ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ । ಎಲ್ಲರೊಳಗೊಂದಾಗು – ಮಂಕುತಿಮ್ಮ ।। ಡಿ.ವಿ.ಜಿ.ಯವರ ಈ ಕಗ್ಗದ ಸಾಲುಗಳು ನಮ್ಮ ಬದುಕಿನ ಸಾರ್ಥಕತೆಯನ್ನು ಬಲು ಅರ್ಥಪೂರ್ಣವಾಗಿ ತಿಳಿಸಿದೆಯಾದರೂ ಅದನ್ನು ಜೀವನದುದ್ದಕ್ಕೂ ಪಾಲಿಸಿ ಬದುಕು ಕಟ್ಟಿಕೊಂಡಿರುವ ಬಲು ವಿರಳ ಸಜ್ಜನರಲ್ಲಿ ಒಬ್ಬರೆನಿಸಿಕೊಂಡಿರುವ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ)ಯವರ ಪರಿಕಲ್ಪನೆಯ ಮಾತೃ ವಾತ್ಸಲ್ಯದ ಪ್ರತೀಕದ ಸೇವಾ ಸಂಸ್ಥೆ ಭವಾನಿ ಫೌಂಡೇಶನ್ ಗೆ ಇದೀಗ ಹತ್ತರ ಹರೆಯ. ಅಂಬೆಗಾಲಿಡುತ್ತಾ ಇದೀಗ ತನ್ನ ಹೆಜ್ಜೆಗಳನ್ನು ತನ್ನ ಸೇವಾ ಕೈಂಕರ್ಯದ ಮುಖೇನ ರಾಜ್ಯ ಮಾತ್ರವಲ್ಲದೇ ರಾಷ್ಟ್ರವ್ಯಾಪಿಯಾಗಿ ಗುರುತಿಸಿಕೊಂಡಿರುವುದರ ಹಿಂದೆ ಭವಾನಿ ಫೌಂಡೇಶನ್ ಸ್ಥಾಪನೆಯ ಒಂದು ರೋಚಕ ಕಥೆಯಿದೆ. ಹೌದು ಹತ್ತು ವರುಷದ ಹಿಂದೆ ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ವೃತ್ತಿ ಮಾಡುತ್ತಿದ್ದ ಸಿಬ್ಬಂದಿಯಾದ ಸಂದೀಪ್ ಉದನೆ ಎಂಬುವರು ಭೀಕರ ವಾಹನ ಅಪಘಾತಕ್ಕೀಡಾಗಿ ಅಂಗಾಂಗ ಕಳೆದುಕೊಂಡು ನಿಷ್ಕ್ರಿಯವಾಗಿ ಕೋಮಾವಸ್ಥೆಗೆ ತಲುಪಿದಾಗ ಅವರನ್ನು ಕಲಂಬೊಲಿಯ ಎಂ.ಜಿ.ಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ವೈದ್ಯರು ಪರೀಕ್ಷಿಸಿ ಇವರು ಬಹಳಷ್ಟು ರಕ್ತವನ್ನು ಕಳೆದುಕೊಂಡಿದ್ದಾರೆ. ಇವರ ಚಿಕಿತ್ಸೆಗೆ ಬೃಹತ್ ಪ್ರಮಾಣದ ರಕ್ತದ ಅಗತ್ಯತೆ ಇದೆ ಎಂದಾಗ ತಕ್ಷಣ ಕುಸುಮೋದರ ಶೆಟ್ಟಿಯವರು ಕಾರ್ಯಪ್ರವರ್ತರಾಗಿ ಜೀಕ್ಷಿತ್ ಶೆಟ್ಟಿ ಮತ್ತು ನವೀನ್ ಶೆಟ್ಟಿಯವರೊಂದಿಗೆ ಭವಾನಿ ಕಂಪನಿಯ ಎಲ್ಲಾ ಸಿಬ್ಬಂದಿಗಳಿಗೆ ರಕ್ತದಾನ ಮಾಡುವಂತೆ ಮನವಿ ಮಾಡಿದರು. ಕ್ಷಣಾರ್ಧದಲ್ಲಿ 48 ಯುನಿಟ್ ರಕ್ತ ಸಂಗ್ರಹಗೊಂಡಿದ್ದು ಆಸ್ಪತ್ರೆಯ ಅಧಿಕಾರಿಗಳನ್ನು ದಿಗ್ಬ್ರಮೆಗೊಳಿಸಿತ್ತು. ಸಿಬ್ಬಂದಿಯ ಕೈಕಾಲು ಕತ್ತರಿಸುವ ಪರಿಸ್ಥಿತಿ ಎದುರಾದ ಸಂಧರ್ಭ ಮನ ನೊಂದುಕೊಂಡ ಕೆ.ಡಿ ಶೆಟ್ಟಿಯವರು ಇಂತಹ ಅಸಾಯಕ ಜನರ ಸೇವೆಗಾಗಿ ತಾನೊಂದು ಒಂದು ಸೇವಾ ಸಂಸ್ಥೆಯನ್ನು ಸ್ಥಾಪಿಸಿಬೇಕೆಂಬ ಸಂಕಲ್ಪ ಮಾಡಿ ಆ ಮುಖೇನ ನೂರಾರು ಜನರ ಜೀವ ಉಳಿಸುವ ಯೋಜನೆಗೆ ಮುಂದಾದರು. ಇದಕ್ಕೆ ಪೂರಕವಾಗಿ ಅವರ ಧರ್ಮಪತ್ನಿ ಸರಿತಾ ಶೆಟ್ಟಿ, ಪುತ್ರ ಜೀಕ್ಷಿತ್ ಶೆಟ್ಟಿ, ಪುತ್ರಿ ಶಿಖಾ ಶೆಟ್ಟಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಕೈ ಜೋಡಿಸಿದರು. ಈ ನಿಟ್ಟಿನಲ್ಲಿ ಅವರೆಲ್ಲರ ಸಹಕಾರದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಿತವಾಗಿ ದೀನರಿಗೆ ಸಹಾಯ ಮಾಡುವ ಮತ್ತು ಸಮಾಜ ಸೇವೆ ಮಾಡುವ ಸದುದ್ದೇಶದಿಂದ ತನ್ನ ಜನ್ಮದಾತೆ ಭವಾನಿ ಅಮ್ಮನ ಹೆಸರಿನಲ್ಲಿ “ಭವಾನಿ ಫೌಂಡೇಶನ್” ಎಂಬ ಸಂಸ್ಥೆಯನ್ನು 2014 ರ ಮಾರ್ಚ್ 24ರಂದು ಸ್ಥಾಪಿಸಿದರು. ಒಂದು ಭೀಕರ ದುರಂತವು ಈ ಫೌಂಡೇಶನ್ ನ ಸ್ಥಾಪನೆಯ ಮುನ್ನುಡಿಗೆ ಸಾಕ್ಷಿಯಾಯಿತು. ಈ ಸಂಸ್ಥೆಯು ಭವಾನಿ ಗ್ರೂಪ್ ಆಫ್ ಕಂಪನೀಸ್ನ ಒಂದು ಅಂಗ ಸಂಸ್ಥೆಯಾಗಿದ್ದು, ಸ್ಥಾಪನೆಯಾದ ವರ್ಷದಲ್ಲಿ ಚಾರಿಟೇಬಲ್ ಟ್ರಸ್ಟ್ ಆಗಿ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನೋಂದಣಿಗೊಂಡಿದೆ.

“ಬಿದ್ದವರೆನ್ನತ್ತದಿರೆ ಜೀವಿತಕೆ ಬೆಲೆಯೇನು? ಸಂತಾಪ ಪರಿಹಾರ ಮನುಜ ಗುಣಧರ್ಮ ಯಾರು? ಅತಿ ತಗ್ಗುವರೋ ಅವರು ಮೇಲೇರುವರು ಅನುಕಂಪೆ ದಿವ್ಯತೆಯೆ ಮುದ್ದುರಾಮ” ಕೆ. ಸಿ. ಶಿವಪ್ಪನವರ ವಚನದ ಈ ಸಾಲುಗಳು ಕೆ.ಡಿ ಶೆಟ್ಟಿಯವರ ಸೇವಾ ಕಾರ್ಯಕ್ಕೆ ಪ್ರೇರಕವಾಗಿ ಮೂಡಿದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಮದುವೆ, ವೈದ್ಯಕೀಯ ನೆರವು, ಶೈಕ್ಷಣಿಕ ನೆರವು, ವಿಧವಾ ಮಾಶಾಸನ, ಸಾಮಾಜಿಕ, ಧಾರ್ಮಿಕ ಹೀಗೆ ಕಷ್ಟ ಎಂದು ಬಂದ ದೀನರ ಬಾಳಿಗೆ ಅಭಯಹಸ್ತದ ದೀವಿಗೆಯಾಗಿ ಜಾತಿ, ಧರ್ಮ, ಭೇದ ಮರೆತು ವಾರ್ಷಿಕವಾಗಿ ಸುಮಾರು 50ಲಕ್ಷ ರೂಪಾಯಿಗೂ ಮಿಕ್ಕಿದ ಸೇವಾ ಕಾರ್ಯವು ಭವಾನಿ ಫೌಂಡೇಶನ್ ಮುಖೇನ ನಡೆಯುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ವಿಶೇಷವೇನೆಂದರೆ ಈ ಸಂಸ್ಥೆಯ ಸೇವಾ ಕಾರ್ಯಗಳಿಗೆ ಆರ್ಥಿಕ ನಿಧಿಯನ್ನು ಯಾವುದೇ ದಾನಿಗಳಿಂದ ಪಡೆಯದೇ ತನ್ನ ಉದ್ಯಮದ ಲಾಭಾಂಶದ ಒಂದು ಪಾಲನ್ನು ಮತ್ತು ಭವಾನಿ ಶಿಪ್ಪಿಂಗ್ ಕಂಪನಿಯಲ್ಲಿ ದುಡಿಯುವ ಉದ್ಯೋಗಿಗಳು ಸ್ವಇಚ್ಛೆಯಿಂದ ವೇತನದ ಒಂದಂಶವನ್ನು ಉದಾರ ಮನಸ್ಸಿನಿಂದ ನೀಡುತ್ತಿದ್ದಾರೆ. ಈ ನೆಲೆಯಲ್ಲಿ ಭವಾನಿ ಫೌಂಡೇಶನ್ ಒಂದು ಮಾದರಿ ಸೇವಾ ಸಂಸ್ಥೆಯಾಗಿ ಕಳೆದ ಹತ್ತು ವರ್ಷಗಳಿಂದ ಅಶಕ್ತರ ಪಾಲಿನ ಆಶಾಕಿರಣವಾಗಿ ಬೆಳಗುತ್ತಿದೆ. ಭವಾನಿ ಫೌಂಡೇಶನ್ ನಲ್ಲಿ ಅಧ್ಯಕ್ಷರಾಗಿ ಕುಸುಮೋದರ ಡಿ. ಶೆಟ್ಟಿ, ಉಪಾಧ್ಯಕ್ಷರಾಗಿ ಧರ್ಮಪಾಲ ಯು. ದೇವಾಡಿಗ, ಕಾರ್ಯದರ್ಶಿಯಾಗಿ ಶಿಖಾ ಅಭಿಷೇಕ್ ಶೆಟ್ಟಿ, ಕೋಶಾಧಿಕಾರಿಯಾಗಿ ನವೀನ್ ಸಂಜೀವ ಶೆಟ್ಟಿ ರೆಂಜಾಳ, ಜೊತೆ ಕಾರ್ಯದರ್ಶಿಯಾಗಿ ರಾಜಲಕ್ಷ್ಮಿ ಅಲಟೆ, ಜೊತೆ ಕೋಶಾಧಿಕಾರಿಯಾಗಿ ಅಶುತೋಷ್ ಪಾಟೀಲ್, ಟ್ರಸ್ಟಿಗಳಾಗಿ ಸರಿತಾ ಕೆ. ಶೆಟ್ಟಿ, ಜೀಕ್ಷಿತ್ ಕೆ. ಶೆಟ್ಟಿ, ಸದಸ್ಯರುಗಳಾಗಿ ಪಂಡಿತ್ ನವೀನ್ಚಂದ್ರ ಸನಿಲ್, ಕರ್ನೂರು ಮೋಹನ್ ರೈ, ದಿನೇಶ್ ಶೆಟ್ಟಿ, ರವಿ ಉಚ್ಚಿಲ್, ರಂಜನಾ ಕೇಣಿ, ದೃಶ್ಯ ಶೆಟ್ಟಿ ಇವರೆಲ್ಲರೂ ಸೇವೆ ಸಲ್ಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೇ ಬರುವ ನವೆಂಬರ್ 15 ರಂದು ಭವಾನಿ ಫೌಂಡೇಶನ್ ತನ್ನ 10ನೇ ಸಂವತ್ಸರದ ಸಂಭ್ರಮವನ್ನು ಬಂಟ್ಸ್ ಸೆಂಟರ್ ಜೂಹಿ ನಗರ್ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕುಸುಮೋದರ ಡಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಘನ ಸರಕಾರದ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮಾತ್ರವಲ್ಲದೆ ರಾಜಕೀಯ ಧುರೀಣರೂ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಮಾತೃ ವಾತ್ಸಲ್ಯದ ಆರಾಧಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ
