ಆತ ಹೆಚ್ಚಿನವರ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ಇದು ಲೋಕಾರೂಢಿ ಸಹ. ಮೌನವಾಗಿದ್ದುಕೊಂಡು ಬೆನ್ನಿಗೆ ಇರಿಯುವವರ ಕರಾಮತ್ತು ಬೇಗ ಬೆಳಕಿಗೆ ಬಾರದು. ಇರಿಸಿಕೊಂಡವಗೆ, ಹೃದಯಕ್ಕೆ ಗಾಯವಾದವಗೆ ಮಾತ್ರ ಗೊತ್ತು ಆ ನೋವಿನ ಬಗ್ಗೆ. ಸಮಾಜದ, ಮನೆಯ ಸದಸ್ಯರ ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಕಾರ್ಯ ಮಾಡುವವನಿಗೆ ನಲಿವಿಗಿಂತ ಹೆಚ್ಚು ನೋವೇ. ಆತನ ನೋವನ್ನು ನೋಡಿ ಹಿಂದಿನಿಂದ ಅಪಹಾಸ್ಯ ಮಾಡುವವರಿಗೇನೂ ಕೊರತೆಯಿಲ್ಲ. ಯಾಕೆ ಬೇಕಿವನಿಗೆ, ಸುಮ್ಮನೆ ನೋಡಿಯೂ ನೋಡದ ಹಾಗೆ ಇರಬಾರದೇ? ಎನ್ನುವವರಿದ್ದಾರೆ. ಆದರೆ ಎಲ್ಲವನ್ನೂ ದಾಟಿ ಮುಂದೆ ಸಾಗುವುದೇ ಬದುಕೆಂದು ಸಮಾಜಮುಖಿ ವ್ಯಕ್ತಿ ನಂಬಿರುತ್ತಾನೆ.

ಎಲ್ಲರೂ ಒಂದೇ ರೀತಿಯಿದ್ದರೆ ವ್ಯವಹಾರವೆಂತು? ಸಾಗುವ ದಾರಿಯಲ್ಲಿ ನಯ -ನಾಜೂಕು, ಕಲ್ಲು-ಮುಳ್ಳು, ಎತ್ತರ-ತಗ್ಗು, ಹಳ್ಳ-ಕೊಳ್ಳಗಳು ಇರಲೇಬೇಕಲ್ಲ?ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸ್ಥಿತಪ್ರಜ್ಞರು ಭಗವಂತನ ಮೇಲೆ, ಕೈಗೊಂಡ ಕೆಲಸದ ಮೇಲೆ ಮಾತ್ರ ನಂಬಿಕೆಯಿಡುತ್ತಾರೆ. ಯಾರು ಹೇಳಿದ್ದಕ್ಕೂ ಕಿವಿಯಾನಿಸರು. ‘ಕೇಳದೆ, ಹೇಳಿಸಿಕೊಳ್ಳದೆ ತಮ್ಮ ಕರ್ತವ್ಯ ಮಾಡುವವರು ರೂಢಿಯೊಳು ಉತ್ತಮರಂತೆ’. ಹೇಳಿದರೂ ಕೇಳದಂತೆ ನಟಿಸುವ ಜಾಣಕಿವುಡರು ನಮ್ಮ ನಡುವೆಯೇ ಇದ್ದಾರೆ. ಹೇಳಿಸಿಕೊಳ್ಳದೆ ತಾವು ಮಾಡುವ ಕೆಲಸ ಕಾರ್ಯಗಳನ್ನು ಸಮಯದಲ್ಲಿ ಮುಗಿಸುವುದು ಮಾತ್ರ ಜಾಣರ ಗುರಿಯಾಗಿರುತ್ತದೆ. ಸಾರ್ವಜನಿಕವಾಗಿ ಸ್ಪಂದಿಸುವ ಗುಣದವರಿಗೆ ಬೆಂಬಲ ನೀಡುವುದು ಆದ್ಯ ಕರ್ತವ್ಯ.