ನಿರ್ಧರಿಸಿದ ಗುರಿಯೆಡೆಗೆ ಕನಸನ್ನು ಮಾತ್ರ ಕಾಣದೆ ಅದರಡೆಗೆ ಯೋಜಿತ ಕೆಲಸಗಳನ್ನು ಮಾಡುತ್ತಾ ಸಾಗುವುದು ಮುಖ್ಯ. ಅನಗತ್ಯ ವಿಷಯಗಳಿಂದ ದೂರವಿದ್ದರೆ ಶೈಕ್ಷಣಿಕ ಸಾಧನೆ ಸುಲಭ. ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರಾಗಿರುವ ಜ್ಞಾನಸುಧಾ ವಾರ್ಷಿಕೋತ್ಸವ ದಲ್ಲಿ ಭಾಗವಹಿಸಿ ನನ್ನ ಮನಸ್ಸಿನ ಮಾತುಗಳನ್ನು ಸಾಧನೆಯ ಹಾದಿಯಲ್ಲಿರುವ ಮಕ್ಕಳೆದುರು ಹಂಚಿಕೊಳ್ಳುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದು ಬೈಂದೂರಿನ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉದಯವಾಣಿ ಮಣಿಪಾಲದ ನಿವೃತ್ತ ಹಿರಿಯ ಉಪಸಂಪಾದಕರಾದ ಶ್ರೀ ನಿತ್ಯಾನಂದ ಪಡ್ರೆ ಮಾತನಾಡಿ ಶಿಕ್ಷಣ ಕೇವಲ ಸಂಬಳ ಕೊಡುವ ಉದ್ಯೋಗವನ್ನು ಕೊಡಿಸುವ ಮಾಧ್ಯಮವಾಗದೆ ಜೀವನ ಕಟ್ಟಿಕೊಡುವ ನೈಜ ಶಿಕ್ಷಣವಾಗಬೇಕು ಎಂದು ಅವರು ತನ್ನ ಜೀವನದಲ್ಲಿ ಕಂಡುಕೊಂಡ ನೈಜ ನಿದರ್ಶನಗಳು ಮಕ್ಕಳಿಗೆ ತಿಳಿಸುವರು ಮಾತನಾಡಿದರು.

ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಮಣಿಪಾಲ್ ಹೈ ಸ್ಕೂಲ್ ಟ್ರಸ್ಟ್ ಸಂಚಾಲಕರಾದ ಶ್ರೀ ಪ್ರಕಾಶ್ ಶೆಟ್ಟಿ, ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಶ್ರೀಮತಿ ವಿದ್ಯಾವತಿ ಎಸ್ ಶೆಟ್ಟಿ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂತೋಷ್, ಮಣಿಪಾಲ ಜ್ಞಾನಸುಧಾ ಉಪ ಪ್ರಾಂಶುಪಾಲರುಗಳಾದ ಶ್ರೀ ರವಿ ಜಿ. ಹಾಗೂ ಶ್ರೀ ಹೇಮಂತ್, ವಿದ್ಯಾರ್ಥಿ ನಾಯಕರುಗಳಾದ ತನ್ಮಯಿ ಭಟ್ ಮತ್ತು ಅನಿರುದ್ಧ್ ಕಾಮತ್ ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ ಸ್ವಾಗತಿಸಿ, ಆಂಗ್ಲ ಭಾಷೆ ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.









































































































