ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ನಾರಾಯಣ ಶೆಟ್ಟಿ ಮತ್ತು ಅವರ ಕಾರ್ಯಕಾರಿ ಸಮಿತಿ, ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ನಿರ್ದೇಶನದಲ್ಲಿ ನವೆಂಬರ್ 04 ರಂದು ಬಂಟ್ಸ್ ಸೆಂಟರ್ ನಲ್ಲಿ ತುಳಸಿ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು. ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ಕೊಟ್ಟರು. ತುಳಸಿ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲಪಕ್ಷದ ಏಕಾದಶಿಯಂದು ವಿಷ್ಣು ತನ್ನ ಯೋಗ ನಿದ್ದೆಯಿಂದ ಎಚ್ಚೆತ್ತು ದ್ವಾದಶಿಯಂದು ತುಳಸಿ ಮಾತೆಯನ್ನು (ಲಕ್ಮೀ ದೇವಿ) ವಿವಾಹವಾಗಿದ್ದರಿಂದ, ತುಳಸಿ ಹಬ್ಬ ಅಥವಾ ತುಳಸಿ ಪೂಜೆ ಎಂದು ಆಚರಿಸಲಾಗುತ್ತದೆ. ಆದ್ದರಿಂದ ತುಳಸಿ ಪೂಜೆಯನ್ನು ಆಚರಿಸಿ, ತುಳಸಿಯನ್ನು ಪೂಜಿಸುವುದರಿಂದ ಮನೆಗೆ ಸುಖ, ಶಾಂತಿ, ನೆಮ್ಮದಿ ಲಭಿಸುವುದರ ಜೊತೆಗೆ ಮನಸ್ಸಿನ ಇಷ್ಚಾರ್ಥವು ಸಿದ್ದಿಯಾಗುತ್ತದೆ ಎಂಬ ಬಲವಾದ ನಂಬಿಕೆ ಅನಾದಿ ಕಾಲದಿಂದಲೂ ನಡೆದು ಬಂದಿದೆ.

ಅದಲ್ಲದೆ ಆ ದಿನ ಮನೆಮಂದಿಯೆಲ್ಲಾ ಶುಚಿರ್ಭೂತರಾಗಿ ತುಳಸಿಕಟ್ಚೆಯನ್ನು ಸ್ವಚ್ಚಗೊಳಿಸಿ ತುಳಸಿಗಿಡದ ಜತೆ ನೆಲ್ಲಿಕಾಯಿಯ ಗಿಡವನ್ನು ನೆಟ್ಚು ತುಳಸಿಕಟ್ಟೆಯ ನಾಲ್ಕು ಭಾಗಗಳಲ್ಲಿ ರಸಭರಿತ ಕಬ್ಬಿನ ಕೋಲನ್ನು ಇಟ್ಟು ಮಂಟಪದ ಹಾಗೆ ಹೂ ಹಾರಗಳಿಂದ ಶೃಂಗರಿಸಿ, ಮದ್ಯದಲ್ಲಿ ಅರಸಿನ ಕುಂಕುಮ, ಹೂವು, ಅಕ್ಕಿ, ತೆಂಗಿನಕಾಯಿಗಳನ್ನಿಟ್ಟು, ಸುತ್ತಲೂ ದೀಪಗಳಿಂದಲಂಕರಿಸಿ ಎಲ್ಲರೂ ಪ್ರದಕ್ಷಿಣೆ ಬಂದು ಪೂಜೆ ಮಾಡುತ್ತಿದ್ದರು. ಹಾಗಾಗಿ ನವೆಂಬರ್ 4 ರಂದು ಮಹಿಳಾ ವಿಭಾಗದವರು ತುಳಸಿ ಹಬ್ಬವನ್ನು ಬರೀ ಸಾಂಕೇತಿಕವಾಗಿ ಆಚರಣೆ ಮಾಡದೆ ತುಂಬು ಶ್ರದ್ದೆಯಿಂದ ನೈಜವಾದ ತುಳಸಿ ತಂದು ತುಳಸಿ ಕಟ್ಟೆಯ ಮೂಲಕ ಎಲ್ಲಾ ವಿಧಿ ವಿಧಾನಗಳ ಮುಖೇನ ಅಚ್ಚುಕಟ್ಟಾಗಿ ಆಚರಿಸಿದರು. ಅಲ್ಲದೆ ವಿಧ ವಿಧದ ನಕ್ಷತ್ರ ಕಡ್ಡಿಗಳನ್ನು ಉರಿಸಿ ಎಲ್ಲರೂ ಆನಂದದಿಂದ ತುಳಸಿ ಹಬ್ಬವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು, ಮಹಿಳಾ ವಿಭಾಗದವರು ಆಚರಿಸಿದ ತುಳಸಿ ಹಬ್ಬವು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಾಗಲಿ. ಬಾಲ್ಯದಲ್ಲಿ ಆನಂದಿಸಿದ ಸಂಭ್ರಮದ ತುಳಸಿ ಪೂಜೆಯ ನೆನಪಿನೊಂದಿಗೆ, ತಂದೆ ತಾಯಿ ಹಿರಿಯರ ನೆನಪು ಬರುವಂತಾಯ್ತು ಎಂದು ಭಾವನಾತ್ಮಕವಾಗಿ ಹೇಳಿದರು. ಅಲ್ಲದೇ ಕಾರ್ಯಾಧ್ಯಕ್ಷೆ ಶಾಂತ ಶೆಟ್ಟಿಯವರು ತಮ್ಮ ಬಾಲ್ಯದ ನೆನಪು ಹಾಗೂ ತುಳಸಿ ಹಬ್ಬ ಆಚರಿಸುವ ವಿಧಿ ವಿಧಾನಗಳ ಬಗ್ಗೆ ತಮ್ಮ ಅನುಭವವನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌ. ಕೊಶಾಧಿಕಾರಿ ಸಿ.ಎ ವಿಶ್ವನಾಥ ಶೆಟ್ಟಿ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ, ಮಾಜಿ ಅಧ್ಯಕ್ಷ ಶ್ಯಾಮ ಶೆಟ್ಟಿ, ಮಹಿಳಾ ವಿಭಾಗದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಗಣ್ಯರು, ಅತಿಥಿಗಳು ತುಂಬಾ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಮೆರುಗು ಕೊಟ್ಟು ಒಂದು ವಿಶೇಷ ಕಾರ್ಯಕ್ರಮವನ್ನಾಗಿಸಿ, ಮುಂಬಯಿಯಲ್ಲಿ ಇಷ್ಟರವರಗೆ ಇಂತಹ ಕಾರ್ಯಕ್ರಮ ನಡೆಯಲಿರಕ್ಕಿಲ್ಲ ಎಂಬ ಭಾವನೆ ಮೂಡುವಂತೆ ಮಾಡಿದರು. ಆನಂತರದಲ್ಲಿ ಎಂದಿನಂತೆ ಮಾಸಿಕವಾಗಿ ಮಹಿಳಾ ವಿಭಾಗದವರಿಂದ ನಡೆಯುವ ಕಾರ್ಯಕ್ರಮಗಳಾದ ಲಲಿತ ಸಹಸ್ರ ನಾಮಾರ್ಚನೆ, ಭಜನೆ, ಕೀರ್ತನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಿಳೆಯರು ಸಾಂಘವಾಗಿ ನಡೆಸಿ, ಹಿರಿಯರು ಕಿರಿಯರೆನ್ನೆದೇ ಎಲ್ಲರೂ ಪಾಲ್ಗೊಂಡು ಒಂದು ಅತ್ಯುತ್ತಮ ಕಾರ್ಯಕ್ರಮವನ್ನಾಗಿಸಿದರು.







































































































