ಸಮುದಾಯದ ಜನರು ಗುಂಪಿನಲ್ಲಿ ವಾಸಿಸುವಾಗ ಏಕತೆ, ಒಗ್ಗಟ್ಟಿನ ಬಂಧವನ್ನು ಪಡೆದುಕೊಳ್ಳುತ್ತಾರೆ. ಪ್ರತೀ ಸಮುದಾಯಕ್ಕೆ ಸ್ವಂತ ಅಸ್ತಿತ್ವ ಮತ್ತು ಗುರುತು ಇರುತ್ತದೆ. ಸಮುದಾಯದಲ್ಲಿ ಸಾಮಾಜಿಕ ರಚನೆ ಮತ್ತು ನಿಯಂತ್ರಣ ಕೂಡ ಬಹಳ ಮುಖ್ಯವಾಗಿರುತ್ತದೆ. ಮೊಗವೀರರು ಊರ ಒಳಗಿನ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ ಪದ್ಧತಿಯ ಮೂಲಕ ಪರಿಹರಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಮೊಗವೀರರಿಗೆ ಕೋರ್ಟು ಕಚೇರಿ ಹತ್ತುವ ಪ್ರಸಂಗ ಬರುತ್ತಿರಲಿಲ್ಲ. ವ್ಯಾಜ್ಯಗಳನ್ನು ಸಮುದಾಯದ ಒಳಗೆ ತೀರ್ಮಾನಿಸಿಕೊಳ್ಳುತ್ತಿದ್ದರು ಎಂದು ಮುಂಬೈಯ ಕವಿ ಲೇಖಕಿ ಡಾ. ಜಿ.ಪಿ. ಕುಸುಮಾ ಅವರು ಅಭಿಪ್ರಾಯ ಪಟ್ಟರು. ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ನವೆಂಬರ್ 1ರಂದು ಕಲೀನಾ ಕ್ಯಾಂಪಸ್ ನ ರಾನಡೆ ಭವನದ ಇಂಗ್ಲಿಷ್ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ‘ಮುಂಬೈ ಕನ್ನಡಿಗರ ಅಸ್ಮಿತೆ ಚಿಂತನ ಮಂಥನ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮುದಾಯ ಅಧ್ಯಯನದ ಅಗತ್ಯ ಮತ್ತು ಮಹತ್ವ (ಮೊಗವೀರ ಸಮುದಾಯದ ಹಿನ್ನೆಲೆಯಲ್ಲಿ) ಎಂಬ ವಿಷಯದ ಕುರಿತು ಉಪನ್ಯಾಸಕರಾಗಿ ಮಾತನಾಡುತ್ತಿದ್ದರು. ಅವರು ಸಮುದಾಯದ ಅಧ್ಯಯನದ ಅಗತ್ಯವನ್ನು ವಿವರವಾಗಿ ವಿಶ್ಲೇಷಿಸುತ್ತಾ, ಈ ಅಧ್ಯಯನವು ಸಮುದಾಯದ ರೂಢಿಗಳು, ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಕಲಿಯುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಸಮುದಾಯದ ಇತಿಹಾಸ, ಸಂಸ್ಕೃತಿ, ಸಾಮಾಜಿಕ ಗುರುತನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಈ ಪ್ರಕಾರದ ಅಧ್ಯಯನದ ಅಗತ್ಯವಿದೆ. ಇದರಿಂದ ನಿರ್ದಿಷ್ಟ ಸಮುದಾಯಗಳ ಆಚರಣೆ ಮತ್ತು ಜೀವನ ಶೈಲಿಗಳ ಅರಿವಾಗುತ್ತದೆ ಮತ್ತು ಲೋಕಮುಖಕ್ಕೆ ಪರಿಚಯಿಸಲು ಅನುಕೂಲವಾಗುತ್ತದೆ. ಸಮುದಾಯದ ಕೊರತೆ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಪ್ರೊ. ಜಿ.ಎನ್. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕನ್ನಡ ವಿಭಾಗವು ಕಳೆದ 46 ವರ್ಷಗಳಿಂದ ಕನ್ನಡದ ಪ್ರಚಾರ ಪ್ರಸಾರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದೆ. ವಿಶ್ವವಿದ್ಯಾಲಯದ ವಲಯದಲ್ಲಿ ಕನ್ನಡ ವಿಭಾಗಕ್ಕೆ ವಿಶೇಷವಾದ ಮಾನ, ಮನ್ನಣೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಹೆಸರು ಮಾಡಿದ್ದಾರೆ. ಕರ್ನಾಟಕದಲ್ಲಿ ಆಗಿ ಹೋದಷ್ಟು ರಾಜವಂಶಗಳು ದೇಶದ ಬೇರೆ ಯಾವ ಭಾಗದಲ್ಲಿಯೂ ಕಾಣಸಿಗದು. ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹರಿದು ಹಂಚಿ ಹೋಗಿದ್ದ ಕರ್ನಾಟಕ 1956ರಲ್ಲಿ ಒಂದಾಯಿತು. 1835ರ ಹೊತ್ತಿಗೆ 20 ಸಂಸ್ಥಾನಗಳಲ್ಲಿ ಕರ್ನಾಟಕ ಹಂಚಿ ಹೋಗಿತ್ತು. ಅವರನ್ನೆಲ್ಲಾ ಒಂದು ಮಾಡಲು ಕಾರಣರಾದವರು ರಾ.ಹ ದೇಶಪಾಂಡೆ ಅವರು. 1890ರಲ್ಲಿ ಮೊತ್ತ ಮೊದಲ ಬಾರಿಗೆ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ ಆ ಬಳಿಕ ಅದರ ಮುಖಾಂತರವಾಗಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಅವರು ಕಾರಣಕರ್ತರಾಗಿದ್ದಾರೆ. ಮರಾಠೀಮಯವಾಗಿದ್ದ ಮುಂಬೈ ಕರ್ನಾಟಕ ಭಾಗದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಧೀಮಂತ ಚೇತನ ಅವರು. ಅವರ ಮುಖಾಂತರವಾಗಿ ದೊಡ್ಡ ಪ್ರಮಾಣದ ಚಳುವಳಿ ಆರಂಭವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳು ಒಂದಾಗಿ ಕರ್ನಾಟಕ ರಾಜ್ಯೋದಯವಾಯಿತು. ನಾವು ಭಾಷೆಯನ್ನು ಮರೆತರೆ ನಮ್ಮ ಸಂಸ್ಕೃತಿ ಮರೆಯಾಗುತ್ತದೆ. ಆದ್ದರಿಂದ ನಮ್ಮ ನಮ್ಮ ಮನೆಮಾತನ್ನು ನಾವೆಲ್ಲರೂ ಬಳಸಿ ಉಳಿಸಿಕೊಳ್ಳಬೇಕು. ಮುಂಬೈ ಕನ್ನಡಿಗರು ಸಾಂಸ್ಕೃತಿಕ ಸೌಹಾರ್ದದ ವಾತಾವರಣವನ್ನು ಸೃಷ್ಟಿಸಿಕೊಂಡು ಬಂದಿದ್ದಾರೆ. ಕನ್ನಡಿಗರು ಮುಂಬೈಯಲ್ಲಿ ಎರಡು ಶತಮಾನಗಳಿಂದ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಮುಂದೆಯೂ ಉಳಿಸಿಕೊಂಡು ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಅವರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಪಿ.ವಿ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು. ಜತೆಗೆ ವಿಭಾಗದ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.
‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನಕ್ಕೆ ‘ಗವಿಸಿದ್ಧ ಪ್ರಶಸ್ತಿ’ ಪಡೆದ ಅನಿತಾ ಪೂಜಾರಿ ಮತ್ತು ‘ಜೀವನ್ಮುಖಿ’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘ ಕೊಡ ಮಾಡುವ ‘ಎಂ.ಕೆ. ಇಂದಿರಾ ಪ್ರಶಸ್ತಿ’ಗೆ ಭಾಜನರಾದ ಪ್ರತಿಭಾ ರಾವ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು. ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಅನಿತಾ ಪೂಜಾರಿ ಅವರು ‘ಸ್ವಾತಂತ್ರ ಹೋರಾಟದಲ್ಲಿ ಮುಂಬೈ ಬಿಲ್ಲವರು’, ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರು ‘ಮುಂಬಯಿಯಲ್ಲಿ ಉದಯಿಸಿದ ದಿನಕರ’, ಮತ್ತು ಜಯ ಸಾಲಿಯಾನ್ ಅವರು ‘ಮುಂಬೈಯಲ್ಲಿ ಅರಳಿದ ಕರ್ನಾಟಕದ ಕಲಾವಿದರು’ ಎಂಬ ವಿಷಯದ ಕುರಿತು ವಿಷಯ ಮಂಡನೆ ಮಾಡಿದರು. ಇದೇ ಸಂದರ್ಭದಲ್ಲಿ ಡಾ. ಜಿ. ಪಿ. ಕುಸುಮಾ ಅವರು ತಮ್ಮ ಮಹಾಪ್ರಬಂಧದ ಕೃತಿರೂಪವಾದ ‘ಮುಂಬೈ ಮೊಗವೀರರ ಸಾಹಸ ಸಾಧನೆ’ ಯನ್ನು ಮತ್ತು ಅನಿತಾ ಪೂಜಾರಿ ತಾಕೊಡೆ ಅವರು ತಮ್ಮ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನವನ್ನು ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದರು. ವಿಭಾಗದ ವಿದ್ಯಾರ್ಥಿಗಳು ಪದ್ಮಶ್ರೀ ದೊಡ್ಡರಂಗೇಗೌಡ ಅವರ ರಚನೆಯಾದ ಕರುನಾಡು ರಂಗಾಗೈತೊ ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮವನ್ನು ಸಂಯೋಜಿಸಿದ್ದ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ|ಪೂರ್ಣಿಮಾ ಸುಧಾಕರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ದೇವದಾಸ್ ಶೆಟ್ಟಿ, ಕವಿ, ಲೇಖಕ ಸೋಮನಾಥ ಕರ್ಕೇರ, ಸುರೇಶ್ ಕುಂದರ್, ಸಂಘಟಕ ನಾರಾಯಣ ರಾವ್ ಮತ್ತಿತರ ಸಾಹಿತ್ಯಾಸಕ್ತರು, ವಿಭಾಗದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.







































































































