ದೈವ ಆಳಿ ಬರುವ ಸಿನೆಮಾ ಕಾಂತಾರ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ಹೋರಾಟಗಾರರು ಸೆಲೆಕ್ಟಿವ್ ಆಗೋದರ ಬಗ್ಗೆ ನನ್ನ ಸ್ಪಷ್ಟ ಆಕ್ಷೇಪವಿದೆ. ಸಿನೆಮಾದಲ್ಲಿ ಕೋಲದ ದೃಶ್ಯ ತೋರಿಸುವುದರಿಂದ ಅನ್ಯಾಯ ಆಗುತ್ತದೆ ಎಂದು ಕೆಲವೇ ಕೆಲವು ಮಂದಿ ವಾದ ಮಾಡುತ್ತಿದ್ದಾರೆ. ಕೋಟ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಬಿ.ವಿ. ಕಾರಂತ ನಿರ್ದೇಶನದ ಚೋಮನ ದುಡಿ ಸಿನೆಮಾದ ಆದಿಯಾಗಿ ಮೊನ್ನೆ ಮೊನ್ನೆಯ ಗಗ್ಗರದ ತನಕ ಕೋಲದ ದೃಶ್ಯಗಳಿರುವ ಸಿನೆಮಾಗಳನ್ನ ನಾವು ನೋಡಿದ್ದೇವೆ. ಸಿನೆಮಾ ನೋಡಿ ಅದನ್ನ ಅನುಕರಣೆ ಮಾಡುವ ಯಡವಟ್ಟುಗಳಿಗೆ ಇರುವುದು ಪ್ರಚಾರದ ಅಮಲು. ಮೊನ್ನೆ ಒಬ್ಬ ಹುಡುಗ ದೊಂದಿಯೊಂದಿಗೆ ರೀಲ್ಸ್ ಮಾಡುತ್ತಾ ಕುಂದಾಪುರದ ಹುಡುಗ ಎಂದು ಬೊಬ್ಬೆ ಹಾಕುತ್ತಿದ್ದ! ಮನೆಯಲ್ಲಿ ಮೈಯಲ್ಲಿ ಬೊಬ್ಬೆ ಬೀಳುವಂತೆ ಬಡಿದರೆ ಆ ತೆವಲುಗಳೆಲ್ಲವೂ ನಿಲ್ಲುತ್ತದೆ. ಸಿನೆಮಾಗಳಲ್ಲಿ ಹೀರೊ ಮಚ್ಚು ಹಿಡಿದು ಕೊಚ್ಚುತ್ತಾನೆ ಎಂದು ತಾನೂ ಮಚ್ಚು ಹಿಡಿದು ಹೂಂಕಾರ ಮಾಡಿದರೆ ಆತ ಜೈಲುಪಾಲಾಗುವುದಿಲ್ಲವೇ? ಹಾಗೆಯೇ ಪ್ರಚಾರಕ್ಕಾಗಿ ಕೋಲದ ಮುಖವರ್ಣಿಕೆ ಹಾಕಿ ಅನುಕರಣೆ ಮಾಡುವವರ ಬಗ್ಗೆ ನಮ್ಮ ಆಕ್ಷೇಪ ಇರಲಿ. ಕಾರಂತರು ಯಕ್ಷಗಾನವನ್ನ ಇಂಗ್ಲಿಷ್ ಭಾಷೆಯಲ್ಲಿ ಆಡಿಸಿದಾಗ ಕೂಡ ಒಂದು ವಲಯ ಅದನ್ನೂ ಆಕ್ಷೇಪ ಮಾಡಿತ್ತು. ಕಾಳಿಂಗ ನಾವಡರು ಹೊಸ ಮಟ್ಟುಗಳ ಬಳಕೆ ತಂದಾಗ ‘ಆತ ಭಾಗವತನೇ ಅಲ್ಲ’ ಎಂದಿತ್ತು ಜಗತ್ತು. ರಿಷಬ್ ಶೆಟ್ಟರ ಕಾಂತಾರ ಸೋತಿದ್ದರೆ ಅದು ದೈವದ ಶಾಪ ಎನ್ನುತ್ತಿದ್ದರು! ಈಗ ಸಿನೆಮಾ ಗೆದ್ದಿದೆ ಅದು ದೈವದ ವರ ಎನ್ನಬಹುದೇ?