ಕಾಲು ಒದ್ದೆಯಾಗದೆ ಕಡಲನ್ನಾದರೂ ದಾಟಬಹುದು. ಕಣ್ಣು ಒದ್ದೆಯಾಗದೆ ಬದುಕನ್ನು ದಾಟಲು ಸಾಧ್ಯವಿಲ್ಲ. ಸಿರಿಯಜ್ಜಿಯ ಈ ಮಾರ್ಮಿಕ ಮಾತಿನಲ್ಲಿ ಜೀವನದ ಸತ್ಯತೆ ಅಡಗಿದೆ. ಈ ಸತ್ಯತೆಯ ಬದುಕಿನಲ್ಲಿ ಜೀವನ ಕಟ್ಟಿಕೊಂಡು ಇದೀಗ ಅಸಂಖ್ಯ ಆಶಕ್ತರ ಬಾಳಿನ ಕಣ್ಣೀರೀರೊರೆಸುವ ಸೇವಾ ಮಾಣಿಕ್ಯರಾದ ಮಾತೃ ವಾತ್ಸಲ್ಯದ ಪ್ರತೀಕ ಕುಸುಮೋದರ ಡಿ. ಶೆಟ್ಟಿಯವರ ಜೀವನ ಸಾಧನೆ ಯಶೋಗಾಥೆಯ ಕಿರು ಚಿತ್ರಣ ಇಲ್ಲಿದೆ. “ನೂರು ನೋವಿನ ನಡುವೆ ಒಂದು ನಗೆಯು ಕಾಡಿ ನೆಪವು ಸಿಕ್ಕಿದೆ ಬದುಕಿಗೆ, ದುಃಖ ಕಡಲಿನ ನಡುವೆ ಸುಖದ ನದಿಯು ಹರಿದು ದಾಹ ಹೆಚ್ಚಿದೆ ಬಯಕೆಗೆ” ರವೀಂದ್ರರವರ ಈ ಭಾವ ಪದದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಚೆಲ್ಲಡ್ಕ ಗುತ್ತುವಿನ ಪುಟ್ಟ ಪೋರನೊಬ್ಬನ ಬಾಲ್ಯದ ಜೀವನ ಪಥ ಹೊಸ ಹೊಂಗನಸಿನ ಚೈತನ್ಯ ಮೂಡಿಸಿದೆ. ಹಸಿವು, ಬಡತನ ಅವಮಾನದ ನೋವನ್ನೆಲ್ಲಾ ನುಂಗಿಕೊಂಡು ಅಮ್ಮ ಹಾಗೂ ಒಡಹುಟ್ಟಿದ ಸಹೋದರ ಸಹೋದರಿಯರ ಬಾಳಿಗೆ ಬೆಳಕಾಬೇಕಾದರೆ ತಾನೇನಾದರೂ ಸಾಧನೆ ಮಾಡಬೇಕು ಎಂಬ ಅಚಲ ವಿಶ್ವಾಸದೊಂದಿಗೆ 48 ವರುಷಗಳ ಹಿಂದೆ 80 ರೂಪಾಯಿ ಬಸ್ ಟಿಕೆಟ್ ಪಡೆದು ಚೆಲ್ಲಡ್ಕದಿಂದ ಮಾಯಾನಗರಿ ಮುಂಬಯಿ ಸೇರಿಕೊಂಡು ಹೋಟೆಲ್ ಕಾರ್ಮಿಕನಾಗಿ ತಿಂಗಳಿಗೆ 50 ರೂಪಾಯಿಯಂತೆ ದುಡಿದು, ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸುತ್ತಾ ಹೋಟೆಲ್ ಕ್ಯಾಂಟೀನ್ ನಲ್ಲಿ ದುಡಿಯುತ್ತಾ ಮುಂದೆ ಶಿಪ್ಪಿಂಗ್ ಇಂಡಸ್ಟ್ರಿಗೆ ಸೇರಿಕೊಂಡು ಅಲ್ಲಿ ಉನ್ನತ ಹುದ್ದೆಯನ್ನೇರಿ ತನ್ನ ಸ್ವಪ್ರಯತ್ನ ಕಠಿಣ ಪರಿಶ್ರಮದ ಮುಖೇನ ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲೇರುತ್ತಾ 2007 ರಲ್ಲಿ ತನ್ನ ಮಾತೃಶ್ರೀಯವರ ಹೆಸರಿನಲ್ಲಿ ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿದ ಮಹಾನುಭಾವರೇ ಇಂದಿನ ಕೆ.ಡಿ ಶೆಟ್ಟಿಯವರು. ಇಂದು ಭವಾನಿ ಗ್ರೂಪ್ ಆಫ್ ಕಂಪನೀಸ್ ಎಂದು ಪ್ರಸಿದ್ಧಿಯನ್ನು ಪಡೆದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದರ ಹಿಂದೆ ಕೆ.ಡಿ ಶೆಟ್ಟಿಯವರ ತ್ಯಾಗಮಯ ಜೀವನದ ವ್ಯಥೆಯ ಕಥೆಯಿದೆ. ಅತುಲ ಛಲದ ಬಲವಿದೆ. ಮಾತೃ ವಾತ್ಸಲ್ಯದ ಹಂಬಲದ ಬೆಂಬಲವಿದೆ. ಬಾಲ್ಯದಲ್ಲಿ ಇದ್ದದ್ದು ದಾರಿದ್ರ್ಯವಲ್ಲ ಬಡತನ. ಎಳವೆಯಲ್ಲಿಯೇ ತಂದೆ ಚೆಲ್ಲಡ್ಕ ಗುತ್ತು ದೇರಣ್ಣ ಶೆಟ್ಟಿಯವರ ಅಕಾಲಿಕ ನಿಧನದ ಅಗಲಿಕೆಯ ನೋವು ಮಾತೃಶ್ರೀ ಭವಾನಿ ಮಾತೆಯ ಕಣ್ಣೀರು, ಕುಟುಂಬ, ಸಹಪಾಠಿಗಳ ಅವಮಾನಗಳ ಸುರಿಮಳೆಯನ್ನು ಸಹಿಸಿ ನೊಂದು ಬೆಂದು “ಸಾಧಿಸಿದರೆ ಸಬಳವನ್ನೇ ನುಂಗಬಹುದು” ಎಂಬ ಗಾದೆ ಮಾತಿನಂತೆ “ಹುಟ್ಟು ಬಡತನವಾದರೂ ಸಾವು ಮಾತ್ರ ಬಡತನವಾಗಬಾರದು” ಎಂಬ ನಾಣ್ನುಡಿಯಂತೆ ಛಲದಂಕ ಮಲ್ಲನಾಗಿ ಕಠಿಣ ಪರಿಶ್ರಮದಿ ನಿಷ್ಠೆ, ಶೃದ್ದೆ ಆತ್ಮವಿಶ್ವಾಸದಿಂದ ಉದ್ಯಮ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ಇದೀಗ ತನ್ನ ಬೃಹತ್ ಕಂಪನಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗವನ್ನಿತ್ತು, ಅನ್ನದಾತರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿ ಬದುಕು ಕಟ್ಟಿಕೊಂಡ ಶ್ರೇಯಸ್ಸು ಕೆ.