ಗಣಿತನಗರ : ಭಾರತ ಆರ್ಥಿಕವಾಗಿ, ಉದ್ಯಮರಂಗದಲ್ಲಿ, ಕೈಗಾರಿಕಾ ರಂಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮರ್ಥವಾಗಿ, ಸಮೃದ್ಧವಾಗಿ, ಸ್ವಾಭಿಮಾನಿಯಾಗಿ ಹಾಗೂ ಶಕ್ತಿಶಾಲಿಯಾಗಿ ಬೆಳೆದು ನಿಂತಿದೆ. ಇಂದು ಭಾರತ ಬದಲಾದರು, ವಂದೇ ಮಾತರಂ ಬದಲಾಗದೆ ಕೋಟಿ ಕೋಟಿ ಭಾರತೀಯರಲ್ಲಿ ಇಂದಿಗೂ ಅನುರಣಿಸುತ್ತಿದೆ ಉಡುಪಿ-ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ವಂದೇ ಮಾತರಂ – 150 ಐತಿಹಾಸಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್ ಮಾತನಾಡಿ, ದೇವರ ಬಗ್ಗೆ ಭಜನೆ ಭಕ್ತಿ ಗೀತೆ ಹೇಗೆ ಮುಖ್ಯವಾಗುವುದೋ, ಅದೇ ರೀತಿ ದೇಶದ ಬಗ್ಗೆ ಭಕ್ತಿ ಬೇಕು ಅಂದರೆ ವಂದೇ ಮಾತರಂ ಗೀತೆಯನ್ನು ಹೃದಯಪೂರ್ವಕವಾಗಿ ನಮಗೆ ನಾವೇ ಅರ್ಪಿಸಿಕೊಳ್ಳಬೇಕು.

ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ವಂದೇ ಮಾತರಂ ಗೀತೆ ನಮ್ಮ ದ್ವನಿಯಾಗಿದೆ. ಕೋಟ್ಯಾಂತರ ಭಾರತೀಯರ ಮಂತ್ರ ಶಕ್ತಿಯಾಗಿದೆ ಎಂದರು. ಇದೇ ಸಂದರ್ಭ ಎಲ್ಲಾ ವಿದ್ಯಾರ್ಥಿಗಳು ವಂದೇ ಮಾತರಂನ್ನು ಸಾಮೂಹಿಕವಾಗಿ ಹಾಡಿ, ಸ್ವದೇಶಿ ಮಂತ್ರ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಪಿ.ಆರ್.ಒ ಶ್ರೀಮತಿ ಜ್ಯೋತಿಪದ್ಮನಾಭ ಭಂಡಿ ವಂದಿಸಿ, ಉಪನ್ಯಾಸಕ ಶ್ರೀ ಸಂತೋಷ್ ನೆಲ್ಲಿಕಾರು ಸ್ವಾಗತಿಸಿದರು.









































































































