ತುಳುವರು ಪ್ರತಿಯೊಂದನ್ನು ವಿಚಾರವನ್ನು ಆರಾಧಿಸುವ ಗುಣವುಳ್ಳವರು, ಯಾವುದನ್ನು ಬೇಕಾದರೂ ಬಿಟ್ಟುಕೊಟ್ಟರು ಆದರೆ ನಂಬಿಕೆ ಆರಾಧನೆಯನ್ನಲ್ಲ ಎಂಬುದು ಕಟು ಸತ್ಯ. ತೌಳವ ನಾಡಿನಲ್ಲಿ ಪ್ರತಿ ಆರಾಧನೆಗೆ ಅದರದ್ದೆಯಾದ ನಂಬಿಕೆ, ಕಟ್ಟುಪಾಡುಗಳಿವೆ. ಇಂತಹ ಒಂದು ಆರಾಧನೆಯ ಭಾಗವೇ ಪಿಲಿವೇಷ. ಮಾರ್ನೆಮಿ (ನವರಾತ್ರಿ)ಯಲ್ಲಿ ಮನೆ ಮನೆಗೆ, ಪೇಟೆಯಲ್ಲಿ ಸುತ್ತುತ್ತಿದ್ದ ಪಿಲಿವೇಷ ಇಂದು ವ್ಯವಸ್ಥೆಯ ರೀತಿಯಲ್ಲಿ ಅಚ್ಚುಕಟ್ಟಾಗಿ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಯುತ್ತಿದೆ ಎಂದರೆ ಅದಕ್ಕೆ ಹಲವು ಕಾರಣವಿದ್ದರೂ ಮುಖ್ಯವಾಗಿ ಕಾಣ ಸಿಗುವುದು ಯುವ ನಾಯಕ ಮಿಥುನ್ ರೈ. ಸುಮಾರು ಹತ್ತು ವರ್ಷದ ಹಿಂದೆ ಪಿಲಿವೇಷ ಪ್ರತಿಷ್ಠಾನ (ರಿ) ಎಂಬ ಸಂಘಟನೆಯನ್ನು ಕಟ್ಟಿಕೊಂಡು ನಮ್ಮ ಟಿವಿ (ಚಾನೆಲ್) ಜೊತೆ ಸೇರಿ ಒಂದೊಳ್ಳೆಯ ವೇದಿಕೆ ನಿರ್ಮಿಸಿ ಲಕ್ಷ-ಲಕ್ಷ ಬಹುಮಾನವನ್ನು ಘೋಷಿಸಿ ಪಿಲಿವೇಷದಲ್ಲಿ ಪ್ರಾಮಖ್ಯವಾಗಿರುವ ಧರಣಿ ಮಂಡಲ, ಅಟ್ಟೆ, ಪೌಲ, ಜಂಡೆ ಬೀಸುವುದು, ಬಣ್ಣಗಾರಿಕೆ, ಅಕ್ಕಿಮುಡಿ, ಬ್ಲಾಕ್ ಟೈಗರ್, ಅಪ್ಪೆ ಪಿಲಿ, ಟ್ರಂಪೆಟ್, ದೋಲು, ತಾಸೆ, ಮೂಲಕ ವ್ಯವಸ್ಥಿತ ರೀತಿಯಲ್ಲಿ ಪಿಲಿವೇಷಕ್ಕೆ ಸ್ಟಾರ್ ಟಚ್ ನೀಡಿದ ಕೀರ್ತಿ ರೈ ಅವರಿಗೆ ಸಲ್ಲುತ್ತದೆ. ನಿರಂತರವಾಗಿ ಹೊಸ ಕಲ್ಪನೆಯೊಂದಿಗೆ ಪಿಲಿನಲಿಕೆ ಮುಂದುವರೆದು ಹೊಸತನವನ್ನು ಕಂಡ ಸಲುವಾಗಿ ಈಗ ಅಲ್ಲಲ್ಲಿ ಸ್ಪರ್ಧಾತ್ಮಕವಾಗಿ ಹಲವು ಕಡೆ ಪಿಲಿವೇಷ ಸ್ಪರ್ಧೆ ಆರಂಭಿಸಿದರೂ ಸಹ ಅದರ ಸಂಪೂರ್ಣ ಕ್ರೆಡಿಟ್ ಮಿಥುನ್ ರೈ ಗೆ ಸಲ್ಲುತ್ತದೆ.

