ಶಿವಾಯ ಫೌಂಡೇಶನ್ ಅವರ ಸೇವೆಯ ಸದ್ವಿಚಾರವು ಸಮೃದ್ಧ ಬದುಕಿನ ಸಾಧನವಾಗಿದೆ. ಕ್ರಿಯಾಶೀಲತೆ ಇವರಲ್ಲಿದ್ದು, ನಿಮ್ಮ ಬದುಕು ಹಸನಾಗಲಿ ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶಿವಾಯ ಫೌಂಡೇಶನ್ ನ ವತಿಯಿಂದ ಪಡುಬಿದ್ರೆಯ ಬಂಟರ ಸಂಘದ ಕೃಷ್ಣ ಸುಧಾಮ ವೇದಿಕೆಯಲ್ಲಿ ನಡೆದ ಗಣ್ಯರ ಸನ್ಮಾನ, ಪ್ರೇರಣಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚಿಸಿದರು.

ಮುಖ್ಯ ಅತಿಥಿಯಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಮ್ಮ ಬದುಕು ಅರ್ಥಪೂರ್ಣವಾಗಲು ಸಮಾಜ ಸೇವೆ ಮುಖ್ಯ. ಶಿವಾಯ ಫೌಂಡೇಶನ್ ಇದನ್ನೇ ಅಡಿಪಾಯವಾಗಿಸಿ ಸಂಪಾದನೆಯ ಒಂದು ಭಾಗವನ್ನು ವ್ಯಯಿಸುತ್ತಲೇ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಇದು ಪುಣ್ಯದ ಕಾರ್ಯವೆಂದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಶಿವಾಯ ಸಂಸ್ಥೆ ನಡೆಸಿದ ತುಳು ಭಾಷೆ, ಕೌಶಲಾಭಿವೃದ್ದಿಗಳ ಸಾಧಕರಿಗೆ ಮಾನವೀಯತೆಯ ನೆಲೆಯ ಗೌರವಗಳು ಶ್ಲಾಘನೀಯವೆಂದರು. ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಸಂಸ್ಥೆಯ ಮೂಲಕ ವಿದ್ಯಾರ್ಥಿ ವೇತನ ಪಡೆಯುತ್ತಿರುವ ಯುವಶಕ್ತಿಯ ಬಾಳು ಬೆಳಗಲಿ ಎಂದರು. ಸಂಸ್ಥೆಯ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಪ್ರಾಜ್ ಜೆನೆಕ್ಸ್ ನ ಪ್ರಜ್ವಲ ಪ್ರವೀಣ್ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪುಣೆ ಉದ್ಯಮಿ ಬಾಲಚಂದ್ರ ಶೆಟ್ಟಿ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಚಾಮರ ಫೌಂಡೇಶನ್ ನ ಮನಿಶ್ ಸಾಲಿಯನ್, ನವೀನ್ ಎನ್ ಶೆಟ್ಟಿ, ಸುಜಿತ್ ಶೆಟ್ಟಿ, ವಿಶ್ವಾಸ್ ವಿ ಅಮೀನ್, ಸದಾನಂದ ಪೂಜಾರಿ ಮುಂಬೈ ಉಪಸ್ಥಿತರಿದ್ದರು. ಪಡುಬಿದ್ರಿ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಡಾ. ವೈ ಎನ್ ಶೆಟ್ಟಿ, ಆಸ್ಪೆನ್ ಎಸ್.ಇ.ಝೆಡ್ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಾ. ವೈ ಎನ್ ಶೆಟ್ಟಿ ಹಾಗೂ ಅಶೋಕ್ ಕುಮಾರ್ ಶೆಟ್ಟಿಯವರು ಸನ್ಮಾನಕ್ಕುತ್ತರಿಸಿದರು. ಕಾರ್ಕಳದ ಹೊಸ ಬೆಳಕು ಸಂಸ್ಥೆಯ ಸ್ಥಾಪಕಿ ತನುಲಾ ತರುಣ್ ಅವರಿಗೆ ಶಿವಾಯ ಪ್ರೇರಣಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶಿವಾಯ ಫೌಂಡೇಶನ್ ಮುಂಬೈಯ ಅಧ್ಯಕ್ಷ ಪ್ರಶಾಂತ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಹಾಗೂ ಸ್ವರ್ಣಲತಾ ಶೆಟ್ಟಿ ನಿರ್ವಹಿಸಿದರು. ಪ್ರಶಾಂತ್ ಶೆಟ್ಟಿ ಪಂಜ ವಂದಿಸಿದರು. ವೇದಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 7.5 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿವೇತನದ ರೂಪದಲ್ಲಿ ವಿತರಿಸಲಾಯಿತು.