
ಯುಎಇಯ ಪ್ರಸಿದ್ಧ ತುಳು ನಾಟಕ ತಂಡ ಗಮ್ಮತ್ ಕಲಾವಿದರ್ ಯುಎಇ 2011ರಲ್ಲಿ ಸ್ಥಾಪನೆಗೊಂಡು ತುಳು ರಂಗಭೂಮಿಯನ್ನು ಸಕ್ರಿಯವಾಗಿ ಮರಳುನಾಡಿನಲ್ಲಿ ಬೆಳೆಸಿಕೊಂಡು ಬರುತ್ತಿದ್ದು, ಗುಣಮಟ್ಟದ ನಾಟಕ ಪ್ರದರ್ಶನಗಳು, ಪರಿಪಕ್ವವಾದ ಅಭಿನಯಗಳ ಮೂಲಕ ಕೊಲ್ಲಿ ರಾಷ್ಟ್ರದಲ್ಲಿ ಮಾತ್ರವಲ್ಲದೆ ತಾಯ್ನಾಡಿನ ತುಳು ರಂಗಭೂಮಿಯಲ್ಲಿ ತನ್ನದೇ ಆದ ಗೌರವಾನ್ವಿತ ಸ್ಥಾನವನ್ನು ಗಳಿಸಿದೆ. ರಂಗಭೂಮಿಯ ಚಟುವಟಿಕೆಗಳಷ್ಟೇ ಅಲ್ಲದೆ, ಗಮ್ಮತ್ ಕಲಾವಿದರ್ ಯುಎಇ ಕಳೆದ ಒಂದು ದಶಕಕ್ಕಿಂತ ಹೆಚ್ಚು ಕಾಲ ಸ್ವದೇಶದಲ್ಲಿನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಸಹಾಯ ಹಸ್ತ ನೀಡುತ್ತಾ ಸಾಂಸ್ಕೃತಿಕ ಪ್ರಚಾರದ ಜೊತೆಗೆ ಅರ್ಥಪೂರ್ಣ ಸಾಮಾಜಿಕ ಸೇವೆಯನ್ನು ಸಮತೋಲನದಿಂದ ಮುಂದುವರೆಸುತ್ತಿರುವುದು ಗಮನಾರ್ಹ ಅಂಶ.



ಗಮ್ಮತ್ ಕಲಾವಿದರ್ ಯುಎಇ ತಮ್ಮ ಮುಂದಿನ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಬಲ ತುಂಬುವ ಉದ್ದೇಶದಿಂದ 2026–27 ಅವಧಿಯ ನೂತನ ಕಾರ್ಯಕಾರಿ ಸಮಿತಿಯನ್ನು 18 ಜನವರಿ 2026ರಂದು ದುಬೈಯ ಬರ್ ದುಬೈಯಲ್ಲಿರುವ ಗ್ರ್ಯಾಂಡ್ ಎಕ್ಸೆಲ್ಸಿಯರ್ ಹೋಟೆಲ್ನ ಘಜಲ್ ರೆಸ್ಟೋರೆಂಟ್ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ರಚಿಸಲಾಯಿತು. ವಾರ್ಷಿಕ ಸಭೆಯು ಸಂಸ್ಥೆಯ ಗೌರವ ಪೋಷಕರು ಹಾಗೂ ಕನ್ನಡ ಚಿತ್ರ ನಿರ್ಮಾಪಕರಾದ ಹರೀಶ್ ಬಂಗೇರ ಹಾಗೂ ನಾಟಕ ನಿರ್ದೇಶಕ “ರಂಗಸಾರಥಿ”ವಿಶ್ವನಾಥ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಜರುಗಿದ್ದು, ಸಭೆಯಲ್ಲಿ ಹಿರಿಯ ನಾಟಕ ಹಾಗೂ ಕಿರುಚಿತ್ರ ಕಲಾವಿದರಾದ ವಾಸು ಕುಮಾರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಾಟಕ ಹಾಗೂ ಯಕ್ಷಗಾನ ಕಲಾವಿದೆಯಾದ ಶ್ರೀಮತಿ ಸಮಂತಾ ಗಿರೀಶ್ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಅನುಭವಿ ರಂಗ ಕಲಾವಿದೆಯಾದ ಶ್ರೀಮತಿ ಜೆನೆಟ್ ಸಿಕ್ವೇರಾ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಹರೀಶ್ ಬಂಗೇರ ಅವರು ಪೋಷಕರಾಗಿ ಮುಂದುವರಿಯಲಿದ್ದು, ನಿರ್ದೇಶಕ “ರಂಗಸಾರಥಿ” ವಿಶ್ವನಾಥ್ ಶೆಟ್ಟಿ ಅವರು ತಂಡದ ಕಲಾತ್ಮಕ ಮಾರ್ಗದರ್ಶನವನ್ನು ಮುಂದುವರೆಸಲಿದ್ದಾರೆ. ನೂತನ ಅಧ್ಯಕ್ಷರಾದ ವಾಸು ಕುಮಾರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮರಳುನಾಡಿನಲ್ಲಿ ತುಳು ರಂಗಭೂಮಿಯ ಬೆಳವಣಿಗೆ ಹಾಗೂ ತುಳು ಸಂಸ್ಕೃತಿಯ ಸಂರಕ್ಷಣೆಗೆ ಪೋಷಕರು, ತುಳು ರಂಗಭೂಮಿ ಅಭಿಮಾನಿಗಳು, ಸದಸ್ಯರು ಮತ್ತು ಹಿತೈಷಿಗಳು ತಮ್ಮ ಸಹಕಾರ ಮತ್ತು ಬೆಂಬಲವನ್ನು ಮುಂದುವರೆಸಬೇಕಾಗಿ ಮನವಿ ಮಾಡಿದ್ದಾರೆ.
ಚಿತ್ರ, ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

















































































