ಡಿ ಶೆಟ್ಟಿಯವರದ್ದು. ಪ್ರಸ್ತುತ ಭವಾನಿ ಗ್ರೂಪ್ ಆಫ್ ಕಂಪನೀಸ್ ಭಾರತದ 18 ವಲಯಗಳಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ 4 ಶಾಖೆಗಳನ್ನು ಹೊಂದಿ ಆ ಮೂಲಕ ನೆಲಮಾರ್ಗ, ಜಲಮಾರ್ಗ, ವಾಯುಮಾರ್ಗಗಳಿಂದ ಲಾಜಿಸ್ಟಿಕ್ ಸೇವೆಯನ್ನು ಸಲ್ಲಿಸುವುದರೊಂದಿಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಉದ್ಯೋಗದಾತರೆನಿಸಿಕೊಂಡಿದ್ದಾರೆ. ಬೇರೆ ಯಾರನ್ನೋ ಉದಾಹರಣೆಯಾಗಿ ತೋರಿಸಿ ನೀವು ಅವರಂತೆ ಬಾಳಬೇಕು ಎಂದು ಭಾಷಣ ಬಿಗಿಯುವವರಲ್ಲಿ ಯಾರೂ ಕೂಡಾ ನೀವೂ ನನ್ನಂತೆ ಆದರ್ಶವಾಗಿ ಬಾಳಿ ಬದುಕಿ ಎಂದು ಧೈರ್ಯದಿಂದ ಹೇಳಬಲ್ಲ ಮಾರ್ಗದರ್ಶಕರು, ಸಮಾಜಮುಖಿ ಚಿಂತಕರು ಸಿಗುವುದು ಬಹಳ ಕಷ್ಟ. ಆದರೆ ಇದಕ್ಕೆ ಪೂರಕವಾಗಿ ಆದರ್ಶಮಯ ಮಾದರಿಯ ವ್ಯಕ್ತಿತ್ವವನ್ನು ಕೆ.ಡಿ ಶೆಟ್ಟಿಯವರ ಸೇವಾ ಕಾರ್ಯದಲ್ಲಿ ಕಾಣಬಹುದು.
ಕಷ್ಟದಲ್ಲಿರುವ ವ್ಯಕ್ತಿಗೆ ಕೆಲವೊಮ್ಮೆ ಸಲಹೆ ಮುಖ್ಯ. ಕೆಲವೊಮ್ಮೆ ಸಹಾಯ ಮುಖ್ಯ. ಕೆಲವೊಮ್ಮೆ ಎರಡೂ ಮುಖ್ಯ. ಈ ಮಾತನ್ನು ಕೆ.ಡಿ ಶೆಟ್ಟಿಯವರ ವ್ಯಕ್ತಿತ್ವದಲ್ಲಿ ಅಡಗಿಸಿಕೊಂಡು ಅದನ್ನು ಎಲ್ಲಿ ಏನು ಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಮಾಡಿ ಮುಗಿಸುವ ಜಾಯಮಾನದವರು. “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಮಾ ಕರ್ಮಫಲಹೇತುರ್ಭೂಃ ಮಾತೇ ಸಂಗೋಸ್ತ್ವಕರ್ಮಣಿ” ಎನ್ನುವ ಗೀತಾ ಸಾರದಂತೆ ನಿನ್ನ ಹಕ್ಕಿರುವುದು ಕರ್ಮದ ಮೇಲೇ ಹೊರತು ಅದರ ಫಲಗಳಲ್ಲಿ ಅಲ್ಲ. ಫಲದ ನಿರೀಕ್ಷೆಯಲ್ಲಿ ನೀನು ಕರ್ಮದಲ್ಲಿ ತೊಡಗಬೇಡ. ಹಾಗೆಯೇ ಏನನ್ನೂ ಮಾಡದಿರುವ ಅಥವಾ ಕರ್ಮದಲ್ಲಿ ತೊಡಗದೇ ಇರುವ ಗುಣ ನಿನ್ನದಾಗದಿರಲಿ” ಎಂಬಂತೆ ಬಡತನದ ಬೇಗೆ ಕಷ್ಟ ಏನು ಎಂಬುದನ್ನು ತನ್ನ ಬಾಲ್ಯದ ದಿನಗಳಲ್ಲಿಯೇ ಅನುಭವಿಸಿಕೊಂಡು ಬೆಳೆದ ಕೆ.ಡಿ ಶೆಟ್ಟಿಯವರು ಆಶಕ್ತರ ನೋವಿಗೆ ತಕ್ಷಣ ಸ್ಪಂದಿಸಿ ಸಹಾಯದ ಅಭಯ ಹಸ್ತ ನೀಡಿ, ಬಲಗೈಯಲ್ಲಿ ಕೊಟ್ಟ ದಾನದ ಗುಟ್ಟು ಎಡಗೈಗೆ ತಿಳಿಯದಂತೆ, ನಾನೇನು ಮಾಡಿಲ್ಲ ಅನ್ನುವ ರೀತಿಯಲ್ಲಿ ಮಾಡಿದ ಸಹಾಯವನ್ನು ಮರೆತು ಬಿಡುವ ದೊಡ್ಡ ಮನದ ವ್ಯಕ್ತಿತ್ವ ಅವರದು. ಜನ್ಮದಾತೆ “ಭವಾನಿ” ಅಮ್ಮನ ಮಾತನ್ನೇ ವೇದವಾಕ್ಯವನ್ನಾಗಿಕೊಂಡು ಅವರ ಹೆಸರಿನಲ್ಲಿಯೇ ಉದ್ಯಮವನ್ನು ಪ್ರಾರಂಭಿಸಿ ಯಶಸ್ಸಿನ ಶಿಖರವೇರಿದರೂ ಯಾವುದೇ ಅಹಂ ಅವರ ಬಳಿ ಸುಳಿಯದು. ಯಾವತ್ತೂ ತನ್ನತನವನ್ನು ಬಿಟ್ಟುಕೊಡದೆ ಶಿಸ್ತು, ಸ್ವಾಭಿಮಾನದ ತಳಹದಿಯಲ್ಲಿ ಜೀವನ ಸಾಗಿಸುತ್ತಾ ಸ್ನೇಹಪರ ಧೋರಣೆ, ಔಧಾರ್ಯತೆ, ಸಾಮಾಜಿಕ ಕಳಕಳಿ ಎಲ್ಲದಕ್ಕೂ ಮಿಗಿಲಾಗಿ ನಿರಾಡಂಬರದ ಸರಳ, ಸಜ್ಜನಿಕೆಯ, ನೇರ ನಡೆ ನುಡಿಯ ಸಹೃದಯಿ ವ್ಯಕ್ತಿಯಾಗಿ ತಮ್ಮ ಪ್ರಾಮಾಣಿಕ ನಿಲುವುಗಳಿಂದ ಸಮಾಜಕ್ಕೆ ಮಾದರಿಯಾಗಿ ತಮ್ಮ ಬದುಕನ್ನೇ ಸಮಾಜ ಸೇವೆಗಾಗಿ ಮೀಸಲಿಟ್ಟವರು. ನಿಸ್ವಾರ್ಥ ಮನದ ಸಮಾಜ ಸೇವಕರಾಗಿ ದಕ್ಷ ಸಂಘಟಕರಾಗಿಯೂ ಗುರುತಿಸಿಕೊಂಡಿರುವ ಕೆ.ಡಿ ಶೆಟ್ಟಿಯವರು ವಿಶ್ವಮಾನ್ಯ ಪ್ರತಿಷ್ಠಿತ ಜಾತೀಯ ಸಂಸ್ಥೆ ಬಂಟರ ಸಂಘ ಮುಂಬಯಿ ಇದರ ಮಾಜಿ ಗೌ ಪ್ರದಾನ ಕಾರ್ಯದರ್ಶಿಯಾಗಿ, ಮಾತೃಭೂಮಿ ಕೊ. ಆ. ಕ್ರೆಡಿಟ್ ಸೊಸೈಟಿ ಇದರ ಮಾಜಿ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುವುದರ ಜೊತೆಗೆ ಅಪ್ಪಟ ಧಾರ್ಮಿಕ ಶೃದ್ಧಾಳುವಾದ ಇವರು ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಎರಡು ಬಾರಿಯ ವಿಜೃಂಭಣೆಯ ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಗೌ. ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿಶೇಷ ಸೇವಾ ಕೊಡುಗೆಯನ್ನು ನೀಡಿದ್ದಾರೆ. ಪ್ರಚಾರ, ಮಾನ ಸಮ್ಮಾನಗಳಿಂದ ದೂರ ಉಳಿದವರು. ಅವರ ಸಿದ್ದಿ ಸಾಧನೆಗಳಿಗೆ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು, ಉದಯವಾಣಿಯ ಉಪ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳರವರ ಸಂಪಾದಕೀಯದ “ಕುಸುಮೋದರ” ಎಂಬ ಗೌರವ ಗ್ರಂಥವನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪ್ರಕಟಿಸಿ ಕುಸುಮೋತ್ಸವದ ಮೂಲಕ ಅದನ್ನು ಅವರಿಗೆ ಅರ್ಪಿಸಿರುವುದು ಅವರ ಸಮಾಜ ಸೇವೆಗಳಿಗೆ ಸಂದ ಗೌರವವಾಗಿದೆ. ಅವರ ಸೇವಾ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರವು 2020ರಲ್ಲಿ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”ಯನ್ನಿತ್ತು ಗೌರವಿಸಿದ್ದು ಮಾತ್ರವಲ್ಲದೆ “ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ”, ಗೋವಾದ “ನೋಬಲ್ ಮ್ಯಾನ್ ಪ್ರಶಸ್ತಿ”, ಪುತ್ತಿಗೆ ಶ್ರೀಕೃಷ್ಣ ಮಠದ ಪ್ರತಿಷ್ಠಿತ “ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ”, ಕಟೀಲು ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ “ಶ್ರೀ ದುರ್ಗಾನುಗ್ರಹ ಪ್ರಶಸ್ತಿ” ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಗೌರವಿಸಿದೆ. ಪ್ರಚಾರ, ಹೊಗಳಿಕೆಯಿಂದ ಸದಾ ದೂರ ಉಳಿದು ಸಾಮಾನ್ಯರಲ್ಲಿ ಸಾಮಾನ್ಯರಾಗಿ, ನಿಸ್ವಾರ್ಥತೆಯಿಂದ ಸಮಾಜ ಸೇವೆಯ ತುಡಿತದೊಂದಿಗೆ, ಸಹೃದಯತೆಯ ಖನಿಯಾಗಿ, ಬಡವರ ಬಂಧುವಾಗಿ ಕಂಗೊಳಿಸುತ್ತಿರುವ ಕುಸುಮೋದರ ಶೆಟ್ಟಿಯವರ ಬದುಕು ಅನ್ಯರಿಗೆ ಮಾದರಿಯಾಗಲಿ. ಕೆ.ಡಿ ಶೆಟ್ಟಿಯವರ ನಿಸ್ವಾರ್ಥ ಮನದ ಸೇವಾ ಕಾರ್ಯ ದೀನರ ಸೇವೆ ನಿತ್ಯ ನಿರಂತರ ನಡೆಯುತ್ತಿರಲಿ ಎಂಬ ಅಂತರಾಳದ ಅಭಿಲಾಷೆ ನಮ್ಮದು.
ಭವಾನಿ ಫೌಂಡೇಶನ್ ನ ಸಾರ್ಥಕ 10 ಸಂವತ್ಸರ “ದಶಮ ಸಂಭ್ರಮ”ದ ಆಯ್ದ ಸೇವಾ ಕಾರ್ಯದ ಹೆಜ್ಜೆ ಗುರುತುಗಳು.
ಭವಾನಿ ಫೌಂಡೇಶನ್ ಜಾತಿ, ಧರ್ಮ, ಮತ, ಭೇದ ಮರೆತು ಸರ್ವ ಜಾತಿ, ಧರ್ಮ ಜನಾಂಗದ ಆಶಕ್ತರಿಗೆ ದೀನರಿಗೆ ದಶ ದಿಶೆಯಲ್ಲಿ ನೆರವು, ಸಹಾಯ ನೀಡುತ್ತಿದ್ದು, 2015 ರ ಅಗಸ್ಟ್ 8ರಂದು ಮೊಟ್ಟ ಮೊದಲ ಸಾಮಾಜಿಕ ಸೇವಾ ಕಾರ್ಯವಾಗಿ ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಮುಂಬೈ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ 93 ಯುನಿಟ್ ರಕ್ತವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿದೆ. 2015- 16 ನೇ ಸಾಲಿನಲ್ಲಿ ನವಿ ಮುಂಬಯಿಯ ನಿಶಾದ್ ಫೌಂಡೇಶನ್ ಎಂಬ ವಿಶೇಷ ಮಕ್ಕಳ ಸಂಸ್ಥೆಗೆ ಆರ್ಥಿಕ ನೆರವು ನೀಡಿ ಅವರ ಕಾರ್ಯ ಚಟುವಟಿಕೆಗಳಿಗೆ ಬೇಕಾದ ಪರಿಕರಗಳನ್ನು ಖರೀದಿಸಲು ಸಹಾಯ ಮಾಡಿದೆ. ಪ್ರತೀ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಿ ಸುಮಾರು 300 ಯುನಿಟ್ ಗೂ ಮಿಕ್ಕಿದ ರಕ್ತ ಸಂಗ್ರಹಿಸಿ ಬ್ಲಡ್ ಬ್ಯಾಂಕ್ ಗೆ ನಿರಂತರ ವಾಗಿ ನೀಡುತ್ತಿದೆ. 2016-17 ರಲ್ಲಿ ನ್ಹಾವಾ ಶೇವಾದ ದತುಮ್ ಎಂಬ ಹಳ್ಳಿಯೊಂದರ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ಒದಗಿಸಿ 2016ರಿಂದ ಅವರ ಸಂಪೂರ್ಣ ವೇತನವನ್ನು ಭವಾನಿ ಫೌಂಡೇಶನ್ ಭರಿಸುತ್ತಿದೆ. ಕೆ.ಡಿ ಶೆಟ್ಟಿಯವರ ಮಾತೃಶ್ರೀ ಭವಾನಿ ಶೆಟ್ಟಿಯವರು ಕಲಿತ ಬಂಟ್ವಾಳದ ನಡುಮುಗೇರ್ ಜಿಲ್ಲಾ ಪರಿಷತ್ ಶಾಲೆಗೆ ಬಸ್ಸೊಂದನ್ನು ನೀಡಿ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. 2018ರಲ್ಲಿ ಮಂಗಳೂರು ವಿಟ್ಲ ಕುದ್ರುಪದವಿನಲ್ಲಿ ಎ.ಜೆ ಆಸ್ಪತ್ರೆ ನೆರವಿನೊಂದಿಗೆ ಉಚಿತ ಆರೋಗ್ಯ ಶಿಬಿರ ಸೇರಿದಂತೆ 185 ಮಂದಿಯ ನೇತ್ರ ಪರೀಕ್ಷೆ ನಡೆಸಿ 9 ಮಂದಿಯ ನೇತ್ರ ಚಿಕಿತ್ಸೆಯನ್ನು ಮಾಡಿದೆ. 2020-21ರ ಸಾಲಿನಲ್ಲಿ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಕಾಲಾಪುರ ತಾಲೂಕಿನ ಎರಡು ಆದಿವಾಸಿ ಶಾಲೆಗಳಾದ ಬಿಲ್ವಾಲೆ ಜಿಲ್ಲಾ ಪರಿಷತ್ ಸ್ಕೂಲ್ ಮತ್ತು ಠಾಕೂರ್ ವಾಡಿ ಪರಿಷತ್ ಸ್ಕೂಲ್ ನ ಕಟ್ಟಡ ದುರಸ್ಥಿ ಜೊತೆಗೆ ಶೌಚಾಲಯ ನಿರ್ಮಾಣ, ಸೇರಿದಂತೆ ಪ್ರತಿ ವರ್ಷ 300 ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸುತ್ತಿದೆ. ಇದೇ ಜಿಲ್ಲೆಯ ಪಿರ್ಕಟ್ವಾಡಿ ಎಂಬ ಆದಿವಾಸಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಮೂರು ಗ್ರಾಮಗಳ ಆದಿವಾಸಿ ಕುಟುಂಬಗಳ ಶ್ರೇಯೋಭಿವೃದ್ಧಿಗಾಗಿ ಸುಮಾರು ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಸಮಾಜ ಭವನ ನಿರ್ಮಿಸಿ ಆದಿವಾಸಿ ಜನಾಂಗದ ವಿವಾಹ ಇನ್ನಿತರ ಸಭೆ ಕಾರ್ಯಕ್ರಮಗಳನ್ನು ಆಯೋಜಿಸಲು ಅನುವು ಮಾಡಿದೆ. ಮಹಾರಾಷ್ಟ್ರದ ಕಲ್ಲಾಪುರ ಜಿಲ್ಲೆಯ ಶಿರೋಲ್ ಮತ್ತು ಕರವೀರ್ ತಾಲೂಕಿನ ಗ್ರಾಮಗಳಾದ ಅಂಬೆವಾಡಿ, ಸಾವಲ್ ಮಾಲ್, ಅಂಗನ್ ಮಾಲ್, ಪರ್ಯಾಗ್ ಚಿಕಲಿ, ಪ್ರದೇಶದ ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದೆ. ಮಂಗಳೂರಿನ ಬಜ್ಪೆಯಲ್ಲಿರುವ ಜಿಲ್ಲಾ ಪರಿಷತ್ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡಿದೆ. ಮಂಗಳೂರಿನ ಕೇಪುವಿನಲ್ಲಿರುವ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಜೊತೆಗೆ ಶಿಕ್ಷಕರು ಮತ್ತು ಶಿಕ್ಷಕರೇತರ ಸಿಬ್ಬಂದಿಗಳ ಸಂಬಳವನ್ನು ಬರಿಸುತ್ತಿದೆ. ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ಅಪಾಯ ಸ್ಥಿತಿಯಲ್ಲಿದ್ದ ಶಾಲಾ ಕಟ್ಟಡವನ್ನು ದುರಸ್ತಿಗೊಳಿಸಿ ಅನುಕೂಲ ಮಾಡಿಕೊಟ್ಟಿದೆ. ಮಂಗಳೂರಿನ ಬಜ್ಪೆ ತಾಲೂಕಿನ ಕೆಲವು ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ ಒದಗಿಸಿದೆ. ಬೆಳಗಾವಿಯ ಚಿಕ್ಕೋಡಿಯಲ್ಲಿ ರೈತರಿಗೆ ಬೀಜಗಳನ್ನು ಹಂಚಿ ಬೇಸಾಯಕ್ಕೆ ಸಹಾಯ ಮಾಡಿದೆ. ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೋಲ್ಹಾಪುರದ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ದಿನನಿತ್ಯದ ಬಳಕೆಯ ವಸ್ತುಗಳನ್ನು ನೀಡಿ ಸಹಕರಿಸಿದೆ. ಹಿಮಾಚಲ ಪ್ರದೇಶದ ಖಾಜಾ ಹಳ್ಳಿ ಪ್ರದೇಶದ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಕ್ರೀಡಾ ಸಲಕರಣೆಗಳನ್ನು ವಿತರಿಸಿ ಪ್ರೋತ್ಸಾಹಿಸಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಮಕ್ಕಳು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿದ್ದ ಕಾಲಾಪುರದ ಪಿರ್ಕಟ್ವಾಡಿಯ ಇಡೀ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ನೀಡಿ ಒಂದು ಶಾಲೆಯನ್ನು ಸಂಪೂರ್ಣ ಜೀರ್ಣೋದ್ಧಾರಗೊಳಿಸಿ ಪ್ರಸ್ತುತ ಎರಡು ಶಾಲೆಗಳನ್ನಾಗಿ ಮಾರ್ಪಾಟು ಮಾಡಿ ರಸ್ತೆ, ಸಭಾಭವನ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ.
ಮಹಾರಾಷ್ಟ್ರದ ಅಂಬರನಾಥ್ ನ ಪ್ರತಿಷ್ಠಿತ ಎಸ್. ನಿಜಲಿಂಗಪ್ಪ ಕನ್ನಡ ಶಾಲೆಗೆ 2023 ರಲ್ಲಿ ಸಂಸ್ಥೆಯ ವತಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ಶಾಲಾ ಬಸ್ಸೊಂದನ್ನು ದೇಣಿಗೆಯಾಗಿ ನೀಡಿದ್ದು ಮಾತ್ರವಲ್ಲದೆ ಪ್ರತೀ ವರ್ಷ ಶಾಲೆಯ ನೂರಾರು ಮಕ್ಕಳಿಗೆ ಆರ್ಥಿಕ ನೆರವಿನೊಂದಿಗೆ ಶಾಲಾ ಪರಿಕರಗಳನ್ನು ವಿತರಿಸುತ್ತಿದೆ. ಪ್ರಸ್ತುತ ಈ ಶಾಲೆಯನ್ನು ಭವಾನಿ ಫೌಂಡೇಶನ್ ಸಂಪೂರ್ಣವಾಗಿ ದತ್ತು ಸ್ವೀಕರಿಸಿದ್ದು ಅದರ ಜೀರ್ಣೋದ್ದಾರದೊಂದಿಗೆ ಶೈಕ್ಷಣಿಕ ಸಂಕುಲ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2020-21 ರ ಕೊರೋನಾ ಲಾಕ್ಡೌನ್ ಸಂಧರ್ಭದಲ್ಲಿ ಮುಂಬೈ ಹಾಗೂ ಇನ್ನಿತರ ಉಪನಗರದಲ್ಲಿ ನೆಲೆಯಾಗಿರುವ ತುಳು ಕನ್ನಡಿಗರು ಸೇರಿದಂತೆ ಅನ್ಯ ಭಾಷಿಗರಿಗೆ ದಿನೋಪಯೋಗಿ ಆಹಾರ ಸಾಮಗ್ರಿಗಳ ವಿತರಣೆ ಸೇರಿದಂತೆ ಬೀದಿ ಬದಿಯ ನಿವಾಸಿಗಳಿಗೆ ಎರಡೊತ್ತಿನ ಊಟವನ್ನು ವಿತರಿಸಿದೆ. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಐದು ಆಕ್ಸಿಜನ್ ಘಟಕಗಳನ್ನು ದಾನ ಮಾಡಿದೆ. ಶರ್ಫ್ ಸೈಯ್ಯದ್ ಅನ್ನುವ ಮುಸ್ಲಿಂ ಮಹಿಳೆ ಸೇರಿದಂತೆ ಕ್ರಿಶ್ಚಿಯನ್ ಮಕ್ಕಳಿಗೂ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡುತ್ತಿದೆ. ಶ್ರೀ ನಿರಂಜನ ಸ್ವಾಮಿ ಫಸ್ಟ್ ಗ್ರೇಡ್ ಕಾಲೇಜ್ ಬಜ್ಪೆ ಇಲ್ಲಿ ರಂಗಸ್ಥಳವನ್ನು ನಿರ್ಮಿಸಿಕೊಟ್ಟಿದೆ.
ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ಕೇರಳ ಹೀಗೆ 5 ರಾಜ್ಯಗಳ ಸುಮಾರು 25 ವಿಧವೆಯಾರಿಗೆ ಪ್ರತೀ ತಿಂಗಳು ಐದು ಸಾವಿರ ರೂಪಾಯಿ ಮಾಶಾಸನವನ್ನು ತಪ್ಪದೆ ನೀಡುತ್ತಿದೆ. ಇತ್ತೀಚಿಗೆ ಅಂಬರ್ ನಾಥ್ ಎಸ್ ನಿಜಲಿಂಗಪ್ಪ ಕನ್ನಡ ಶಾಲೆಯ 8ನೇ ತರಗತಿಯ ಲಾವಣ್ಯ ಎಂಬ ವಿದ್ಯಾರ್ಥಿನಿಯು ಗುಣಮುಖವಾಗದ ವಿಚಿತ್ರ ಕಾಯಿಲೆಯಿಂದ ಬಳಲಿದಾಗ ಅವಳಿಗೆ ಲಕ್ಷಾಂತರ ರೂಪಾಯಿ ವೆಚ್ಚದಿಂದ ವಿಶೇಷ ಚಿಕಿತ್ಸೆ ದೊರಕಿಸಿ ಗುಣಮುಖರಾಗುವ ವರೆಗೆ ಸಂಪೂರ್ಣ ವೆಚ್ಚದ ಜವಾಬ್ದಾರಿ ಸಂಸ್ಥೆ ವಹಿಸಿದೆ. ಭವಾನಿ ಕಂಪನಿಯಲ್ಲಿ ದುಡಿಯುವ ಎಲ್ಲಾ ನೌಕರರ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುತ್ತಿದೆ. ಉಡುಪಿ ಮಠ ಸಂಚಾಲಿತ ಬ್ರಹ್ಮಾವರ ಶಾಖೆಯ ಗೋವರ್ಧನ ಗಿರಿ ಗೋಶಾಲೆಗೆ ವಿಶೇಷ ಸಹಕಾರವನ್ನಿತ್ತು ಗೋ ಸಂರಕ್ಷಣಾ ನಿಧಿಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ನೀಡುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಪಟು ಕು. ದಿಯಾ ಶೆಟ್ಟಿಯವರ ಕ್ರೀಡಾ ಸಾಧನೆಯ ಪ್ರಾಯೋಜಕತ್ವವನ್ನು ವಹಿಸಿ ಪ್ರತಿ ತಿಂಗಳು ಸುಮಾರು 70ಸಾವಿರದಿಂದ ರಿಂದ 1 ಲಕ್ಷ ರೂಪಾಯಿವರೆಗಿನ ತರಬೇತಿ ಪ್ರಯಾಣ ಭತ್ಯೆಯ ವೆಚ್ಚವನ್ನು ಸಂಸ್ಥೆಯು ನಿರ್ವಹಿಸುತ್ತಿದೆ. ಮಂಗಳೂರು ದೇರಳಕಟ್ಟೆಯಲ್ಲಿರುವ “ಸೇವಾಶ್ರಮ” ಅನಾಥಾಶ್ರಮಕ್ಕೆ ಕಳೆದ ಆರು ವರ್ಷಗಳಿಂದ ಪ್ರತೀ ತಿಂಗಳು ವಿಶೇಷ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಇವುಗಳನ್ನು ಹೊರತುಪಡಿಸಿ ಹತ್ತಾರು ಸಾಂದರ್ಭಿಕ ಸಹಕಾರಗಳನ್ನು ಸಮಯೋಚಿತವಾಗಿ ನೀಡಿದ ಸಾರ್ಥಕ್ಯ ಭವಾನಿ ಫೌಂಡೇಶನ್ನಿನ ಹೆಗ್ಗಳಿಕೆಗಳಳೊಂದು. ಇದನ್ನೆಲ್ಲಾ ಅವಲೋಖಿಸಿದಾಗ ಒಂದು ಆಡಳಿತ ಸರಕಾರ ಮಾಡುವ ಸೇವಾ ಕಾರ್ಯವನ್ನು ಭವಾನಿ ಫೌಂಡೇಶನ್ ಮಾಡುತ್ತಿದ್ದು, ಕೆ.ಡಿ. ಶೆಟ್ಟಿಯವರ ಈ ವಿಶಾಲ ಸಹೃದಯದ ಸೇವಾ ಮನೋಭಾವಕ್ಕೆ “ಪದ್ಮಶ್ರೀ”ಯಂತಹ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂಬ ಪ್ರಾಂಜಲ ಹಾರೈಕೆ ಮತ್ತು ಸಧ್ಭಾವ ನಮ್ಮಲ್ಲಿ ಮೂಡುತ್ತದೆ.
ಲೇಖನ : ಪ್ರಭಾಕರ್ ಬೆಳುವಾಯಿ








































































































