ವಿವಿಧ ಹೆಸರಿನಲ್ಲಿ ಕರೆಯಲ್ಪಡುವ ಬಂಟರ ಸಂಘಟನೆಗಳು ಸೌಹಾರ್ದದ ಕೂಡು ಕುಟುಂಬವಾಗಿದೆ. ಅಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ, ಹೊಂದಾಣಿಕೆ, ಕೂಡಿ ಬಾಳುವ ಕಲೆ ಕರಗತವಾಗಿರಲಿ. ಬಂಟ ಸಮಾಜದ ಕಟ್ಟ ಕಡೆಯ ಮಗು ಕೂಡಾ ಆರ್ಥಿಕ ಅಡಚಣೆಯಿಂದ ವಿದ್ಯಾಭ್ಯಾಸ ಸ್ಥಗಿತಗೊಳಿಸಬಾರದು. ಅವರಿಗೆ ಸಂಪೂರ್ಣ ನೆರವು ನೀಡಲು ಬಂಟ್ಸ್ ಫೋರಂ ಮೀರಾ ಭಾಯಂದರ್ ಸಿದ್ಧವಾಗಿದೆ ಎಂದು ಬಂಟ್ಸ್ ಫೋರಂ ಮೀರಾ ಭಾಯಂದರ್ ಅಧ್ಯಕ್ಷ ಉದಯ ಎಂ ಶೆಟ್ಟಿ ಮಲಾರಬೀಡು ತಿಳಿಸಿದರು. ಮಹಿಳಾ ವಿಭಾಗ ಆಗಸ್ಟ್ 10 ರಂದು ಸಂಜೆ ಮೀರಾ ರೋಡ್ ಪೂರ್ವದ ನಿತ್ಯಾನಂದ ನಗರ ಸ್ವಸ್ತಿಕ್ ಅಂಬರ್ ಪ್ಲಾಜಾ ಸಭಾಂಗಣದಲ್ಲಿ ಆಯೋಜಿಸಿದ ಆಟಿದ ಕೂಟ ತುಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿಯವರು ಸಂಜೀವಿನಿ ಟ್ರಸ್ಟ್ ಸಹಯೋಗದಲ್ಲಿ ಟಾಟಾ ಐಐಎಸ್ ಸಂಸ್ಥೆಯ ಮೂಲಕ ಕೌಶಲ ಮತ್ತು ಉದ್ಯೋಗ ಕಲ್ಪಿಸುವ ಯೋಜನೆ ಕೈಗೊಂಡಿದ್ದಾರೆ. ಬಂಟ ಸಮಾಜದ ಯುವಜನಾಂಗ ಇದರ ಪ್ರಯೋಜನ ಪಡೆಯಲು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇಂದು ಭಾಗವಹಿಸಿದ ಪಾಕ ಪ್ರವೀಣರಿಗೆ ಬಹುಮಾನದ ಪ್ರಾಯೋಜಕರಾಗಿ ಡಾ| ಆರ್ ಕೆ ಶೆಟ್ಟಿಯವರು ಸಹಕರಿಸಿದ್ದಾರೆ. ಸದಸ್ಯರ ಮತ್ತು ಮಹಿಳಾ ವಿಭಾಗದ ಸಂಪೂರ್ಣ ಸಹಕಾರದಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು

ರೈ ಸುಮತಿ ಎಜುಕೇಶನ್ ಟ್ರಸ್ಟಿನ ಕಾರ್ಯಾಧ್ಯಕ್ಷ ಡಾ| ಅರುಣೋದಯ ರೈ ಮಾತನಾಡಿ, ಪ್ರಸ್ತುತ ಉನ್ನತ ಶಿಕ್ಷಣದ ಅಗತ್ಯವಿದ್ದು ಮಾರ್ಗದರ್ಶನದ ಕೊರತೆಯಿಂದ ಐಎಎಸ್ ಮತ್ತು ಐಪಿಎಸ್ ವಿದ್ಯಾರ್ಥಿಗಳ ಸಂಖ್ಯೆ ಬಂಟ ಸಮಾಜದಲ್ಲಿ ಕಡಿಮೆಯಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮುಂದಾಗಬೇಕು. ಆಟಿ ತಿಂಗಳಿನ ತಿನಿಸುಗಳ ರುಚಿ ಸವಿಯಲು ಹೆತ್ತವರು ಮಕ್ಕಳೊಂದಿಗೆ ಬರಬೇಕೆಂದು ತಿಳಿಸಿದರು. ಅಧ್ಯಕ್ಷ ಉದಯ ಎಂ ಶೆಟ್ಟಿ ಮಲಾರ ಬೀಡು ಮತ್ತು ಸುಧಾ ಉದಯ ಶೆಟ್ಟಿ ದಂಪತಿಯನ್ನು ಗಣ್ಯರು ಸನ್ಮಾನಿಸಿದರು. ಶಿಕ್ಷಣ ಕ್ಷೇತ್ರದ ಅರುಣ್ ಪಕ್ಕಳ, ಥಾಣೆ ಬಂಟ್ಸ್ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ತಾರಾ ಎ ಶೆಟ್ಟಿ, ತುಳು ಸಂಘ ಬೊರಿವಿಲಿ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ, ಮೀರಾ ಭಾಯಂದರ್ ಬಂಟರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವಸಂತಿ ಶೆಟ್ಟಿ, ಶಾಂತಲಾ ಶೆಟ್ಟಿ ಮಾತನಾಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಖವಾಣಿ ಡಿ ಶೆಟ್ಟಿ ತಾಳಿಪಾಡಿ ಗುತ್ತು ಸ್ವಾಗತಿಸಿ, ಬಾಬಾ ಪ್ರಸಾದ್ ಅರಸ, ಮಲ್ಲಿಕಾ ಶೆಟ್ಟಿ, ಸುಲೋಚನಾ ಶೆಟ್ಟಿ ನಿರೂಪಿಸಿದರು. ಭಜನೆ ಸಮಿತಿಯ ಕಾರ್ಯಾಧ್ಯಕ್ಷೆ ನವೀನಾ ಜಯಪ್ರಕಾಶ್ ಭಂಡಾರಿ ವಂದಿಸಿದರು.
ಬಂಟ್ಸ್ ಫೋರಂ ಮಾಜಿ ಅಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ, ಸಂಚಾಲಕ ಅನಿಲ್ ಆರ್ ಶೆಟ್ಟಿ ಎಲ್ಲೂರು ಒಡಿಪರ ಗುತ್ತು, ಉಪಾಧ್ಯಕ್ಷ ದಿವಾಕರ ಎಂ ಶೆಟ್ಟಿ ಶಿರ್ಲಾಲು, ಹರ್ಷಕುಮಾರ್ ಡಿ ಶೆಟ್ಟಿ, ಗೌರವ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಜೊತೆ ಕಾರ್ಯದರ್ಶಿ ಶರ್ಮಿಳಾ ಕೆ ಶೆಟ್ಟಿ, ಕೋಶಾಧಿಕಾರಿ ಮಧುಕರ ಎಸ್ ಶೆಟ್ಟಿ ಅಜೆಕಾರು, ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ ಡಿ ಶೆಟ್ಟಿ ಮತ್ತಿತರರಿದ್ದರು. ಸದಸ್ಯರಿಂದ ಭರತನಾಟ್ಯ, ಜಾನಪದ ನೃತ್ಯ, ಆಟಿಕಳೆಂಜ ಪ್ರಾತ್ಯಕ್ಷಿಕೆ ಪ್ರದರ್ಶನಗೊಂಡಿತು. 31 ಮಂದಿ ಸದಸ್ಯೆಯರು ತಯಾರಿಸಿದ ಆಟಿ ತಿಂಗಳ ವಿವಿಧ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕಾರಿ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು.