ಆಳ್ವಾಸ್ ಕಾಲೇಜಿನ ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಾಹಿತ್ಯಿಕ ಸಂಘ ‘ಮೆಟಾಫೋರಿಯಾ’ದ ಉದ್ಘಾಟನೆ ಹಾಗೂ ವಿಭಾಗದ ಹೊಸ ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭ ಕಾಲೇಜಿನ ಆಡಿಯೋ–ವಿಜುವಲ್ ಹಾಲ್ನಲ್ಲಿ ಶುಕ್ರವಾರ ನಡೆಯಿತು. ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ಆಳ್ವ, ಇಂತಹ ವೇದಿಕೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವನ್ನು ಉದ್ದೀಪನಗೊಳಿಸಬಲ್ಲದು. ಸಾರ್ವಜನಿಕ ಭಾಷಣ ಕೌಶಲ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆತ್ಮವಿಶ್ವಾಸವು ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಅದು ಅಭ್ಯಾಸದಿಂದ ಬೆಳೆಸಿಕೊಳ್ಳಬಹುದಾದ ಗುಣ. ಭಾಷಣದ ವೇಳೆ ಭಯಕ್ಕೆ ಒಳಗಾಗದೆ, ಸರಳ ಹಾಗೂ ಸ್ಪಷ್ಟ ಸಂವಹನಕ್ಕೆ ಒತ್ತು ನೀಡಬೇಕು ಎಂದು ಹೇಳಿದರು. ಭಾಷಣದ ಸಂಧರ್ಭದಲ್ಲಿ ಬಾಡಿ ಲಾಂಗ್ವೇಜ್, ಪೋಶ್ಚರ್, ಉಚ್ಚಾರಣೆ, ಶಬ್ದ ಸ್ಪಷ್ಟತೆ, ಧ್ವನಿಯ ಮೇಲೆ ಹಿಡಿತ ಮತ್ತು ಶ್ರೋತೃಗಳೊಂದಿಗೆ ನೇರ ಸಂವಾದದ ಮಹತ್ವವನ್ನು ವಿವರಿಸಿದರು. ನೀವು ಮಾತನಾಡುವ ವೇಳೆಯಲ್ಲಿ ಜನರು ನಿಮ್ಮ ಮಾತಿಗೆ ಹೇಗೆ ಸ್ಫಂದಿಸುತ್ತಾರೆ ಎಂಬುದು ಮುಖ್ಯ ಎಂದರು. ನಿಧಾನಗತಿಯಲ್ಲಿ ಮಾತನಾಡುವ ಮೂಲಕ ಸಭಿಕರನ್ನು ತಲುಪಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ| ಟಿ.ಕೆ.ರವೀಂದ್ರನ್ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ಜುಲಿಯನಾ ರೋಡ್ರಿಗಸ್, ಪದವಿ ವಿಭಾಗದ ಸಂಯೋಜಕಿ ಚಂದ್ರಿಕಾ ಶೆಟ್ಟಿಗಾರ್, ಕಾರ್ಯಕ್ರಮ ಸಂಯೋಜಕ ರವಿ ಶೆಣೈ ಇದ್ದರು. ವಿಭಾಗದ ವತಿಯಿಂದ ಆಯೋಜಿಸಿದ್ದ ಪದ್ಯ ರಚನೆ ಸ್ಪರ್ಧೆಯಲ್ಲಿ ದ್ವಿತೀಯ ಬಿಎಸ್ಸಿ ಎಫ್ಎನ್ಡಿ ವಿಭಾಗದ ಪ್ರೇರಣಾ ಜೈನ್ ಪ್ರಥಮ ಸ್ಥಾನಗಳಿಸಿದರೆ, ದ್ವಿತೀಯ ಸ್ಥಾನವನ್ನು ದ್ವಿತೀಯ ಎಂಎಸ್ಡಬ್ಲ್ಯು ಇನ್ಶರಾಯಿ ಈಯಾಸಿ ವಾಂಖಾರ್ ಪಡೆದುಕೊಂಡರು. ಬಹುಮಾನ ವಿಜೇತರಿಗೆ ನಗದು ಬಹುಮಾನವನ್ನು ನೀಡಲಾಯಿತು. ನಿಯಾತಿ ಅಮೀನ್ ನಿರೂಪಿಸಿ, ಫಲ್ಗುಣಿ ಹಾಗೂ ಸಿಂಚನ ಪ್ರಾರ್ಥಿಸಿ, ವಿಲ್ಟನ್ ರೋಡ್ರಿಗಸ್ ವಂದಿಸಿದರು.

















































































































