶಕ ಸಿಂಪಲ್ ಸುನಿ ತಮ್ಮ ತಂಡದೊಂದಿಗೆ ಪ್ರೀ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.


ಚಿತ್ರವು ಎಐ, ಯುವಜನತೆ, ವೇಗವಾಗಿ ರೂಪಾಂತರಗೊಳ್ಳುತ್ತಿರುವ ಡಿಜಿಟಲ್ ಜಗತ್ತು ಸೇರಿದಂತೆ ಸಮಕಾಲೀನ ವಿಷಯಗಳ ಸುತ್ತ ಮೂಡಿ ಬರುತ್ತಿರುವ ಲಂಬೋದರ 2.0 ಸಾಮಾಜಿಕ ಥ್ರಿಲ್ಲರ್ ಜಾನರ್ ಸಿನಿಮಾ. ಅನಿಲ್ ಶೆಟ್ಟಿ ಮಾತನಾಡಿ, ಈ ಚಿತ್ರ ನಾವು ಇಂದು ಬದುಕುತ್ತಿರುವ ಜಗತ್ತನ್ನು ಸ್ಪಷ್ಟವಾಗಿ ತೋರಿಸುತ್ತದೆ. ತಂತ್ರಜ್ಞಾನವು ನಮ್ಮ ಭಾವನೆಗಳು ಮತ್ತು ನಿರ್ಧಾರಗಳನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಸಿಂಪಲ್ ಸುನಿ ನಿರ್ದೇಶನದಲ್ಲಿ ಈ ರೀತಿಯ ಚಿತ್ರದೊಂದಿಗೆ ನಾನು ನಟನಾಗುತ್ತಿರುವುದು ನಿಜಕ್ಕೂ ವಿಶೇಷ ಎಂದರು.


















































































