ಸಿನೆಮಾದ ಬಗ್ಗೆ ಆಕ್ಷೇಪ ಮಾಡುತ್ತಿರುವ ನಿಜವಾದ ಕಾರಣ ಸ್ಪಷ್ಟ. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ರಿಷಬ್ ಶೆಟ್ಟರನ್ನ ಮಾತ್ರವೇ ಆಕ್ಷೇಪಿಸುತ್ತಿರುವ ಹಿನ್ನೆಲೆ ಅವರದ್ದು ಸೆಲೆಕ್ಟಿವ್ ಹೋರಾಟವಾ? ಎನ್ನುವುದು ನನ್ನ ಪ್ರಶ್ನೆ. ತಮಾಷೆಯ ಸಂಗತಿ ಎಂದರೆ ದೇವರು ಮತ್ತು ದೈವವನ್ನೇ ನಂಬದ ಒಂದು ವರ್ಗವೂ ‘ಇದು ದೈವಕ್ಕೆ ಅವಮಾನ’ ಎಂದು ಪ್ರತಿಕ್ರಿಯೆ ನೀಡುತ್ತಿರುವುದನ್ನ ನೋಡಿ ರಷ್ಯಾಕ್ಕೇ ಹೋಗಿ ನಕ್ಕು ಬರಲೇ? ಅಂತನ್ನಿಸುತ್ತಿದೆ. ಈ ನಡುವೆಯೇ ಹಲವರ ಸಹಜವಾದ ಆತಂಕದ ಬಗ್ಗೆ ನನಗೂ ಗೌರವ ಇದೆ. ಕೋಲದ ದೃಶ್ಯ ಮಾಡಿ ರಿಷಬ್ ಹಣ ಮಾಡಿದರು ಎನ್ನುವ ಝಲಸ್ಸು ಇಲ್ಲಿ ಎದ್ದು ಕಾಣುತ್ತಿದೆ. ಜೊತೆಗೆ ನನ್ನ ಕೋಳಿ ಕೂಗಿಯೇ ಬೆಳಗಾಗುವುದು ಎನ್ನುವ ಅಜ್ಜಿಯೊಬ್ಬಳ ಭ್ರಮೆಯ ಕಥೆ ನಾವೆಲ್ಲ ಓದಿದ್ದೇವೆ! ಅಂತಹ ಸ್ವಘೋಷಿತ ವಿಧ್ವಾಂಸರ ವಿಧ್ವಂಸಕತೆ ಇದರ ಹಿಂದೆ ಕೆಲಸ ಮಾಡುತ್ತಿದೆಯಾ? ಅರ್ಥವಾಗುತ್ತಿಲ್ಲ. ಅದೆಲ್ಲದರ ಆಚೆಗೂ ವಿರೋಧ ಮಾಡುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಆ ಮಿಟಿಯಲ್ಲೇ ಮಾಡಲಿ. ನನ್ನದೇನೂ ಆಕ್ಷೇಪವಿಲ್ಲ. ಸಿನೆಮಾ ಒಂದನ್ನ ಸಿನೆಮಾ ಅಂತಷ್ಟೇ ಪರಿಗಣಿಸಿದರೆ ಸಮಸ್ಯೆ ಇಲ್ಲ. ಅದು ಐತಿಹಾಸಿಕ ಡ್ಯಾಕ್ಯೂಮೆಂಟರಿ ಅಲ್ಲ. ಕಾಂತಾರ ಸಿನೆಮಾ ಕುರಿತು ರಿಷಬ್ ಶೆಟ್ಟರಿಗೆ ದೈವಸ್ಥಾನಗಳ, ದೈವರಾಧನೆಯ ಮನೆತನಗಳ ಬೆಂಬಲವೇ ಹೆಚ್ಚು ಸಂದಿದೆ. ಅದೇ ರಿಷಬ್ ಶೆಟ್ಟರು ತನ್ನ ಸಿನೆಮಾದಲ್ಲಿ ದೈವದ ಗೌರವಕ್ಕೆ ಕುಂದಾಗುವ ಒಂದೇ ಒಂದು ದೃಶ್ಯವನ್ನ ಸೇರಿಸಿದ್ದಾರೂ ನಾನೂ ಅದನ್ನ ಖಂಡಿಸುತ್ತಿದೆ! ಕಾಂತಾರ ಸಿನೆಮಾ ನೋಡುವಾಗ ನನ್ನ ಕಣ್ಣ ಮುಂದೆ ಸೀನ ಪಾಣಾರರ ಕಾಡ್ಚಿ ವೇಷ ಕಣ್ಣ ಮುಂದೆ ಬಂದಂತಾಗಿ ಚಪ್ಪಲಿ ಕಳೆದು ಕೈ ಮುಗಿದವ ನಾನು. ಸಿನೆಮಾ ಬಗ್ಗೆ ನನ್ನ ದೃಷ್ಟಿಕೋನದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಸಿನೆಮಾದ ಕಥೆ ಪ್ರತಿಮಾತ್ಮಕಾವಾಗಿ ನನ್ನನ್ನ ತಾಕಿದೆ. ಉಳ್ಳವರ ದರ್ಪದ, ದೌರ್ಜನ್ಯದ ವಿರುದ್ಧ ಬುಡಕಟ್ಟು ಜನರು ಸಿಡಿದೆದ್ದ ಬಂಡಾಯದ ಕಥೆ ಕಾಂತಾರ. ಮಾನುಷ ಪ್ರಯತ್ನ ಕೈ ಸೋತಾಗ ನಂಬಿದ ಮಾಯಕದ ಸತ್ಯದ ಶಕ್ತಿ ದೈವ ತಾನೇ ಆಹ್ವಾನೆಗೊಳ್ಳುವ ರೋಚಕ ಅಂತ್ಯ ಸಿನೆಮಾಕ್ಕಿದೆ. ಕಾಂತಾರ ಎಂದರೆ ನಿಗೂಢ ಕಾಡು! ಕಾಡಿನ ಕಾಡುವ ಕಥೆಗಳಿಗೆ ಕೊನೆ ಉಂಟೇ?
ಲೇಖನ : ವಸಂತ್ ಗಿಳಿಯಾರ್