ಹತ್ತು ವರ್ಷದಲ್ಲಿ ಮಂಗಳೂರಿಗೆ ಬಾರದಿರುವ ಅಂತರಾಷ್ಟ್ರೀಯ ಸ್ಟಾರ್ ಗಳನ್ನು ಕುಡ್ಲಕ್ಕೆ ಕರೆಸಿ ತುಳು ಮಾತನಾಡಿಸಿ ಸೈ ಎನಿಸಿಕೊಂಡರು ಮಿಥುನ್. ಖ್ಯಾತ ಕ್ರಿಕೆಟ್ ಆಟಗಾರರಾದ ಜಾಂಟಿ ರೋಡ್ಸ್, ಹರ್ಭಜನ್ ಸಿಂಗ್, ದಶ ಸಂಭ್ರಮದ ಈ ಬಾರಿ ರಹಾನೆ, ರಾಹುಲ್, ಜಿತೇಶ್ ಶರ್ಮ, ಸಿನೆಮಾದ ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್, ರಾಜ್ ಬಿ ಶೆಟ್ಟಿ, ಪೂಜಾ ಹೆಗ್ಡೆ, ಡಿಕೆಶಿಇವರನ್ನು ಮಂಗಳೂರಿಗೆ ಕರೆಸಿದ್ದು ಸಾಧನೆಯೇ ಸರಿ. ಹಿಂದೆ ಮಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮವಾದರೂ ತನ್ನ ತನ್ನ ಪಕ್ಷದವರನ್ನು ಗುರುತಿಸಿ ಗೌರವಿಸುವುದು ಸರ್ವೆ ಸಾಮಾನ್ಯವಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ಸತತ ಹತ್ತು ವರ್ಷ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷ ಎಂಬುದನ್ನು ಬದಿಗಿಟ್ಟು, ಹಿಂದೂ ಸಂಘಟನೆಯ ಮುಖಂಡರನ್ನು ಕಾರ್ಯಕ್ರಮಕ್ಕೆ ಕರೆಯಿಸಿ ಮುಕ್ತವಾಗಿ ಗುರುತಿಸಿ ಪ್ರಸ್ತುತ ಮಂಗಳೂರಿನ ಭಾಜಪ ಸಂಸದರಿಗೆ ಸಚಿವರಾಗುವಂತೆ ಹಾರೈಸಿ, ಜೊತೆಗೆ ಡಿಕೆಶಿ ಮುಖ್ಯಮಂತ್ರಿಯಾಗಿ ಮಂಗಳೂರನ್ನು ಅಭಿವೃದ್ಧಿಯಾಗುವಂತೆ ಗೌರವಿಸಿದ ಕೀರ್ತಿ ರೈ ನೇತೃತ್ವದ ಪಿಲಿನಲಿಕೆ ತಂಡಕ್ಕಿದೆ. ಮುಖ್ಯವಾಗಿ ರಾಜಕೀಯ ಎರಡು-ಮೂರು ದಿನ ಮಾತ್ರ ಬಾಕಿ ದಿನ ನಾವು ತುಳುವರು ಎಂದು ಗತ್ತಿನಿಂದ ಉದ್ಘೋಷ ಮಾಡಿದ ರೈಯವರ ಮಾತಿನಲ್ಲಿ ಮುಗ್ದತೆಯಿತ್ತು. ಇವರ ಗುಣದಲ್ಲಿ ಮತ್ಸರವಿಲ್ಲವೆಂಬುದನ್ನು ಸಾರಿ ಹೇಳಿದಂತಿತ್ತು.
ಸಿದ್ದಾಂತದಲ್ಲಿ ವ್ಯತ್ಯಾಸ ಇರಬಹುದು ಮಿಥುನ್ ರೈಗಳೇ ಪಿಲಿವೇಷಕ್ಕೆ ಟ್ರೆಂಡ್ ನೀಡಿದ ನಿಮ್ಮ ಸಾಧನೆಗೆ ತಾಯಿ ಮಂಗಳಾಂಬಿಕೆ, ಕಟೀಲಿನ ಉಳ್ಳಾಲ್ದಿ ಒಂದೊಳ್ಳೆಯ ಹುದ್ದೆ, ಜವಾಬ್ದಾರಿಯನ್ನು ನಿಮಗೆ ಖಂಡಿತ ನೀಡುತ್ತಾಳೆ ಕಾಯುವ ತಾಳ್ಮೆ ನಿಮಗಿರಲಿ. ಯಾರೇ ಎಷ್ಟೇ ಪಿಲಿವೇಷ ಸ್ಪರ್ಧೆ ಅಯೋಜಿಸಲಿ ಅದು ನಿಮ್ಮ ಪ್ರೇರಣೆಯಿಂದಲೇ ಎಂಬುದು ನೂರಕ್ಕೆ ನೂರು ಸತ್ಯ. ಅದು ಒಪ್ಪುವಂತದ್ದೇ ಮತ್ತಷ್ಟು ಬೆಳೆಯಲಿ ಎಂಬುದು ನಮ್ಮ ಹಾರೈಕೆ. ನೀವೊಂದು ಸಂದರ್ಶನದಲ್ಲಿ ಇದರ ಹಿಂದಿನ ಕಷ್ಟ ನಷ್ಟಗಳು, ರಾಜಕೀಯ ಆಕಾಂಕ್ಷೆ ಇಲ್ಲದೇ ಮಾಡುವ ಕಾರ್ಯಗಳು, ಮುಂದೆ ಇರುವ ಕನಸುಗಳು, ಸರಕಾರದಿಂದ ಸಹಾಯಧನ ನೀಡುವ ಚಿಂತನೆ ಕಂಡು ಗದ್ಗದಿತನಾದೇ. ಇದರ ಹಿಂದಿರುವ ಪಿಲಿ ನಲಿಕೆ ಪ್ರತಿಷ್ಠಾನ ಸದಸ್ಯರಿಗೆ ಮತ್ತು ನಮ್ಮ ಟಿವಿ ತಂಡಕ್ಕೆ ಶುಭ ಹಾರೈಕೆಗಳೊಂದಿಗೆ ಅಭಿನಂದನೆಗಳು. ಹೌದು ಪಿಲಿನಲಿಕೆಗೆ ಹೊಸ ಆಯಾಮದ ಜೊತೆಗೆ ನವಭಾಷ್ಯ ಬರೆದ ನಾಯಕ ಮಿಥುನ್ ರೈ.
ಲೇಖನ : ಮನ್ಮಥ ಶೆಟ್ಟಿ ಪುತ್ತೂರು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು